![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Jun 1, 2017, 12:42 AM IST
ಎತ್ತಿನ ಹೊಳೆ ನೈಜ ದರ್ಶನ – 1
ಮಂಗಳೂರು: ಪಶ್ಚಿಮ ಘಟ್ಟದ ಎತ್ತಿನಹೊಳೆ ಯೋಜನೆ ಕೋಲಾರ, ತುಮಕೂರು ಸಹಿತ ಬಯಲು ಸೀಮೆಯ ಏಳು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ರಾಜ್ಯ ಸರಕಾರದ ಸಾವಿರಾರು ಕೋಟಿ ರೂ. ವೆಚ್ಚದ ಬಹು ಮಹತ್ವಾಕಾಂಕ್ಷಿ ಯೋಜನೆ. ಅಷ್ಟೇ ಅಲ್ಲ, ಪಶ್ಚಿಮಘಟ್ಟದ ಪರಿಸರದ ಹಿತದೃಷ್ಟಿಯಿಂದ ಸಾಕಷ್ಟು ವಿರೋಧ ಹಾಗೂ ಚರ್ಚೆಗೆ ಎಡೆಮಾಡಿದ ನೀರಾವರಿ ಯೋಜನೆಯಿದು.
ಕರಾವಳಿ ಭಾಗದವರೇ ಆದ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ 2014ರಲ್ಲಿ ಎತ್ತಿನಹೊಳೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಳೆದ ಎರಡೂವರೆ ವರ್ಷಗಳಲ್ಲಿ ಎತ್ತಿನ ಹೊಳೆ ಯೋಜನೆ ವಿಚಾರವಾಗಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಎಷ್ಟರ ಮಟ್ಟಿಗೆ ಕಾಮಗಾರಿ ನಡೆದಿದೆ, ಕಾಮಗಾರಿಯಿಂದ ಪಶ್ಚಿಮಘಟ್ಟದ ಪರಿಸರ ಈಗ ಹೇಗಾಗಿದೆ ಮತ್ತು ಅಲ್ಲಿನ ಸದ್ಯದ ನೀರಿನ ಪರಿಸ್ಥಿತಿ ಹೇಗಿದೆ ಹಾಗೂ ಈ ಯೋಜನೆ ಪೂರ್ಣಗೊಂಡರೆ ಬಯಲು ಸೀಮೆ ಜನರ ನೀರಿನ ಬವಣೆಗೆ ನಿಜಕ್ಕೂ ಶಾಶ್ವತ ಪರಿಹಾರ ದೊರೆಯಬಹುದೇ ಎಂಬಿತ್ಯಾದಿ ಹಲವು ಪ್ರಶ್ನೆ ಎಲ್ಲರನ್ನೂ ಕಾಡುತ್ತಿರಬಹುದು. ಈ ಹಿನ್ನೆಲೆಯಲ್ಲಿ ಶಿರಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 13 ಕಿ.ಮೀ. ಕಾಡಿನೊಳಗೆ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿರುವ ಜಾಗಕ್ಕೆ ‘ಉದಯವಾಣಿ’ ತಂಡ ಭೇಟಿ ನೀಡಿದೆ. ಆ ಮೂಲಕ ಸಾವಿರಾರು ಕೋ. ರೂ. ವೆಚ್ಚದ ಈ ಎತ್ತಿನಹೊಳೆ ಕಾಮಗಾರಿಯ ವಸ್ತುನಿಷ್ಠ ವರದಿಯನ್ನು ಜನಸಾಮಾನ್ಯರ ಮುಂದಿ ಡುವ ಪ್ರಯತ್ನ ಮಾಡಿದೆ.
