ದಾವಣಗೆರೆ ಜಿಲ್ಲೆಗೀಗ 24ರ ಸಂಭ್ರಮ
Team Udayavani, Aug 15, 2021, 6:38 PM IST
ರಾ. ರವಿಬಾಬು
ದಾವಣಗೆರೆ: ರಾಜ್ಯ ಕಂಡಂತಹ ಖಡಕ್ ಮುಖ್ಯಮಂತ್ರಿ ಜೆ.ಎಚ್. ಪಟೇಲ್‌ರವರ ದಿಟ್ಟ ನಿರ್ಧಾರದ ಫಲವಾಗಿ 1997ರ ಆ. 15 ರಂದು ಅಸ್ತಿತ್ವಕ್ಕೆ ಬಂದಿರುವ ದಾವಣಗೆರೆ ಜಿಲ್ಲೆಗೆ ಈಗ 24ರ ಸಂಭ್ರಮ. ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಪ್ರಮುಖ ವ್ಯಾಪಾರಿ, ಶಿಕ್ಷಣ ಕೇಂದ್ರವಾಗಿದ್ದ ದಾವಣಗೆರೆಯನ್ನು ಜಿಲ್ಲೆ ಮಾಡಬೇಕು ಎಂಬ ಪ್ರಬಲ ಕೂಗಿಗೆ ಮಣಿದಿದ್ದ ಜೆ.ಎಚ್. ಪಟೇಲ್ ನೇತೃತ್ವದ ಸರ್ಕಾರ ದಾವಣಗೆರೆ, ಜಗಳೂರು, ಹೊನ್ನಾಳಿ, ಹರಿಹರ, ಚನ್ನಗಿರಿ, ಹರಿಹರ, ಹರಪನಹಳ್ಳಿ ತಾಲೂಕುಗಳನ್ನೊಳಗೊಂಡ ದಾವಣಗೆರೆ ಜಿಲ್ಲೆ ರಚನೆ ಮಾಡಿತು.
ದಾವಣಗೆರೆ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಸಾಕಷ್ಟು ಅಭಿವೃದ್ಧಿ ಆಗಿವೆ. 2007 ರಲ್ಲಿ ದಾವಣಗೆರೆ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದೆ. 2009ರಲ್ಲಿ ದಾವಣಗೆರೆ ವಿಶ್ವವಿದ್ಯಾಲಯ, 2015ರಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿತ ಸ್ಮಾರ್ಟ್‌ಸಿಟಿ, ಅಮೃತ್ ಸಿಟಿ ಯೋಜನೆಗೆ ಆಯ್ಕೆಯಾಗಿದೆ. 2020ರಲ್ಲಿ ರೈಲ್ವೆ ನಿಲ್ದಾಣ ಆಧುನೀಕರಣಗೊಂಡಿದೆ. 22 ಕೆರೆ, ಸಾಸ್ವೇಹಳ್ಳಿ, ದೀಟೂರು ಏತ ನೀರಾವರಿ ಯೋಜನೆಗಳ ಜೊತೆಗೆ ಬರಪೀಡಿತ ತಾಲೂಕು ಎಂದೇ ಗುರುತಿಸಲ್ಪಡುವ ಜಗಳೂರು ತಾಲೂಕಿಗೆ ಕುಡಿಯುವ ನೀರು ಒದಗಿಸುವ ಭದ್ರಾ ಮೇಲ್ದಂಡೆ ಯೋಜನೆಯೂ ಪ್ರಾರಂಭವಾಗಿದೆ.
ಹರಿಹರ ಸಮೀಪದಲ್ಲಿ 2 ಜಿ ಎಥೆನಾಲ್, ಯೂರಿಯಾ ರಸಗೊಬ್ಬರ ಘಟಕದ ಪ್ರಾರಂಭದ ಮಾತುಗಳು ಕೇಳಿ ಬರುತ್ತಿವೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ದಿವ್ಯಾಂಗನ ಮಕ್ಕಳ ಆರೈಕೆ ಕೇಂದ್ರವೂ ಕಾರ್ಯಾರಂಭ ಮಾಡಿದೆ. ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಗಾಜಿನಮನೆ ದಾವಣಗೆರೆಯಲ್ಲಿ ನಿರ್ಮಾಣವಾಗಿದೆ. ಕೊಂಡಜ್ಜಿಯಲ್ಲಿ ಪೊಲೀಸ್ ಪಬ್ಲಿಕ್ ವಸತಿ ಶಾಲೆ ಪೂರ್ಣಗೊಂಡಿದೆ. ಈ ನಡುವೆ ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿದ್ದ ಹರಪನಹಳ್ಳಿ ಮತ್ತೆ ಬಳ್ಳಾರಿ ತೆಕ್ಕೆಗೆ ಜಾರಿದೆ. ಹೊನ್ನಾಳಿ ವ್ಯಾಪ್ತಿಯಲ್ಲಿದ್ದ ಹೋಬಳಿ ಕೇಂದ್ರ ನ್ಯಾಮತಿ ನೂತನ ತಾಲೂಕು ಕೇಂದ್ರವಾಗಿದೆ.
