ದಾವಣಗೆರೆ ಸಂಪೂರ್ಣ ಭಣ ಭಣ!
ಸಭೆ-ಸಮಾರಂಭ ರದ್ದು ಜನಸಂಚಾರ ಕ್ಷೀಣಅಧಿಕಾರಿಗಳಿಂದ ಸ್ಥಳೀಯರಲ್ಲಿ ಜಾಗೃತಿ
Team Udayavani, Mar 16, 2020, 11:16 AM IST
ದಾವಣಗೆರೆ: ಕೇಂದ್ರ ಸರ್ಕಾರದ ಸೂಚಿತ ವಿಪತ್ತು ಎಂಬ ಘೋಷಣೆ, ರಾಜ್ಯ ಸರ್ಕಾರದ ಒಂದು ವಾರದ ಬಂದ್.. ಕೊರೊನಾ.. ಭಯದ ಕಾರಣ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಭಾನುವಾರ ವ್ಯಾಪಾರ-ವಹಿವಾಟು, ವಾಹನಗಳ ಸಂಚಾರ, ಜನರ ಓಡಾಟ.. ಎಲ್ಲವೂ ಅಕ್ಷರಶಃ ಸ್ತಬ್ಧವಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡಿದ್ದ ಸಾಂಕ್ರಾಮಿಕ ರೋಗಗಳಗಿಂತಲೂ ಕೊರೊನಾ… ಜನ ಸಾಮಾನ್ಯರು, ವ್ಯಾಪಾರ-ವಹಿವಾಟು, ಆಟ-ಪಾಠ, ಸಾಂಸ್ಕೃತಿಕ ಕಾರ್ಯಕ್ರಮ, ಮದುವೆ, ನಾಮಕರಣ, ಸಭೆ, ಸಮಾರಂಭ… ಹೀಗೆ ಪ್ರತಿಯೊಂದರ ಮೇಲೂ ಕಂಡು, ಕೇಳರಿಯದಂತಹ ಪರಿಣಾಮ ಉಂಟು ಮಾಡಿದೆ ಎಂಬುದಕ್ಕೆ ದಾವಣಗೆರೆಯಲ್ಲಿ ಕಂಡು ಬಂದ ವಾತಾವರಣಕ್ಕೆ ಜ್ವಲಂತ ಸಾಕ್ಷಿಯಾಗಿತ್ತು.
ಎರಡನೇ ಶನಿವಾರದೊಟ್ಟಿಗೆ ಸಾರ್ವತ್ರಿಕ ರಜಾ ದಿನ ಭಾನುವಾರ ದಾವಣಗೆರೆಯಲ್ಲಿ ಜನಭರಿತ ವಾತಾವರಣ ಸಾಮಾನ್ಯ. ಆದರೆ, ಕೊರೊನಾ ಎಫೆಕ್ಟ್ ಪರಿಣಾಮ ಎಲ್ಲವೂ ತದ್ವಿರುದ್ಧ ವಾತಾವರಣ. ಅಘೋಷಿತ ಬಂದ್ ಮಾದರಿಯಲ್ಲಿ ಎಲ್ಲವೂ ಬಂದ್…, ಬಂದ್…!. ವಾರದ ಸಂತೆ, ದುಗ್ಗಮ್ಮನ ಜಾತ್ರೆಯಲ್ಲಿ ಒಂದಷ್ಟು ಜನರು ಕಂಡಿದ್ದು ಬಿಟ್ಟರೆ ಬಹುತೇಕ ಎಲ್ಲಾ ಕಡೆ ಜನರ ಸಂಚಾರ ವಿರಳವಾಗಿತ್ತು. ಆದರೆ, ಎಲ್ಲಿ ಕಿವಿ ಕೊಟ್ಟರೂ ಕೊರೊನಾದ ಬಗ್ಗೆ ಚರ್ಚೆ ಬಹಳ ಸಾಮಾನ್ಯ ಎನ್ನುವಂತಿತ್ತು. ದಾವಣಗೆರೆಯಂತಹ ದಾವಣಗೆರೆಯಲ್ಲಿ ಒಂದು ರೀತಿಯ ನೀರವ ಮೌನ ಕಂಡು ಬಂದಿತು. ಎಲ್ಲಿಯೋ ಅಲ್ಲಲ್ಲಿ ಸಣ್ಣ ಪುಟ್ಟ ಹೋಟೆಲ್, ಆಗೊಂದು-ಹೀಗೊಂದು ಆಟೋ ರಿಕ್ಷಾ, ದ್ವಿಚಕ್ರ ವಾಹನ, ಕಾರು, ಬಸ್ ಸಂಚಾರ ಇತ್ತು. ಸಂಡೇ ಸ್ಪೆಷಲ್… ಎನ್ನುವಂತೆ ಎಲ್ಲಿಯೂ ಸಾಮಾನ್ಯವಾಗಿ ಇರುತ್ತಿದ್ದ ಜನಸಂದಣಿ ಎಲ್ಲಿಯೂ ಇರಲಿಲ್ಲ.
