ವರುಣಾರ್ಭಟ
Team Udayavani, Aug 19, 2019, 10:12 AM IST
ದಾವಣಗೆರೆ: ನಗರದಲ್ಲಿ ಭಾನುವಾರ ಸಂಜೆ ಸುರಿದ ಮಳೆಗೆ ರಸ್ತೆಗಳೆಲ್ಲ ಜಲಾವೃತವಾಗಿದ್ದವು.
ದಾವಣಗೆರೆ: ಉತ್ತರ ಕರ್ನಾಟಕದಲ್ಲಿನ ಪ್ರವಾಹ ಪರಿಸ್ಥಿತಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲೇ ನಗರದಲ್ಲಿ ಭಾನುವಾರ ಸಂಜೆ ಎರಡು ಗಂಟೆಗೂ ಅಧಿಕ ಕಾಲ ಸುರಿದ ಧಾರಾಕಾರ ಮಳೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಮೃಗಶಿರಾ ಮಳೆಯಿಂದ ದಾವಣಗೆರೆ ಅಕ್ಷರಶಃ ತತ್ತರಿಸಿ ಹೋಗಿದೆ.
ಜಾಲಿನಗರದ ಇಡಬ್ಲೂಎಸ್ ಕಾಲೋನಿಯ ಧೀರಜ್ ಬೈಕ್ ಗ್ಯಾರೇಜ್ ಬಳಿ 45 ವರ್ಷ ವಯಸ್ಸಿನ ವ್ಯಕ್ತಿಯ ಶವ ಮಳೆ ನೀರಿನಲ್ಲಿ ಪತ್ತೆಯಾಗಿದೆ.
ಎರಡು ಗಂಟೆಗೂ ಅಧಿಕ ಕಾಲ ಸುರಿದ ಭಾರೀ ಮಳೆಯಿಂದ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಮೋಟರ್ ಬಳಸಿ ಮನೆಗಳಿಂದ ನೀರು ಹೊರ ಹಾಕಲಾಗುತ್ತಿದೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅನೇಕರು ಅಕ್ಷರಶಃ ಅತಂತ್ರರಾಗಿದ್ದಾರೆ.
ಭಾರೀ ಮಳೆಯ ಕಾರಣ ಅನೇಕ ಮನೆಗಳ ಗೋಡೆ ಬಿದ್ದಿವೆ. ಜಾಲಿನಗರದ ಆಂಜನೇಯ ದೇವಸ್ಥಾನದ ಬಳಿ ಮಳೆಯ ನೀರಿಗೆ ಕೊಚ್ಚಿ ಹೋಗುತ್ತಿದ್ದ ಆ್ಯಕ್ಸಿಸ್ ಹೋಂಡಾ ಸವಾರನೊಬ್ಬನನ್ನು ಸಾರ್ವಜನಿಕರು ರಕ್ಷಿಸಿದ್ದಾರೆ.
ಜಾಲಿನಗರದ ಮುಖ್ಯ ರಸ್ತೆಯಲ್ಲಿ ಗಿರೀಶ್ ಎಂಬುವರ ಮನೆಗೆ ನೀರು ನುಗ್ಗಿದ್ದು ಮನೆಯಲ್ಲಿದ್ದ ವಯೋವೃದ್ಧೆ ಹನುಮಕ್ಕ ಎಂಬುವರು ನೀರಿನಲ್ಲಿ ಸಿಲುಕಿಕೊಂಡಿದ್ದರು. ಹನುಮಕ್ಕನಿಗೆ ಕಣ್ಣು ಕಾಣಿಸದ ಕಾರಣ ಹೊರಗೆ ಬರಲಿಕ್ಕೆ ಆಗಲಿಲ್ಲ. ವಿಷಯ ತಿಳಿದ ಬಿಜೆಪಿ ಮುಖಂಡರಾದ ಚೇತನಾ ಶಿವಕುಮಾರ್, ಎಳನೀರು ಗಣೇಶಪ್ಪ, ಶಿವಾನಂದ್, ಅಕ್ಕಮ್ಮ ಇತರರು ಗಿರೀಶ್ ಮನೆಗೆ ತೆರಳಿ, ಹನುಮಕ್ಕನನ್ನು ಹೊರ ತಂದು ಸುರಕ್ಷಿತ ಜಾಗಕ್ಕೆ ಬಿಟ್ಟಿದ್ದಾರೆ.
