ಕೇಂದ್ರ ತಂಡಕ್ಕೆ ಜಿಲ್ಲೆಯ ಬರ ದರ್ಶನ
Team Udayavani, Nov 19, 2018, 2:47 PM IST
ದಾವಣಗೆರೆ: ಅಮಿತಾಬ್ ಗೌತಮ್ ನೇತೃತ್ವದ ಅಧಿಕಾರಿಗಳ ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ದಾವಣಗೆರೆ, ಹರಪನಹಳ್ಳಿ ಹಾಗೂ ಜಗಳೂರು ತಾಲೂಕಿನ ಹಲವು ಜಮೀನುಗಳಿಗೆ ಭೇಟಿ ನೀಡಿ, ಬೆಳೆನಷ್ಟ ಬಗ್ಗೆ ರೈತರಿಂದಲೇ ಮಾಹಿತಿ ಪಡೆಯಿತು.
ಬಳ್ಳಾರಿ ಜಿಲ್ಲಾ ಪ್ರವಾಸ ಮುಗಿಸಿಕೊಂಡು ಮಧ್ಯಾಹ್ನ 1ಗಂಟೆಗೆ ಹರಪನಹಳ್ಳಿ ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದ ಬಿ.ಕೆ.ಮಂಜುನಾಥ್ ಎಂಬುವರ ಜಮೀನಿಗೆ ಭೇಟಿ ನೀಡಿದ ತಂಡ, ಮಳೆ ಕೊರತೆಯಿಂದ ನಷ್ಟಕ್ಕೊಳಗಾದ ಮೆಕ್ಕೆಜೋಳ ಪರಿಶೀಲಿಸಿತು.
ಒಟ್ಟು 4.14 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದ ಮಂಜುನಾಥ್, ಈ ಬಾರಿ ಮೆಕ್ಕೆಜೋಳ ಕೃಷಿಗೆ ಒಟ್ಟು 60 ಸಾವಿರ ರೂ. ವೆಚ್ಚ ಮಾಡಿದ್ದೇನೆ. ಸಕಾಲದಲ್ಲಿ ಮಳೆ ಕೈಕೊಟ್ಟ ಪರಿಣಾಮ ಇಳುವರಿ ತೀರಾ ಕಡಿಮೆಯಾಗಿದೆ ಎಂಬುದಾಗಿ ಹೇಳಿದ್ದನ್ನು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಕೇಂದ್ರದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಆಗ, ಅಮಿತಾಬ್ ಗೌತಮ್, ಬೆಳೆವಿಮೆ ಮಾಡಿಸಿಲ್ಲವೆ? ಎಂಬುದಾಗಿ ಪ್ರಶ್ನಿಸಿದ್ದಕ್ಕೆ, ಕಳೆದ ಬಾರಿ ಬೆಳೆವಿಮೆ ಕಟ್ಟಿದ್ದೆ. ಕಳೆದ ವರ್ಷವೂ ಬೆಳೆನಷ್ಟವಾಗಿತ್ತು, ಈವರೆಗೂ ಪರಿಹಾರ ಬಂದಿಲ್ಲ. ಹಾಗಾಗಿ ನಾವು ಈ ಬಾರಿ ವಿಮೆ ಮೊತ್ತ ಕಟ್ಟಿಲ್ಲ ಎಂದು ಮಂಜುನಾಥ್ ಹೇಳಿದರು. ಆಗ, ಜಿಲ್ಲಾಧಿಕಾರಿ, ವಿಮಾ ಕಂಪನಿಗಳು 4.19 ಕೋಟಿ ಪರಿಹಾರ ಬಾಕಿ ಉಳಿಸಿಕೊಂಡಿವೆ.
ಬೆಳೆವಿಮೆ ಸಂಬಂಧ ಕೆಲವು ನಿಯಾಮಾವಳಿಗಳಿದ್ದು, ಅದರ ಪ್ರಕಾರ ಪರಿಹಾರ ಬಿಡುಗಡೆ ಮಾಡಲಿವೆ. ಹಾಗಾಗಿ ರೈತರು ವಿಮಾ ಕಂಪನಿಗಳ ಬಗ್ಗೆ ನಂಬಿಕೆ ಹೊಂದಿಲ್ಲ. ಆದ್ದರಿಂದ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ವಿಮೆ ಕಂತು ಪಾವತಿಸಿಲ್ಲ ಎಂದು ಹೇಳಿದರು.
