ಸೌಲಭ್ಯ ಪಡೆಯಲು ಕಾನೂನು ಅರಿವಿರಲಿ
•ಅಂಗವಿಕಲರ ಕುಂದು-ಕೊರತೆ ಸಭೆಯಲ್ಲಿ ಆಯುಕ್ತ ವಿ.ಎಸ್ ಬಸವರಾಜು ಸಲಹೆ
Team Udayavani, Jun 16, 2019, 10:04 AM IST
ದಾವಣಗೆರೆ: ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ವಿ.ಎಸ್.ಬಸವರಾಜು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಅಂಗವಿಕಲರ ಕುಂದು-ಕೊರತೆ ಆಲಿಸಿದರು.
ದಾವಣಗೆರೆ: ಅಂಗವಿಕಲರ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿದ ಕಾಯ್ದೆ, ಕಾನೂನುಗಳ ಬಗ್ಗೆ ಅರಿವಿದ್ದರೆ ಮಾತ್ರ ಅಂಗವಿಕಲರ ಪಾಲಿನ ಶೇ.80ರಷ್ಟು ಸೌಲಭ್ಯ ಪಡೆದುಕೊಳ್ಳಲು ಸಾಧ್ಯ ಎಂದು ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ವಿ.ಎಸ್. ಬಸವರಾಜು ಸಲಹೆ ನೀಡಿದ್ದಾರೆ.
ಶನಿವಾರ, ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ವಿಕಲಚೇತನರ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಅಂಗವಿಕಲರ ಶ್ರೇಯೋಭಿವೃದ್ಧಿಗೆ ಸರ್ಕಾರ ಹಲವಾರು ಕಾನೂನು ರೂಪಿಸಿದೆ. ಅವುಗಳನ್ನು ಮೊದಲು ತಿಳಿದುಕೊಂಡು ವಿವಿಧ ಇಲಾಖೆಗಳಲ್ಲಿ ಈ ಬಗ್ಗೆ ನಿಖರವಾಗಿ ನಮೂದಿಸಿ ಸೌಲಭ್ಯಕ್ಕೆ ಅರ್ಜಿ ಬರೆದಾಗ ಅದನ್ನು ನೋಡಿದ ಅಧಿಕಾರಿಗಳು ನಿಮ್ಮ ಸೌಲಭ್ಯಗಳನ್ನು ಚಾಚು ತಪ್ಪದೇ ನೀಡುವಂತಾಗಬೇಕು. ಇದಕ್ಕಾಗಿ ಕನಿಷ್ಠ ಪಕ್ಷ ಒಂದು ಅರ್ಜಿಯನ್ನು ತಾವೇ ಬರೆಯುವ ಅಥವಾ ಬೇರೆಯವರು ನೀವೇಳಿದ್ದನ್ನು ಬರೆಯುವಷ್ಟಾದರೂ ಮಾಹಿತಿ ತಿಳಿಯುವುದು ಅತಿ ಅವಶ್ಯ ಎಂದರು.
ಅಂಗವಿಕಲರಿಗೆ ಸಮಸ್ಯೆ ಎಂದಾಕ್ಷಣ ಎಲ್ಲರೂ ಜಿಲ್ಲಾ ವಿಕಲಚೇತನರ ಇಲಾಖೆಗೆ ಬರುವುದಲ್ಲ. ಬದಲಾಗಿ ಯಾವ ಇಲಾಖೆಯಲ್ಲಿ ಸೌಲಭ್ಯಗಳನ್ನು ನಿಮಗೆ ನೀಡುತ್ತಿಲ್ಲವೋ ಅಲ್ಲಿಯೇ ಅದನ್ನು ಪಡೆದುಕೊಳ್ಳುವಷ್ಟಾದರೂ ಅರಿವು ಮತ್ತು ಮಾಹಿತಿ ತಿಳಿದಿರಬೇಕು ಎಂದು ಕಿವಿಮಾತು ಹೇಳಿದರು.
ಈ ವೇಳೆ ಚನ್ನಗಿರಿ ತಾಲೂಕಿನ ಯೋಗರಾಜ್, ನಮ್ಮ ತಾಲೂಕು ಕಚೇರಿಯಲ್ಲಿ ಅಂಗವಿಕಲರಿಗೆ ಕೂರಲು ಆಸನ ವ್ಯವಸ್ಥೆ, ನಿರ್ದಿಷ್ಟ ಶೌಚಾಲಯಗಳಿಲ್ಲ. ದೇವರಾಜ ಅರಸು ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ ಕೊರೆಸಲು 3-4 ಬಾರಿ ಅರ್ಜಿ ಹಾಕಿದರೂ ಸ್ಪಂದಿಸುತ್ತಿಲ್ಲ. ಕಾನೂನಿನ ಅರಿವು ನಮಗಿಲ್ಲ. ಜಿಲ್ಲಾಡಳಿತದಿಂದ ಪ್ರತಿ ತಾಲೂಕು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಲಚೇತನರಿಗಾಗಿ ಇರುವ ಸವಲತ್ತು ಮತ್ತು ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಪ್ರಸ್ತುತ ಅಂಗವಿಕಲರ ಹೆಸರಲ್ಲಿ ಬೇರೆಯವರು ಸೌಲಭ್ಯ ಪಡೆದುಕೊಳ್ಳುತ್ತಿದ್ದು, ಅದನ್ನು ಪರಿಶೀಲಿಸಿ, ತಡೆಯಬೇಕು ಎಂದರು.
