ತಿಂಗಳ ನಂತರ ಮತ್ತೆ ಬರ್ತಿದ್ದಾರೆ ಅಮಿತ್ ಶಾ
Team Udayavani, Apr 29, 2018, 3:32 PM IST
ದಾವಣಗೆರೆ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 150+ ಮಿಷನ್ ಗುರಿ ಸಾಧಿಸಲೇಬೇಕೆಂಬ ಛಲದಿಂದ ಕರ್ನಾಟಕದ ಎಲ್ಲೆಡೆ ಸುತ್ತುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಂಗಳು ತುಂಬುವಷ್ಟರಲ್ಲೇ ದಾವಣಗೆರೆ ನಗರಕ್ಕೆ ಆಗಮಿಸಲಿದ್ದಾರೆ.
ಜಿಲ್ಲೆಯ ಒಂದೂ ವಿಧಾನಸಭಾ ಕ್ಷೇತ್ರದಲ್ಲೂ ಖಾತೆ ತೆರೆಯದೇ ಮಸುಕಾಗಿರುವ ಕಮಲ ಪಡೆಯಲ್ಲಿ ರಣೋತ್ಸಾಹ ತುಂಬಲು ಇಂದು ಆಗಮಿಸುತ್ತಿರುವ ಶಾ, ಈ ಬಾರಿ ನಗರದಲ್ಲಿ ರೋಡ್ ಮೂಲಕ ಮತದಾರರ ಸೆಳೆಯಲಿದ್ದಾರೆ.
ಕಳೆದ ಮಾರ್ಚ್ 27ರಂದು ದೊಡ್ಡ ಬಾತಿಯಲ್ಲಿ ಮುಷ್ಟಿ ಧಾನ್ಯ ಅಭಿಯಾನಕ್ಕೆ ಚಾಲನೆ ನೀಡಿ, ನಂತರ ಜಿಎಂಐಟಿ ಕಾಲೇಜಿನ ಸಭಾಂಗಣದಲ್ಲಿ ಇನ್ನೇನು ಸುದ್ದಿಗೋಷ್ಠಿ ಆರಂಭಿಸಬೇಕೆನ್ನುವಷ್ಟರಲ್ಲಿ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿತು. ಹಾಗಾಗಿ ಅಂದು ದಾವಣಗೆರೆಯಿಂದಲೇ ಅಮಿತ್ ಶಾ ಚುನಾವಣಾ ಸಂಬಂಧ ಮತ್ತಷ್ಟು ಕ್ರಿಯಾಶೀಲರಾದರು.
ಈ ಹಿಂದೆ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆ ನಿರೀಕ್ಷೆಗೂ ಮೀರಿ ಪಾಲು ನೀಡಿತ್ತು. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ 7ರಲ್ಲಿ ಕಮಲ ಅರಳಿತ್ತು. ಆದರೆ, 2013ರ ಸಾರ್ವತ್ರಿಕ ಚುನಾವಣೆ ವೇಳೆ ಬಿಜೆಪಿ- ಕೆಜೆಪಿ- ಬಿಎಸ್ಸಾರ್ ಕಾಂಗ್ರೆಸ್ ಕಾಲೆಳೆದಾಟದಲ್ಲಿ ಮೂರೂ ಪಕ್ಷದ ಅಭ್ಯರ್ಥಿಗಳು ಹೀನಾಯಕರ ಸೋಲು ಅನುಭವಿಸಿದರು. ವಶಪಡಿಸಿಕೊಂಡಿದ್ದ 7ರಲ್ಲಿ ಒಂದೇ ಒಂದೂ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಾಗಲಿಲ್ಲ. ದಯನೀಯ ಸೋಲಿನ ಪರಿಣಾಮ ಕಮಲ ಪಾಳೆಯ ಅಕ್ಷರಶಃ ಕನಲಿ ಹೋಗಿತ್ತು.
2014ರ ಲೋಕಸಭಾ ಚುನಾವಣೆ ಹೊತ್ತಿಗೆ ಕೆಜೆಪಿ ಮುಖಂಡರು ಮತ್ತೆ ಬಿಜೆಪಿಗೆ ಮರಳಿದ ನಂತರ ಜಿ.ಎಂ. ಸಿದ್ದೇಶ್ವರ್ ಹ್ಯಾಟ್ರಿಕ್ ಗೆಲುವು ಸಾಧಿಸುವಂತಾಯಿತು. ಆ ಚುನಾವಣೆಯಲ್ಲಿನ ಗೆಲುವು ಬಿಜೆಪಿ ಪಾಳೆಯದಲ್ಲಿ ಮತ್ತೆ ಭರವಸೆ ಮೂಡಿಸಿತು. ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಕಹಿ ಕೊಂಚ ಮರೆಯುವಂತೆ ಮಾಡಿತು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾದ ನಂತರದಲ್ಲಂತೂ ಜಿಲ್ಲಾ ಬಿಜೆಪಿ ನಾಯಕರು ಫಿನಿಕ್ಸ್ ಪಕ್ಷಿಯಂತೆ ಮತ್ತೆ ಪುಟಿದೆದ್ದರು.
