ವಿಜ್ಞಾನದ ಜತೆ ಬೆಳೆಯುತ್ತಿದೆ ಮೌಡ್ಯ
ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಪ್ರೊ| ಸಂಕನೂರು ವಿಷಾದ•ಖಗೋಳ ವಿಜ್ಞಾನ ಅತ್ಯಂತ ಪ್ರಾಚೀನ
Team Udayavani, Jul 26, 2019, 10:23 AM IST
ದಾವಣಗೆರೆ: ರಾಜ್ಯ ಮಟ್ಟದ ಖಗೋಳ ವಿಜ್ಞಾನ ಕಾರ್ಯಾಗಾರ ಉದ್ಘಾಟನೆ.
ದಾವಣಗೆರೆ: ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಖಗೋಳ ವಿಜ್ಞಾನ ಮುಂದುವರೆದಂತೆ ಮೌಡ್ಯವೂ ಹೆಚ್ಚಾಗುತ್ತಿರುವುದು ವಿಪರ್ಯಾಸ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಪ್ರೊ| ಎಸ್.ವಿ. ಸಂಕನೂರು ವಿಷಾದಿಸಿದ್ದಾರೆ.
ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಜಿಲ್ಲಾ ಸಂಯುಕ್ತಾಶ್ರಯದಲ್ಲಿ ಗುರುವಾರ ಶಿರಮಗೊಂಡನಹಳ್ಳಿಯ ಅನ್‌ಮೋಲ್ ಪಬ್ಲಿಕ್ ಸ್ಕೂಲ್ನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಖಗೋಳ ವಿಜ್ಞಾನ ಕಾರ್ಯಾಗಾರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂಬುದು ಸಂವಿಧಾನದ ಆಶಯ. ಅದನ್ನು ಏನಾದರೂ ಕಡ್ಡಾಯ ಮಾಡಿದ್ದಲ್ಲಿ ಮೌಡ್ಯಗಳ ಮೂಲೋತ್ಪಾಟನೆ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಆಕಾಶ ವೀಕ್ಷಣೆ, ವಿಜ್ಞಾನವನ್ನು ಪ್ರಯೋಗದ ಮೂಲಕ ತಿಳಿಸಲು ಮತ್ತು ಮೌಡ್ಯ ನಿರ್ಮೂಲನೆ ಉದ್ದೇಶದಿಂದ ಪ್ರೊ| ಎಚ್. ನರಸಿಂಹಯ್ಯ ರಾಜ್ಯ ವಿಜ್ಞಾನ ಪರಿಷತ್ತು ಪ್ರಾರಂಭಿಸಿದರು. ಈಗ ಮೌಡ್ಯ ಮುಂದುವರೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ಮಾತನಾಡಿ, ಭಾರತೀಯ ಇತಿಹಾಸದಲ್ಲಿ ಖಗೋಳ ವಿಜ್ಞಾನ ಅತ್ಯಂತ ಪ್ರಾಚೀನವಾದುದು. ಕ್ಯಾಲೆಂಡರ್ ರಚನೆ, ಯಾವ ಸಮಯದಲ್ಲಿ ಮಳೆ ಆಗುತ್ತದೆ, ಬಿಸಿಲು ಇರುತ್ತದೆ ಎಂಬ ಆಧಾರದಲ್ಲಿ ಕೃಷಿ ಕೆಲಸ, ಹಬ್ಬ ಹರಿದಿನ ಆಚರಣೆಗ ಖಗೋಳ ವಿಜ್ಞಾನ ಬಳಕೆ ಮಾಡುತ್ತಿದ್ದರು ಎಂದು ತಿಳಿಸಿದರು.
