ಸಮ್ಮಿಶ್ರ ಸರ್ಕಾರಕ್ಕೆ ಸಿದ್ದು ಟೈಂ ಬಾಂಬ್ ಫಿಕ್ಸ್
ಮೇ 23ರ ನಂತರ ತನ್ನ ಭಾರದಿಂದಲೇ ಕುಸಿಯಲಿದೆ ಮೈತ್ರಿ ಸರ್ಕಾರ:ಸಿ.ಟಿ.ರವಿ
Team Udayavani, Apr 18, 2019, 12:41 PM IST
ದಾವಣಗೆರೆ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಬುಧವಾರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದ ರೋಡ್ ಶೋ ನಡೆಸಿದ ಸಂದರ್ಭ.
ದಾವಣಗೆರೆ: ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಮೈತ್ರಿ ಸರ್ಕಾರ ತನ್ನ ಭಾರದಿಂದಲೇ ಕುಸಿಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಬುಧವಾರ, ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಪಕ್ಷಗಳ ಹೊಂದಾಣಿಕೆ ವೇದಿಕೆಗೆ ಮಾತ್ರ ಸೀಮಿತವಾಗಿದೆ. ವೇದಿಕೆಯಲ್ಲಿ ತೋರಿಕೆಗೆ ಒಂದಾಗಿ ಪ್ರಚಾರ ಮಾಡುತ್ತಿದ್ದಾರೆ. ವೇದಿಕೆ ಕೆಳಗೆ ಉಭಯ ಪಕ್ಷಗಳ ಮುಖಂಡರು ಪರಸ್ಪರ ಮುಗಿಸುವ ಸಂಚಿನಲ್ಲಿ ತೊಡಗಿದ್ದಾರೆ ಎಂದರು.
ಈ ಲೋಕಸಭಾ ಚುನಾವಣೆವರೆಗೂ ಸುಮ್ಮನಿರಿ. ಆ ನಂತರ ನಿಮ್ಮನ್ನು ತಡೆಯಲ್ಲ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರಿಗೆ ತಿಳಿಸಿದ್ದಾರೆಂಬ ಮಾಹಿತಿ ಇದೆ. ಹಾಗಾಗಿ ಸಿದ್ದರಾಮಯ್ಯನವರೇ ಮೈತ್ರಿ ಸರ್ಕಾರಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ಗೆ ವಿಭಜಿಸಿ ಆಡಳಿತ ನಡೆಸುವುದರಲ್ಲಿ ನಂಬಿಕೆ ಇದೆ. ಅದು ಬ್ರಿಟಿಷರಿಂದ ಆ ಪಕ್ಷಕ್ಕೆ ಬಂದ ಬಳುವಳಿ. ಸ್ವಾತಂತ್ರ್ಯ ನಂತರವೂ ಕಾಂಗ್ರೆಸ್ ಆ ಸೂತ್ರ ಅನುಸರಿಸುತ್ತಿದೆ. ಜಾತಿ, ಧರ್ಮ, ಮತ ವಿಭಜಿಸಿ ರಾಜಕಾರಣ ಮಾಡುವ ಕಾಂಗ್ರೆಸ್ ನಾಯಕರ ನಾಟಕ ಅರ್ಥವಾಗುತ್ತಿಲ್ಲ. ಲಿಂಗಾಯತ ಧರ್ಮ ವಿಚಾರದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಕ್ಷಮಾಪಣೆ ವಿಷಯದಲ್ಲಿ ಡ್ರಾಮಾ ಮಾಡುತ್ತಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ಹಾಗೂ ದಲಿತರ ವಿರೋಧಿ ಅಲ್ಲವೇ ಅಲ್ಲ. ನಮ್ಮ ಪಕ್ಷ ಎಲ್ಲಾ ಜನಾಂಗದ ಅಭಿವೃದ್ಧಿ ಬಯಸುತ್ತದೆ. ಆದರೆ, ಭ್ರಷ್ಟಾಚಾರವನ್ನೇ ಮೂಲವಾಗಿಟ್ಟುಕೊಂಡಿರುವ ಕಾಂಗ್ರೆಸ್‌ಗೆ
ಕುಟುಂಬ ರಾಜಕಾರಣ ಸಹ ಬಳುವಳಿಯಾಗಿ ಬಂದಿದೆ. ಅದು ಅವರ ರಾಜಕೀಯದ ಅವಿಭಾಜ್ಯ ಅಂಗ. ಆದರೆ, ಕುಟುಂಬ ರಾಜಕಾರಣ ಜನನಾಯಕತ್ವ ಬೆಳೆಸಲ್ಲ ಎಂಬುದು ಬಿಜೆಪಿ ತತ್ವ.