ಸಕಲೇಶಪುರದ ಮಾರನಹಳ್ಳಿಯಿಂದ ಕಾಲ್ನಡಿಗೆಯಲ್ಲಿ ನಮ್ಮ ತಂಡ ಎತ್ತಿನಹೊಳೆ, ಕೇರಿಹೊಳೆ ಹಾಗೂ ಹೊಂಗದ ಹಳ್ಳ ಡ್ಯಾಮ್‌ನತ್ತ ಹೊರಟಿತು. ಆದರೆ ಕಾಡಿನೊಳಗೆ ಪ್ರವೇಶಿಸುತ್ತಿದ್ದಂತೆ ಆಶ್ಚರ್ಯ ಎದುರಾಯಿತು. ಅದೇನೆಂದರೆ, ಮಾರನ ಹಳ್ಳಿಯಿಂದ ಹೊಂಗದಹೊಳೆ ಡ್ಯಾಂವರೆಗಿನ ಸುಮಾರು 13 ಕಿ. ಮೀ. ದೂರಕ್ಕೆ ಯಾವುದೇ ರಾಷ್ಟ್ರೀಯ ಹೆದ್ದಾರಿಗೂ ಕಡಿಮೆಯಿಲ್ಲದ ಬೃಹತ್ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದೆ. ಎತ್ತಿನಹೊಳೆ ಯೋಜನೆ ಡ್ಯಾಂಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಈ ರಸ್ತೆಗೆ ಸುಮಾರು 15 ಇಂಚಿಗೂ ಅಧಿಕ ದಪ್ಪಕ್ಕೆ ಕಾಂಕ್ರೀಟ್ ಹಾಕಲಾಗುತ್ತಿದೆೆ. ಈ ರಸ್ತೆ ವಿಸ್ತರಣೆಗೆ ಸಾಕಷ್ಟು ಕಡೆ ಮರಗಳ ಮಾರಣಹೋಮ ನಡೆದಿದ್ದರೆ, ಇನ್ನು ಕೆಲವೆಡೆ ಬೆಟ್ಟವನ್ನೇ ಕಡಿದುರುಳಿಸಲಾಗಿದೆ. ಎತ್ತಿನಹೊಳೆ ಯೋಜನೆಯಿಂದ ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದು ಪ್ರಮುಖ ಆದ್ಯತೆಯಾಗಿರಬೇಕಾದರೆ, ನೂರಾರು ಕೋ. ರೂ. ಖರ್ಚು ಮಾಡಿ ಪರಿಸರವನ್ನು ಹಾಳು ಮಾಡಿ ಹೈಟೆಕ್ ರಸ್ತೆ ನಿರ್ಮಿಸುತ್ತಿರುವುದರ ಔಚಿತ್ಯ ಏನು ಎಂಬ ಪ್ರಶ್ನೆ ಮೂಡುತ್ತದೆ.
ಈ ಕಾಂಕ್ರೀಟ್ ರಸ್ತೆಯಲ್ಲಿ ಸಾಗುತ್ತಿದ್ದಂತೆ ಎತ್ತಿನಹೊಳೆ ನೀರಾವರಿ ಯೋಜನೆಗೆ ಪೂರಕವಾದ ಕಾಮಗಾರಿಗಳ ದರ್ಶನವಾಗುತ್ತದೆ. ಎತ್ತಿನಹೊಳೆ ಯೋಜನೆ ಸಂಬಂಧ ಪಶ್ಚಿಮಘಟ್ಟದಲ್ಲಿ ನಡೆಯುತ್ತಿರುವ ಕೆಲಸ – ಕಾರ್ಯಗಳ ವೇಗ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಕಳೆದ ಎರಡೂವರೆ ವರ್ಷದಲ್ಲಿ ಅಲ್ಲಿ ನಿರೀಕ್ಷೆಗೂ ಮೀರಿ ಶರವೇಗದಲ್ಲಿ ಕಾಮಗಾರಿಗಳು ಆಗಿವೆ. ಹೀಗಿರುವಾಗ ಎತ್ತಿನಹೊಳೆ ಯೋಜನೆ ಅನುಷ್ಠಾನ ವಿಚಾರದಲ್ಲಿ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಕಾಳಜಿ ಹಾಗೂ ಮುತುವರ್ಜಿ ಶ್ಲಾಘನೀಯ. ಆದರೆ ಅಲ್ಲಿನ ಕಾಮಗಾರಿ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಅಷ್ಟೊಂದು ತಲೆಕೆಡಿಸಿಧಿಕೊಂಡಂತೆ ಕಾಣುತ್ತಿಲ್ಲ. ಏಕೆಂದರೆ ಕಾಡುಮನೆ ಹೊಳೆ, ಕೇರಿಹೊಳೆ, ಹೊಂಗದ ಹೊಳೆ, ಎತ್ತಿನಹೊಳೆ ಸಹಿತ ಒಟ್ಟು ನಾಲ್ಕು ನೀರಿನ ಮೂಲಕ್ಕೆ ಒಟ್ಟು ಎಂಟು ಕಡೆ ಡ್ಯಾಂ ನಿರ್ಮಿಸಲಾಗುತ್ತಿದೆ. ಪ್ರತಿ ಡ್ಯಾಂನಿಂದ 2 ರಿಂದ 3 ಟಿಎಂಸಿ ನೀರು ಸಂಗ್ರಹಿಸುವುದು; ಆ ಮೂಲಕ ಜೂ. 