ರಾಮಪ್ಪ ಎಂಬುವರ ಜಮೀನಿನಲ್ಲಿ ತೊಗರಿ ಬೆಳೆ ವೀಕ್ಷಿಸಿದ ಅಧಿಕಾರಿಗಳು, ನಂತರ ಅದೇ ಗ್ರಾಮದ ಕೊಟ್ರಪ್ಪ ಎಂಬುವರ ಜಮೀನಿನಲ್ಲಿ ರಾಗಿ ಬೆಳೆ ಪರಿಶೀಲಿಸಿ, ಎಕರೆಗೆ ಎಷ್ಟು ಇಳುವರಿ ಬರುತ್ತದೆ ಎಂದು ಕೇಳಿದಾಗ, ರೈತ ಕೊಟ್ರಪ್ಪ ಎಕರೆಗೆ 9 ಕ್ವಿಂಟಾಲ್ ರಾಗಿ ಬೆಳೆಯುತ್ತೇವೆ ಎಂದು ಹೇಳಿದರು. ಅದು ಹೇಗೆ ಸಾಧ್ಯ 5 ಕ್ವಿಂಟಾಲ್ ಸಿಕ್ಕರೆ ಹೆಚ್ಚಲ್ಲವೆ? ಎಂದು ತಂಡ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದಾಗ, ಹರಪನಹಳ್ಳಿ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಆರ್.ತಿಪ್ಪೇಸ್ವಾಮಿ, ಈ ಭಾಗದಲ್ಲಿ ಸಕಾಲದಲ್ಲಿ ಮಳೆಯಾದಲ್ಲಿ 13 ಕ್ವಿಂಟಾಲ್ ರಾಗಿ ಬೆಳೆದ ಉದಾಹರಣೆಗಳಿವೆ ಎಂದು ಹೇಳಿದರು.
ಅಲ್ಲಿಂದ ಮುಂದೆ ಸಾಗಿದ ಕೇಂದ್ರ ಬರ ಅಧ್ಯಯನ ತಂಡ, ಸುಭಾನ್ ಸಾಬ್ ಎಂಬುವರ ಜಮೀನಿಗೆ ತೆರಳಿತು. 7.35 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ಒಣಗಿದ್ದು ನೋಡಿದ ಅಧಿಕಾರಿಗಳು ಬೆಳೆ ವಿಫಲ ಬಗ್ಗೆ ರೈತನನ್ನ ಕೇಳಿದರು. ಮಳೆ ಅಭಾವದಿಂದ ಬೆಳೆನಷ್ಟವಾಗಿದೆ. ಮೆಕ್ಕೆಜೋಳ ತೆನೆ ಮುರಿಯುವ ಕೂಲಿ ಕೂಡ ಈ ಬಾರಿಯ ಬೆಳೆಯಿಂದ ಸಿಗುವುದಿಲ್ಲ ಎಂದಾಗ ಬೋರ್‌ವೆಲ್ ಇದೆಯಲ್ಲಾ ಎಂದು ಅಧಿಕಾರಿಯೊಬ್ಬರು ಹೇಳಿದರು.
ಅದರಲ್ಲಿ ನೀರಿಲ್ಲ ಎಂದು ರೈತ ಸುಭಾನ್ ಸಾಬ್ ಉತ್ತರಿಸಿದರು. ಯಾವ ವ್ಯವಸ್ಥೆ ಮಾಡಿದರೆ ನಿಮಗೆ ಅನುಕೂಲ ಆಗಲಿದೆ ಎಂಬುದಾಗಿ ತಂಡದ ಅಧಿಕಾರಿ ಕೇಳಿದಾಗ, ಈ ಭಾಗದಲ್ಲಿ 800 ಅಡಿ ಆಳ ಬೋರ್ ಕೊರೆಯಿಸಿದರೂ ನೀರು ಸಿಗುವುದಿಲ್ಲ. ಇನ್ನು ಮಳೆ ನೆಚ್ಚಿಕೊಳ್ಳುವಂತಿಲ್ಲ. ಹಾಗಾಗಿ ನಮಗೆ ತುಂಗಭದ್ರಾ ನದಿಯಿಂದ ನೀರಿನ ಶಾಶ್ವತ ಸೌಲಭ್ಯ ಕಲ್ಪಿಸಬೇಕು ಎಂದರು.
