ಶುದ್ಧ ನೀರು-ಮೇವು-ಕೆಲಸ ಕೊಡಿ


Team Udayavani, Jan 14, 2019, 5:33 AM IST

dvg-1.jpg

ದಾವಣಗೆರೆ: ಬರಪೀಡಿತ ಗ್ರಾಮಗಳಲ್ಲಿ ಶುದ್ಧ ನೀರು ಘಟಕಗಳ ಸ್ಥಾಪನೆ…, ಮೇವು ಬೆಳೆಯಲು ಪ್ರೋತ್ಸಾಹ…, ಗುಳೇ ತಡೆಯುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚು ಕೆಲಸ ಒದಗಿಸುವುದು. ಇವು ಕೃಷಿ ಸಚಿವ ಶಿವಶಂಕರ ರೆಡ್ಡಿ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ಭಾನುವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಬರ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿ ವರ್ಗಕ್ಕೆ ನೀಡಿದ ಕೆಲವಾರು ಸಲಹೆಗಳು.

ಅತಿ ಹೆಚ್ಚಿನ ನೀರಿನ ಸಮಸ್ಯೆ ಎದುರಿಸುತ್ತಿರುವ ಜಗಳೂರು ತಾಲೂಕಿನ 18 ಗ್ರಾಮಗಳಿಗೆ ಪ್ರತಿ ದಿನ 20 ಟ್ಯಾಂಕರ್‌, ದಾವಣಗೆರೆ ತಾಲೂಕಿನ 11 ಗ್ರಾಮಗಳಲ್ಲಿ 11 ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಜಗಳೂರು ತಾಲೂಕಿನ 25 ಹಳ್ಳಿಗಳಲ್ಲಿ ಒಟ್ಟು 35 ಬೋರ್‌ವೆಲ್‌ ಬಾಡಿಗೆ, ಹೊನ್ನಾಳಿಯ 5 ಗ್ರಾಮಗಳಲ್ಲಿ 6 ಬೋರ್‌, ದಾವಣಗೆರೆ ತಾಲೂಕಿನ 2 ಗ್ರಾಮಗಳಲ್ಲಿ 2 ಕೊಳವೆಬಾವಿ ಬಾಡಿಗೆ ಪಡೆದು ನೀರು ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಸಭೆಯ ಗಮನಕ್ಕೆ ತಂದರು.

ಟ್ಯಾಂಕರ್‌ನಲ್ಲಿ ಪೂರೈಕೆ ಮಾಡಲಾಗುತ್ತಿರುವ ನೀರು ಗೃಹಬಳಕೆಗೆ ಯೋಗ್ಯವಾಗಿದೆ. ಆದರೆ, ಮುಖ್ಯವಾಗಿ ಜಗಳೂರು ತಾಲೂಕಿನ ಗ್ರಾಮಗಳಲ್ಲಿ ಫ್ಲೋರೈಡ್‌ ನೀರಿನ ಸಮಸ್ಯೆ ಇದೆ. ಜನರು ಸಹ ಫ್ಲೋರೈಡ್‌ ನೀರು ಒದಗಿಸಲಾಗುತ್ತಿದೆ ಎಂಬ ದೂರು ಹೇಳುತ್ತಿದ್ದಾರೆ. ಎಲ್ಲಾ ಕಡೆ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಿ, ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಸಚಿವರಾದ ಶಿವಶಂಕರ ರೆಡ್ಡಿ, ವೆಂಕಟರಮಣಪ್ಪ, ಡಿ.ಸಿ. ತಮ್ಮಣ್ಣ ಸಲಹೆ ನೀಡಿದರು.

