ಅಧಿಕಾರ-ಅನುದಾನ ದೊರೆತರೆ ತಾಪಂ ಬಲಿಷ್ಠ
ಕಡಿಮೆ ಅನುದಾನದಲ್ಲಿ ಕೆಲಸ ಮಾಡೋದಾದರೂ ಹೇಗೆ?
Team Udayavani, Jan 23, 2021, 3:00 PM IST
ದಾವಣಗೆರೆ: ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಮೂರು ಹಂತಗಳನ್ನು ಎರಡಕ್ಕಿಳಿಸಲು ಸರ್ಕಾರ ಚಿಂತನೆ ನಡೆಸಿರುವುದು ಜಿಲ್ಲೆಯ ಜನಪ್ರತಿನಿಧಿಗಳಲ್ಲಿಯೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಸರ್ಕಾರದ ಈ ನಿರ್ಧಾರ ಸರಿಯಿದೆ ಎಂದರೆ, ಮತ್ತೆ ಹಲವರು ಆಡಳಿತ ವಿಕೇಂದ್ರೀಕರಣ ಸಮರ್ಪಕವಾಗಲು ಎಲ್ಲ ಮೂರೂ ಹಂತಗಳು (ಜಿಪಂ, ತಾಪಂ, ಗ್ರಾಪಂ) ಇರಲೇಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಮೊಟ್ಟ ಮೊದಲ ಬಾರಿಗೆ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ನಜೀರ್ ಅಹ್ಮದ್ ಅವರ ಕಾಲದಲ್ಲಿ ಜಾರಿಗೆ ತಂದಿತ್ತು. ಆರಂಭದಲ್ಲಿ ಮಂಡಲ್, ತಾಲೂಕು ಬೋರ್ಡ್ ಹಾಗೂ ಜಿಲ್ಲಾ ಪರಿಷತ್ ಹೆಸರಲ್ಲಿ ಕರೆಸಿಕೊಳ್ಳುತ್ತಿದ್ದ ಈ ಹಂತಗಳು ಮುಂದೆ ಪಂಚಾಯಿತಿಗಳೆಂದು ಕರೆಸಿಕೊಂಡು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಾದವು. ಪ್ರಸ್ತುತ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಅಧಿಕಾರ, ಅನುದಾನ ಸಿಗುತ್ತಿವೆ. ಆದರೆ ತಾಪಂಗಳಿಗೆ ಹೆಚ್ಚಿನ ಅಧಿಕಾರ, ಅನುದಾನವೇ ಇಲ್ಲ. ಹೀಗಾಗಿ ತಾಪಂ ವ್ಯವಸ್ಥೆ ಬಗ್ಗೆ ಹಲವರಲ್ಲಿ ಅಸಮಾಧಾನ
ಮೂಡಿದೆ. ಆದರೆ ಈ ಮೂರು ಹಂತದ ವ್ಯವಸ್ಥೆ ಬಗ್ಗೆ ಯಾರಿಗೂ ಕಡು ವಿರೋಧವಿಲ್ಲ. ತಾಪಂ ವ್ಯವಸ್ಥೆಗೆ ಹೆಚ್ಚು ಅನುದಾನ, ಅಧಿಕಾರ ಕೊಟ್ಟು ಬಲಪಡಿಸಬೇಕು ಎಂಬ ಅಭಿಪ್ರಾಯ ಸಾಮೂಹಿಕವಾಗಿ ವ್ಯಕ್ತವಾಗಿದೆ.
ತಾಪಂ ಅಧಿಕಾರ ಶಾಸಕ ಕೇಂದ್ರಿತ
ತಾಪಂ ವ್ಯವಸ್ಥೆ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ಒಂದು ವೇದಿಕೆಯಾಗಿರುವುದು ನಿಜ. ಆದರೆ ಆಯ್ಕೆಯಾಗಿರುವ ಸದಸ್ಯರಿಗೇ ಈಗ ವ್ಯವಸ್ಥೆ ಬಗ್ಗೆ ಆಕ್ರೋಶವಿದೆ. ಚುನಾವಣೆಯಲ್ಲಿ 10-15 ಲಕ್ಷ ರೂ. ಖರ್ಚು ಮಾಡಿ ಗೆದ್ದು ಬರುವ ಸದಸ್ಯರಿಗೆ ತಮ್ಮ ಕ್ಷೇತ್ರದ ಮತದಾರರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಹೆಚ್ಚಿನ ಅನುದಾನ ಹರಿದು ಬರುವ ವ್ಯವಸ್ಥೆಯೂ ಇಲ್ಲ. ಹೆಚ್ಚಿನ ಅಧಿಕಾರವೂ ಸಿಗುತ್ತಿಲ್ಲ. ಈ ಹಂತದ ವ್ಯವಸ್ಥೆ ಎಲ್ಲವೂ ಶಾಸಕರ ಕೇಂದ್ರಿಕೃತವಾಗಿರುವುದು ಸದಸ್ಯರ ಬೇಸರಕ್ಕೆ ಕಾರಣವಾಗಿದೆ.
