ಸಿಎಂ ಮಾತಿಗೆ ರೈತರ ಆಕ್ರೋಶ-ರಸ್ತೆ ತಡೆ
Team Udayavani, Nov 20, 2018, 4:30 PM IST
ದಾವಣಗೆರೆ: ಕಬ್ಬಿನ ಬಾಕಿ ಪಾವತಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ರೈತರು, ಮಹಿಳೆಯರ ಬಗ್ಗೆ ಮುಖ್ಯಮಂತ್ರಿ
ಕುಮಾರಸ್ವಾಮಿ ಅತಿ ಕೀಳಾಗಿ, ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ದಿಢೀರ್ ರಸ್ತೆ ತಡೆ ನಡೆಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 4 ವರ್ಷದಿಂದ ಬಾಕಿ ಇರುವ ಕಬ್ಬಿನ ಬಾಕಿ ಪಾವತಿಗೆ ಒತ್ತಾಯಿಸಿ ಬೆಳಗಾವಿಯಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಗೂಂಡಾಗಳು ಎಂಬುದಾಗಿ ಕರೆದಿರುವುದು ಅತ್ಯಂತ ಖಂಡನೀಯ. ನ್ಯಾಯಯುತ ಬೇಡಿಕೆಗೆ ಒತ್ತಾಯಿಸಿ ಹೋರಾಟ ನಡೆಸುವಂತಹ ಅನ್ನದಾತರನ್ನೇ ಗುರುತರ ಸ್ಥಾನದಲ್ಲಿರುವವರು ಗೂಂಡಾಗಳು ಎಂದು ಕರೆಯುವುದು ಅವರ ಬೇಜವಾಬ್ದಾರಿತನ ತೋರಿಸುತ್ತದೆ. ರೈತರು ಮತ್ತು ಹೋರಾಟಗಾರರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಪ್ರತಿಭಟನಾಕಾರರು ತಾಕೀತು ಮಾಡಿದರು.
ಮಹಿಳೆಯರ ಬಗ್ಗೆ ಅಪಾರ ಗೌರವ ಇದೆ ಎಂದೇಳುವ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಳಗಾವಿಯಲ್ಲಿ ಹೋರಾಟ ನಡೆಸುತ್ತಿದ್ದ ನೈತಿಕತೆಯನ್ನೇ ಪ್ರಶ್ನಿಸುವಂತಹ ಅವಹೇಳನಕಾರಿ ಶಬ್ದ ಬಳಸುವ ಮೂಲಕ ರೈತ ಮಹಿಳೆಗೆ ಅಪಮಾನ ಮಾಡಿದ್ದಾರೆ. ಮಾಜಿ ಪ್ರಧಾನಿ ಕುಟುಂಬದಿಂದ ಬಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ರೈತ ಮಹಿಳೆಯ ಕುರಿತಾಗಿ ಆ ರೀತಿ ಮಾತನಾಡಿರುವುದು ಅತ್ಯಂತ ಖಂಡನೀಯ. ಅವರು ಕೂಡಲೇ ಬಹಿರಂಗ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ಕುಮಾರಸ್ವಾಮಿ ತಮ್ಮ ಸರ್ಕಾರ ರೈತರ ಪರ ಎಂದು ಹೇಳುತ್ತಾರೆ. ಆದರೆ, ರೈತರ ಯಾವುದೇ ಬೇಡಿಕೆಗೆ ಸರಿಯಾಗಿ ಸ್ಪಂದಿಸುವುದೇ ಇಲ್ಲ, ಮಹದಾಯಿ, ಮೆಕ್ಕೆಜೋಳ, ಭತ್ತದ ಖರೀದಿ ಕೇಂದ್ರ, ಮುಖ್ಯವಾಗಿ ಸಾಲ ಮನ್ನಾ ಯೋಜನೆ… ಹೀಗೆ ಹಲವಾರು ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಇಲ್ಲ. ಅಂತಹ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರು, ಹೋರಾಟದ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ರೈತರು ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡುವುದು ಗೂಂಡಾಗಿರಿ ಎನ್ನುತ್ತಾರೆ. ಆದರೆ, ರೈತರು ಎಂದಿಗೂ ಗೂಂಡಾಗಳಲ್ಲ ಎಂದರು.