ಎಲ್ಲಿಯೂ ಫ್ಲೋರೈಡ್‌ ನೀರು ಸರಬರಾಜು ಮಾಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಹೇಳಿದರು. ಇಲ್ಲಿ ಹೆಚ್ಚಾಗಿ ಇರುವುದೇ ಫ್ಲೋರೈಡ್‌ ನೀರು. ಇನ್ನು ಎಲ್ಲಿಂದ ಶುದ್ಧ ಕುಡಿಯುವ ನೀರು ಕೊಡುತ್ತಾರೆ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ಪ್ರಶ್ನಿಸಿದರು. ಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಪ್ರಾರಂಭಿಸಿ ಶುದ್ಧ ನೀರು ಪೂರೈಕಗೆ ವ್ಯವಸ್ಥೆ ಮಾಡಬೇಕು. ಕೊಳವೆಬಾವಿ ಎಂದರೆ 800 ಅಡಿಗೆ ಮಾತ್ರ ಸೀಮಿತವಾಗಿ ಕೊರೆಯಲಾಗುತ್ತದೆ. ತುಮಕೂರು, ಚಿಕ್ಕಬಳ್ಳಾಪುರ ಕಡೆ 1 ಸಾವಿರ, 1,200 ಅಡಿಯವರೆಗೆ ಬೋರ್‌ ಕೊರೆಸಲಾಗುತ್ತಿದೆ. ಇಲ್ಲಿಯೂ ಅದೇ ರೀತಿ ಬೋರ್‌ ಕೊರೆಸಿ, ನೀರು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌(ವಾಸು) ತಿಳಿಸಿದರು.

ಕೊಳವೆಬಾವಿ ಏಜೆನ್ಸಿಯವರು 750 ಅಡಿಯವರೆಗೆ ಮಾತ್ರ ಕೊರೆಯುತ್ತಾರೆ. ಅದಕ್ಕಿಂತಲೂ ಒಂದು ಅಡಿ ಹೆಚ್ಚಿಗೆ ಕೊರೆಯುವುದೇ ಇಲ್ಲ. ಖುದ್ದು ನಾನು ಸ್ಥಳದಲ್ಲೇ ಇದ್ದರೂ ಬೋರ್‌ ಕೊರೆಯದೇ ಅರ್ಧಕ್ಕೆ ವಾಪಸ್ಸಾದರು ಎಂದು ಜಿಲ್ಲಾ ಪಂಚಾಯತ್‌ ಪ್ರಭಾರ ಅಧ್ಯಕ್ಷೆ ಜೆ. ಸವಿತಾ ತಿಳಿಸಿದರು. ನೀರು ದೊರೆಯುವ ತನಕ ಬೋರ್‌ ಕೊರೆಯುವ ವ್ಯವಸ್ಥೆ ಮಾಡಬೇಕು. ಕೊಳವೆಬಾವಿ ಫೇಲ್‌ ಆದಲ್ಲಿ ರೀ-ಬೋರ್‌ ಮಾಡಿಸಬೇಕು. 25ರ ಒಳಗೆ ವರದಿ ಸಲ್ಲಿಸುವಂತೆ ಎಂದು ಸಚಿವ ಎಸ್‌.ಆರ್‌, ಶ್ರೀನಿವಾಸ್‌(ವಾಸು) ಜಿಲ್ಲಾಧಿಕಾರಿಗೆ ಸೂಚಿಸಿದರು.

ಕೆಲವು ಗ್ರಾಮದಲ್ಲಿ ಪೈಪ್‌ಲೈನ್‌ ಒಡೆದಿದೆ ಎಂದು ಹೊಸ ಪೈಪ್‌ಲೈನ್‌ಗೆ ಎಸ್ಟಿಮೇಟ್ ಮಾಡುವುದಿದೆ. ಹಾಗೆ ಮಾಡದೆ ಎಷ್ಟು ಪೈಪ್‌ ಒಡೆದಿರುತ್ತದೋ ಅಷ್ಟೇ ದುರಸ್ತಿ ಮಾಡಬೇಕು ಎಂದು ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು. ಜಿಲ್ಲೆಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕುಡಿಯುವ ನೀರಿಗಾಗಿಯೇ 50 ಲಕ್ಷ ಬಿಡುಗಡೆ ಮಾಡಲಾಗದೆ. ಈಗ ಮತ್ತೆ 50 ಲಕ್ಷ ಘೋಷಣೆ ಮಾಡಲಾಗಿದ್ದು, 25 ಲಕ್ಷದಂತೆ ಬಿಡುಗಡೆ ಮಾಡಲಾಗಿದೆ. 5 ಕೋಟಿ ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಚಿಕ್ಕಬಳ್ಳಾಪುರ ಇತರೆಡೆ ಕೆರೆ ಒತ್ತುವರಿ ತೆರವುಗೊಳಿಸಿ ಸಾಕಷ್ಟು ಜಾಗವನ್ನು ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆ ಜಿಲ್ಲೆಯಲ್ಲೂ ಕೆರೆ ಒತ್ತುವರಿ ತೆರವಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಕೆರೆ ಒತ್ತುವರಿ ತೆರವು ಮಾಡಿರುವ ಬಗ್ಗೆ ಪ್ರತಿ ತಿಂಗಳು ವರದಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌(ವಾಸು) ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ಗೆ ಸೂಚಿಸಿದರು.