ಎಸ್‌ಪಿಎಸ್ ನಗರದ ಮಂಜುನಾಥ್ ಎಂಬುವರು ಮನೆಗೆ ನೀರು ನುಗ್ಗಿದ ಪರಿಣಾಮ ಮನೆಗೆ ಬೀಗ ಹಾಕಿಕೊಂಡು ಹೊರಗೆ ನಿಲ್ಲಬೇಕಾಯಿತು. ಆದರೂ, ಮನೆಗೆ ನೀರು ನುಗ್ಗಿದೆ.
ಕೊರಮರಹಟ್ಟಿಯಲ್ಲಿ ಪೂಜಾರ್ ಅಜ್ಜಪ್ಪ ಎಂಬುವರ ಮನೆ ಕುಸಿದಿದೆ. ಬೂದಾಳ್ ರಸ್ತೆಯಲ್ಲಿ 4-5 ಮನೆ ಬಿದ್ದಿವೆ. ಅಶೋಕ ನಗರದಲ್ಲಿ ಮನೆಯೊಂದು ಬಿದ್ದಿದ್ದು ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಾಲಿನಗರದ ಸುಶೀಲಮ್ಮ, ಸರೋಜಮ್ಮ, ಆನಂದ್, ಜ್ಯೋತಿ ಎಂಬುವರ ಮನೆಗೆ ನೀರು ನುಗ್ಗಿದೆ.
ಎಸ್.ಜೆ.ಎಂ. ನಗರದಲ್ಲಿ ಪ್ರಭು, ವೆಂಕಟೇಶ್, ಸುಬ್ಬಣ್ಣ. ಆಜಾದ್ ನಗರದ ಚಿನ್ನಮ್ಮ, ಚಂದ್ರು, ವೀರೇಶ್ ಎಂಬುವರ ಮನೆಗೆ ನೀರು ನುಗ್ಗಿದ ಪರಿಣಾಮ ಮನೆಯವರು ತೀವ್ರ ತೊಂದರೆ ಅನುಭವಿಸುವಂತಾಯಿತು.
ಆಜಾದ್ ನಗರ, ಶಿವನಗರ, ಬಾಷಾ ನಗರ, ರಾಮಕೃಷ್ಣ ಹೆಗಡೆ ನಗರ, ಭೋವಿ ಕಾಲೋನಿ, ಮಿರ್ಜಾ ಇಸ್ಮಾಯಿಲ್ ನಗರ, ಮಾಗಾನಹಳ್ಳಿ ರಸ್ತೆ, ಚೌಡೇಶ್ವರಿ ನಗರ, ರಜಾಮುಸ್ತಫಾ ನಗರ… ಹೀಗೆ ಅನೇಕ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಪೂರ್ತಿ ನೀರುಮಯವಾಗಿತ್ತು. ಪ್ರತಿ ಬಾರಿ ಮಳೆ ನೀರು ನುಗ್ಗುವುದರಿಂದ ಬಸ್ ನಿಲ್ದಾಣದಲ್ಲಿ ಸರ್ವೇ ಸಾಮಾನ್ಯ ಎನ್ನುವಂತೆ ಸಮಸ್ಯೆ ಅನುಭವಿಸಬೇಕಾಯಿತು. 3-4 ಅಡಿ ನೀರು ನಿಂತಿದ್ದರಿಂದ ಬಸ್ ಹತ್ತುವುದು, ಇಳಿಯುವುದಕ್ಕೆ ಪ್ರಯಾಣಿಕರು ಅಕ್ಷರಶಃ ಪರದಾಡಿದರು. ಚಿಕ್ಕ ಮಕ್ಕಳು, ವಯೋವೃದ್ಧರು, ಅನಾರೋಗ್ಯ ಪೀಡಿತರು ಹೇಳತೀರದ ತೊಂದರೆ ಅನುಭವಿಸಿದರು.