ಅದೇ ಮಾರ್ಗದಲ್ಲಿ ಮುಂದೆ ಸಾಗಿದ ತಂಡ ಪ್ರಶಾಂತ್ ಎಂಬ ರೈತನ ಜಮೀನಿನಲ್ಲಿ ಹಾಳಾದ ಈರುಳ್ಳಿ, ಮೆಣಸಿನಕಾಯಿ ಬೆಳೆ ವೀಕ್ಷಿಸಿತು. ಎಕರೆಗೆ 15 ಸಾವಿರ ರೂ. ವೆಚ್ಚ ಮಾಡಿದ್ದೇವೆ. ಎಕರೆಗೆ 12 ಟನ್ ಈರುಳ್ಳಿ ಬೆಳೆ ಸಿಗಬೇಕಿತ್ತು. ನಾಲ್ಕು ತಿಂಗಳಿಂದ ನಾವು ಮುಗಿಲು ನೋಡುವುದಷ್ಟೇ ಕೆಲಸ ಆಗಿದೆ. ನೀರಿಲ್ಲದೇ ಬೆಳೆ ಹಾಳಾಗಿದೆ. ಗಡ್ಡೆ ದಪ್ಪ ಆಗದಿದ್ದರಿಂದ ಈರುಳ್ಳಿ ತೆಗೆದಿಲ್ಲ ಎಂದು ಹೊಲದ ಮಾಲೀಕರು ಹೇಳಿದರು. ಇದನ್ನು ಏನು ಮಾಡುವಿರಿ ಹೊಲದಲ್ಲಿದ್ದ ಈರುಳ್ಳಿ ಕೈಯಲ್ಲಿಡಿದು ಅಧಿಕಾರಿಯೊಬ್ಬರು ಕೇಳಿದಾಗ, ಈ ಈರುಳ್ಳಿ ಮನೆಗೆ ಉಪಯೋಗಿಸಲಿದ್ದೇವೆ ಎಂದು ಉತ್ತರಿಸಿದರು.
ಮಧ್ಯಾಹ್ನ ಊಟದ ನಂತರ ಜಗಳೂರು ತಾಲೂಕಿನತ್ತ ಪ್ರಯಾಣಿಸಿದ ತಂಡ, ತಾಲೂಕಿನ ಬಸವನಕೋಟೆ ಮಂಜಪ್ಪ ಎಂಬುವರ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆ ಪರಿಶೀಲಿಸಿ, ಮೆಕ್ಕೆಜೋಳ ಬದಲಿಗೆ ಬೇರೆ ಬೆಳೆ ಏಕೆ ಬೆಳೆಯುವುದಿಲ್ಲ ಎಂದು ಅಧಿಕಾರಿ ಪ್ರಶ್ನಿಸಿದರು. ರೈತ ಮಂಜಪ್ಪ, ನಮ್ಮ ತಾಲೂಕು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ಹೀಗಾಗಿ ಕಡಿಮೆ ತೇವಾಂಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ ಎಂದು ಹೇಳಿದರು.
ನಂತರ ಅಸಗೋಡು ಗ್ರಾಮದ ಹುಲಿಗಪ್ಪ ಎಂಬುವರ ಜಮೀನಿನಲ್ಲಿ ಸರಿಯಾಗಿ ಬೆಳೆಯದ ಹತ್ತಿ ಬೆಳೆ ಪರಿಶೀಲಿಸಿದ ಅಧಿಕಾರಿಗಳು, ಬಿತ್ತನೆಗೆ ಹತ್ತಿ ಬೀಜ ಎಲ್ಲಿ ಖರೀದಿಸಿದ್ದೀರಿ? ಅದರ ಮೌಲ್ಯವೇನು ? ಒಂದು ಎಕರೆಗೆ ಎಷ್ಟು ಕ್ವಿಂಟಾಲ್ ಹತ್ತಿ ಬೆಳೆಯಲಾಗುತ್ತಿದೆ? ಹತ್ತಿ ಬೆಳೆಗೆ ವಿಮೆ ಪಾವತಿಸಿದ್ದಾರಾ ಎಂಬ ಮಾಹಿತಿ ಪಡೆದರು.