ಮಾಯಕೊಂಡದ ತಾಲೂಕು ಕನಸು ಈವರೆಗೆ ನನಸಾಗಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಗಮನ ಸೆಳೆಯುವಂತಹ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅಂತೆಯೇ ಹಲವಾರು ಜ್ವಲಂತ ಸಮಸ್ಯೆಗಳು ಜಿಲ್ಲೆಯಾಗಿ 24 ವರ್ಷದ ನಂತರವೂ ಈ ಕ್ಷಣಕ್ಕೂಜೀವಂತವಾಗಿವೆ. ದಾವಣಗೆರೆಯಲ್ಲಿದ್ದ ಕಾಟನ್‌ಮಿಲ್ ಗಳಿಂದ ಮ್ಯಾಂಚೆಸ್ಟರ್ ಖ್ಯಾತಿಗೆ ಪಾತ್ರವಾಗಿತ್ತು. ಜವಳಿ ಮಿಲ್ ಗಳ ಮುಚ್ಚಿದ ನಂತರ ಈವರೆಗೆ ದಾವಣಗೆರೆ ನಗರ ಮತ್ತು ಜಿಲ್ಲೆಯಲ್ಲಿ ದುಡಿಯುವ ಕೈಗಳಿಗೆ ಭರಪೂರ ಕೆಲಸ ನೀಡುವಂತಹ, ನಿರುದ್ಯೋಗ ಸಮಸ್ಯೆ ಮೂಲೋತ್ಪಾಟನೆ ಮಾಡುವಂತಹ ಕೈಗಾರಿಕೆಗಳು ಪ್ರಾರಂಭವಾಗಿಲ್ಲ. ಕೈಗಾರಿಕೆಗಳ ತರುವತ್ತ ಜನಪ್ರತಿನಿಧಿಗಳು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎಂಬ ನೋವು ಸಾರ್ವಜನಿಕ ವಲಯದಲ್ಲಿದೆ.
“ಮೆಕ್ಕೆಜೋಳ ಕಣಜ’ ಖ್ಯಾತಿಯ ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ ಸಂಸ್ಕರಣ ಘಟಕ ಪ್ರಾರಂಭವಾದಲ್ಲಿ ಬೆಳೆಗಾರರಿಗೆ ಅನುಕೂಲ ಆಗಲಿದೆ. ಸಂಸ್ಕರಣಾ ಘಟಕ ಪ್ರಾರಂಭಿಸಬೇಕು ಎಂಬ ದಶಕಗಳ ಕೂಗಿಗೆ ಈ ಕ್ಷಣಕ್ಕೂ ಸ್ಪಂದನೆ ದೊರೆತಿಲ್ಲ. ಸಂಸ್ಕರಣ ಘಟಕದ ಪ್ರಾರಂಭದತ್ತ ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ. ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್‌ಗೂ ಅಧಿಕ ಭದ್ರಾ ಅಚ್ಚುಕಟ್ಟಿದೆ.
ಕೊನೆಯ ಭಾಗಕ್ಕೂ ಸಮರ್ಪಕವಾಗಿ ನೀರು ಹರಿದ ಉದಾಹರಣೆ ಇಲ್ಲ. ಈಚೆಗೆ ಕಾಡಾ ಅಧ್ಯಕ್ಷರ ಪ್ರಯತ್ನದ ಫಲವಾಗಿ ಕೆಲವು ಭಾಗಕ್ಕೆ ನೀರು ದೊರೆಯುತ್ತಿದೆ. ಅಚ್ಚುಕಟ್ಟಿನ ತುತ್ತ ತುದಿಗೂ ನೀರು ತಲುಪುವಂತಾಗಬೇಕು. ಅಕ್ರಮ ಪಂಪ್‌ಸೆಟ್‌ಗೆ ಇತಿಶ್ರೀ ಹಾಡಬೇಕು ಎಂಬುದು ರೈತಾಪಿ ವರ್ಗದ ಒತ್ತಾಯ. ಜಿಲ್ಲೆಯಲ್ಲಿ ಕೆಲವಾರು ಏತ ನೀರಾವರಿ ಯೋಜನೆಗಳನ್ನು ರೂಪಿಸಲಾಗಿದೆ. ಮಹತ್ವಾಕಾಂಕ್ಷಿ ಯೋಜನೆಯಾಗಿರುವ 22 ಕೆರೆಗಳ ಏತ ನೀರಾವರಿ ಯೋಜನೆಯ ಮೂಲ ಉದ್ದೇಶವೇ ಈಡೇರಿಲ್ಲ.
ದಶಕ ಕಳೆದರೂ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿದಿಲ್ಲ. ಸಾಸ್ವೇಹಳ್ಳಿ, ದೀಟೂರು ಏತ ನೀರಾವರಿ ಯೋಜನೆಗಳಿಗೆ ಚುರುಕು ಮುಟ್ಟಿಸಬೇಕಿದೆ. ಹೊನ್ನಾಳಿ ತಾಲೂಕಿನ ಅರಕೆರೆ, ಹರಿಹರ ತಾಲೂಕಿನ ಭೈರನಪಾದ ಏತ ನೀರಾವರಿ ಯೋಜನೆ, ಜಗಳೂರು ತಾಲೂಕಿನ ಸಂತೇಮುದ್ದಾಪುರ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ ದೊರೆಯಬೇಕಿದೆ.
ಭದ್ರಾ ಮೇಲ್ದಂಡೆ ಯೋಜನೆಯಡಿ ಜಗಳೂರು ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕಿದೆ. ಜಿಲ್ಲೆಯ ಜನರ ಬೇಡಿಕೆ, ಒತ್ತಾಯಕ್ಕೆ ಜನಪ್ರತಿನಿಧಿಗಳು, ಆಡಳಿತ ವರ್ಗ ಸ್ಪಂದಿಸಿದಲ್ಲಿ ದಾವಣಗೆರೆ ಜಿಲ್ಲೆ ತನ್ನ 25ನೇ ವರ್ಷದಲ್ಲಿ ನಿಜವಾಗಿಯೂ ಅಭಿವೃದ್ಧಿಯಲ್ಲಿ ಕರ್ನಾಟಕದ ಕೇಂದ್ರ ಬಿಂದುವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.