ಮಳೆ, ನೆರೆ ಬಂದಾಗ ರಕ್ಷಣೆ ಮಾಡುವಂತಹ ಅಗ್ನಿಶಾಮಕದಳ ಸಿಬ್ಬಂದಿ ಕೂಡ ಮಳೆ ಸಮಸ್ಯೆಗೆ ತುತ್ತಾದರು. ಅಗ್ನಿಶಾಮಕ ದಳದ ಆವರಣ ಕೆರೆಯಂತಾಗಿತ್ತು. ಪ್ರತಿ ವರ್ಷ ಭಾರೀ ಮಳೆಗೆ ಅಗ್ನಿಶಾಮಕ ದಳ ಸಮಸ್ಯೆಗೆ ತುತ್ತಾಗುತ್ತಲೆ ಇದೆ.
ವಿನೋಬ ನಗರದ ತೋಟಗಾರಿಕಾ ಇಲಾಖೆ ಕಚೇರಿ ಬಳಿ ಭಾರೀ ಮಟ್ಟದ ನೀರು ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ವಾಹನ ಸವಾರರು, ದಾರಿಹೋಕರು ನೀರಿನಲ್ಲಿ ಸಿಕ್ಕಿ ಹಾಕಿಕೊಳ್ಳುವಂತಾಯಿತು. ತೋಟಗಾರಿಕಾ ಇಲಾಖೆ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಮಳಿಗೆಗಳು ನೀರಿನಲ್ಲಿ ಮುಳುಗಿ ಹೋಗಿದ್ದವು. ವಿನೋಬ ನಗರ ಒಂದನೇ ಮುಖ್ಯ ರಸ್ತೆ ಸಂಪರ್ಕ ಕೆಲ ಕಾಲ ಸ್ಥಗಿತಗೊಂಡಿತ್ತು. ಮಹಾನಗರ ಪಾಲಿಕೆ ಸಿಬ್ಬಂದಿ ಜೆಸಿಬಿ ಬಳಸಿ, ನೀರು ಹರಿಯಲಿಕ್ಕೆ ಅಡ್ಡವಾಗಿದ್ದ ಕಲ್ಲು, ಮಣ್ಣು ತೆರವುಗೊಳಿಸಿದ ಅರ್ಧ ಗಂಟೆಯ ನಂತರ ನೀರು ಕಡಿಮೆಯಾಯಿತು. ವಿನೋಬ ನಗರದ ಎರಡನೆಯ ಮುಖ್ಯರಸ್ತೆಯಲ್ಲಿ ಮಳೆಯ ರಭಸಕ್ಕೆ ಆಂಬ್ಯುಲೆನ್ಸ್ ಕೂಡ ಚಲಿಸಲು ತೊಂರೆ ಅನುಭವಿಸಬೇಕಾಯಿತು.