ಆಗ ಆಯುಕ್ತರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಪ್ರತಿ ತಾಲೂಕು ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಅಂಗವಿಕಲರಿಗೆ ಬೇಕಾದ ಸೌಲಭ್ಯಗಳ ಕ್ರಿಯಾಯೋಜನೆ ರೂಪಿಸುವುದಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ತಿಳಿಸಿದ್ದಾರೆ. ಇದರ ಜೊತೆಗೆ ಅಂಗವಿಕಲರ ಕಾನೂನು ಮತ್ತು ವಿವಿಧ ಇಲಾಖೆಯಲ್ಲಿನ ಸೌಲಭ್ಯಗಳ ಕುರಿತು ಕಾರ್ಯಕ್ರಮ ನಡೆಸಲು ಸೂಚಿಸಲಾಗುವುದು ಎಂದರು.
ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಶಿಧರ್ ಮಾತನಾಡಿ, ಚನ್ನಗಿರಿ ತಾಲೂಕು ಪಂಚಾಯಿತಿಯಲ್ಲಿನ ಸಮಸ್ಯೆ ಬಗ್ಗೆ ಕೂಡಲೇ ಪರಿಶೀಲಿಸಿ ಅಲ್ಲಿನ ಇಓ ಬಳಿ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಸಭೆಯಲ್ಲಿ ತಿಳಿಸಿದರು.
ಸುರೇಶ್ ಎಂಬುವರು ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 4500ರಷ್ಟು ಮೂಕರು ಮತ್ತು ಕಿವುಡರಿದ್ದಾರೆ. ಅವರೆಲ್ಲರು ಎಸ್‌ಎಸ್‌ಎಲ್ಸಿಯಲ್ಲಿ ಉತ್ತೀರ್ಣರಾಗಿದ್ದರೂ ಇಂದಿಗೂ ಅವರಿಗೆ ಕಾನೂನುಗಳ ಅರಿವಿಲ್ಲ. ಉದ್ಯೋಗವಿಲ್ಲ. ಸೌಲಭ್ಯ ಕೋರಿ ಅರ್ಜಿ ಬರೆಯಲು ಆಗುತ್ತಿಲ್ಲ. ಇವರ ಗತಿ ಏನೆಂದು ಪ್ರಶ್ನಿಸಿದರು.
ಆಯುಕ್ತ ಬಸವರಾಜು, ಅಂತಹವರಿಗೆ ಅವರ ಕುಟುಂಬ ಮತ್ತು ನೆರಹೊರೆಯವರು ಸಹಾಯ ಮಾಡಬೇಕು. ಸನ್ನೆ ಭಾಷೆಯನ್ನು ಅವರಿಗೆ ತಿಳಿಸಿ ಅವರನ್ನು ಕಾರ್ಯಪ್ರವೃತ್ತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಕುಂದುಕೊರತೆ ಸಭೆಗೆ ಹಾಜರಾಗದಿದ್ದ ವಿಆರ್‌ಡಬ್ಲ್ಯೂ/ಎಂಆರ್‌ಡಬ್ಲ್ಯೂ/ಯುಆರ್‌ಡಬ್ಲ್ತ್ರ್ಯೂ ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಆಯುಕ್ತರು ಸೂಚಿಸಿದರು.
ಸಾಲ ಸೌಲಭ್ಯ, ಉದ್ಯೊಗಾವಕಾಶ, ತ್ರಿಚಕ್ರ ವಾಹನ, ಸೈಕಲ್, ನಿವೇಶನ ಮತ್ತು ವಸತಿ, ಕುಟುಂಬ ನಿರ್ವಹಣೆ ಸಮಸ್ಯೆ, ಓದಿಗೆ ತಕ್ಕ ಕೆಲಸ, ಸ್ವಯಂ ಉದ್ಯೋಗಕ್ಕಾಗಿ ಸಾಲ ಕೋರಿಕೆ ಸೇರಿದಂತೆ 80ಕ್ಕೂ ಹೆಚ್ಚು ಅರ್ಜಿಗಳನ್ನು ಸಭೆಯಲ್ಲಿ ಅಂಗವಿಕಲರು ಆಯುಕ್ತರಿಗೆ ಸಲ್ಲಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಉಪ ನಿರ್ದೇಶಕಿ ಭಾರತಿ ಬಣಕಾರ್, ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಸಲಹೆಗಾರ ಡಾ| ಸುರೇಶ್ ಹನಗವಾಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.