ಕೃಷಿ ಹೊಂಡ ನಿರ್ಮಾಣ ಮಾಡುವುದರಿಂದ ನೀರು ಸಂರಕ್ಷಣೆಗೆ ಸಾಕಷ್ಟು ಅನುಕೂಲ ಆಗುತ್ತದೆ. ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಹೇಳಿದರು. ಜಿಲ್ಲೆಯಲ್ಲಿ 3 ಸಾವಿರ ಕೃಷಿ ಹೊಂಡ ಗುರಿಯಲ್ಲಿ 1,520 ನಿರ್ಮಾಣ ಮಾಡಲಾಗಿದೆ. ಜಗಳೂರುನಲ್ಲಿ 373 ಕೃಷಿ ಹೊಂಡ ನಿರ್ಮಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಬಿ. ಮುದಗಲ್‌ ತಿಳಿಸಿದರು.

ಬರದಿಂದ ಬೆಳೆ ಕಳೆದುಕೊಂಡಿರುವ ರೈತರಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಎಂದು ವಿಂಗಡಿಸಿ ಮಾಹಿತಿ ನೀಡುವುದರಿಂದ ಪರಿಹಾರ ಒದಗಿಸಲು ಸಹಾಯವಾಗುತ್ತದೆ. ಜ. 21ರ ಒಳಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಮಹೇಶ್ವರರಾವ್‌ ಜಿಲ್ಲಾಧಿಕಾರಿಗೆ ಸೂಚಿಸಿದರು. ಆದಷ್ಟು ಬೇಗ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ದಾವಣಗೆರೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೇನೂ ಇಲ್ಲ. ಒಂದೊಮ್ಮೆ ಸಮಸ್ಯೆ ಕಂಡುಬಂದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ದಾವಣಗೆರೆ ನಗರಕ್ಕೆ ಸಂಬಂಧಿಸಿದಂತೆ 3 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ದಾವಣಗೆರೆಯಲ್ಲೇ ನೀರಿನ ಸಮಸ್ಯೆ ಇದೆ ಎಂದರೆ ದೂರದವರ ಗತಿ ಏನು? ದಾವಣಗೆರೆಯವರಿಗೆ ಹೇಗೋ ನೀರು ಸಿಕ್ಕುತ್ತದೆ, ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಹೇಳಿದರು. ಅವರು(ದೂರದವರು) ಹೊಂದಿಕೊಂಡು ಬಿಟ್ಟಿದ್ದಾರೆ. ಆದರೆ, ದಾವಣಗೆರೆಯವರು ಹೊಂದಿಕೊಳ್ಳುವುದು ಕಷ್ಟ. ಹಾಗಾಗಿ ದಾವಣಗೆರೆಗೆ ಸಂಬಂಧಿಸಿದಂತೆಯೇ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಬರ, ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ವಿಧಾನ ಪರಿಷತ್‌ ಸದಸ್ಯ ಕೆ. ಅಬ್ದುಲ್‌ ಜಬ್ಟಾರ್‌, ಮೇಯರ್‌ ಶೋಭಾ ಪಲ್ಲಾಗಟ್ಟೆ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಎಸ್‌. ಅಶ್ವತಿ, ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಇತರರು ಇದ್ದರು.

