ಮಂತ್ರಿಗಿರಿ ಸಿಗದ್ದಕ್ಕೆ ಸಿಟ್ಟಿದೆ, ಹೇಳಂಗಿಲ್ಲ!
ದಾವಣಗೆರೆ ಜಿಲ್ಲೆ ಬಿಜೆಪಿ ಶಾಸಕರ ಅಸಹಾಯಕತೆ •5 ಮಂದಿ ಶಾಸಕರಲ್ಲಿ ಒಬ್ಬರಿಗೂ ಇಲ್ಲ ಸಚಿವ ಸ್ಥಾನ
Team Udayavani, Aug 21, 2019, 3:23 PM IST
ಎನ್.ಆರ್. ನಟರಾಜ್
ದಾವಣಗೆರೆ: ಅಂತೂ ಇಂತೂ ಮಂಗಳವಾರ ವಿಸ್ತರಣೆಯಾದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಮಂತ್ರಿ ಮಂಡಲದಲ್ಲಿ ಬಿಜೆಪಿ ಭದ್ರ ಕೋಟೆ ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಒಲಿದಿಲ್ಲ.
8 ವಿಧಾನಸಭಾ ಕ್ಷೇತ್ರಗಳ ಪೈಕಿ 6, ಜಿಲ್ಲೆಯ 7 ಕ್ಷೇತ್ರಗಳಲ್ಲಿ 5ರಲ್ಲಿ ಬಿಜೆಪಿ ಶಾಸಕರಿದ್ದರೂ ಈ ಬಾರಿ ಒಬ್ಬರಿಗೂ ಕೂಡ ಸಚಿವರಾಗೋ ಯೋಗ ಕೂಡಿ ಬಂದಿಲ್ಲ. ಆಶ್ಚರ್ಯವೆಂದರೆ ಸಚಿವ ಸ್ಥಾನ ಸಿಗದ ಬಗ್ಗೆ ಬಿಜೆಪಿ ಶಾಸಕರಲ್ಲಿ ಅಸಮಾಧಾನವಿದ್ದರೂ ಬಹಿರಂಗವಾಗಿ ತೋರ್ಪಡಿಸಿಕೊಳ್ಳಲೂ ಆಗುತ್ತಿಲ್ಲ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆದ್ದ 104 ಕ್ಷೇತ್ರಗಳಲ್ಲಿ ಜಿಲ್ಲೆಯದ್ದು ಬಹು ದೊಡ್ಡ ಪಾಲಿತ್ತು. ಆದರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ ಸರಳ ಬಹುಮತ ಸಾಬೀತು ಪಡಿಸಲಾಗದೇ ರಾಜೀನಾಮೆ ನೀಡಿದರು. ನಂತರ ಅಧಿಕಾರಕ್ಕೆ ಬಂದ ದೋಸ್ತಿ ಸರಕಾರ 14 ತಿಂಗಳಲ್ಲಿ ಪತನಗೊಂಡು ಮತ್ತೆ ಬಿಜೆಪಿ ಅಧಿಕಾರಕ್ಕೇರಿ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾರೆ. ನೂತನ ಸರಕಾರದ ಸಚಿವ ಸಂಪುಟದಲ್ಲಿ ತಮ್ಮ ಕಟ್ಟಾ ಬೆಂಬಲಿಗರು, ಪಕ್ಷದ ನಿಷ್ಠಾವಂತರು ಹಾಗೂ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಬಿಎಸ್‌ವೈ ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿದ್ದಾರೆ.
ಹಾಗೆ ನೋಡಿದರೆ 2008ರ ಚುನಾವಣೆಯಲ್ಲಿ ಬಿಜೆಪಿಗೆ ಭದ್ರ ನೆಲೆ ಕಲ್ಪಿಸಿ, ಆ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲು ಕೊಡುಗೆ ನೀಡಿದ್ದು ದಾವಣಗೆರೆ ಜಿಲ್ಲೆ. ಆಗ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಗೆದ್ದಿದ್ದ ಬಿಜೆಪಿ, ಸ್ವಲ್ಪ ದಿನಗಳ ನಂತರ ಆಪರೇಷನ್ ಕಮಲದ ಮೂಲಕ ಜಗಳೂರಿನ ಎಸ್.ವಿ. ರಾಮಚಂದ್ರರನ್ನು ಸೆಳೆದು, 7 ಕ್ಷೇತ್ರಗಳಲ್ಲಿ ಅಧಿಪತ್ಯ ಸಾಧಿಸಿತ್ತು. 2008-2013ರ ಅವಧಿಯ ಬಿಜೆಪಿ ಸರ್ಕಾರದಲ್ಲಿ ರವೀಂದ್ರನಾಥ್, ಕರುಣಾಕರ ರೆಡ್ಡಿ, ಎಂ.ಪಿ. ರೇಣುಕಾಚಾರ್ಯ ಸಚಿವರಾಗಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ದಿಕ್ಕು ದಿಸೆಯಿಲ್ಲದಂತಾಗಿದ್ದ ಬಿಜೆಪಿ 2018ರ ಚುನಾವಣೆಯಲ್ಲಿ ಮತ್ತೆ ತನ್ನ ಅಧಿಪತ್ಯ ಸಾಧಿಸಿದೆ.