ಆದರೆ, ಜಿಲ್ಲಾ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಬಯಲಿಗೆ ಬಂತು. ಎನ್‌ಡಿಎ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನಡೆದ ವಿಕಾಸಪರ್ವ ಸಮಾವೇಶದ ಸಂದರ್ಭದಲ್ಲಿ ಬಿಜೆಪಿಯಲ್ಲಿನ ಅಂತಃಕಲಹ ಬಹಿರಂಗವಾಯಿತು. ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಸಂದರ್ಭದಲ್ಲೇ ಮಡುಗಟ್ಟಿದ್ದ ಅಸಮಾಧಾನ ಸ್ಫೋಟಗೊಂಡಿತು. ಬಿಜೆಪಿಯಲ್ಲಿ ಬಣ ರಾಜಕೀಯ ಗೋಚರಿಸಿತು. ಒಂದಿಷ್ಟು ಸಮಯ ಆರೋಪ-ಪ್ರತ್ಯಾರೋಪ ಕೇಳಿದವು. ನಂತರ ರಾಜ್ಯ ನಾಯಕರ ಸತತ ಪರಿಶ್ರಮದ ಸಂಧಾನದ ಫಲವಾಗಿ ಬಣಗಳು ಒಗ್ಗೂಡಿದವು.
ಈಗ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತ್ತೆ ಅಧಿಪತ್ಯ ಸ್ಥಾಪಿಸ ಬೇಕೆಂಬ ಛಲದಿಂದ ಅಮಿತ್ ಶಾ ರೋಡ್ ನಡೆಸಲಿದ್ದಾರೆ. ಬಹುಶಃ ದಾವಣಗೆರೆ ಇತಿಹಾಸದಲ್ಲೇ ರಾಷ್ಟ್ರೀಯ ಪಕ್ಷವೊಂದರ ರಾಷ್ಟ್ರಧ್ಯಕ್ಷರು ತಿಂಗಳು ತುಂಬುವಷ್ಟರಲ್ಲೇ ಮತ್ತೆ ಭೇಟಿ ನೀಡುತ್ತಿರುವುದು ಇದೇ ಮೊದಲಿರಬಹುದು. ಇದು ಅಮಿತ್ ಶಾ ಅವರ ಸ್ಪಷ್ಟ ಉದ್ದೇಶವೇನು ಎಂಬುದನ್ನು ತೋರಿಸುತ್ತದೆ. ರೋಡ್ ಶೋ ಅಂತ್ಯದಲ್ಲಿ ಪಿಬಿ ರಸ್ತೆಯಲ್ಲಿರುವ ಶ್ರೀಶೈಲ ಮಠಕ್ಕೆ ಭೇಟಿ ನೀಡಲಿರುವ ಶಾ, ಅಲ್ಲಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ನಂತರ ಜಿಎಂಐಟಿ ಕಾಲೇಜಿನ ಸಭಾಂಗಣದಲ್ಲಿ ಪಕ್ಷದ ಮುಖಂಡರು ಹಾಗೂ ಆಯ್ದ ಕಾರ್ಯಕರ್ತರಿಗೆ ಶಾ ಯಾವ ಸೂಚನೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಸಿದ್ದಗಂಗಾ ಶ್ರೀ ರಾಷ್ಟ್ರಸಂತನೆಂದು ಘೋಷಿಸಿ: ಕೂಡಲಸಂಗಮ ಶ್ರೀ
Davanagere: ಮೀಸಲಾತಿಗಾಗಿ ಇನ್ನು ಮುಂದೆ ಈ ಸರ್ಕಾರದ ಮುಂದೆ ಹೋಗುವುದಿಲ್ಲ: ಪಂಚಮಸಾಲಿ ಶ್ರೀ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
BJP Rift; ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ ಶಾಸಕ ಬಿ.ಪಿ. ಹರೀಶ್
Davanagere: ಮಹಾನಗರ ಪಾಲಿಕೆ ವ್ಯಾಪ್ತಿಯ ಅನಧಿಕೃತ ಹೋರ್ಡಿಂಗ್ ತೆರವು