ಕಳೆದ ಹಲವಾರು ದಿನಗಳಿಂದ ರೈತರು ಕಬ್ಬಿನ ಬಾಕಿ ಪಾವತಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದರು. ಸೋಮವಾರ ತಾವೇ ಬೆಳಗಾವಿಗೆ ಬಂದು ರೈತರೊಂದಿಗೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು.
ಇದ್ದಕ್ಕಿದ್ದಂತೆ ನಾನು ಬೆಳಗಾವಿಗೆ ಬರುವುದೇ ಇಲ್ಲ. ರೈತರೇ ಮಂಗಳವಾರ ಬೆಂಗಳೂರಿಗೆ ಬರಬೇಕು ಎಂಬುದಾಗಿ ಹೇಳಿದ್ದರಿಂದ ಕುಪಿತಗೊಂಡ ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ತಪ್ಪು ನಡೆದಿರಬಹುದು. ಅಂದ ಮಾತ್ರಕ್ಕೆ ಅವರನ್ನ ಗೂಂಡಾಗಳು, ಹೊಲದಲ್ಲಿ ಕೆಲಸ ಮಾಡದೇ ಇದ್ದವರು ಎಂದು ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಪ್ರತಿಭಟನಾಕಾರರು, ಕುಮಾರಸ್ವಾಮಿ ಏನು ನೋಟಿನ ಪ್ರಿಂಟಿಂಗ್ ಮಿಷಿನ್ ಇಟ್ಟುಕೊಂಡಿದ್ದಾರಾ ಎಂದು ಲೋಕೋಪಯೋಗಿ ಇಲಾಖೆ ಸಚಿವ ರೇವಣ್ಣ ಪ್ರಶ್ನಿಸಿದ್ದಾರೆ. ರೈತರಿಗೆ ನೋಟಿನ ಮಿಷನ್ ಗೊತ್ತಿಲ್ಲ. ಅಂತದ್ದೇನಿದ್ದರೂ ರೇವಣ್ಣನಂತಹ ದೊಡ್ಡವರಿಗೆ ಗೊತ್ತು ಎಂದು ವ್ಯಂಗ್ಯವಾಡಿದರು.
ಕಬ್ಬು ಒಳಗೊಂಡಂತೆ ರೈತರ ಸಮಸ್ಯೆಗಳ ಬಗ್ಗೆ ಮಂಗಳವಾರ ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಪ್ರತಿ ಜಿಲ್ಲೆಯಿಂದ ರೈತ ಮುಖಂಡರನ್ನು ಆಹ್ವಾನಿಸಲಾಗುವುದು ಎಂದು ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ರೈತರಿಗೆ ಸಭೆಯ ಬಗ್ಗೆ ಯಾವುದೇ ಮಾಹಿತಿಯೇ ಇಲ್ಲ. ಈ ಕ್ಷಣದವರೆಗೆ ಸಭೆಗೆ ಕರೆದೊಯ್ಯುವ ಬಗ್ಗೆ ತಿಳಿಸಿಲ್ಲ ಎನ್ನುವುದು ರೈತರ ಕಾಳಜಿ ತೋರಿಸುತ್ತದೆ ಎಂದು ದೂರಿದರು. ಜಿಲ್ಲಾಧಿಕಾರಿ ಇಲ್ಲವೇ ತಹಶೀಲ್ದಾರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದಪ್ಪ, ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಕರೆದೊಯ್ಯುವ ವಿಚಾರವಾಗಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸೂಕ್ತ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರನಾಯ್ಕ, ಚಿಕ್ಕನಹಳ್ಳಿ ಮಲ್ಲೇಶಪ್ಪ, ಆವರಗೆರೆ ಬಸವರಾಜ್, ಹೊನ್ನೂರು ರಾಜಣ್ಣ, ಕಬ್ಬೂರು ಸಂತೋಷ್‌ಕುಮಾರ್, ಕರೇಕಟ್ಟೆ ಖಲೀಂ, ಮಲ್ಲೇನಹಳ್ಳಿ ಅಜ್ಜಯ್ಯ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.