ಸ್ಮಾರ್ಟ್ ಸಿಟಿಯಲ್ಲೂ ಇದೆ ಸ್ಮಶಾನ-ಸಂಕಷ್ಟ
ಜಿಲ್ಲಾ ಕೇಂದ್ರ ದಾವಣಗೆರೆಯೂ ಸಮಸ್ಯೆಗೆ ಹೊರತಲ್ಲೂ
Team Udayavani, Feb 7, 2020, 11:25 AM IST
ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿತ ಸ್ಮಾರ್ಟ್‌ಸಿಟಿ.. ಯೋಜನೆಗೆ ಆಯ್ಕೆಯಾಗಿರುವ ದಾವಣಗೆರೆಯಲ್ಲಿ ಭದ್ರಾ ನಾಲೆ ಏರಿ, ಪಾಳು ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸಬೇಕಾದ ದಾರುಣ ವಾತಾವರಣ ಇದೆ!.
ಮಹಾನಗರ ಪಾಲಿಕೆಯ 30ನೇ ವಾರ್ಡ್ ವ್ಯಾಪ್ತಿಯ ಆಂಜನೇಯ ಮಿಲ್ ಬಡಾವಣೆಯ ಜನರು ಭದ್ರಾ ನಾಲೆಯ ಏರಿ ಮೇಲೆ, ಅಕ್ಕಪಕ್ಕ ಜಾಗದಲ್ಲೇ ಅಂತ್ಯಕ್ರಿಯೆ ನೆರವೇರಿಸಬೇಕಿದೆ. ಆಂಜನೇಯ ಮಿಲ್ ಬಡಾವಣೆಗೆ ಹೊಂದಿಕೊಂಡಿರುವ ಖಾಸಗಿಯವರ ಜಾಗ ಸ್ಮಶಾನವಾಗಿ ಬಳಕೆ ಆಗುತ್ತಿದೆ. ಒಂದೊಮ್ಮೆ ಜಾಗದ ಮೂಲ ಮಾಲೀಕರು ಆಕ್ಷೇಪಣೆ ವ್ಯಕ್ತಪಡಿಸಿದಲ್ಲಿ ಅಂತ್ಯಸಂಸ್ಕಾರಕ್ಕಾಗಿ ಆಂಜನೇಯ ಮಿಲ್ ಬಡಾವಣೆ ಜನರ ಅಲೆದಾಟ ತಪ್ಪಿದ್ದಲ್ಲ!.
ಹಲವಾರು ದಶಕಗಳ ಜ್ವಲಂತ ಸಮಸ್ಯೆಗೆ ಪರಿಹಾರ ಎಂಬುದು ಈ ಕ್ಷಣಕ್ಕೂ ಮರೀಚಿಕೆ. ಸರ್ಕಾರಿ ಜಾಗದಲ್ಲಿ ಸ್ಮಶಾನ ಮಾಡಿಕೊಡಬೇಕು ಎಂಬ ಜನರ ಬೇಡಿಕೆಗೆ ಎಂದಿನಂತೆ ಆಡಳಿತ ವರ್ಗ ಸ್ಪಂದಿಸದೇ ಇರುವ ಕಾರಣಕ್ಕೆ ಜನರು ಸ್ಮಶಾನ ಸಂಕಟ ಅನುಭವಿಸಲೇಬೇಕಾಗಿದೆ. ದಾವಣಗೆರೆಗೆ ಹೊಂದಿಕೊಂಡಿರುವ ಆವರಗೆರೆ ಜನರಿಗೆ ಸ್ಮಶಾನದ ಸಮಸ್ಯೆ ಇದೆ. ಕೊಂಕಣ ಸುತ್ತಿ ಮೈಲಾರಕ್ಕೆ ಹೋದರು.. ಎಂಬ ಮಾತಿನಂತೆ ಇಲ್ಲಿನ ಜನರು ಅಂತ್ಯಸಂಸ್ಕಾರ ನೆರವೇರಿಸಲು ಸುತ್ತು ಬಳಸಿ ಹೋಗಿ- ಬರಬೇಕಾಗಿದೆ. ಕಿಲೋಮೀಟರ್‌ಗಟ್ಟಲೆ ದೂರ ಹೆಣ ತೆಗೆದುಕೊಂಡು ಹೋಗಬೇಕಾದ ಸಮಸ್ಯೆಯಲ್ಲಿ ಜನರಿದ್ದಾರೆ.
