ಕೈಕೊಟ್ಟ ಯಂತ್ರಗಳು-ಹೆಸರೇ ನಾಪತ್ತೆ
ಹರಿಹರ ತಾಲೂಕಲ್ಲಿ ತಾಂತ್ರಿಕ ದೋಷದಿಂದ ಮತದಾರರ ಪರದಾಟ•ಮತದಾರರ ಓಲೈಕೆಗೆ ಯತ್ನ-ಮಾತಿನ ಚಕಮಕಿ
Team Udayavani, Apr 24, 2019, 11:08 AM IST
ಹರಿಹರ: ತಾಲೂಕಿನ ಹಲವೆಡೆ ಮತಯಂತ್ರಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ, ಕೆಲವೆಡೆ ಪಟ್ಟಿಯಲ್ಲಿ ಮತದಾರರ ಹೆಸರು ನಾಪತ್ತೆ, ಅಲ್ಲಲ್ಲಿ ಮಾತಿನ ಚಕಮಕಿ ಹೊರತುಪಡಿಸಿದರೆ ಲೋಕಸಭೆ ಚುನಾವಣೆಗೆ ಮಂಗಳವಾರ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ.
ಮತದಾನ ಮಾಡಲು ಆಗಮಿಸುತ್ತಿದ್ದ ಮತದಾರರನ್ನು ಕೊನೆ ಕ್ಷಣದಲ್ಲಿ ಓಲೈಸುವ ವಿಷಯದಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆದಿರುವುದು ವರದಿಯಾಗಿದೆ. ಮತದಾನ ಕೇಂದ್ರಗಳತ್ತ ತೆರಳುತ್ತಿದ್ದ ಪಕ್ಷಗಳ ಕಾರ್ಯಕರ್ತರನ್ನು ಪೊಲೀಸರು 300 ಮೀಟರ್ ದೂರಕ್ಕೆ ಕಳಿಸುತ್ತಿರುವುದು ಕಂಡು ಬಂತು. ಆಯೋಗದ ಕಟ್ಟುನಿಟ್ಟಿನ ನಿರ್ಬಂಧದ ನಡುವೆಯೂ ಅಲ್ಲಲ್ಲಿ ಬಿಜೆಪಿ, ಕಾಂಗ್ರೆಸ್ ಪರ ಕಾರ್ಯಕರ್ತರು ಮತದಾರರಿಗೆ ಮತಗಟ್ಟೆಗೆ ತೆರಳಲು ಆಟೋ, ಕಾರ್ ವ್ಯವಸ್ಥೆ ಮಾಡಿದ್ದರು.
ಗಣ್ಯರ ಮತದಾನ: ಶಾಸಕ ಎಸ್.ರಾಮಪ್ಪ ಸುಣಗಾರ ಬೀದಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ನಗರದ ಡಿಆರ್‌ಎಂ ಕಾಲೇಜು ಆವರಣದ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ, ಬಿ.ಪಿ.ಹರೀಶ್ ಬೂದಿಹಾಳ್ ಗ್ರಾಮದಲ್ಲಿ, ಮಾಜಿ ಸಚಿವ ಡಾ| ವೈ. ನಾಗಪ್ಪ ಉರ್ದು ಶಾಲೆಯಲ್ಲಿ ಮತ ಚಲಾಯಿಸಿದರು.
ಶ್ರೀಗಳಿಂದ ಮತದಾನ: ಪ್ರಸನ್ನಾನಂದಪುರಿ ಶ್ರೀ ರಾಜನಹಳ್ಳಿ ಗ್ರಾಮದಲ್ಲಿ, ವೇಮನಾನಂದ ಶ್ರೀ ಹೊಸಹಳ್ಳಿಯಲ್ಲಿ, ಶಾರದೇಶಾನಂದ ಶ್ರೀ ಗಿರಿಯಮ್ಮ ಕಾಲೇಜಿನ ಮತಗಟ್ಟೆಯಲ್ಲಿ, ವೃಷಭಪುರಿ ಪೀಠದ ಸಿದ್ದರಾಮೇಶ್ವರ ಶ್ರೀ ನಂದಿಗುಡಿಯಲ್ಲಿ ಮತದಾನ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.