ಭ್ರಷ್ಟಾಚಾರ ನಿವಾರಣೆಗೆ ಸಾರ್ವಜನಿಕರ ಸಹಕಾರ ಅಗತ್ಯ
ದಕ್ಷತೆಯಿಂದ ತನಿಖೆ ಕೈಗೊಳ್ಳಲು ಇಂತಹ ಕಾರ್ಯಾಗಾರಗಳು ಪ್ರಯೋಜನಕಾರಿ
Team Udayavani, Apr 13, 2019, 1:48 PM IST
ದಾವಣಗೆರೆ: ಪೂರ್ವ ವಲಯ ಭ್ರಷ್ಟಾಚಾರ ನಿಗ್ರಹ ದಳದಿಂದ ಏರ್ಪಡಿಸಿದ್ದ ಭ್ರಷ್ಟಾಚಾರ ತನಿಖಾ ಕೌಶಲ್ಯ ಕಾರ್ಯಾಗಾರವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಂಬಾದಾಸ್ ಕುಲರ್ಣಿ ಜಿ. ಉದ್ಘಾಟಿಸಿದರು.
ದಾವಣಗೆರೆ: ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗು ಸಂಪೂರ್ಣ ನಿವಾರಣೆ ಆಗಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಂಬಾದಾಸ್ ಕುಲಕರ್ಣಿ ಜಿ. ಅಭಿಪ್ರಾಯಪಟ್ಟರು.
ನಗರದ ಎಸ್.ಎಸ್. ಬಡಾವಣೆಯ ಬಾಪೂಜಿ ಬಿ. ಸ್ಕೂಲ್ ಕಾಲೇಜು ಸಭಾಂಗಣದಲ್ಲಿ ಪೂರ್ವ ವಲಯ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಎಸಿಬಿ ಪೊಲೀಸ್ ಅಧಿಕಾರಿಗಳಿಗೆ ಆಯೋಜಿಸಿದ್ದ ಭ್ರಷ್ಟಾಚಾರ ಪ್ರಕರಣಗಳಲ್ಲಿ ತನಿಖಾ ಕೌಶಲ್ಯ ಕಾರ್ಯಾಗಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಣ್ಮುಂದೆ ನಡೆಯುವ ಭ್ರಷ್ಟಾಚಾರ ನೋಡಿಯೂ ಅದು ನಮಗೇಕೆ? ಅದಕ್ಕಾಗಿ
ಎಸಿಬಿ ಪೊಲೀಸ್ ಇದೆ ಎನ್ನುವ ನಿಲುವು ಇತ್ತೀಚಿಗೆ ಜನರೆ ಮನದಲ್ಲಿ ಬೇರೂರಿದೆ. ಈ ಭಾವನೆ ಬದಲಾಗಬೇಕು. ಪ್ರತಿಯೊಬ್ಬ ನಾಗರಿಕರು ಭ್ರಷ್ಟಾಚಾರ ತಡೆಯುವಲ್ಲಿ ಶ್ರಮಿಸಬೇಕು. ಕಣ್ಮುಂದೆ ಏನೇ ಭ್ರಷ್ಟಾಚಾರ ನಡೆದರೂ ಕೂಡಲೇ ಸಂಬಂಧಪಟ್ಟ ಇಲಾಖೆಗೆ ತಿಳಿಸಬೇಕು. ಆಗ ಮಾತ್ರ ಭ್ರಷ್ಟಾಚಾರ ನಿವಾರಣೆ ಆಗಲು ಸಾಧ್ಯ ಎಂದರು.
ದಿನ ಬೆಳಗಾದರೆ ಮಾಧ್ಯಮಗಳಲ್ಲಿ ಭ್ರಷ್ಟಾಚಾರದ ವಿಚಾರಗಳು ಪ್ರಸಾರ ಆಗುತ್ತಲೇ ಇರುತ್ತವೆ. ಭ್ರಷ್ಟಾಚಾರ ನಡೆಯದ ದಿನಗಳೇ ಇಲ್ಲ ಎನ್ನುವ ಭಾವನೆ ಇಂದು ಹೆಚ್ಚಾಗಿದೆ. ಎಸಿಬಿ ಪೊಲೀಸ್ ಅಧಿಕಾರಿಗಳಿಗೂ ಇಂದು ಸಂಪೂರ್ಣ ಭ್ರಷ್ಟಾಚಾರ ನಿಯಂತ್ರಣ ಮಾಡುವುದು ಸವಾಲಾಗಿದೆ. ಅದಕ್ಕೆ ಇಂತಹ ಕೌಶಲ್ಯ ಕಾರ್ಯಾಗಾರಗಳು ಸಹಕಾರಿ ಆಗಲಿದ್ದು, ಏನೇ ಗೊಂದಲಗಳಿದ್ದರೂ ಚರ್ಚೆ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ದಾವಣಗೆರೆಯ ಎ.ಸಿ.ಬಿ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು,
ಭ್ರಷ್ಟಾಚಾರದ ಅನೇಕ ಪ್ರಕರಣಗಳಲ್ಲಿ ಶಾಂತ ರೀತಿಯಲ್ಲಿ ತನಿಖೆ ನಡೆಸಿ ಸಮಯಕ್ಕೆ ಸರಿಯಾಗಿ ಸಾಕ್ಷಿಗಳನ್ನು ಒದಗಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆ ಆಗಬೇಕು ಎಂದು ಆಶಿಸಿದರು.