ವಿರೋಧ ಏಕೆ ?
ಅನೇಕರು ತಾಪಂ ವ್ಯವಸ್ಥೆ ಬೇಡ ಎಂಬುದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಕಡಿಮೆ ಅನುದಾನ, ಕಡಿಮೆ ಅಧಿಕಾರವೇ ಪ್ರಮುಖ ಕಾರಣ. ಈ ಮೊದಲು 32 ಇಲಾಖೆಗಳಿಗೆ ತಾಪಂ ಮೂಲಕವೇ ಅನುದಾನ ಹೋಗುತ್ತಿತ್ತು. ಇದಕ್ಕಾಗಿ ತಾಪಂ ಸಭೆಯಲ್ಲಿಯೇ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ನೀಡಲಾಗುತ್ತಿತ್ತು. ಪ್ರಸ್ತುತ ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಶು ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಈ ಐದು ಇಲಾಖೆಗಳು ಹೊರತುಪಡಿಸಿದರೆ ಉಳಿದೆಲ್ಲ ಇಲಾಖೆಗಳಿಗೆ ನೇರವಾಗಿ ಅನುದಾನ ಹೋಗುತ್ತಿದೆ. ಲಿಂಕ್ ಡಾಕ್ಯುಮೆಂಟ್‌ನಲ್ಲಿ ತಾಪಂಗಳಿಗೆ ಸರ್ಕಾರಗಳು ನೀಡುವ ಅನುದಾನ ಇಂದು ಕನಿಷ್ಠ ಮಟ್ಟಕ್ಕೆ ಅಂದರೆ ವರ್ಷಕ್ಕೆ ಒಂದೂ ಕಾಲು ಕೋಟಿ ರೂ.ಗಳಿಗೆ ಇಳಿದಿದ್ದು, 20-30 ಸದಸ್ಯರಿರುವ ತಾಪಂನಲ್ಲಿ ಒಬ್ಬರಿಗೆ 4 ರಿಂದ 5 ಲಕ್ಷ ರೂ. ಸಹ
ಅಧಿವೃದ್ಧಿಗೆ ಸಿಗುವುದಿಲ್ಲ. ಒಬ್ಬೊಬ್ಬ ಸದಸ್ಯರಿಗೆ 8-10 ಹಳ್ಳಿಗಳು ಬರುತ್ತಿದ್ದು, ಇಷ್ಟು ಕಡಿಮೆ ಅನುದಾನದಲ್ಲಿ ಅವರು ಹೆಚ್ಚಿನ ಕೆಲಸಗಳನ್ನು ಜನರಿಗೆ ಮಾಡಿಕೊಡಲಾಗುತ್ತಿಲ್ಲ. ಇವರಿಗೆ ಸಿಗುವ ಅನುದಾನದಲ್ಲಿ ಶಾಲೆಗಳಿಗೆ ಸುಣ್ಣ-ಬಣ್ಣ, ನೀರಿನ ವ್ಯವಸ್ಥೆಯಂತಹ ಸಣ್ಣ ಕಾರ್ಯಗಳನ್ನೂ ಮಾಡಿಕೊಡಲಾಗುತ್ತಿಲ್ಲ. ತಾಪಂ ಅನುದಾನ ವ್ಯಾಪ್ತಿಯಲ್ಲಿ ಇಲಾಖೆಗಳು ಬರದೇ ಇರುವುದರಿಂದ ಅಧಿಕಾರಿಗಳು ಸಹ ತಾಪಂ ಸದಸ್ಯರನ್ನು ಕಡೆಗಣಿಸುತ್ತಾರೆ. ತಾಲೂಕು ಹಂತದಲ್ಲಿ ಶಾಸಕರ ನಿರ್ಧಾರವೇ ಕೊನೆಯಾಗಿದ್ದರಿಂದ ತಾಪಂ ಸದಸ್ಯರ ಪ್ರಭಾವಕ್ಕೆ ಕೊಡಲಿಏಟು ಬಿದ್ದಿದೆ ಎಂಬುದು ತಾಪಂ ವ್ಯವಸ್ಥೆ ಬೇಡ ಎನ್ನುವವರ ವಾದವಾಗಿದೆ.