ಜಾಗದ ಸಮಸ್ಯೆ ಬಗೆಹರಿಸಬೇಕಾದವರು ಜಾಣ ಮೌನ, ಕಿವುಡರಾಗಿ ವರ್ತಿಸುತ್ತಿರುವುದರಿಂದ ಸಾರ್ವಜನಿಕರು ಪರಿತಪಿಸುವಂತಾಗಿದೆ. ದಾವಣಗೆರೆಯ ಗಾಂಧಿನಗರಕ್ಕೆ ಹೊಂದಿಕೊಂಡಿರುವ ಸಾರ್ವಜನಿಕ, ಹಿಂದೂ ರುದ್ರಭೂಮಿಯಲ್ಲೂ ಸಾಕಷ್ಟು ಸಮಸ್ಯೆ ಇದೆ. ಗಾಂಧಿನಗರದ ಸಾರ್ವಜನಿಕ, ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸುವ ಜಾಗದಲ್ಲಿ ಕಳೆ-ಕಂಟೆ, ಗಿಡ-ಮರಗಳಿವೆ.
ಸ್ವಚ್ಛತೆ ಎಂಬುದೇ ಇಲ್ಲ. ಮಳೆಗಾಲದಲ್ಲಂತೂ ಸಾಕಷ್ಟು ಸಮಸ್ಯೆ ಉದ್ಭವ ವಾಗುತ್ತದೆ. ರಾತ್ರಿ ವೇಳೆ ಅಂತ್ಯಸಂಸ್ಕಾರ ನಡೆಸುವ ಸಂದರ್ಭದಲ್ಲಿ ಬೆಳಕಿನ ವ್ಯವಸ್ಥೆಯೇ ಇಲ್ಲ. ಅಂತ್ಯಸಂಸ್ಕಾರದ ನಂತರ ಮುಖ ತೊಳೆದುಕೊಂಡು ಮನೆಗೆ ಹೋಗುವುದು ಸಂಪ್ರದಾಯ. ಇಲ್ಲಿ ನೀರಿನ ಸಮಸ್ಯೆ ಸರ್ವೇ ಸಾಮಾನ್ಯ. ಒಮ್ಮೆ ನೀರಿದ್ದರೆ ಇರುತ್ತದೆ. ಇಲ್ಲ ಎಂದರೆ ಇಲ್ಲ. ಅಂತ್ಯಸಂಸ್ಕಾರಕ್ಕೆಂದು ಬಂದವರಿಗೆ ಸಮಸ್ಯೆ ತಪ್ಪಿದ್ದಲ್ಲ.
ಸಾರ್ವಜನಿಕ ಹಿಂದೂ ರುದ್ರಭೂಮಿಗೆ ತೆರಳುವ ರಸ್ತೆಯ ಸ್ಥಿತಿಗತಿ ದೇವರಿಗೆ ಪ್ರೀತಿ. ಈ ರಸ್ತೆಯಲ್ಲಿ ಸ್ವತ್ಛ ವಾತಾವರಣ ನಿರ್ಮಾಣ ಪ್ರಯತ್ನ ಪ್ರಾರಂಭವಾಗಿತ್ತಾದರೂ ಸ್ವತ್ಛ ವಾತಾವರಣಕ್ಕೆ ಕಾಲ ಕೂಡಿ ಬರಲೇ ಇಲ್ಲ. ದಾವಣಗೆರೆ ಹೊರ ವಲಯದ ಶ್ರೀರಾಮನಗರದಲ್ಲಿ 10 ಎಕರೆ ಜಾಗದಲ್ಲಿ ಸರ್ವ ಧರ್ಮಿಯರ ಸ್ಮಶಾನ ಇದೆ. ಕಾಂಪೌಂಡ್, ನೀರಿನ ಸೌಲಭ್ಯ ಇದೆ. ಸ್ಮಶಾನದಲ್ಲೇ ಕಸ ಸುಡುವುದು ಮತ್ತು ಬಿಡಾಡಿ ದನಗಳ ಹಾವಳಿ ವಿಪರೀತ. ಕಾವಲುಗಾರರ ಕೊರತೆ ಇದೆ. ಶಾಮನೂರು ಪಕ್ಕದ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ. ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಸ್ಮಶಾನಕ್ಕೆ ನುಗ್ಗಿ ಬರುತ್ತಿದ್ದ ಚರಂಡಿ ನೀರು ನಿಲ್ಲಿಸಿರುವ ಕಾರಣಕ್ಕೆ ಜನರು ದುವಾರ್ಸನೆಯಿಂದ ಪರಿತಪಿಸುವುದು ತಪ್ಪಿದೆ.
