ಉತ್ತಮ ಮಳೆ; ಕೃಷಿ ಚಟುವಟಿಕೆ ಚುರುಕು
ಅಧಿಕ ಇಳುವರಿ ನಿರೀಕ್ಷೆಯಲ್ಲಿ ಹೊಲದತ್ತ ರೈತರ ಹೆಜ್ಜೆ
Team Udayavani, May 10, 2022, 2:15 PM IST
ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರುಪೂರ್ವ ಮಳೆ ಸುರಿಯುತ್ತಿದ್ದು ಒಂದೆಡೆ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರುತ್ತಿದ್ದರೆ, ಇನ್ನೊಂದೆಡೆ ಕೃಷಿ ಇಲಾಖೆ ಅಗತ್ಯ ಬೀಜ, ಗೊಬ್ಬರ ದಾಸ್ತಾನು- ವಿತರಣೆಗೆ ಸಿದ್ಧತೆ ನಡೆಸಿದೆ.
ಮುಖ್ಯವಾಗಿ ಮಳೆಯಾಶ್ರಿತ ಬೆಳೆ ಬೆಳೆಯುವ ರೈತರು ಕೃಷಿ ಸಲಕರಣೆ, ಯಂತ್ರೋಪಕರಣಗಳನ್ನು ಸರಿಪಡಿಸಿಕೊಳ್ಳುತ್ತಿದ್ದಾರೆ. ಜತೆಗೆ ಭೂಮಿಯನ್ನು ಶುಚಿಗೊಳಿಸುವ, ಬಿತ್ತನೆಗೆ ಹದಗೊಳಿಸುವ ಕಾರ್ಯ ಶುರು ಮಾಡಿಕೊಂಡಿದ್ದಾರೆ. ಕೃಷಿ ಕಾರ್ಮಿಕರ ಕೊರತೆ ನಡುವೆಯೂ ಕುಟುಂಬದ ಸದಸ್ಯರ ಸಹಕಾರದೊಂದಿಗೆ ಅನ್ನದಾತರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು ಅಗತ್ಯ ಬಿತ್ತನೆಬೀಜ, ಗೊಬ್ಬರ ಖರೀದಿಗೂ ಮುಂದಾಗಿದ್ದಾರೆ.
ಕಳೆದ ಬಾರಿಯಂತೆ ಈ ಬಾರಿಯೂ ಉತ್ತಮ ಮಳೆ ನಿರೀಕ್ಷೆ ಹೊಂದಿರುವ ರೈತರು, ಬೆಳೆ ಬದಲಾವಣೆ ಬಗ್ಗೆಯೂ ಚಿತ್ತ ಹರಿಸಿದ್ದಾರೆ. ಮುಖ್ಯವಾಗಿ ಮೆಕ್ಕೆಜೋಳವನ್ನೇ ಬಿತ್ತನೆ ಮಾಡಿಕೊಂಡು ಬಂದಿದ್ದ ರೈತರು, ಈ ಬಾರಿ ಹತ್ತಿ, ತೊಗರಿಯತ್ತ ಮುಖ ಮಾಡುತ್ತಿದ್ದಾರೆ. ಈರುಳ್ಳಿ ಹೆಚ್ಚಾಗಿ ಬೆಳೆಯುತ್ತಿದ್ದ ಜಗಳೂರು ತಾಲೂಕಿನ ರೈತರು, ‘ಬಿಳಿ ಬಂಗಾರ’ ಖ್ಯಾತಿಯ ಹತ್ತಿ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಜಗಳೂರು ತಾಲೂಕಿನಲ್ಲಿ ಹತ್ತಿ ಬಿತ್ತನೆ ಬೀಜ ಹೆಚ್ಚು ಮಾರಾಟವಾಗಿದೆ.
ಬಿತ್ತನೆ ಬೀಜ ದಾಸ್ತಾನು
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 42,233 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆಯಿದ್ದು, ಇಲಾಖೆ 6335 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಿಟ್ಟುಕೊಂಡಿದೆ. ಇದರಲ್ಲಿ ಈಗಾಗಲೇ 127 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವೂ ಆಗಿದೆ. ಮುಂಗಾರು ಹಂಗಾಮಿಗಾಗಿ ದಾವಣಗೆರೆ ತಾಲೂಕಿನಲ್ಲಿ 30 ಕ್ವಿಂಟಲ್, ಹರಿಹರ ತಾಲೂಕಿನಲ್ಲಿ 21 ಕ್ವಿಂಟಲ್, ಜಗಳೂರು ತಾಲೂಕಿನಲ್ಲಿ 29 ಕ್ವಿಂಟಲ್, ಹೊನ್ನಾಳಿ ತಾಲೂಕಿನಲ್ಲಿ 26 ಕ್ವಿಂಟಲ್, ಚನ್ನಗಿರಿ ತಾಲೂಕಿನಲ್ಲಿ 21 ಕ್ವಿಂಟಲ್ ಬಿತ್ತನೆ ಬೀಜವನ್ನು ರೈತರು ಈಗಾಗಲೇ ಖರೀದಿಸಿದ್ದಾರೆ. ದಾವಣಗೆರೆ ತಾಲೂಕಿನಲ್ಲಿ 1474 ಕ್ವಿಂಟಲ್, ಹರಿಹರ ತಾಲೂಕಿನಲ್ಲಿ 1018 ಕ್ವಿಂಟಲ್, ಜಗಳೂರು ತಾಲೂಕಿನಲ್ಲಿ 1400 ಕ್ವಿಂಟಲ್, ಹೊನ್ನಾಳಿ ತಾಲೂಕಿನಲ್ಲಿ 1276 ಕ್ವಿಂಟಲ್, ಚನ್ನಗಿರಿ ತಾಲೂಕಿನಲ್ಲಿ 1040 ಕ್ವಿಂಟಲ್ ಬಿತ್ತನೆಬೀಜ ದಾಸ್ತಾನಿದೆ.