ಮಹಾನಗರ ಪಾಲಿಕೆ ಮುಂದಿರುವ ರೈಲ್ವೆ ಕೆಳ ಸೇತುವೆ ಅರ್ಧಕ್ಕೆ ನೀರು ನಿಂತಿದ್ದರಿಂದ ಸಂಚಾರ ಸ್ತಬ್ಧವಾಗಿತ್ತು. ಶಿವಾಲಿ ಚಿತ್ರಮಂದಿರ, ಶೇಖರಪ್ಪ ನಗರ, ಡಿಸಿಎಂ ಟೌನ್‌ಶಿಪ್ ಬಳಿ ರೈಲ್ವೆ ಕೆಳ ಸೇತುವೆಯಲ್ಲಿ ಸಾಕಷ್ಟು ಪ್ರಮಾಣದ ನೀರು ನಿಂತಿತ್ತು. ರೇಣುಕ ಮಂದಿರ ಪಕ್ಕದ ರೈಲ್ವೆ ಕೆಳ ಸೇತುವೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ರೈಲ್ವೆ ಕೆಳ ಸೇತುವೆಯಲ್ಲಿ ಭಾರೀ ಪ್ರಮಾಣದ ನೀರು ನಿಂತ ಪರಿಣಾಮ ಹಳೆಯ ದಾವಣಗೆರೆಗೆ ಸಂಪರ್ಕವೇ ಇಲ್ಲದಂತಾಗಿತ್ತು. ಎಪಿಎಂಸಿ, ದೂಡಾ ಕಚೇರಿ ಬಳಿ ರೈಲ್ವೆ ಮೇಲ್ಸೇತುವೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಇತ್ತು. ಇನ್ನು ಅಶೋಕ ಚಿತ್ರಮಂದಿರ ಬಳಿ ರೈಲ್ವೆ ಗೇಟ್ ಬಳಿ ರಸ್ತೆ ಹಳ್ಳದಂತಾಗಿತ್ತು. ಹಾಗಾಗಿ ಜನರ ಓಡಾಟಕ್ಕೆ ಭಾರೀ ಸಮಸ್ಯೆ ಉಂಟಾಯಿತು.
ಏಕಾಏಕಿ ಭಾರೀ ಮಳೆ ಪ್ರಾರಂಭವಾಗಿದ್ದರಿಂದ ಸಂಜೆ ಶಾಪಿಂಗ್, ಮಾರುಕಟ್ಟೆಗೆ ಬಂದವರು ಪಾಡಂತೂ ಹೇಳ ತೀರದ್ದಾಗಿತ್ತು. ಕಾಳಿಕಾದೇವಿ ರಸ್ತೆ, ಹಳೆ ಪಿಬಿ ರಸ್ತೆ, ಮಂಡಿಪೇಟೆ, ಕೆಆರ್ ರಸ್ತೆ… ಎಲ್ಲಾ ರಸ್ತೆಗಳು ನೀರಿನಲ್ಲಿ ಮುಳುಗಿದ್ದವು. ದಾವಣಗೆರೆ ಹಳೆಯ ಭಾಗದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆಂದು ಗುಂಡಿಗಳನ್ನು ತೆಗೆದಿದ್ದು ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾಯಿತು.
ಅಲ್ಲಲ್ಲಿ ಮರದ ಕೊಂಬೆ, ಟೊಂಗೆ ಬಿದ್ದ ಪರಿಣಾಮ ಜನರು ತೊಂದರೆ ಅನುಭವಿಸಿದರು. ಒಂದೂವರೆ ಗಂಟೆಗೂ ಅಧಿಕ ಕಾಲ ವಿದ್ಯುತ್ ಇಲ್ಲದೇ ಇದ್ದುದು ಸಮಸ್ಯೆ ಇನ್ನಷ್ಟು ಹೆಚ್ಚಾಗುವಂತೆ ಮಾಡಿತು. ಅನೇಕ ಕಡೆ ಕತ್ತಲಲ್ಲೆ ಮನೆಗೆ ನುಗ್ಗಿದ ನೀರು ಹೊರ ಹಾಕಬೇಕಾಯಿತು. ಭಾರೀ ಮಳೆಯಿಂದ ದ್ವಿಚಕ್ರ ವಾಹನ ಸವಾರರು, ಆಟೋರಿಕ್ಷಾಗಳವರು ಪರದಾಡಬೇಕಾಯಿತು. ಮೃಗಶಿರಾ ಮಳೆಯ ರುದ್ರನರ್ತನಕ್ಕೆ ದೇವನಗರಿ ಅಕ್ಷರಶಃ ನಲುಗಿ ಹೋಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.