ಬೆಂಗಳೂರಿನ ನಿವೃತ್ತ ಪೊಲೀಸ್ ಅಧೀಕ್ಷಕ ಕುಣಿಗಲ್ ಶ್ರೀಕಂಠ ಮಾತನಾಡಿ, ದಿನೇ ದಿನೇ ಹಲವಾರು ಕಾಯ್ದೆಗಳಿಗೆ ಹೊಸ ತಿದ್ದುಪಡಿ, ಹೊಸ ತೀರ್ಪುಗಳು ಆಗುತ್ತಲೇ ಇರುತ್ತವೆ. ಅಂತಹ ಸಂದರ್ಭದಲ್ಲಿ ಅಧಿಕಾರಿಗಳು ಪರಿಪೂರ್ಣ ಮಾಹಿತಿ ಪಡೆದು ದಕ್ಷತೆಯಿಂದ ತನಿಖಾ ಕಾರ್ಯ ಕೈಗೊಳ್ಳಲು ಇಂತಹ ಕಾರ್ಯಾಗಾರಗಳು ಆಗಾಗ ನಡೆಯುವುದು ತುಂಬಾ ಪ್ರಯೋಜನಕಾರಿ. ಎಸಿಬಿ ಪೊಲೀಸ್ ಅಧಿಕಾರಿಗಳು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಎಲ್ಲಾ ರೀತಿಯ ತನಿಖಾ ಮಾದರಿಗಳನ್ನು ಅನುಸರಿಸಿ ಪರಿಣಾಮಕಾರಿಯಾದ ತನಿಖೆ
ನಡೆಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ದಾವಣಗೆರೆಯ ಎಸಿಬಿ ಪೂರ್ವ ವಲಯ ಪೊಲೀಸ್ ಅಧೀಕ್ಷಕ ಜಿ.ಎ. ಜಗದೀಶ್, ವಿಶೇಷ ಸರ್ಕಾರಿ ಅಭಿಯೋಜಕರಾದ ಆದಿಮನಿ, ಬಾಪೂಜಿ ಎಂಬಿಎ ಕಾಲೇಜಿನ ನಿರ್ದೇಶಕ ತ್ರಿಭುವಾನಂದ, ಎಸಿಬಿ ಡಿವೈಎಸ್‌ಪಿ ಎಚ್.ಎಸ್. ಪರಮೇಶ್ವರ್ ಉಪಸ್ಥಿತರಿದ್ದರು. ಬಾಪೂಜಿ ಎಂಬಿಎ ಕಾಲೇಜಿನ ಉಪನ್ಯಾಸಕಿ ಇಂಚರ ಸೇರಿದಂತೆ ಚಿತ್ರದುರ್ಗ, ಹಾವೇರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿ ಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಹೆಡ್ ಕಾನ್ಸ್‌ಟೇಬಲ್ ಓಂಕಾರನಾಯ್ಕ ನಿರೂಪಿಸಿದರು.
ಎ.ಸಿ.ಬಿ ವ್ಯಾಪ್ತಿಯ 4 ಜಿಲ್ಲೆಗಳಿಂದ 109 ಪ್ರಕರಣ ದಾಖಲು
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಜಿಲ್ಲೆಯ ಪೂರ್ವ ವಲಯ
ಎಸಿಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಏ.24, 2016ರಿಂದ ಮಾ.31,
2019ರವರೆಗೆ ಒಟ್ಟು 109 ಪ್ರಕರಣ ದಾಖಲಾಗಿವೆ. ಲಂಚ ಸ್ವೀಕಾರ, ಆದಾಯ
ಮೀರಿದ ಆಸ್ತಿ, ಸರ್ಕಾರಿ ಕಚೇರಿಗಳ ಶೋಧನೆಗೆ ಸಂಬಂಧಪಟ್ಟ ಪ್ರಕರಣಗಳ
ಪೈಕಿ ದಾವಣಗೆರೆ 33, ಶಿವಮೊಗ್ಗ 38, ಚಿತ್ರದುರ್ಗ 20, ಹಾವೇರಿ 18 ಸೇರಿದಂತೆ
109 ಪ್ರಕರಣ ದಾಖಲಾಗಿವೆ ಎಂದು ಎ.ಸಿ.ಬಿ ಪೂರ್ವ ವಲಯ ಪೊಲೀಸ್ ಅಧೀಕ್ಷಕ ಜಿ.ಎ. ಜಗದೀಶ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.