ನಂತರ ದಾವಣಗೆರೆ ತಾಲೂಕು ಆನಗೋಡಿನ ರೈತ ವಿರುಪಾಕ್ಷಪ್ಪರ ಜಮೀನಿಗೆ ಭೇಟಿ ನೀಡಿ, ಒಣಗಿದ್ದ ಮೆಕ್ಕೆಜೋಳ ಬೆಳೆ ನೋಡಿ, ಎಕರೆಗೆ ಎಷ್ಟು ಇಳುವರಿ ಬರುತ್ತಿತ್ತು ಎಂದು ಅಮಿತಾಬ್ ಗೌತಮ್ ರೈತನನ್ನ ಕೇಳಿದಾಗ, ಎಕರೆಗೆ 35 ಚೀಲ ಮೆಕ್ಕೆಜೋಳ ಬರುತ್ತಿತ್ತು.
ಈ ಬಾರಿ 3 ಚೀಲ ಸಿಗಬಹುದು ಎಂದರು. ಏಕೆ ಹೀಗಾಯ್ತು ಎಂದು ಅಧಿಕಾರಿ ಕೇಳಿದಾಗ, ನೀರಿಲ್ಲದೆ ಎಂದು ರೈತ ಹೇಳಿದರು. ಅವರ ಪಕ್ಕದಲ್ಲೇ ಇದ್ದ ಅಡಿಕೆ ತೋಟ ತೋರಿಸಿದ ಅಧಿಕಾರಿ, ಅದೇಕೆ ಅಷ್ಟು ಹಸಿರಾಗಿದೆ ಎಂದು ಪ್ರಶ್ನಿಸಿದರು. ಅದು ಹತ್ತು ವರ್ಷದ ತೋಟ. ಕಳೆದ ಬಾರಿ ಬೋರ್‌ವೆಲ್‌ನಲ್ಲಿ ನೀರಿಲ್ಲದೆ, ಟ್ಯಾಂಕರ್‌ವೊಂದಕ್ಕೆ ಸಾವಿರ ರೂ. ಕೊಟ್ಟು, ಹನಿ ನೀರಾವರಿಯಿಂದ ಆ ತೋಟ ಉಳಿಸಿಕೊಳ್ಳಲಾಗಿದೆ. ನೀರಿನ ಕೊರತೆಯಿಂದ ಸುತ್ತ ಮುತ್ತಲಿನ ಕೆಲವು ತೋಟದಲ್ಲಿ ಅಡಿಕೆ ಮರ ಕಡಿಯಲಾಗಿದೆ ಎಂದು ರೈತರು ಅಧಿಕಾರಿಗಳ ಗಮನ ಸೆಳೆದರು.
ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ಅಮಿತಾಬ್ ಗೌತಮ್ ಜತೆ ಡಿ.ಕೆ. ಶ್ರೀವಾಸ್ತವ, ಎಸ್ .ಸಿ. ಶರ್ಮಾ ಸಹ ರೈತರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್, ರೈತರ ಸಂಕಷ್ಟ ಮತ್ತು ಅಗತ್ಯತೆ ಬಗ್ಗೆ ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಅಶ್ವತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ, ಹರಪನಹಳ್ಳಿ ತಾ.ಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪವಿಭಾಗಾಧಿಕಾರಿ ಪಾಂಡ್ವೆ ರಾಹುಲ್ ತುಕಾರಾಂ, ದಾವಣಗೆರೆ ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್ ಸಂತೋಷಕುಮಾರ್, ಹರಪನಹಳ್ಳಿ ತಹಶೀಲ್ದಾರ್ ಶಿವಶಂಕರ ನಾಯ್ಕ, ಸಹಾಯಕ ಕೃಷಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ, ಜಗಳೂರು ತಹಶೀಲ್ದಾರ್ ಶ್ರೀಧರಮೂರ್ತಿ, ತಾಪಂ ಇಓ ಜಾನಕಿರಾಮ್, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ರಂಗಪ್ಪ, ಕೃಷಿ ಸಹಾಯಕ ನಿರ್ದೇಶಕ ಕೆ.ಟಿ. ಬಸಣ್ಣ ಇತರರು ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.