ರಸಗೊಬ್ಬರ ವಿವರ
ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಮುಂಗಾರು ಹಂಗಾಮಿಗಾಗಿ ಜಿಲ್ಲೆಯಲ್ಲಿ 25,581 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಇದರಲ್ಲಿ 7322 ಮೆಟ್ರಿಕ್ ಟನ್ ಯೂರಿಯಾ, 3238 ಮೆಟ್ರಿಕ್ ಟನ್ ಡಿಎಪಿ, 13,278 ಮೆಟ್ರಿಕ್ ಟನ್ ಎನ್‌ಪಿಕೆ ಕಾಂಪ್ಲೆಕ್ಸ್, 1544 ಮೆಟ್ರಿಕ್ ಟನ್ ಎಂಒಪಿ, 200 ಮೆಟ್ರಿಕ್ ಟನ್ ಎಸ್‌ಎಸ್‌ಪಿ ರಸಗೊಬ್ಬರ ದಾಸ್ತಾನಿದೆ. ಇದರಲ್ಲಿ ಒಟ್ಟು 21,659 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟಗಾರರು, ವಿತರಕರು ಹಾಗೂ ಸರಬರಾಜು ಸಂಸ್ಥೆಗಳಲ್ಲಿ ದಾಸ್ತಾನಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗಾಗಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಜಮೀನುಗಳು ಚಟುವಟಿಕೆಯ ತಾಣಗಳಾಗಿ ಮಾರ್ಪಟ್ಟಿವೆ.
ಕಳೆದ ವರ್ಷ ವಾಡಿಕೆಗಿಂತ ಶೇ. 50 ಜಾಸ್ತಿ ಮಳೆ
ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 659 ಮಿಮೀ ಮಳೆಯಾಗುತ್ತದೆ. ಜಗಳೂರು ತಾಲೂಕಿನಲ್ಲಿ ಕನಿಷ್ಠ ಅಂದರೆ ಸರಾಸರಿ 528 ಮಿಮೀ ಮಳೆಯಾದರೆ, ಚನ್ನಗಿರಿ ತಾಲೂಕಿನಲ್ಲಿ ಗರಿಷ್ಠ ಸರಾಸರಿ 840 ಮಿಮೀ. ಮಳೆಯಾಗುತ್ತದೆ. ಮುಂಗಾರಿನಲ್ಲಿ ಪ್ರಮುಖವಾಗಿ ಮೆಕ್ಕೆಜೋಳ, ಭತ್ತ, ರಾಗಿ, ಜೋಳ, ಕಬ್ಬು, ಸಿರಿಧಾನ್ಯಗಳು, ತೊಗರಿ, ಹೆಸರು, ಶೇಂಗಾ ಹಾಗೂ ಹತ್ತಿ ಬೆಳೆಯಲಾಗುತ್ತದೆ. ಕಳೆದ ಸಾಲಿನಲ್ಲಿ (2021-22) 987 ಮಿಮೀ ಮಳೆಯಾಗಿದ್ದು ವಾಡಿಕೆಗಿಂತ ಶೇ. 50ರಷ್ಟು ಮಳೆ ಹೆಚ್ಚಾಗಿದೆ. ಮುಂಗಾರಿನಲ್ಲಿ 2,35,271ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.
ಮುಂಗಾರು ಕೃಷಿಗೆ ಪೂರಕವಾಗಿ ಕೃಷಿ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಸಾಕಷ್ಟು ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಮಾಡಿಟ್ಟುಕೊಂಡಿದೆ. ರೈತರಿಗೆ ಆಯಾ ಬೆಳೆಗಳ ಬಿತ್ತನೆ ಅವಧಿಗೆ ತಕ್ಕಂತೆ ಹಂತ ಹಂತವಾಗಿ ಬಿತ್ತನೆ ಬೀಜ ದಾಸ್ತಾನು ಮಾಡಿ ವಿತರಿಸಲಾಗುವುದು. ಸದ್ಯಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ. – ಶ್ರೀನಿವಾಸ್ ಚಿಂತಾಲ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ
ಮುಂಗಾರು ಹಂಗಾಮಿಗೆ ಬೇಕಾದ ಬಿತ್ತನೆಬೀಜ, ಗೊಬ್ಬರವನ್ನು ಸಮರ್ಪಕವಾಗಿ ದಾಸ್ತಾನು ಮಾಡಿಟ್ಟುಕೊಳ್ಳಬೇಕು. ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಏನೇ ಸಮಸ್ಯೆ ಇದ್ದರೂ ಕೂಡಲೇ ನನ್ನ ಗಮನಕ್ಕೆ ತರಬೇಕು. ಕೃಷಿ ನ್ಯೂನತೆಗೆ ಸಂಬಂಧಿಸಿದಂತೆ ರೈತರಿಂದ ದೂರುಗಳು ಕೇಳಿ ಬಂದರೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು. –ಭೈರತಿ ಬಸವರಾಜ್, ಜಿಲ್ಲಾ ಉಸ್ತುವಾರಿ ಸಾಂದರ್ಭಿಕ ಚಿತ್ರ ಸಚಿವರು
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ
Darshan Bail; ನಾವು ಏನೂ ಹೇಳಲು ಆಗುವುದಿಲ್ಲ..: ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
Davanagere: ಬಿಜೆಪಿಯ ಬಾಯಿಚಟದ ಮೂರ್ನಾಲ್ಕು ಜನರ ವಿರುದ್ದ ರೇಣುಕಾಚಾರ್ಯ ಟೀಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.