ಕೋಟಿ-ಚೆನ್ನಯರ ಪುಣ್ಯಭೂಮಿಯಲ್ಲಿ ಶತಮಾನ ಕಂಡ ಶಾಲೆ
ಮುಳಿ ಹುಲ್ಲಿನ ಕಟ್ಟಡದಲ್ಲಿ ಪಠೇಲರು ಆರಂಭಿಸಿದ ಎಣ್ಮೂರು ಶಾಲೆಗೆ 114 ವರ್ಷ
Team Udayavani, Nov 4, 2019, 5:07 AM IST
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
ಬೆಳ್ಳಾರೆ: ಪುರಾಣ ಪ್ರಸಿದ್ಧ ಐತಿಹಾಸಿಕ ಸ್ಥಳ, ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರು ನಲಿದಾಡಿದ ಎಣ್ಮೂರಿನಲ್ಲಿ 114 ವರ್ಷ ಪೂರೈಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ.
ಎಣ್ಮೂರು ಕಟ್ಟ ಬೀಡು ಮನೆತನದ ಪಠೇಲರಾಗಿದ್ದ ಉಕ್ಕಣ್ಣ ಬಂಟರ ನೇತೃತ್ವದಲ್ಲಿ ಆರಿಕಲ್ಲು ಮೋಂಟ ಗೌಡರ ಮಾರ್ಗದರ್ಶನದಲ್ಲಿ 1905ರಲ್ಲಿ ಆರೆಂಬಿ ಮನೆತನದ ಹಿರಿಯರಾದ ಐತ್ತಪ್ಪ ಗೌಡರ ಮುಳಿಹುಲ್ಲಿನ ಒಂದು ಸಣ್ಣ ಕಟ್ಟಡದಲ್ಲಿ ಈ ಶಾಲೆ ಆರಂಭವಾಯಿತು. ಬಳಿಕ ಕುಳಾçತೋಡಿ ಮೊಟ್ನಮಜಲು ಎಂಬಲ್ಲಿ ಸ್ಥಳಾಂತರಗೊಂಡಿತು.
ಅಧ್ಯಾಪಕರ ಕೊರತೆಯಲ್ಲೂ
ಎದ್ದು ನಿಂತ ಶಾಲೆ
ಶಾಲೆ ಆರಂಭದಲ್ಲಿ ಅಧ್ಯಾಪಕರ ಕೊರತೆಯನ್ನು ಎದುರಿಸಿ, ಮುಚ್ಚುವ ಹಂತಕ್ಕೆ ಬಂದಿದ್ದರೂ ಮಣ್ಣಿನ ಗೋಡೆಯಿಂದ ಮೊಟ್ನಮಜಲಿನಲ್ಲೇ ಪುನರ್ ನಿರ್ಮಾಣಗೊಂಡಿತು. ಈ ಶಾಲೆ ಆರಂಭದಲ್ಲೇ 60-70 ವಿದ್ಯಾರ್ಥಿಗಳನ್ನು ಹೊಂದಿದ್ದ ಇತಿಹಾಸವಿದೆ. 1909ರಲ್ಲಿ ಶಾಲೆ ತಾಲೂಕು ಬೋರ್ಡ್‌ನ ಅಧಿಕಾರಕ್ಕೆ ಒಳಪಟ್ಟಿತು. ಮುಖ್ಯ ಶಿಕ್ಷಕರಾದ ಮೋಂಟ ಗೌಡ ಮತ್ತು ಡಿ’ಸೋಜಾ ಅವರ ನಿರ್ಗಮನದ ಅನಂತರ ಪೈಕಾನ ಶ್ರೀನಿವಾಸ ರಾವ್, ಕೊರಗಪ್ಪ ಮೂಲ್ಯ ಮುಖ್ಯ ಗುರುಗಳಾಗಿ ಶಾಲೆಯನ್ನು ಮುನ್ನಡೆಸಿದರು.