15ರಿಂದ ಅಕ್ಟೋಬರ್ 31ರ ವರೆಗೆ ಒಟ್ಟು 24 ಟಿಎಂಸಿ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ಪೂರೈಸುವುದು ಈ ಯೋಜನೆ ಉದ್ದೇಶ. ಆದರೆ ನಿಗಮದ ಕಾಮಗಾರಿ ಗುಣಮಟ್ಟ ನೋಡಿದಾಗ ಎತ್ತಿನಹೊಳೆಯಿಂದ ಬಯಲು ಸೀಮೆಗೆ ನೀರು ಸರಬರಾಜು ಆಗುವ ಬಗ್ಗೆ ಈಗಲೇ ಅನುಮಾನ ಮೂಡುತ್ತದೆ. ಏಕೆಂದರೆ ಎತ್ತಿನಹೊಳೆ, ಕೇರಿಹೊಳೆ ಅಥವಾ ಹೊಂಗದ ಹೊಳೆಯಿರಬಹುದು, ಅಲ್ಲಿನ ಡ್ಯಾಂಗಳಿಂದ ನೀರು ಸಾಗಿಸಲು ಒಟ್ಟು ನಾಲ್ಕು ಲೈನ್‌ನ ಬೃಹತ್ ಗಾತ್ರದ ಪೈಪ್ ಅಳವಡಿಸಲಾಗುತ್ತಿದೆ. ಪ್ರತಿ ಪೈಪ್ ಸುತ್ತಳತೆ ಸುಮಾರು 13 ಅಡಿಯಷ್ಟು ಇದೆ. ಇಷ್ಟೊಂದು ಗಜ ಗಾತ್ರದ ಪೈಪ್ ಒಂದಕ್ಕೊಂದು ಜೋಡಿಸಬೇಕಾದರೆ ನೀರು ಸ್ವಲ್ಪವೂ ಸೋರಿಕೆಯಾಗದಂತೆ ವೆಲ್ಡಿಂಗ್ ಮಾಡಬೇಕಾಗುತ್ತದೆ. ಆದರೆ ಇಲ್ಲಿ ಬಹಳ ತರಾತುರಿಯಲ್ಲಿ ಪೈಪ್‌ಗ್ಳ ಜೋಡಣೆ ಮಾಡಿ ಮಣ್ಣಿನೊಳಗೆ ಹೂತು ಹಾಕುತ್ತಿದ್ದಾರೆ.
ಈ ರೀತಿ ಅವೈಜ್ಞಾನಿಕ ಪೈಪ್ ಅಳವಡಿಕೆಯಿಂದ ಪಶ್ಚಿಮಘಟ್ಟದ ನೈಸರ್ಗಿಕ ಸಂಪತ್ತು, ಜೀವ – ಜಲಕ್ಕೂ ಸಾಕಷ್ಟು ಹಾನಿಯಾಗುತ್ತಿದೆ. ಇನ್ನೊಂದೆಡೆ ಈ ಪೈಪ್‌ಗ್ಳಿಗೆ ಯಾವುದೇ ಗಟ್ಟಿ ಅಡಿಪಾಯ ಹಾಕದೆ ಯಥಾಸ್ಥಿತಿ ಮಣ್ಣಿನ ಮೇಲೆ ಹಾದುಹೋಗುತ್ತಿದೆೆ. ಇದರಿಂದ ಮಳೆಗಾಲದಲ್ಲಿ ಮಣ್ಣು ಕೊಚ್ಚಿಹೋಗಿ ಪೈಪ್‌ಗ್ಳು ಅಲ್ಲಲ್ಲಿ ಸಂಪರ್ಕ ಕಡಿದುಕೊಳ್ಳುವ ಅಪಾಯವಿದೆ. ಜತೆಗೆ ನೀರಿನ ಸೋರಿಕೆಯನ್ನೂ ಪರೀಕ್ಷಿಸದೆ ಪೈಪ್‌ಲೈನ್ ಮೇಲೆ ಮಣ್ಣು ಹಾಕಿ ಮುಚ್ಚುತ್ತಿರುವುದು ಕೂಡ ನೀರಾವರಿ ನಿಗಮದ ಕಳಪೆ ಮಟ್ಟದ ಕಾಮಗಾರಿಗೆ ಸ್ಪಷ್ಟ ನಿದರ್ಶನ. ಮುಂಬರುವ ವಿಧಾನಸಭೆ ಚುನಾವಣೆ ಲೆಕ್ಕಾಚಾರದಲ್ಲಿ ವೋಟ್ ಬ್ಯಾಂಕ್‌ಗಾಗಿ ಎತ್ತಿನಹೊಳೆ ಯೋಜನೆ ಕಾಮಗಾರಿಗಳನ್ನು ತರಾತುರಿಯಲ್ಲಿ ನಡೆಸುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಎತ್ತಿಹೊಳೆ ಯೋಜನೆ ಪ್ರಮುಖ ಕಾಮಗಾರಿಗಳನ್ನು ಪೂರ್ಣಗೊಳಿಸುವುದು; ಆ ಮೂಲಕ ಬಯಲುಸೀಮೆ ಜಿಲ್ಲೆಗಳ ಜನರನ್ನು ಓಲೈಸುವ ತಂತ್ರ ಇದರ ಹಿಂದೆ ಅಡಗಿದೆ.
