ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕೂಡಿ ಬಂತು ಮುಹೂರ್ತ
Team Udayavani, Jul 12, 2021, 9:58 PM IST
ರಾ. ರವಿಬಾಬು
ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು, ಶೈಕ್ಷಣಿಕ ನಗರಿ, ಮೆಡಿಕಲ್ ಹಬ್ ಖ್ಯಾತಿಯ ದಾವಣಗೆರೆಯಲ್ಲಿ ಬಹು ವರ್ಷಗಳ ಬೇಡಿಕೆ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಮುಹೂರ್ತ ಕೂಡಿ ಬಂದಿದೆ.
ದಾವಣಗೆರೆ 1997ರಲ್ಲಿ ಜಿಲ್ಲಾ ಕೇಂದ್ರವಾದ ನಂತರದಿಂದಲೂ ಸರ್ಕಾರಿ ವೈದ್ಯಕೀಯ ಕಾಲೇಜು ಆಗಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಲೇ ಇತ್ತು. ಇತ್ತೀಚಿನ ವರ್ಷಗಳಲ್ಲಿ ಬೇಡಿಕೆ ಪ್ರಬಲವಾಗಿ ಧ್ವನಿಯಾಗಿದ್ದು, ರಾಜ್ಯ ಸರ್ಕಾರದ ಬಜೆಟ್ ಸಂದರ್ಭದಲ್ಲಿ ನಿರೀಕ್ಷೆ ಗರಿಗೆದರುತ್ತಿತ್ತು.
ಆದರೆ, ಆಯವ್ಯಯದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆ ಆಗದೆ ನಿರಾಸೆ ಅನುಭವಿಸುವಂತಾಗುತ್ತಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಪ್ರಬಲ ಒತ್ತಾಯ ಪ್ರತಿಧ್ವನಿಸತೊಡಗಿತು. ಕಾಲಕ್ರಮೇಣ ಬೇಡಿಕೆಯ ಧ್ವನಿ ಗಟ್ಟಿಯಾಗ ತೊಡಗಿತು.
ಕೊರೊನಾ ಸಂಕಷ್ಟದ ನಡುವೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್ ಮಂಡನೆಗೆ ಮುನ್ನ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಒತ್ತಾಯಿಸಿದ್ದರು.
ಅಂತೂ ಕೊನೆಗೂ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಮುಂದಾಗಿರುವುದು ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಬೇಡಿಕೆಗೆ ಅತೀ ಮುಖ್ಯ ಕಾರಣ ಎಂದರೆ ಬಳ್ಳಾರಿ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ (ಕೆಲ ಭಾಗ)ಯ ಭಾಗದ ಜನರು ಚಿಕಿತ್ಸೆಗೆ ಹೆಚ್ಚು ಅವಲಂಬಿತರಾಗಿರುವುದು ದಾವಣಗೆರೆ ಮೇಲೆ. ಇಲ್ಲಿನ ಜಿಲ್ಲಾ ಚಿಗಟೇರಿ ಜಿಲ್ಲಾ ಆಸ್ಪತ್ರೆ ಸುತ್ತಮುತ್ತಲ ಜಿಲ್ಲೆಗಳ ರೆಫರಲ್ ಆಸ್ಪತ್ರೆ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಬಹಳ ಬೇಡಿಕೆ ಇದೆ. ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ದಾವಣಗೆರೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲಾಗುವುದು ಎಂದ ತಿಳಿಸಿದ ನಂತರ ಕಾಲೇಜು ಪ್ರಾರಂಭದ ಕನಸು ನನಸಾಗುವ ಲಕ್ಷಣ ಗೋಚರಿಸಿದವು.
ಜು.10 ರಂದು ಆರೋಗ್ಯ ಇಲಾಖೆ ಸಚಿವ ಡಾ| ಕೆ. ಸುಧಾಕರ್ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಭೇಟಿ ನೀಡಿ, ಸರ್ಕಾರಿ ವೈದ್ಯಕೀಯ ಕಾಲೇಜು ಅಗತ್ಯ ಇರುವ ಜಾಗ ಒಳಗೊಂಡಂತೆ ಇತರೆ ವ್ಯವಸ್ಥೆಗಳ ಪರಿಶೀಲನೆ ನಡೆಸಿದ ನಂತರ ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪಕ್ಕಾ ಆದಂತಾಗಿದೆ.