ಏಕೆ ಬೇಕು?
ತಾಲೂಕು ಪಂಚಾಯತ್ ವ್ಯವಸ್ಥೆ ಇರುವುದರಿಂದ ತಾಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾಪಂಗಳ ಮೇಲುಸ್ತುವಾರಿ, ಕಾರ್ಯವೈಖರಿ ತಪಾಸಣೆ, ಲೆಕ್ಕಪತ್ರ ಪರಿಶೋಧನೆಗೆ ಅನುಕೂಲವಾಗಲಿದೆ. ಗ್ರಾಮ ಪಂಚಾಯತ್ ಮಟ್ಟದ ದೂರು, ಸಮಸ್ಯೆಗಳಿಗೆ ತಾಪಂ ಹತ್ತಿರದ
ವ್ಯವಸ್ಥೆಯಾಗಿದೆ. ಇಡೀ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್‌ಗಳ ಸಮರ್ಪಕ ಉಸ್ತುವಾರಿ ಜಿಪಂನಿಂದ ಅಸಾಧ್ಯ. ಆಗ ಅಭಿವೃದ್ಧಿ, ಸೌಲಭ್ಯವಂಚಿತ ಹಳ್ಳಿಗರ ಕೂಗು ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾ ಪಂಚಾಯತ್ ಗೆ ಮುಟ್ಟುವುದೇ ಇಲ್ಲ. ಇನ್ನು ತಾಲೂಕು
ಪಂಚಾಯತ್ ವ್ಯವಸ್ಥೆಯಲ್ಲಿರುವ ಸದಸ್ಯರು ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿ ನಡುವೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಈ ವ್ಯವಸ್ಥೆ ಇದ್ದಾಗಲೇ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೊಂದು ಅರ್ಥ ಬರುತ್ತದೆ. ಈ ಎಲ್ಲ ಕಾರಣಗಳಿಂದ ತಾಲೂಕು ಪಂಚಾಯತ್ ಒಳಗೊಂಡ ಮೂರು ಹಂತದ ವ್ಯವಸ್ಥೆ ಬೇಕು ಎಂಬ ವಾದವೂ ಜಿಲ್ಲೆಯ ಜನಪ್ರತಿನಿಧಿಗಳಿಂದ ವ್ಯಕ್ತವಾಗಿದೆ.
ಆಗಬೇಕಾದುದು ಏನು?
ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಎಲ್ಲ ಮೂರು ಹಂತದ ವ್ಯವಸ್ಥೆಗಳು ಪ್ರಮುಖವಾಗಿದ್ದು, ಪ್ರಸ್ತುತ ಹೆಚ್ಚು
ಕಡೆಗಣಿಸಲ್ಪಟ್ಟಿರುವ ತಾಪಂ ವ್ಯವಸ್ಥೆಗೆ ಇನ್ನಷ್ಟು ಪುಷ್ಟಿ ತುಂಬಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ತಾಲೂಕು ವ್ಯಾಪ್ತಿಯ ಇಲಾಖೆಗಳಿಗೆ ಮೊದಲಿನಂತೆ ತಾಪಂ ಮೂಲಕವೇ ಅನುದಾನ ಹೋಗಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ತಾಪಂನಲ್ಲೇ ಕ್ರಿಯಾಯೋಜನೆ, ಅನುದಾನ ಬಿಡುಗಡೆಯಾಗಬೇಕು. ಸರ್ಕಾರ ನೀಡುವ ಅನುದಾನ ಹೆಚ್ಚಿಸಬೇಕು. ತಾಪಂ ಅಧ್ಯಕ್ಷ-ಸದಸ್ಯರಿಗೆ ಇನ್ನಷ್ಟು ಹೆಚ್ಚಿನ ಅಧಿಕಾರ ಕೊಟ್ಟು ಆಡಳಿತ ವ್ಯವಸ್ಥೆ ಮೇಲೆ ನಿಯಂತ್ರಣ ಸಾಧಿಸುವಂತಾಗಬೇಕು. ಇವೆಲ್ಲವುಗಳ ನಡುವೆ ತಾಲೂಕು ಪಂಚಾಯತ್‌ನಲ್ಲಿ ಶಾಸಕರ ಹಸ್ತಕ್ಷೇಪ
ಕಡಿಮೆಯಾಗಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಒಟ್ಟಾರೆ ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯ ಎಲ್ಲ ಮೂರು ಹಂತಗಳು ಮುಂದುವರಿಯಬೇಕು. ತಾಲೂಕು ಪಂಚಾಯತ್ ವ್ಯವಸ್ಥೆಗೆ ಇನ್ನಷ್ಟು ಹೆಚ್ಚಿನ ಅಧಿಕಾರ, ಅನುದಾನ ನೀಡಿ ವ್ಯವಸ್ಥೆಯನ್ನು ಉಳಿಸಬೇಕು ಎಂಬ ಅಭಿಪ್ರಾಯ ಜಿಲ್ಲೆಯಲ್ಲಿ ವ್ಯಕ್ತವಾಗಿದೆ.