ಭೂಸ್ವಾಧೀನವೇ ಅಂತಿಮವಾಗಿಲ್ಲ
ಎತ್ತಿನಹೊಳೆ ಯೋಜನೆಗೆ ಬೇಕಾದ ಭೂಸ್ವಾಧೀನದ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಈ ಬಗ್ಗೆ ಭೂಮಾಲಕರಿಗೂ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಹೀಗೆ, ಸಾವಿರಾರು ಕೋಟಿ ಜನರ ತೆರಿಗೆ ಹಣ ವೆಚ್ಚ ಮಾಡುವ ಜತೆಗೆ ಇಡೀ ಪಶ್ಚಿಮಘಟ್ಟದ ಒಡಲು ಬಗೆದು ಎತ್ತಿನಹೊಳೆಯಂಥ ಬಹು ನಿರೀಕ್ಷಿತ ಯೋಜನೆ ಕಾರ್ಯರೂಪಕ್ಕೆ ಬರಬೇಕಾದರೆ ಅದು ಫಲಾನುಭವಿಗಳನ್ನು ಸಮರ್ಪಕವಾಗಿ ತಲುಪಬೇಕು. ಅಷ್ಟೇ ಅಲ್ಲ, ಈ ಯೋಜನೆ ಎದುರು ನೋಡುತ್ತಿರುವ ಬಯಲು ಸೀಮೆ ಜಿಲ್ಲೆಗಳ ಸುಮಾರು 68.35 ಲಕ್ಷ ಜನರ ನೀರಿನ ಬವಣೆಯೂ ನೀಗಬೇಕು. ಅದು ಬಿಟ್ಟು ಕೇವಲ ಭ್ರಷ್ಟರ ಜೇಬು ತುಂಬಿಸುವುದಕ್ಕೆ ಹಾಗೂ ಚುನಾವಣೆ ವೋಟ್‌ಬ್ಯಾಂಕ್ ಆಗಿ ಎತ್ತಿನಹೊಳೆ ಯೋಜನೆ ಹಾಗೂ ಅದರ ಫಲಾನುಭವಿಗಳು -ಸಂತ್ರಸ್ತರು ಬಲಿಪಶು ಆಗಬಾರದು ಎನ್ನುವುದು ‘ಉದಯವಾಣಿ’ ಕಳಕಳಿ. ಈ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿಯ ನಿಜ ದರ್ಶನದ ವಸ್ತುನಿಷ್ಠ ವರದಿಗಳ ಸರಣಿ ಪ್ರಕಟಿಸಲಾಗುವುದು.
ಏರುತ್ತಲೇ ಇದೆ ಯೋಜನಾ ವೆಚ್ಚ
ಈ ಯೋಜನೆಯ ಕಾಮಗಾರಿ ಗುಣಮಟ್ಟ ಹಾಗೂ ವಾಸ್ತವಾಂಶಗಳನ್ನು ಕರಾವಳಿಯ ಜನಪ್ರತಿನಿಧಿಗಳು ಸಹಿತ ಯಾವುದೇ ಪಕ್ಷದ ನಾಯಕರೂ ಪ್ರಶ್ನಿಸುತ್ತಿಲ್ಲ. ಬೃಹತ್ ನೀರಾವರಿ ಸಚಿವರು ಕೂಡ ಒಮ್ಮೆ ಮಾತ್ರ ಎತ್ತಿನಹೊಳೆ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಸ್ಪಷ್ಟ ಮುಂದಾಲೋಚನೆಯಿಲ್ಲದೆ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಕಾರಣ ಈಗಾಗಲೇ ಎತ್ತಿನಹೊಳೆ ಯೋಜನಾ ವೆಚ್ಚ ಕೂಡ 8 ಸಾವಿರ ಕೋಟಿ ರೂ.ನಿಂದ 14 ಸಾವಿರ ಕೋಟಿ ರೂ.ಗೆ ಏರಿದೆ. ಇನ್ನು ಈ ಯೋಜನೆ 250 ಕಿ. ಮೀ. ದೂರದಲ್ಲಿರುವ ಫಲಾನುಭವಿಗಳನ್ನು ತಲುಪುವಷ್ಟರಲ್ಲಿ ಎಷ್ಟುಪಟ್ಟು ಜಾಸ್ತಿಯಾಗುತ್ತದೆ ಎಂಬುದನ್ನು ಊಹಿಸುವುದಕ್ಕೂ ಅಸಾಧ್ಯ.
– ಸುರೇಶ್ ಪುದುವೆಟ್ಟು
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ
Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್ ಗುಂಡೂರಾವ್
Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.