ಮತದಾವನಗೆರೆ
ಬಿಸಿಲು-ವರುಣನ ಸಿಂಚನ •ಶಾಂತಿಯುತ ಮತದಾನದ ಸಮಾಧಾನ• ಫಲಿತಾಂಶಕ್ಕಾಗಿ ಇರಲಿ ವ್ಯವಧಾನ
Team Udayavani, Apr 24, 2019, 10:53 AM IST
ಐಎಂಎ ಹಾಲ್‌ನ ಮತದಾನ ಕೇಂದ್ರದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಮತದಾನ ಮಾಡಿದ ಸಂದರ್ಭ
ದಾವಣಗೆರೆ: ರಾಜ್ಯದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ 2ನೇ ಹಂತದ ಮತದಾನ ದಾವಣಗೆರೆ ಕ್ಷೇತ್ರದಲ್ಲಿ ಸಣ್ಣ ಪುಟ್ಟ ಸಮಸ್ಯೆ ಹೊರತುಪಡಿಸಿ, ಶಾಂತಿಯುತವಾಗಿ ನಡೆದಿದೆ.
ಮೂಲಭೂತ ಸೌಲಭ್ಯಕ್ಕಾಗಿ ಮತದಾನ ಬಹಿಷ್ಕಾರ-ಅಧಿಕಾರಿಗಳಿಂದ ಮನವೊಲಿಕೆ ನಂತರ ಹಕ್ಕು ಚಲಾವಣೆ, ಮೊಬೈಲ್ನಲ್ಲಿ ಮತದಾನದ ಚಿತ್ರಸೆರೆ, ಮತಗಟ್ಟೆಯೊಂದರಲ್ಲಿ ವಿವಿಪ್ಯಾಟ್ ಸಮಸ್ಯೆಯಿಂದ ಮತದಾನ ಸಮಯ ವಿಸ್ತರಣೆ, ಸುಡು ಬಿಸಿಲಿನಲ್ಲೂ ಕುಗ್ಗದ ಉತ್ಸಾಹ, ಯುವಕರು, ವಯೋವೃದ್ಧರಿಂದ ವಿಕಲಚೇತನರಿಂದಲೂ ತಮ್ಮ ನೆಚ್ಚಿನ ಅಭ್ಯರ್ಥಿ ಆಯ್ಕೆಗೆ ಮುದ್ರೆ, ಕೆಲವಡೆ ಮತಯಂತ್ರಗಳ ಸಣ್ಣ ಪುಟ್ಟ ದೋಷ, ಮತದಾನದಿಂದ ವಂಚಿತರಾದವರ ಬೇಸರ, ವರುಣನ ಸಿಂಚನ….ಇವು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ವೇಳೆ ಕಂಡು ಬಂದ ಘಟನೆಗಳು.
ಬೆಳಿಗ್ಗೆ 6 ಗಂಟೆಯಿಂದಲೇ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿ ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್‌ಗಳೊಂದಿಗೆ ಮತದಾನ ಪ್ರಕ್ರಿಯೆಗೆ ಸಿದ್ಧಗೊಂಡಿದ್ದರು. ಕೆಲವೆಡೆ ವಿವಿಪ್ಯಾಟ್ ಸಮಸ್ಯೆಯಿಂದಾಗಿ ಸ್ವಲ್ಪ ವಿಳಂಬವಾದರೂ ನಂತರ ಮತದಾನ ಸುಗಮವಾಗಿ ಜರುಗಿದೆ.
ಗ್ರಾಮಸ್ಥರ ಬಹಿಷ್ಕಾರ-ಮನವೊಲಿಕೆ….
ಮೂಲಭೂತ ಸಮಸ್ಯೆ ಕಲ್ಪಿಸಲು ಜಿಲ್ಲಾಡಳಿತ ನಿರ್ಲಕ್ಷ ತೋರಿದ್ದಾರೆಂಬ ಹಿನ್ನೆಲೆಯಲ್ಲಿ ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಗೊಂಡನಳ್ಳಿ ಗ್ರಾಮಸ್ಥರು ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆಯಿಂದ ದೂರ ಉಳಿದರು. ಆ ಗ್ರಾಮದ ಮತಗಟ್ಟೆ ವ್ಯಾಪ್ತಿಯಲ್ಲಿ ಒಟ್ಟು 665 ಮತದಾರರಿದ್ದರು. ಈ ಮಧ್ಯೆ ಗ್ರಾಮಸ್ಥರ ಪ್ರತಿಭಟನೆ ತಿಳಿಯದ ಮಹಿಳೆಯೊಬ್ಬರು ತಮ್ಮ ಹಕ್ಕು ಚಲಾಯಿಸಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ, ಮತದಾನ ಮಾಡಲು ಕೋರಿದರು. ಆದರೆ, ಗ್ರಾಮದ ಗ್ರಾಪಂ ಸದಸ್ಯ ಮಂಜುನಾಥ್, ಮುಖಂಡ ಬಸವರಾಜ್, ಇನ್ನಿತರರು, ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ರಸ್ತೆ, ಮೂಲಭೂತ ಸೌಲಭ್ಯ ಕಲ್ಪಿಸುವ ಸಂಬಂಧ ಅಧಿಕಾರಿಗಳನ್ನ ಗಮನ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಾವು ಮತದಾನ ಮಾಡುವುದಿಲ್ಲ ಎಂಬುದಾಗಿ ಪಟ್ಟು ಹಿಡಿದರು.