ತಾಪಂ ವ್ಯವಸ್ಥೆಗೆ ಹೆಚ್ಚಿನ ಅನುದಾನ ಹಾಗೂ ಚೆಕ್‌ಗೆ ಸಹಿಯಂತಹ ಹೆಚ್ಚಿನ ಅಧಿಕಾರ ನೀಡುವುದಾದರೆ ಈ ವ್ಯವಸ್ಥೆ ಮುಂದವರಿಯಲಿ. ಯಾವುದೇ ಅಧಿಕಾರ, ಅನುದಾನ ಇಲ್ಲದ್ದಿದ್ದರೆ ತಾಪಂ ಕಚೇರಿ ಸಹಿತ ತಾಪಂ ವ್ಯವಸ್ಥೆ ರದ್ದು ಮಾಡುವುದೇ ಒಳಿತು.
ಮಮತಾ ಮಲ್ಲೇಶಪ್ಪ,
ದಾವಣಗೆರೆ ತಾಪಂ ಅಧ್ಯಕ್ಷೆ
ತಾಪಂ ವ್ಯವಸ್ಥೆಯಲ್ಲಿವ ತಾಪಂ ಸದಸ್ಯರಿಗೆ ಗೌರವ ಸ್ಥಾನ ಬಿಟ್ಟರೆ ಬೇರೇನೂ ಇಲ್ಲ. ಎಲ್ಲವೂ ಶಾಸಕ ಕೇಂದ್ರೀಕೃತವಾಗಿರುವುದರಿಂದ ತಾಪಂ ಸದಸ್ಯರಿಗೆ ಅಧಿಕಾರವೇ ಇಲ್ಲದಂತಾಗಿದೆ. ಹೆಚ್ಚಿನ ಅಧಿಕಾರ, ಅನುದಾನ ಇಲ್ಲದಿದ್ದರೆ ತಾಪಂ ವ್ಯವಸ್ಥೆ ರದ್ದು ಮಾಡುವುದೇ ಒಳಿತು.
ಮುದೇಗೌಡ್ರ ಬಸವರಾಜಪ್ಪ, ಜಗಳೂರು ತಾಪಂ ಉಪಾಧ್ಯಕ್ಷ
ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ತಾಪಂ ವ್ಯವಸ್ಥೆ ಬೇಕೆ ಬೇಕು. ಗ್ರಾಪಂಗಳ ಮೇಲುಸ್ತುವಾರಿ, ಜಿಪಂಗಳಿಗೆ ಹಳ್ಳಿಗಳ ಅಹವಾಲನ್ನು ಸರಿಯಾದ ಮಾರ್ಗದಲ್ಲಿ ಮುಟ್ಟಿಸಲು ಇದು ಉತ್ತಮ ವ್ಯವಸ್ಥೆ. ಆದರೆ ಈ ವ್ಯವಸ್ಥೆಗೆ ಹೆಚ್ಚಿನ ಅನುದಾನ, ಅಧಿಕಾರದ ಅವಶ್ಯಕತೆ ಇದೆ.
ಕೆ.ಎಲ್. ರಂಗಪ್ಪ, ಹೊನ್ನಾಳಿ ತಾಪಂ ಉಪಾಧ್ಯಕ್ಷ
*ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.