ಭಾರತೀಯರಲ್ಲಿ ಅನಾದಿ ಕಾಲದಿಂದಲೂ ಖಗೋಳ ವಿಜ್ಞಾನದ ಬಗ್ಗೆ ಇದ್ದಂತಹ ನಂಬಿಕೆಗಳು ಈಗ ಬುಡಮೇಲು ಆಗಿವೆ. ತಂತ್ರಜ್ಞಾನ ಬೆಳವಣಿಗೆಯ ಪರಿಣಾಮ ಅನೇಕ ನಂಬಿಕೆಗಳು ಸಹ ಬದಲಾವಣೆ ಆಗಿವೆ ಎಂದು ತಿಳಿಸಿದರು. ಖಗೋಳದಲ್ಲಿ ಸೂರ್ಯ ಅತೀ ಪ್ರಮುಖ ಕೇಂದ್ರ ಬಿಂದು. ಗುರು, ಶುಕ್ರ, ಶನಿ ಮತ್ತಿತರ ಗ್ರಹಗಳು ಸುತ್ತ ಭೂಮಿ ಸುತ್ತುತ್ತಿದೆ ಎಂಬುದನ್ನು ಆವಿಷ್ಕಾರದ ಮೂಲಕ ಕಂಡುಕೊಳ್ಳಲಾಯಿತು. ಸೂರ್ಯ ಎಂದರೆ ಈಗಲೂ ಆಶ್ಚರ್ಯದಿಂದ ನೋಡುವರು ಇದ್ದಾರೆ. ನಿಜಕ್ಕೂ ಸೂರ್ಯ ಒಂದು ಸಾಧಾರಣ ನಕ್ಷತ್ರ. ಸೂರ್ಯನಂಥ ಲಕ್ಷಾಂತರ ನಕ್ಷತ್ರಗಳು ಇವೆ. ಅವು ಎಲ್ಲವೂ ಸೇರಿ ಗೆಲೆಕ್ಸಿಗಳಾಗಿವೆ. ಆಕಾಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಗೆಲೆಕ್ಸಿಗಳಿವೆ ಎಂದು ತಿಳಿಸಿದರು.
ಖಗೋಳ ವಿಜ್ಞಾನದಲ್ಲಿ ಟೆಲಿಸ್ಕೋಪ್ ಆವಿಷ್ಕರಣೆ ಮೊದಲು ಕ್ರಾಂತಿ. ಆಕಾಶಕಾಯದಲ್ಲಿನ ಕೆಲವಾರು ಘಟನೆಗಳನ್ನು ಬರಿಗಣ್ಣಿನಲ್ಲಿ ನೋಡಬಹುದಿತ್ತು. ಟೆಲಿಸ್ಕೋಪ್ ಬಂದ ನಂತರ ಅದರಾಚೆಗಿನದ್ದನ್ನು ಕಾಣಲು ಸಾಧ್ಯವಾಯಿತು. ಟೆಲಿಸ್ಕೋಪ್ ನಂತರ ಕ್ಯಾಮೆರಾ ಕಂಡು ಹಿಡಿಯಲಾಯಿತು. ಸ್ಪೆಕ್ಟ್ರೋಮೀಟರ್ ಮೂರನೇ ಕ್ರಾಂತಿ. ಅದರಿಂದ ಆಕಾಶಕಾಯಗಳ ಬಣ್ಣ , ಪ್ರಕಾಶ, ತಾಪಮಾನ ಎಲ್ಲವನ್ನೂ ತಿಳಿಯಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಕಂಡು ಹಿಡಿದಂತಹ ಎಕ್ಸ್‌ರೇ, ಅಲ್ಟ್ರಾವೈಲೆಟ್ ಕಿರಣ ಪತ್ತೆಯಂತ್ರ, ಎಂಆರ್‌ಐ ಯಂತ್ರಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆ ಮಾಡುವುದನ್ನು ಕಾಣಬಹುದು ಎಂದು ತಿಳಿಸಿದರು. ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ ನಿರ್ದೇಶಕ ಪ್ರೊ| ವೈ. ವೃಷಭೇಂದ್ರಪ್ಪ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ, ವಿಜ್ಞಾನ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ| ಬಿ.ಇ. ರಂಗಸ್ವಾಮಿ, ಅನ್‌ಮೋಲ್ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಜಿ. ದಿನೇಶ್, ಯಶಾ ದಿನೇಶ್, ಆರ್.ಬಿ. ವಸಂತಕುಮಾರಿ, ಡಾ| ಆನಂದ್ ಇತರರು ಇದ್ದರು. ವಿಜ್ಞಾನ ಪರಿಷತ್ತಿ ಸದಸ್ಯ ಕೆ. ಸಿದ್ದೇಶ್ ಸ್ವಾಗತಿಸಿದರು. ಎಂ. ಗುರುಸಿದ್ದಸ್ವಾಮಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