ಮೆಡಿಕಲ್ ಹಬ್: ಹಿಂದೊಮ್ಮೆ ಮ್ಯಾಂಚೆಸ್ಟರ್ ಸಿಟಿ ಎಂದೇ ಖ್ಯಾತವಾಗಿದ್ದ ದಾವಣಗೆರೆ ಇದೀಗ ಮೆಡಿಕಲ್ ಹಬ್ ಎಂದೇ ಖ್ಯಾತಿಗೊಂಡಿದೆ. ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಈಗಾಗಲೇ ಎರಡು ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು ಇವೆ. ಜತೆಗೆ ಒಂದು ಜಿಲ್ಲಾ ಆಸ್ಪತ್ರೆ, ತಲಾ 4 ತಾಲೂಕು ಮತ್ತು ಸಮುದಾಯ ಆಸ್ಪತ್ರೆ, 100 ಪ್ರಾಥಮಿಕ ಆರೋಗ್ಯ ಕೇಂದ್ರ, 548 ಖಾಸಗಿ ಆಸ್ಪತ್ರೆ, 210 ಕ್ಲಿನಿಕ್, 40 ಪಾಲಿಕ್ಲಿನಿಕ್, 51 ನರ್ಸಿಂಗ್ ಹೋಂ, ಒಟ್ಟಾರೆ 720 ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಜಿಲ್ಲೆಯಲ್ಲಿವೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಗತ್ಯತೆ ಇತ್ತು. ಅದು ಸಾಕಾರಗೊಳ್ಳುವ ಕಾಲ ಕೂಡಿ ಬಂದಿದೆ.
ಜಿಲ್ಲಾ ಆಸ್ಪತ್ರೆ: ಖಾಸಗಿ ಸಹಭಾಗಿತ್ವದ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗುತ್ತಿರುವ ಜಿಲ್ಲಾ ಚಿಗಟೇರಿ ಆಸ್ಪತ್ರೆ ತನ್ನದೇ ಆದ ಇತಿಹಾಸ ಹೊಂದಿದೆ. ಧರ್ಮಪ್ರಕಾಶ ಚಿಗಟೇರಿ ಮುರಿಗೆಪ್ಪನವರ ಕನಸಿನ ಕೂಸಾದ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಶಂಕುಸ್ಥಾಪನೆ 1936ರಲ್ಲಿ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ನೆರವೇರಿದೆ. 1972 ರಲ್ಲಿ ಈಗಿನ ಆಸ್ಪತ್ರೆ ಪ್ರಾರಂಭವಾಗಿದ್ದು, 1030 ಹಾಸಿಗೆ ಸೌಲಭ್ಯ ಹೊಂದಿದೆ. ಈಗ ಸುತ್ತಮುತ್ತಲ ಜಿಲ್ಲೆಗಳ ಪ್ರಮುಖ ಆರೋಗ್ಯ ಕೇಂದ್ರವಾಗಿದೆ. ದಿನಕ್ಕೆ 3-3,500 ಜನರು ಹೊರ ರೋಗಿಗಳು ಬರುತ್ತಾರೆ.
ಅವರಲ್ಲಿ ಶೇ.20 ರಷ್ಟು ಜನರು ಒಳರೋಗಿಗಳಾಗುತ್ತಾರೆ. ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭ ಆಗುವುದರಿಂದ ಹೆಚ್ಚಿನ ಸೌಲಭ್ಯ ದೊರೆಯಲಿದೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರು, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪಿಪಿಪಿ ಮಾದರಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅನುಮೋದನೆ ಪಡೆದು, ಆದಷ್ಟು ಬೇಗ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದಿದ್ದಾರೆ. ಆ ಕಾಲ ಆದಷ್ಟು ಬೇಗ ಕೂಡಿ ಬರುವಂತಾಗಲಿ ಎಂಬುದು ಸಾರ್ವಜನಿಕರ ಅಭಿಲಾಷೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
BJP ವಿಜಯೇಂದ್ರ ಪರ ಬಣದ ಮಹತ್ವದ ಸಭೆ ; ಯಾರ‍್ಯಾರು ಭಾಗಿ ..?
Davanagere: ನಗರದಲ್ಲಿ ಬಿ.ವೈ.ವಿಜಯೇಂದ್ರ ಬೆಂಬಲಿಗರ ಸಭೆ; 20ಕ್ಕೂ ಅಧಿಕ ನಾಯಕರು ಭಾಗಿ
ಚೆನ್ನಮ್ಮನ ವಂಶಸ್ಥರ ಮೇಲಿನ ಲಾಠಿ ಪ್ರಹಾರ ಮನುಕುಲಕ್ಕೆ ಮಾಡಿದ ಅಪಮಾನ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.