ಕೊರೊನಾ… ಎಫೆಕ್ಟ್ ಎಸ್.ಎಸ್. ಮಾಲ್, ಇತರೆ ವಾಣಿಜ್ಯ ಮಳಿಗೆಗಳ ಮೇಲೂ ಉಂಟಾಗಿದೆ. ಎಸ್. ಎಸ್. ಮಾಲ್ ಬಂದ್ ಮಾಡಲಾಗಿತ್ತು. ಗೀತಾಂಜಲಿ ಒಳಗೊಂಡಂತೆ ಹಲವಾರು ಚಿತ್ರಮಂದಿರಗಳ ಮುಂದೆ ಕೊರೊನಾ… ಹತೋಟಿಗಾಗಿ ಚಿತ್ರಪ್ರದರ್ಶನವನ್ನು ಒಂದು ವಾರ ಬಂದ್ ಮಾಡಲಾಗಿದೆ ಎಂಬ ನಾಮಫಲಕ ಅಳವಡಿಸಲಾಗಿತ್ತು. ಚಿತ್ರಮಂದಿರಗಳು ಬಿಕೋ ಎನ್ನುವಂತಿದ್ದವು. ಸರ್ಕಾರಿ, ಖಾಸಗಿ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಲ್ಲಿ ಜನರ ಸಂಖ್ಯೆ ಕಡಿಮೆಯಾಗಿತ್ತು.
ದಾವಣಗೆರೆಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ರದ್ದಾದವು. ಕುವೆಂಪು ಭವನದಲ್ಲಿ ನಿಗದಿಯಾಗಿದ್ದ ಬಯಲಾಟ ಅಕಾಡೆಮಿ ಗೌರವ, ವಾರ್ಷಿಕ, ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿಲ್ಲ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಲವಾರು ದಿನಗಳಿಂದ ಹಗಲು, ರಾತ್ರಿ ಎನ್ನದೇ ಕೆಲಸ ಮಾಡಿದ್ದವರ ಶ್ರಮವನ್ನ ಕೊರೊನಾ… ಹೊಸಕಿ ಹಾಕಿತ್ತು.
ಕುಂದುವಾಡ ರಸ್ತೆಯ ಬಂಟ್ಸ್ ಭವನದಲ್ಲಿ ನಡೆಯಬೇಕಿದ್ದ ಲಯನ್ಸ್ ಪ್ರಾಂತೀಯ ಸಮ್ಮೇಳನವೂ ನಡೆಯಿಲ್ಲ. ಆದರೆ, ಕೆಲವಾರು ಕಲ್ಯಾಣ ಮಂಟಪಗಳಲ್ಲಿ ಮದುವೆ, ನಾಮಕರಣ ಕಾರ್ಯಕ್ರಮ ನಡೆದವು. ಕೆಲವು ಕಲ್ಯಾಣ ಮಂಟಪಗಳಲ್ಲಿ ಭರ್ಜರಿ ಜನರು ಕಂಡು ಬಂದರೆ, ಇತರೆಡೆ ತೀರಾ ವಿರಳ ಸಂಖ್ಯೆಯಲ್ಲಿ ಜನರು ಇದ್ದರು. ಕೆಲ ಕಲ್ಯಾಣ ಮಂಟಪಗಳಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ ನಡೆಯಲಿಲ್ಲ. ರಾಜ್ಯ ಸರ್ಕಾರ ಆದೇಶ ಪಾಲನೆಗೆ ಸಂಬಂಧ ಸಂಬಂಧಿತರಿಗೆ ತಿಳಿವಳಿಕೆ ನೀಡಲಾಗಿದೆ ಎಂಬುದರ ಬಗ್ಗೆ ಕೆಲವರು ಮಾಹಿತಿ ನೀಡಿದರು.