ಐದು ವರ್ಷ ಸಮ್ಮಿಶ್ರ ಸರ್ಕಾರ ಸುಭದ್ರ
ದಾವಣಗೆರೆ:
ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಬಿಜೆಪಿಗೆ ಹೋಗುವುದಿಲ್ಲ. ಪಕ್ಷದ ಮುಖಂಡರು ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಕೃಷಿ ಸಚಿವ ಎನ್‌.ಜೆ. ಶಿವಶಂಕರರೆಡ್ಡಿ ತಿಳಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್‌ ಜಾರಕಿಹೊಳಿ ಬಿಜೆಪಿಗೆ ಹೋಗುವುದಿಲ್ಲ. ಮೈತ್ರಿ ಸರ್ಕಾರ 5 ವರ್ಷ ಸುಭದ್ರವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿ.ಎಸ್‌. ಯಡಿಯೂರಪ್ಪ ಅವರು ಹಿಂದಿನಿಂದಲೂ ಸರ್ಕಾರ ರಚನೆ ಮಾಡುವ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಅವರಿಗೇ ಅವಕಾಶ ಸಿಕ್ಕಾಗ ಮುಖ್ಯಮಂತ್ರಿಯಾಗಿ ಮುಂದುವರೆಯಲಿಕ್ಕೆ ಆಗಲಿಲ್ಲ. ಅವರು ಅಂದುಕೊಂಡಿರುವಂತೆ ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾರ್ಮಿಕ ಸಚಿವ ಕೆ. ವೆಂಕಟರಮಣಪ್ಪ ಮಾತನಾಡಿ, ಸಂಕ್ರಾಂತಿ ನಂತರ ರಾಜ್ಯ ರಾಜಕೀಯದಲ್ಲಿ ಯಾವ ಕ್ರಾಂತಿಯೂ ಆಗೊಲ್ಲ. ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದರು.

497 ಕೋಟಿ ಅಂದಾಜು ಹಾನಿ
ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯ ಕೊರತೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ಒಟ್ಟು ಹಾನಿ ಪ್ರಮಾಣ 497,31 ಕೋಟಿ. ಪರಿಹಾರ ಕೋರಿರುವುದು 90.37 ಕೋಟಿ. ಮುಂಗಾರು ಹಂಗಾಮಿನಲ್ಲಿ 16 ಮಿಲಿ ಮೀಟರ್‌ ಮಳೆ ಕೊರತೆ ಕಂಡು ಬಂದರೆ, ಹಿಂಗಾರು ಹಂಗಾಮಿನಲ್ಲಿ 6 ಮಿಲಿ ಮೀಟರ್‌ ಮಳೆ ಕೊರತೆ ಆಗಿದೆ. ಒಟ್ಟಾರೆ ಜ. 1 ರಿಂದ ಡಿ. 31ರವರೆಗೆ ಆಗಬೇಕಾಗಿದ್ದ ಮಳೆ ಪ್ರಮಾಣ 553 ಮಿಲಿ ಮೀಟರ್‌. ಆಗಿರುವುದು 521 ಮಿಲಿ ಮೀಟರ್‌. ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 645 ಮಿಲಿ ಮೀಟರ್‌ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಮಾಹಿತಿ ನೀಡಿದರು.