ಆಗ, ಬಿ.ಟಿ.ಕುಮಾರಸ್ವಾಮಿ, ಮತ್ತೋರ್ವ ಅಧಿಕಾರಿ ಬಿ.ಸಿ.ಸಿದ್ದಪ್ಪ, ಪರಿಪರಿಯಾಗಿ ಗ್ರಾಮಸ್ಥರ ಮನವೊಲಿಕೆ ಪ್ರಯತ್ನಿಸಿದರು. ಕೊನೆಗೆ ಬಿ.ಟಿ.ಕುಮಾರಸ್ವಾಮಿ, ನನಗೆ ಒಂದು ತಿಂಗಳು ಅವಕಾಶ ಕೊಡಿ. ಈ ಗ್ರಾಮದಲ್ಲೇ ಜನಸ್ಪಂದನಾ ಸಭೆ ನಡೆಸಿ, ಎಲ್ಲಾ ಸಮಸ್ಯೆ ಪರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವೆ. ಸಮಸ್ಯೆಗೆ ಸ್ಪಂದಿಸಿಲ್ಲ ಎಂಬ ಕಾರಣದಿಂದ ಮತದಾನದಿಂದ ದೂರ ಉಳಿಯಬೇಡಿ. ಒಂದೇ ಬಾರಿಗೆ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂಬುದಾಗಿ ನಾನು ಹೇಳಲಾರೆ. ಆದರೆ, ಎಲ್ಲಾ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂಬುದಾಗಿ ನೀಡಿದ ಭರವಸೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತದಾನಕ್ಕೆ ಸಮ್ಮತಿಸಿದರು.
ಜಗಳೂರು ವಿಧಾನ ಸಭಾ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಮತದಾರರು ಬ್ಯಾಲೆಟ್‌ನಲ್ಲಿ ಮತ ಚಲಾಯಿಸಿದ್ದನ್ನು ಮೊಬೈಲ್ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ.
ಬೇಸಿಗೆ ಬಿಸಿಲಿನ ತಾಪದಲ್ಲಿ ಬಳಲದಿರಲು ಬೆಳಿಗ್ಗೆ 7 ಗಂಟೆಯಿಂದಲೇ ಮತದಾರರು ಮತಗಟ್ಟೆಗಳ ಮುಂದೆ ಸರತಿಯಲ್ಲಿ ನಿಂತಿದ್ದರು. ಗ್ರಾಮಾಂತರ ಪ್ರದೇಶದಲ್ಲಿ ವೃದ್ಧರು, ವಿಕಲಚೇತನರು, ಮಹಿಳೆಯರು ಸುಡು ಬಿಸಿಲನ್ನೂ ಲೆಕ್ಕಿಸದೇ ಸಂವಿಧಾನಿಕ ಹಕ್ಕು ಚಲಾಯಿಸಲು ಮತಗಟ್ಟೆಗಳತ್ತ ದಾವಿಸುತ್ತಿದ್ದುದು ಮಾಧ್ಯಮದವರಿಗೆ ಗೋಚರಿಸಿತು.
ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ 50% ಮತದಾರರು ತಮ್ಮ ಹಕ್ಕು ಚಲಾಯಿಸಿದ್ದುದು ಕಂಡು ಬಂತು.
ಎಲ್ಲೆಲ್ಲಿ ಹೇಗೆ ನಡೆಯಿತು ಮತದಾನ…..
ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ-36ರಲ್ಲಿ ಬೆಳಿಗ್ಗೆ 10 ಗಂಟೆಗೆ ಒಟ್ಟು 655 ಮತದಾರರಲ್ಲಿ 60 ಪುರುಷರು, 33 ಮಹಿಳೆಯರು ಸೇರಿ 93 ಮಂದಿ ಮತದಾನ ಮಾಡಿದ್ದರು.
ಇದೇ ಗ್ರಾಮದಲ್ಲಿ ವರ್ಣಮಯ ಸಖೀ ಮಹಿಳಾ ಕೇಂದ್ರ 38ರಲ್ಲಿ 10 ಗಂಟೆ ಸಮಯದಲ್ಲಿ 587 ಮತದಾರರಲ್ಲಿ ಮಹಿಳೆಯರು 47, ಪುರುಷರು 52 ಸೇರಿದಂತೆ 99 ಮತದಾರರು ಮತದಾನ ಮಾಡಿದ್ದರು. ಅದರಲ್ಲಿ 85ರ ವಯಸ್ಸಿನ ವೃದ್ಧರಾದ ತಿರುಕಪ್ಪ ಅವರು ಪತ್ನಿ ದುರುಗಮ್ಮ ಅವರ ಜೊತೆ ಆಟೋ ಮೂಲಕ ಮತಗಟ್ಟೆಗೆ ಬಂದು ನಂತರ ವೀØಲ್ಚೇರ್ ಸಹಾಯದಿಂದ ಮತ ಚಲಾಯಿಸಿದರು.