ಸಾರ್ವಜನಿಕರು ಮಾಸ್ಕ್ ಧರಿಸಿ ಓಡಾಡುವುದು ಸಹ ಕಂಡು ಬಂದಿತು. ಮಾಸ್ಕ್ ಬೆಲೆ ಹೆಚ್ಚಿಸುವಂತಿಲ್ಲ ಎಂಬ ಸೂಚನೆಯ ನಡುವೆಯೂ ದರ ಹೆಚ್ಚಾಗಿತ್ತು.ಕೆಲವು ಕಡೆ ಎಷ್ಟೇ ಹಣ ನೀಡಿದರೂ ಮಾಸ್ಕ್ ಇರಲಿಲ್ಲ. ಕೊರೊನಾ… ಪರಿಣಾಮ ಕೋಳಿ ಮಾಂಸದ ಅಂಗಡಿಗಳು ಬಂದ್ ಆಗಿದ್ದವು. ಭಾನುವಾರ ಕೋಳಿ, ಕುರಿ ಮಾಂಸದಂಗಡಿಗಳಲ್ಲಿ ಕ್ಯೂ… ಕಾಮನ್. ಆದರೆ, ಈಗ ಅಂತಹ ವಾತಾವರಣವೇ ಇಲ್ಲ. ಕೋಳಿ ಮಾಂಸ ಇರಲಿ ಜನರು ಮೊಟ್ಟೆಯನ್ನೂ ಬಳಸಲು ಹಿಂದೇಟು ಹಾಕುವಂತಾಗಿದೆ. ಕೋಳಿ, ಮೊಟ್ಟೆಯತ್ತ ಜನರು ಮುಖ ಮಾಡದ ಕಾರಣಕ್ಕೆ ಕುರಿ ಮಾಂಸಕ್ಕೆ ಭಾರೀ ಬೇಡಿಕೆ ಇತ್ತು. ಜೊತೆಗೆ ದರವೂ ಗಗನಮುಖೀಯಾಗಿತ್ತು.
ದುಗ್ಗಮ್ಮನ ಜಾತ್ರೆಯಲ್ಲಿ ಕೆಜಿಗೆ 600-650 ರೂ. ಇದ್ದ ಧಾರಣೆ 800 ರೂ. ಇರುವ ಕಾರಣಕ್ಕೆ ಜನರು ಹೌಹಾರುವಂತಾಯಿತು. ಕೆಲವರು ಅನಿವಾರ್ಯವಾಗಿ ಮಾಂಸದೂಟಕ್ಕೆ ಬ್ರೇಕ್ ಹಾಕುವಂತಾಯಿತು. ಸದಾ ಗಿಜಿಗುಡುತ್ತಿದ್ದ ವಿನೋಬ ನಗರ 2ನೇ ಮುಖ್ಯ ರಸ್ತೆ ಅಕ್ಷರಶಃ ಖಾಲಿ ಹೊಡೆಯುವಂತಿತ್ತು.
ಕೊರೊನಾ… ವೈರಸ್ ಮಹಾಮಾರಿ ತಡೆಗೆ ಸ್ವಚ್ಛತೆ ಅತೀ ಮುಖ್ಯ. ಹಾಗಾಗಿ ನಗರದ ಎಲ್ಲಾ ಕಡೆ ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳು, ನೌಕರರು, ಅಶಾ, ಅಂಗನವಾಡಿ ಕಾರ್ಯಕರ್ತರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕರಪತ್ರ ವಿತರಣೆ ಜೊತೆಗೆ ಕೊರೊನಾ… ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಬಸ್, ರೈಲ್ವೆ ನಿಲ್ದಾಣಗಳಲ್ಲೂ ಜಾಗೃತಿ ಮೂಡಿಸುವ ಕಾರ್ಯ ನಡೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.