ಹಿರಿಯ ಶಾಲೆಯಾಗಿ ಭಡ್ತಿ
1976 ಈ ಶಾಲೆಗೆ ಸ್ವರ್ಣಕಾಲವಾಗಿತ್ತು. ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತು. ಇಲ್ಲಿನ ಅಧ್ಯಾಪಕರಾಗಿದ್ದ ಕೆ.ವಿ. ಸುಬ್ರಹ್ಮಣ್ಯ ಗೌಡ ಹಿರಿಯ ಪ್ರಾಥಮಿಕ ಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರಾದರು. ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 110ಕ್ಕೆ ಏರಿತು. ಊರ ಪರವೂರ ದಾನಿಗಳ ನೆರವಿನಿಂದ ಕಟ್ಟಡ, ಧ್ವಜ ಸ್ತಂಭದ ನಿರ್ಮಾಣವಾಯಿತು. ಹಿರಿಯ ಸಹಕಾರಿ ದಿ| ಮೊಳಹಳ್ಳಿ ಶಿವರಾಯ, ದಿ| ಕಟ್ಟಬೀಡು ಕೊರಗಪ್ಪ ರೈ, ದಿ| ಸಂಕಪ್ಪ ರೈ, ದಿ| ವಿಟuಲ ರೈ, ದಿ| ಲಕ್ಷ್ಮೀನಾರಾಯಣ ರೈ, ದಿ| ಅಲೆಂಗಾರ ನಾರಾಯಣ ರೈ, ದಿ| ಪಟ್ಟೆ ಗೋಪಣ್ಣ ರೈ, ದಯಾನಂದ ಕೋಟೆ, ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಪಿಜಾವು ಜಗನ್ನಾಥ ರೈ, ಕೆ.ಎನ್. ರಘುನಾಥ ರೈ, ಎನ್.ಜಿ. ಲೋಕನಾಥ ರೈ, ಎನ್.ಜಿ. ಪ್ರಭಾಕರ ರೈ, ಎನ್.ಜಿ. ಶ್ರೀನಿವಾಸ ರೈ ಮೊದಲಾದ ದಾನಿಗಳು ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿದರು.
ನಿಸರ್ಗ ಮಡಿಲಿನಲ್ಲಿದೆ ಶಾಲೆ
ಸುಮಾರು ಎರಡು ಎಕರೆ ಜಾಗ ಹೊಂದಿರುವ ಶಾಲೆಯಲ್ಲಿ 25 ತೆಂಗಿನ ಗಿಡಗಳಿವೆ. ಅಕ್ಷರ ತೋಟ, ಹಣ್ಣಿನ ಹಾಗೂ ಔಷಧೀಯ ಗಿಡಗಳಿವೆ. ಕೊಳವೆ ಬಾವಿ ಸೌಲಭ್ಯವಿದೆ. ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯವಿದೆ. ರಂಗಮಂದಿರ ಸಹಿತ ಸುಸಜ್ಜಿತ ಕಟ್ಟಡವಿದೆ. ಪ್ರಸ್ತುತ 1ರಿಂದ 7ನೇ ತರಗತಿಯ ವರೆಗೆ ಒಟ್ಟು 85 ಮಕ್ಕಳು ಕಲಿಯುತ್ತಿದ್ದಾರೆ.
ಹಿಂಭಡ್ತಿ ಪಡೆದ ಶಾಲೆ
ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿದ್ದ ಎಣ್ಮೂರು ಹತ್ತು ವರ್ಷಗಳ ಹಿಂದೆ ಎಣ್ಮೂರು ಸರಕಾರಿ ಪ್ರೌಢಾಶಾಲೆ ಆರಂಭವಾದ ಬಳಿಕ ಹಿರಿಯ ಪ್ರಾಥಮಿಕ ಶಾಲೆಯಾಗಿ ಹಿಂಭಡ್ತಿ ಪಡೆಯಿತು. ಎಣ್ಮೂರು ಪರಿಸರದಲ್ಲಿ ಅಲೆಕ್ಕಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆ.ಎಸ್. ಗೌಡ ವಿದ್ಯಾಸಂಸ್ಥೆಗಳು, ಮುರುಳ್ಯ ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಗಳಿವೆ.
