ಪ್ರತಿಪಕ್ಷಗಳನ್ನು ಹಗುರವಾಗಿ ತೆಗೆದುಕೊಳ್ಳುವ ಪ್ರಯತ್ನ ಬೇಡ: ಯಡಿಯೂರಪ್ಪ
Team Udayavani, Sep 19, 2021, 3:45 PM IST
ದಾವಣಗೆರೆ: ಯಾರೂ ಪ್ರತಿಪಕ್ಷಗಳನ್ನು ಹಗುರವಾಗಿ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಡಿ. ಅವುಗಳಿಗೆ ಅವರದ್ದೇ ಲೆಕ್ಕಾಚಾರ; ಶಕ್ತಿ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಎದ್ದು ಕುಳಿತಿರುವುದರಿಂದ ನಾವು ಅಷ್ಟೇ ಪ್ರಬುದ್ಧವಾಗಿ ಹೆಜ್ಜೆ ಇಡಬೇಕಾಗಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ರವಿವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ನ ಮುಖಂಡರು ಬಿಜೆಪಿಯ ಕೆಲ ಮುಖಂಡರನ್ನು ಸಂಪರ್ಕ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಯಾರೂ ಇದಕ್ಕೆ ಅವಕಾಶ ಮಾಡಿಕೊಡದೆ, ಆತ್ಮವಿಶ್ವಾದಿಂದ ಮುನ್ನಡೆಯಬೇಕಾಗಿದೆ. ಬಿಜೆಪಿಯನ್ನು 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ನಾವು ನೀವೆಲ್ಲ ಸೇರಿ ಮಾಡಬೇಕಾಗಿದೆ ಎಂದರು.
ಮುಂದೆ ನಡೆಯುವ ಹಾನಗಲ್, ಸಿಂಧಗಿ ವಿಧಾನಸಬೆ ಉಪಚುನಾವಣೆಯನ್ನು ಗೆಲ್ಲದಿದ್ದರೆ ಅದು ಮುಂದೆ ರಾಜ್ಯದಲ್ಲಿ ಯಾವ ಸಂದೇಶ ಹೋಗಬಹುದು ಎಂಬುದನ್ನು ಯೋಚನೆ ಮಾಡಬೇಕಾಗಿದೆ. ಎಲ್ಲರ ಶ್ರಮದಿಂದ ನಾವು ಈ ಉಪಚುನಾವಣೆಯಲ್ಲಿ ಗೆದ್ದರೆ ಕಾಂಗ್ರೆಸ್‌ಗೆ ದೊಡ್ಡ ಪಾಠ ಕಲಿಸಿದಂತಾಗುತ್ತದೆ. ಹಾನಗಲ್ ಹಾಗೂ ಸಿಂಧಗಿ ಉಪಚುನಾವಣೆ ನಮ್ಮ ಮುಂದಿರುವ ದೊಡ್ಡ ಅಗ್ನಿಪರೀಕ್ಷೆ. ಇದರ ಬಗ್ಗೆ ವಿಶೇಷ ಶ್ರಮವಹಿಸಬೇಕಾಗಿದೆ ಎಂದರು.
ಒಬ್ಬನೇ ಪ್ರವಾಸ ಮಾಡಲು ಸಾಧ್ಯವೇ?
ಯಡಿಯೂರಪ್ಪ ರಾಜ್ಯ ಪ್ರವಾಸದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಆದರೆ, ನಾನು ಒಬ್ಬನೇ ಪ್ರವಾಸ ಮಾಡಲು ಸಾಧ್ಯವೇನು? ನಮ್ಮ ಜತೆ ಶಾಸಕರು, ಸಂಸದರು. ನಾಯಕರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಎಲ್ಲರೂ ಸಹಜವಾಗಿ ಇರುತ್ತಾರೆ. ನಾಲ್ಕಾರು ತಂಡಗಳ ಮೂಲಕ ಪ್ರವಾಸ ಮಾಡುತ್ತೇವೆ ಎಂದು ಬಿಎಸ್ ವೈ ಹೇಳಿದರು.
ಮಂದಿರ ಕೆಡವಲು ಬಿಡೆವು
ರಾಜ್ಯದಲ್ಲಿ ಇನ್ನು ಮುಂದೆ ಮಂದಿರಗಳನ್ನು ಕೆಡವಲು ಅವಕಾಶ ಕೊಡುವುದಿಲ್ಲ. ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ. ಮಂದಿರಗಳನ್ನು ಉಳಿಸಲು ಅಗತ್ಯ ಎಲ್ಲ ಕಾನೂನುಕ್ರಮ ಕೈಗೊಳ್ಳುತ್ತೇವೆ. ಜತೆಗೆ ಅಗತ್ಯಬಿದ್ದರೆ ಸುಪ್ರಿಂ ಕೋರ್ಟ್‌ಗೂ ಮೇಲ್ಮನವಿ ಮಾಡಲಾಗುವುದು. ಈಗಾಗಲೇ ನಡೆದ ಒಂದೆರಡು ಘಟನೆ ಮನಸ್ಸಲ್ಲಿಟ್ಟುಕೊಂಡು ಯಾವ ಕಾರ್ಯಕರ್ತರೂ ಚಿಂತೆ, ಆತಂಕ ಪಡುವುದು ಬೇಡ ಎಂದು ಯಡಿಯೂರಪ್ಪ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.