ಕೋವಿಡ್: ಆಡಳಿತದ ನಿರ್ಲಕ್ಷ್ಯಕ್ಕೆ ವಾಸನ ಗ್ರಾಮಸ್ಥರ ಅಸಮಾಧಾನ
Team Udayavani, Jun 27, 2020, 8:47 AM IST
ಮಲೇಬೆನ್ನೂರು: ಬೆಂಗಳೂರಿನಿಂದ ವಾಸನ ಗ್ರಾಮಕ್ಕೆ ಮಹಿಳೆಯೊಬ್ಬರು ಆಗಮಿಸಿದ್ದು, ವಿಷಯ ತಿಳಿಸಿ ಮೂರು ದಿನ ಕಳೆದರೂ ಪಂಚಾಯಿತಿ ಸ್ಪಂದಿಸಿಲ್ಲ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಎಚ್. ಓಂಕಾರಪ್ಪ ಆರೋಪಿಸಿದ್ದಾರೆ.
ತಾಪಂ ಇಒ ಲಕ್ಷ್ಮಿಪತಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಓಂಕಾರಪ್ಪ, ಮೂರು ದಿನಗಳ ಹಿಂದೆ ವಾಸನ ಗ್ರಾಮದ ಮಹಿಳೆಯೊಬ್ಬಳು ಬೆಂಗಳೂರಿನಿಂದ ಗ್ರಾಮಕ್ಕೆ ಮರಳಿದ್ದಾರೆ. ಮಹಿಳೆಯನ್ನು ಗ್ರಾಮಸ್ಥರೇ ಹೋಂ ಕ್ವಾರಂಟೈನ್ ಮಾಡಿದ್ದಾರೆ. ವಾಸನ ಪಿಡಿಓಗೆ ಮಾಹಿತಿ ನೀಡಲಾಗಿದ್ದರೂ ಸ್ಪಂದಿಸಿಲ್ಲ. ಕ್ವಾರಂಟೈನ್‌ದಲ್ಲಿದ್ದವರಿಗೆ ದಿನಸಿ ಪೂರೈಕೆ ಕುರಿತು ವಿಚಾರಿಸಿದರೆ ಪಿಡೊ ತಹಶೀಲ್ದಾರ್ ಕಡೆಗೆ, ಅವರನ್ನು ಕೇಳಿದರೆ ತಾಪಂ ಇಒ ಕಡೆಗೆ ಬೆರಳು ತೋರುತ್ತಾರೆ. ರೋಸಿ ಹೋದ ಗ್ರಾಮಸ್ಥರು ಈ ಕುರಿತು ಎಸ್‌ಪಿ ಅವರಿಗೆ ಮಾಹಿತಿ ನೀಡಿದರೆ ಅವರು ಇಓ ಕಡೆ ಬೆರಳು ತೋರಿಸಿದ್ದಾರೆ ಎಂದು ಓಂಕಾರಪ್ಪ ಗರಂ ಆದರು. ಮಹಿಳೆ ಬಡವಳಾಗಿದ್ದರಿಂದ ಗ್ರಾಮಸ್ಥರು ಸಹಾಯ ಮಾಡಿದ್ದೇವೆ. ಮುಂದಿನ ದಿನದಲ್ಲಿ ಇದೇ ರೀತಿ ಯಾರಾದರೂ ಕ್ವಾರೆಂಟೈನ್ ಗೊಳಗಾದರೆ ಅವರ ಗತಿ ಏನು? ಗ್ರಾಮಸ್ಥರು ಯಾರನ್ನು ಸಂಪರ್ಕಿಸಬೇಕು ಎಂದು ಓಂಕಾರಪ್ಪ ಇಒ ಲಕ್ಷ್ಮಿಪತಿ ಅವರನ್ನು ಪ್ರಶ್ನಿಸಿದರು.
ಇಓ ಮಹಿಳೆಯೊಂದಿಗೆ ಮಾತನಾಡಿ, ಆಹಾರ ಮತ್ತು ಎಲ್ಲಾ ಅಗತ್ಯ ಸೌಲಭ್ಯ ಒದಗಿಸಲಾಗುವುದು. ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ. ಸಮಸ್ಯೆ ಇದ್ದರೆ ಪಿಡಿಓ ಅವರಿಗೆ ತಿಳಿಸುವಂತೆ ಹೇಳಿದರು. ಗ್ರಾಮಸ್ಥರಾದ ವಸಂತಪ್ಪ, ಬಿಲ್ ಕಲೆಕ್ಟರ್ ವಾದಿರಾಜ, ಯುವರಾಜ್, ಕರಿಬಸಪ್ಪ, ಚಂದ್ರಪ್ಪ ಆಶಾ ಕಾರ್ಯಕರ್ತೆ ಯಶೋಧಮ್ಮ, ಇತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.