ಇನ್ನೂ ಇದೇ ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಪವಿತ್ರ ಈ ವೇಳೆ ಮಾತನಾಡಿ, ನಮಗಿಂದು ದೇಶ ಕಾಯುವ ಉತ್ತಮ ರಾಜಕಾರಣಿ ಅಧಿಕಾರಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ಮತದಾನ ಮಾಡುತ್ತಿದ್ದು, ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಅಭಿಪ್ರಾಯ ಹಂಚಿಕೊಂಡರು.
ಹರಿಹರದಲ್ಲಿ ಪಿ.ಬಿ. ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 51ರಲ್ಲಿ ಬೆಳಿಗ್ಗೆ 10.30ರ ವೇಳೆಗೆ 1093ರಲ್ಲಿ 142ಜನ ಮತದಾನ ಮಾಡಿದ್ದರು. ಲಕ್ಷ್ಮಣರಾವ್ ಕಿರ್ಲೋಸ್ಕರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೆಂದ್ರ 63ರಲ್ಲಿ 511ಮತದಾರರಲ್ಲಿ 122 ಜನ ಮತದಾನ ಮಾಡಿದ್ದು ಕಂಡುಬಂತು.
ನೀರಸ ಪ್ರತಿಕ್ರಿಯೆ: ಹರಪನಹಳ್ಳಿಯ ದುಗ್ಗಾವತಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಳಿಗ್ಗೆ 11 ಗಂಟೆಯಾದರೂ ಮತಕೇಂದ್ರ 215ರಲ್ಲಿ ಒಟ್ಟು 712ಮತದಾರರಲ್ಲಿ ಕೇವಲ 114 ಜನ ಮಾತ್ರ ಮತದಾನ ಮಾಡಿದ್ದರು, ಬಿಸಿಲಿನಿಂದಾಗಿ ಗ್ರಾಮದ ಹಿರಿಯರು, ಯುವಕರು ಮತದಾನ ಕೇಂದ್ರದಿಂದ ಸ್ವಲ್ಪ ಸಮೀಪದ ರಸ್ತೆಯಲ್ಲಿ ಹುಣಸೆಮರದ ಕೆಳಗೆ ಬೀಡು ಬಿಟ್ಟಿದ್ದರು. ಮೋರಿ ಕಟ್ಟೆ ಮೇಲೆ ಪಕ್ಷಗಳ ಗೆಲುವು ಹಾಗೂ ಮತದಾನಕ್ಕಾಗಿ ಕೆಲ ಪಕ್ಷಗಳು ನೀಡಲಾದ ಹಣದ ಹಂಚಿಕೆಯ ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ್ದರು.
ಮಧ್ಯಾಹ್ನ 12ಗಂಟೆಗೆ ಚಿರಸ್ತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 172ರ ಮತಕೇಂದ್ರದಲ್ಲಿ 854 ಒಟ್ಟು ಮತಗಳ ಪೈಕಿ 325 ಜನ ಮತದಾನ ಮಾಡಿದ್ದರು. ಅದರಲ್ಲಿ 169 ಮಹಿಳೆಯರು ಮತದಾನ ಮಾಡಿದ್ದರು.
ಅರಸಿಕೇರೆಯ ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ 1ಗಂಟೆಗೆ ಮತದಾನ ಕೇಂದ್ರ 8ರಲ್ಲಿ 633ರಲ್ಲಿ 348 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
ಇನ್ನೂ ಜಗಳೂರು ತಾಲ್ಲೂಕಿನ ಬಸವನಕೋಟೆಯ ಬೊಮ್ಮಲಿಂಗೇಶ್ವರ ಶಾಲೆಯಲ್ಲಿನ ಮತಕೇಂದ್ರ 14ರಲ್ಲಿ ಮಧ್ಯಾಹ್ನ 1.30ರ ಹೊತ್ತಿಗೆ 802 ಮತದಾರರಲ್ಲಿ 507 ಮತದಾರರು ಮತದಾನ ಮಾಡಿದ್ದರು. ಬಿಳಿಚೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿದ್ದ ಸಖೀ ಸ್ನೇಹಿ ಮತದಾನ ಕೇಂದ್ರದಲ್ಲಿ ಮಧ್ಯಾಹ್ನ 2.15ಕ್ಕೆ ಒಟ್ಟು 636ಮತದಾರರಲ್ಲಿ 389 ಜನರು ಮತದಾನ ಮಾಡಿದ್ದರು.
70ಕ್ಕಿಂತ ಹೆಚ್ಚು ವಯಸ್ಸಿನ ವೃದ್ಧರು ಹಾಗೂ ವಿಕಲಚೇತನರು ವೀØಲ್ಚೇರ್ ಸಹಾಯದಿಂದ ಮತದಾನ ಮಾಡಿದರು. ವೃದ್ಧರು, ವಿಕಲಚೇತನರಿಗೆ ಸಹಾಯ ಮಾಡಲೆಂದೆ ಕೆಲೆವೆಡೆ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Champions Trophy: ಕೊನೆಗೂ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.