ರಾಜ್ಯ ಪ್ರಶಸ್ತಿ ಪಡೆದ ಮುಖ್ಯ ಶಿಕ್ಷಕ
ಪ್ರಥಮ ಮುಖ್ಯೋಪಾಧ್ಯಾಯರಾದ ಆರಿಕಲ್ಲು ಮೋಂಟ ಗೌಡ, ಡಿ’ಸೋಜಾ, ಪೈಕಾನ ಶ್ರೀನಿವಾಸ ರಾವ್, ಕೊರಗಪ್ಪ ಮೂಲ್ಯ, ಏನಡ್ಕ ಕುಕ್ಕಪ್ಪ ಗೌಡ, ತೋಟ ಕಾರ್ಯಪ್ಪ ಗೌಡ, ಕುಧ್ಕುಳಿ ದೇರಣ್ಣ ಗೌಡ, ಕುರುಂಜಿ ರಾಮಯ್ಯ ಗೌಡ, ಮಾಣಿಬೆಟ್ಟು ವೆಂಕಪ್ಪ ಗೌಡ ಮುಂತಾದವರು ಇಲ್ಲಿ ಮುಖ್ಯೋಪಾಧ್ಯಾಯರಾಗಿ ದುಡಿದಿದ್ದಾರೆ. 2006ರಲ್ಲಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ವಾಸುದೇವ ನಡ್ಕ 2004ರಿಂದ 2010ರ ವರೆಗೆ ಇಲ್ಲಿ ಮುಖ್ಯ ಶಿಕ್ಷಕರಾಗಿದ್ದರು. ಪ್ರಸ್ತುತ ಲೋಕೇಶ್ವರಿ ಮುಖ್ಯ ಶಿಕ್ಷಕಿಯಾಗಿದ್ದಾರೆ.
ನೂರು ವರ್ಷ ದಾಟಿದ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ದುಡಿಯುವುದು ಸುಯೋಗ. ಶಾಲೆಯಲ್ಲಿ ಮೂಲಸೌಲಭ್ಯಗಳಿಗೆ ಕೊರತೆಯಿಲ್ಲ. ಶಾಲಾ ಕಟ್ಟಡ, ಶಿಕ್ಷಕರ ಕೊರತೆ ಇಲ್ಲ. ಶಾಲೆಯಲ್ಲಿ 5 ಕಂಪ್ಯೂಟರ್‌ಗಳಿವೆ ಇದಕ್ಕೆ ಯುಪಿಎಸ್ ಹಾಗೂ ಇಂಟರ್‌ನೆಟ್ ಸೌಲಭ್ಯ ದೊರೆಯುವ ನಿರೀಕ್ಷೆಯಲ್ಲಿದ್ದೇವೆ.
– ಲೋಕೇಶ್ವರಿ .,ಮುಖ್ಯ ಶಿಕ್ಷಕಿ
ಶತಮಾನ ಕಂಡ, ಹಲವರಲ್ಲಿ ಹಲವು ಕನಸುಗಳನ್ನು ಬಿತ್ತಿದ ಶಾಲೆ ಇದು. ಈ ಶಾಲೆಯಲ್ಲಿ ಕಲಿತ ಹಲವಾರು ಮಂದಿ ಉನ್ನತ ಹುದ್ದೆಗಳನ್ನು ಏರಿದ್ದಾರೆ ಹಾಗೂ ಉದ್ಯಮಿಗಳಾಗಿ ಬೆಳೆದಿದ್ದಾರೆ. ಹಲವರಲ್ಲಿ ಅಕ್ಷರ ಬೀಜ ಬಿತ್ತಿದ ಎಣ್ಮೂರು ಶಾಲೆ ಐತಿಹಾಸಿಕ ದೇವಾಲಯವಿದ್ದಂತೆ.
-ರಮೇಶ್ ಕೋಟೆ,
ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ
-ಉಮೇಶ್ ಮಣಿಕ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.