ಶರವೇಗದಲ್ಲಿ ಬೆಳೆಯುತ್ತಿರುವ ಜಿಲ್ಲಾ ಕೇಂದ್ರ ದಾವಣಗೆರೆಯ ಸ್ಮಶಾನಗಳಲ್ಲಿ ಹಲವಾರು ಸಮಸ್ಯೆ ಇವೆ. ಸಂಬಂಧಿತರು ಸ್ಮಶಾನ- ಸಂಕಟ ತಪ್ಪಿಸುವ ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಸ್ಮಶಾನಕ್ಕಾದರೂ ಸೌಲಭ್ಯ ಕೊಡಿ
ಸತ್ತ ಮೇಲೆ ಮಣ್ಣು ಮಾಡೋಕೂ ಜನರು ಕಷ್ಟಪಡಬೇಕಾಗುತ್ತದೆ ಎಂದರೆ ಅದಕ್ಕಿಂತಲೂ ವಿಷಾದದ ಸಂಗತಿ ಇನ್ನೊಂದಿಲ್ಲ. ಮನೆಯಲ್ಲಿ ಯಾರಾದರೂ ಸತ್ತರೆ ಮುಂದೆ ಹೇಗೆ…? ಎಂದು ಮನೆಯ ಮಂದಿ ಯೋಚನೆ ಮಾಡುವುದು ಸಾಮಾನ್ಯ. ಆದರೆ, ಯಾರಾದರೂ ಸತ್ತರೆ ಮಣ್ಣು ಮಾಡುವುದೇ ದೊಡ್ಡ ಸಮಸ್ಯೆ ಎನ್ನುವಂತಹ ಸ್ಥಿತಿ ಇದೆ. ಸಂಬಂಧಪಟ್ಟವರು ಕೊನೆಯ ಪಕ್ಷ ಸ್ಮಶಾನದಲ್ಲಾದರೂ ಕೆಲವಾರು ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು. ವಿದ್ಯುತ್ ಚಿತಾಗಾರ ಪ್ರಾರಂಭಿಸುವತ್ತಲೂ ಗಮನ ಹರಿಸಬೇಕು ಎಂದು ಸಿಪಿಐ ತಾಲೂಕು ಕಾರ್ಯದರ್ಶಿ ಆವರಗೆರೆ ವಾಸು ಒತ್ತಾಯಿಸುತ್ತಾರೆ.
9 ಸ್ಮಶಾನಗಳಿವೆ
ದಾವಣಗೆರೆಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯಕ್ಕೆ ಸೇರಿದಂತಹ ಒಟ್ಟು 9 ಸ್ಮಶಾನಗಳಿವೆ. ಎರಡು ಕಡೆ ಮಾತ್ರ ಕಾವಲುಗಾರರ ವ್ಯವಸ್ಥೆ ಇದೆ. ಮಹಾನಗರ ಪಾಲಿಕೆಯಿಂದ ಸ್ಮಶಾನದಲ್ಲಿ ಗುಂಡಿಗೆ ಇಂತಿಷ್ಟು ದರ ನಿಗದಿ ಪಡಿಸಲಾಗಿದೆ. ಆದರೂ, ಕೆಲವು ಕಡೆ ಜಾಸ್ತಿ ಹಣ ಪೀಕುವುದು ಸಾಮಾನ್ಯ. ಇನ್ನು ತುರ್ತು, ಹಬ್ಬದ ಸಂದರ್ಭಗಳಲ್ಲಿ ಮನಸೋ ಇಚ್ಛೆ… ಕೇಳಲಾಗುತ್ತದೆ. ಅನಿವಾರ್ಯತೆ ಕಾರಣಕ್ಕೆ ಮರು…ಮಾತನಾಡದೆ ಕೇಳಿದಷ್ಟು ಕೊಡುವುದು ನಡೆಯುತ್ತದೆ.
ರಾ. ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ
Darshan Bail; ನಾವು ಏನೂ ಹೇಳಲು ಆಗುವುದಿಲ್ಲ..: ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.