ಗುಳೇ ತಪ್ಪಿಸಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕಾ ಬೆಳೆ, ಅಂಗನವಾಡಿ ಕಟ್ಟಡ ನಿರ್ಮಾಣ, ಚೆಕ್‌ಡ್ಯಾಂ ನಿರ್ಮಾಣ ಮಾಡಬಹುದು. ಆದರೆ, ಅನೇಕರಿಗೆ ಮಾಹಿತಿಯೇ ಇಲ್ಲ. ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಜನರಿಗೆ ಹೆಚ್ಚಿನ ಕೆಲಸ ನೀಡುವ ಮೂಲಕ ಗುಳೇ ಹೋಗುವುದನ್ನು ತಪ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌(ವಾಸು) ಸೂಚಿಸಿದರು. ಹಳ್ಳಿಗಳಲ್ಲಿ ಟಾಂಟಾಂ ಮೂಲಕ ಹೆಚ್ಚಿನ ಪ್ರಚಾರ ನೀಡಲಾಗುತ್ತಿದೆ. ಕೆಲಸದ ಮಾನವ ದಿನಗಳನ್ನು 100 ರಿಂದ 150 ದಿನಕ್ಕೆ ಹೆಚ್ಚಿಸಲಾಗಿದೆ. ಕೂಲಿ ನೀಡಲು ಅನುದಾನದ ಕೊರತೆ ಇದೆ. ಬಂದ ತಕ್ಷಣ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಟಾಂಟಾಂ ಜೊತೆಗೆ ಉದ್ಯೋಗ ಖಾತರಿ ಯೋಜನೆ ಸೌಲಭ್ಯದ ಬಗ್ಗೆ ಕರಪತ್ರಗಳ ವಿತರಣೆ ಮಾಡಬೇಕು ಎಂದು ತಿಳಿಸಿದರು.

24 ಗೋಶಾಲೆಗೆ ಪ್ರಸ್ತಾವನೆ
ಜಿಲ್ಲೆಯಲ್ಲಿ 23 ವಾರಕ್ಕೆ ಆಗುವಷ್ಟು ಮೇವಿನ ಲಭ್ಯತೆ ಇದೆ. 50 ಸಾವಿರ ಮೇವಿನ ಕಿಟ್‌ಗಳಲ್ಲಿ 35 ಸಾವಿರ ಕಿಟ್ ನೀಡಲಾಗಿದೆ. ಮುಂಜಾಗ್ರತಾ ದೃಷ್ಟಿಯಿಂದ 24 ಗೋಶಾಲೆ, 42 ಮೇವಿನ ಬ್ಯಾಂಕ್‌ ಪ್ರಾರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮೇವಿನ ಕಿಟ್ ನೀಡಬೇಕು. ಮೇವು ಬೆಳೆಯಲು ಹೆಚ್ಚಿನ ಪ್ರೋತ್ಸಾಹ ನೀಡುವ ಜೊತೆಗೆ ಸರ್ಕಾರದಿಂದಲೇ ಮೇವನ್ನು ಇಷ್ಟು ದರಕ್ಕೆ ಖರೀದಿ ಮಾಡಲಾಗುವುದು ಎಂದು ತಿಳಿಸಿದರೆ ಅನುಕೂಲ ಆಗುತ್ತದೆ. ಮೇವು ಬೆಳಯಲಿಕ್ಕೇ ಮೂರು ತಿಂಗಳು ಬೇಕು. ಇವತ್ತು ಹಾಕಿ, ನಾಳೆಯೇ ಮೇವು ಬೆಳೆಯಲಿಕ್ಕೆ ಆಗುವುದೇ ಇಲ್ಲ. ಹಾಗಾಗಿ ಮೇವಿನ ಕಿಟ್ ವಿತರಣೆ ಜೊತೆಗೆ ಮೇವು ಬೆಳೆಯಲು ಅಗತ್ಯ ಪ್ರೋತ್ಸಾಹ ನೀಡಬೇಕು ಎಂದು ರವೀಂದ್ರನಾಥ್‌ ಸಲಹೆ ನೀಡಿದರು. ರವೀಂದ್ರನಾಥ್‌ ಸಲಹೆಗೆ ಕೃಷಿ ಸಚಿವ ಶಿವಶಂಕರರೆಡ್ಡಿ ಇತರರು ಸಹಮತ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲೂ ಇಸ್ರೇಲ್‌ ಮಾದರಿ ಕೃಷಿ ಪದ್ಧತಿ
ದಾವಣಗೆರೆ:
ಮುಂದಿನ ದಿನಗಳಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಸಂಬಂಧಿಸಿದಂತೆ ನೂತನ ನೀತಿ ಜಾರಿಗೆ ಬರಲಿದೆ ಎಂದು ಕೃಷಿ ಸಚಿವ ಎನ್‌.ಜೆ. ಶಿವಶಂಕರೆಡ್ಡಿ ತಿಳಿಸಿದ್ದಾರೆ. ಭಾನುವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಪ್ರಗತಿಪರ ರೈತರೊಂದಿಗೆ ನಡೆದ ಸಂವಾದದಲ್ಲಿ ಹೆದ್ನೆ ಗ್ರಾಮದ ಮುರುಗೇಂದ್ರಪ್ಪ, ಆಹಾರ ಸಂಸ್ಕರಣಾ ಘಟಕಗಳಿಗೆ ಇರುವ ನಿವೇಶನದ ಸಮಸ್ಯೆ, ಆದಾಯ ತೆರಿಗೆ ವಿನಾಯತಿ, ಬ್ಯಾಂಕ್‌ಗಳಲ್ಲಿ ಆಪತ್‌ಧನ ರೂಪದಲ್ಲಿ ಸಹಾಯಧನ ಒದಗಿಸಬೇಕು ಎಂದು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಆಹಾರ ಸಂಸ್ಕರಣಾ ಘಟಕಗಳಿಗೆ ಸಂಬಂಧಿಸಿದಂತೆ ನೂತನ ನೀತಿ ಜಾರಿಗೆ ಬರಲಿದೆ.