ಜಿಲ್ಲೆಯಲ್ಲಿ ಬಿಜೆಪಿ ಭದ್ರ ನೆಲೆಯೂರಲು ತಮ್ಮದೇ ಆದ ಕೊಡುಗೆ ನೀಡಿದ ಹಿರಿಯ ಶಾಸಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಬಿ.ಎಸ್. ಯಡಿಯೂರಪ್ಪನವರ ಪಕ್ಕಾ ಬೆಂಬಲಿಗ ಶಾಸಕ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಹರಪನಹಳ್ಳಿಯ (ಈಗ ಬಳ್ಳಾರಿ ಜಿಲ್ಲೆಗೆ ಸೇರಿದ್ದರೂ ದಾವಣಗೆರೆ ಲೋಕಸಭಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರ) ಜಿ.ಕರುಣಾಕರ ರೆಡ್ಡಿ ಇವರಲ್ಲಿ ಒಬ್ಬರಾದರೂ ಸಚಿವರಾಗಬಹುದೇನೋ ಎಂಬ ಲೆಕ್ಕಾಚಾರ ಇತ್ತು. ಮಾಯಕೊಂಡ ಕ್ಷೇತ್ರದ ಪ್ರೊ| ಎನ್.ಲಿಂಗಣ್ಣ ಮೊದಲ ಬಾರಿಗೆ ಶಾಸಕರಾಗಿರುವುದರಿಂದ ಅವರೇನೂ ಮಂತ್ರಿ ಸ್ಥಾನದ ಆಸೆ ಇಟ್ಟು ಕೊಂಡಿರಲಿಲ್ಲ. ಆದರೆ, ಚನ್ನಗಿರಿ ಕ್ಷೇತ್ರದ ಮಾಡಾಳು ವಿರೂಪಾಕ್ಷಪ್ಪ ಹಾಗೂ ಜಗಳೂರು ಕ್ಷೇತ್ರದ ಎಸ್.ವಿ. ರಾಮಚಂದ್ರ ತಮಗೇನಾದಾರೂ ಅವಕಾಶ ಸಿಗಬಹುದೆಂಬ ಸಣ್ಣ ನಿರೀಕ್ಷೆ ಇಟ್ಟುಕೊಂಡಿದ್ದರು.
ಸಂಪುಟ ವಿಸ್ತರಣೆಯಲ್ಲಿ ತಮ್ಮ ಎಲ್ಲಾ ಕಟ್ಟಾ ಬೆಂಬಲಿಗರಿಗೂ ಸಚಿವ ಸ್ಥಾನ ಕಲ್ಪಿಸುವ ಪರಿಸ್ಥಿತಿಯಲ್ಲಿ ಯಡಿಯೂಪ್ಪನವರಿಲ್ಲ ಎಂಬುದೂ ಸಹ ವಾಸ್ತವ. ಸದ್ಯ 17 ಮಂದಿಗೆ ಮೊದಲ ಕಂತಿನ ವಿಸ್ತರಣೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಪಕ್ಷ ಸದೃಢವಾಗಲು ತನ್ನದೇ ಆದ ಕಾಣಿಕೆ ನೀಡಿದ ಜಿಲ್ಲೆಯಲ್ಲಿ ಒಬ್ಬರಿಗಾದರೂ ಅವಕಾಶ ನೀಡಿಲ್ಲ ಎಂಬ ಬೇಸರವಂತೂ ಇದೆ. ಆದರೆ, ಆ ಅಸಮಾಧಾನ ಸ್ಫೋಟಗೊಳ್ಳುವ ಮಟ್ಟಕ್ಕೆ ಹೋಗಲಾರದು ಎಂಬ ಮಾತು ಕೇಳಿ ಬರುತ್ತಿದೆ.