ನಮ್ಮ ಪಕ್ಷದ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ ಯಾವುದೇ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರಲ್ಲ ಎಂದು ಅವರು ಹೇಳಿದರು.
ಜೆಡಿಎಸ್ ಸಹ ಕಾಂಗ್ರೆಸ್ ಮೀರಿ ವಂಶವಾಹಿ ಆಡಳಿತ ವಿಸ್ತರಿಸುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ವ್ಯಾಮೋಹ ಪರಮೋಚ್ಚ ಸ್ಥಿತಿ ತಲುಪಿದೆ. ಅವರ ಅತಿ ಆಸೆಯ ರಾಜಕೀಯಕ್ಕೆ ಈ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ದೇವೇಗೌಡ ಹಾಗೂ ಅವರ ಮೊಮ್ಮಕ್ಕಳು ಈ ಚುನಾವಣೆಯಲ್ಲಿ ಸೋಲುವುದು ಖಚಿತ ಎಂದು ಭವಿಷ್ಯ ನುಡಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ತಮ್ಮ ಮೈತ್ರಿ ಸರ್ಕಾರದ ಸಾಧನೆಯನ್ನೇ ಹೇಳಲಿಲ್ಲ. ಹೇಳಲು ಅವರ ಸಾಧನೆಗಳೇನು ಇಲ್ಲ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಎಚ್ .ಡಿ.ಕುಮಾರಸ್ವಾಮಿ ಸಿಎಂ ಆಗಿ 11 ತಿಂಗಳಾದರೂ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆ ಹಾಗೂ ಅಪಪ್ರಚಾರವನ್ನೇ ಚುನಾವಣಾ ವಿಷಯವನ್ನಾಗಿಸಿ ಕೇಂದ್ರೀಕರಿಸಲಾಗಿದೆ. ನಾವು ಸಹ ಮೋದಿಯವರನ್ನೇ ಕೇಂದ್ರೀರಿಸಿದ್ದೇವೆ.
ಆದರೆ, ಅವರು ಪ್ರಧಾನಿಯಾಗಿ ಜಾರಿಗೊಳಿಸಿದ ಅಭಿವೃದ್ಧಿ ಕಾರ್ಯ, ಜನಪರ ಯೋಜನೆಗಳನ್ನ ಪ್ರಚಾರ ಮಾಡುತ್ತಿದ್ದೇವೆ. ಎಲ್ಲೆಡೆ ಮೋದಿ, ಮೋದಿ ಎಂಬುದಾಗಿ ಜನ ಹೇಳುತ್ತಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ದಾವಣಗೆರೆ ಸೇರಿ 23ಕ್ಕೂ ಹೆಚ್ಚು
ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಸಿ.ಟಿ.ರವಿ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎನ್. ರಾಜಶೇಖರ್, ಎಚ್.ಎನ್.ಶಿವಕುಮಾರ್, ರಾಜ್ಯ ಸ್ಲಮ್ ಮೋರ್ಚಾದ ಅಧ್ಯಕ್ಷ ಅಂಬರಕರ್ ಜಯಪ್ರಕಾಶ್, ಕೃಷ್ಣಮೂರ್ತಿ ಪವಾರ್, ರಮೇಶನಾಯ್ಕ, ಬೇತೂರು ಬಸವರಾಜ್, ಧನುಷ್ ರೆಡ್ಡಿ, ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ರೋಡ್ ಶೋ: ಬೆಳಿಗ್ಗೆ 10-30ರಿಂದ ಶಾಸಕ ಸಿ.ಟಿ.ರವಿ, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಪರ ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಿಂದ ರೋಡ್ ಶೋ ಮೂಲಕ ಮತಯಾಚಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.