ನಿವೇಶನ‌ ಒದಗಿಸುವುದು ಒಳಗೊಂಡಂತೆ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನಾಲೆಯಲ್ಲಿ ನೀರು ಹರಿಸುವ ಕೆಲ ದಿನಗಳ ಮುನ್ನವೇ ದುರಸ್ತಿ, ಹೂಳು ತೆಗೆಯುವ ಕೆಲಸ ಮಾಡುವುದರಿಂದ ರೈತರಿಗೆ ತೊಂದರೆ ಆಗುವುದನ್ನು ತಪ್ಪಿಸುವುದು, ಖಾಸಗಿ ಸಂಸ್ಥೆಗಳು ಸಾವಯವ ಕೃಷಿ ಅಭಿವೃದ್ಧಿ ನೆಪದಲ್ಲಿ ನಿಜವಾದ ರೈತರಿಗೆ ವಂಚನೆ ಮಾಡುವುದು ತಪ್ಪಿಸಬೇಕು. ನಾಲಾ ಬದಿಯಲ್ಲಿ ಸೌರ ವಿದ್ಯುತ್‌ ಫಲಕ ಅಳವಡಿಸಿ, ಉತ್ಪಾದಿಸಿದ ವಿದ್ಯುತ್‌ನ್ನ ರೈತರಿಗೆ ವಿತರಿಸುವ ಕೆಲಸ ಮಾಡಬೇಕು ಎಂದು ಕುಕ್ಕುವಾಡ ಗ್ರಾಮದ ಡಿ.ವಿ. ಶಂಕರಮೂರ್ತಿ ಒತ್ತಾಯಿಸಿದರು. ವೈಯಕ್ತಿಕವಾಗಿ ಮತ್ತು ಗುಂಪುಗಳ ಮೂಲಕ ಸಾವಯವ ಕೃಷಿ ಮಾಡುವರಿಗೆ ಉತ್ತೇಜನ ನೀಡಲಾಗುತ್ತಿದೆ ಎಂದ ಕೃಷಿ ಸಚಿವ ಶಿವಶಂಕರ ರೆಡ್ಡಿ, ಸಂಸ್ಥೆಗಳ ಹೆಸರಲ್ಲಿ ನಿಜವಾದ ಸಾವಯವ ಕೃಷಿಕರಿಗೆ ವಂಚನೆ ಮಾಡುತ್ತಿರುವ ಬಗ್ಗೆ ಗಮನ ಹರಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಬಿ. ಮುದಗಲ್‌ಗೆ ಸೂಚಿಸಿದರು. ಮಳೆಹಾನಿಯಿಂದ ಆಗಿರುವ ಬೆಳೆ ನಷ್ಟ ಪರಿಹಾರ ನೀಡುವುದರಲ್ಲಿ ತಾಂತ್ರಿಕತೆಗಿಂತಲೂ ಮಾನವೀಯತೆಗೆ ಹೆಚ್ಚಿನ ಒತ್ತು ನೀಡಬೇಕು.

ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ದೊರೆಯದೇ ಇರುವ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಬೆಳೆ ಪದ್ಧತಿ ಬದಲಾಯಿಸಬೇಕು. ಬೆಳೆದ ಬೆಳೆಗಳಿಗೆ ಧಾರಣೆ ಖಚಿತಪಡಿಸುವಂತಾಗಬೇಕು. ಖರೀದಿ ಕೇಂದ್ರಗಳ ಮೂಲಕ ಆರೋಗ್ಯ ಪೂರ್ಣ ಆಹಾರ ಧಾನ್ಯಗಳ ಖರೀದಿ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಸದಸ್ಯ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್‌ ಒತ್ತಾಯಿಸಿದರು. ಮುಂದೆ ಏನಾದರೂ ಯುದ್ಧ ನಡೆದರೆ ಅದು ನೀರಿಗಾಗಿ. ಆದರೂ, ಜನರು ನೀರಿನ ಮಹತ್ವ ಅರಿಯುತ್ತಿಲ್ಲ. ಹನಿ ನೀರಾವರಿ ಅಳವಡಿಸಿಕೊಳ್ಳದೇ ಹೋದಲ್ಲಿ ಮುಂದೆ ಕೃಷಿಗೆ ನೀರು ದೊರೆಯುವುದೇ ಇಲ್ಲ. ರೈತ ಸಂಘದವರು ಸಹ ನೀರಿನ ಬಳಕೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಸಚಿವ ಡಿ.ಸಿ. ತಮ್ಮಣ್ಣ ಸಲಹೆ ನೀಡಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಇಸ್ರೇಲ್‌ ಮಾದರಿ ಕೃಷಿ ಪದ್ಧತಿ ಅಳವಡಿಸುವ ಬಗ್ಗೆ ಹೇಳುತ್ತಲೇ ಇದ್ದಾರೆ. ಆದರೆ, ಎಲ್ಲಿಯೂ ಅಳವಡಿಸಿಲ್ಲ. ರೈತರ ಇಸ್ರೇಲ್‌ ಪ್ರವಾಸವನ್ನೂ ನಿಲ್ಲಿಸಿದ್ದಾರೆ ಎಂದು ಕೆರೆಯಾಗಳಹಳ್ಳಿಯ ರೈತ ಪ್ರಕಾಶ್‌ ಅಸಮಾಧಾನ ವ್ಯಕ್ತಪಡಿಸಿದರು. ಈಗ 8 ಜಿಲ್ಲೆಯಲ್ಲಿ ಇಸ್ರೇಲ್‌ ಮಾದರಿ ಕೃಷಿ ಪದ್ಧತಿ ಅಳವಡಿಸಲಾಗಿದೆ. ಮುಂದೆ ದಾವಣಗೆರೆ ಜಿಲ್ಲೆ ಸೇರಿದಂತೆ ಎಲ್ಲಾ ಜಿಲ್ಲೆಯಲ್ಲಿ ಹಂತ ಹಂತವಾಗಿ ಅಳವಡಿಸಲಾಗುವುದು. ಮುಂದಿನ ದಿನಗಳಲ್ಲಿ ರೈತರನ್ನ ಇಸ್ರೇಲ್‌ ಪ್ರವಾಸಕ್ಕೆ ಕಳಿಸಿಕೊಡಲಾಗುವುದು ಎಂದು ಸಚಿವ ಶಿವಶಂಕರ ರೆಡ್ಡಿ ತಿಳಿಸಿದರು. ಬಲ್ಲೂರು ರವಿಕುಮಾರ್‌ ಇತರರು ಮಾತನಾಡಿದರು.

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.