ಜಿಲ್ಲೆಯ ಬಿಜೆಪಿ ಶಾಸಕರಲ್ಲಿ ಎಸ್.ಎ.ರವೀಂದ್ರನಾಥ್ ಮೂಲತಃ ಆರ್.ಆರ್.ಎಸ್.ನ ಕಟ್ಟಾಳು. ಇನ್ನು ಹೊನ್ನಾಳಿಯ ರೇಣುಕಾಚಾರ್ಯ, ಚನ್ನಗಿರಿಯ ಮಾಡಾಳು ವಿರೂಪಾಕ್ಷಪ್ಪ, ಜಗಳೂರಿನ ಎಸ್. ವಿ.ರಾಮಚಂದ್ರ ಹಾಗೂ ಮಾಯಕೊಂಡದ ಪ್ರೊ| ಎನ್.ಲಿಂಗಣ್ಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪಕ್ಕಾ ಬೆಂಬಲಿಗರು. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಅವರನ್ನು ಹಿಂಬಾಲಿಸಿ, ಆ ಪಕ್ಷದಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರು. ಹಾಗಾಗಿ ಬಿಎಸ್‌ವೈ ತಮ್ಮ ಬೆಂಬಲಿಗರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡಬಹುದೆಂಬ ನಿರೀಕ್ಷೆ ಇದ್ದದ್ದು ಸಹಜ. ಅದರಲ್ಲೂ ಬಿಎಸ್‌ವೈ ಮಾನಸ ಪುತ್ರನೆಂದೇ ಗುರುತಿಸಿಕೊಂಡಿದ್ದ ಎಂ.ಪಿ.ರೇಣುಕಾಚಾರ್ಯ ಸಚಿವರಾಗೋ ಕನಸು ಕಂಡಿದ್ದರು. ಅದು ಸಾಕಾರವಾಗಿಲ್ಲ. ತಮ್ಮ ನೆಚ್ಚಿನ ನಾಯಕ ಬಿ.ಎಸ್.ಯಡಿಯೂರಪ್ಪ ತಮಗೆ ಅವಕಾಶ ಕಲ್ಪಿಸದಿದ್ದಕ್ಕೆ ಮೇಲ್ನೋಟಕ್ಕೆ ಬೇಸರ ವ್ಯಕ್ತಪಡಿಸದಿದ್ದರೂ ಒಳಗೊಳಗೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ಅಸಮಾಧಾನ ಇದೆ. ಆದರೆ, ಯಾರೂ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿಲ್ಲವಷ್ಟೆ.
ಬಿಜೆಪಿ ಸರಳ ಬಹುಮತ ಪಡೆಯದಿದ್ದರೂ ಬದಲಾದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದಿದೆ. ಅದರಲ್ಲೂ ತಮ್ಮ ನೆಚ್ಚಿನ ನಾಯಕರೇ ಸಿಎಂ ಆಗಿರುವುದರಿಂದ ಇವರ ಸಿಟ್ಟು ಒಂದು ರೀತಿ ಬಾಯಲ್ಲಿರುವ ಬಿಸಿ ತುಪ್ಪದಂತಿದೆ. ತುಪ್ಪ ನುಂಗುವಂತಿಲ್ಲ, ಉಗುಳುವಂತಿಲ್ಲ. ಆದ್ದರಿಂದಲೇ ಜಿಲ್ಲೆಯ ಬಿಜೆಪಿ ಶಾಸಕರೀಗ ಸಚಿವ ಸಂಪುಟದ ಮುಂದಿನ ವಿಸ್ತರಣೆಯತ್ತ ಕಾದು ನೋಡುವಂತಾಗಿದೆ.
ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ನನಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮುಖ್ಯವೇ ಹೊರತು ಸಚಿವ ಸ್ಥಾನವಲ್ಲ ಎಂದು ಮೊದಲೇ ಹೇಳಿದ್ದೆ. ಯಾವತ್ತೂ ಅಧಿಕಾರ ಶಾಶ್ವತವಲ್ಲ ಎಂಬುದು ನನಗೆ ಚನ್ನಾಗಿ ಗೊತ್ತಿದೆ. ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಅಭಿವೃದ್ಧಿಗೆ ಶ್ರಮಿಸುವೆ.
• ಎಂ.ಪಿ.ರೇಣುಕಾಚಾರ್ಯ,
ಹೊನ್ನಾಳಿ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.