ನ್ಯಾಯಾಂಗದ ಮೂಲ ಸೌಕರ್ಯಕ್ಕೆ ಅನುದಾನ ಕೊಡಿ
ನ್ಯಾಯಾಲಯಗಳಲ್ಲಿನ ಸೌಲಭ್ಯ ತ್ವರಿತ ನ್ಯಾಯದಾನಕ್ಕೆ ಸಹಕಾರಿ: ನ್ಯಾ| ರಿತುರಾಜ್ ಅವಸ್ಥಿ
Team Udayavani, May 29, 2022, 3:24 PM IST
ದಾವಣಗೆರೆ: ಬೇರೆ ಕ್ಷೇತ್ರಗಳಂತೆ ನ್ಯಾಯಾಂಗ ವ್ಯವಸ್ಥೆಯ ಮೂಲ ಸೌಕರ್ಯ ಹೆಚ್ಚಳಕ್ಕೂ ಸರ್ಕಾರ ಆಯವ್ಯಯದಲ್ಲಿಯೇ ಅನುದಾನ ಮೀಸಲಿಡುವಂತಾಗಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹೇಳಿದರು.
ನಗರದ ಹೊರವಲಯದ ಕುಂದುವಾಡ ರಸ್ತೆಯ ಕೆಎಚ್‌ಬಿ ಕಾಲೋನಿಯಲ್ಲಿ ಶನಿವಾರ ನಡೆದ ಉದ್ದೇಶಿತ ನ್ಯಾಯಾಲಯಗಳ ಸಂಕೀರ್ಣದ ಶಂಕುಸ್ಥಾಪನೆ, ಮಕ್ಕಳಸ್ನೇಹಿ ನ್ಯಾಯಾಲಯ ಉದ್ಘಾಟನೆ ಹಾಗೂ ಚನ್ನಗಿರಿ ನ್ಯಾಯಾಲಯದ ಎರಡನೇ ಮಹಡಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ವೋತ್ಛ ನ್ಯಾಯಾಲಯದ ಸಮಿತಿ ಇತ್ತೀಚೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ ಸಭೆಯಲ್ಲಿಯೂ ನ್ಯಾಯಾಲಯಗಳಲ್ಲಿ ಯಾವುದೇ ಮೂಲ ಸೌಕರ್ಯ ಕೊರತೆಯಾಗದಂತೆ ಕ್ರಮ ವಹಿಸಲು ಸೂಚಿಸಿದೆ. ಅಂತೆಯೇ ಸರ್ಕಾರಗಳು ನ್ಯಾಯಾಂಗ ವ್ಯವಸ್ಥೆಯಲ್ಲಿನ ಸೌಕರ್ಯ ಬಲಪಡಿಸುವತ್ತ ಗಮನಹರಿಸಬೇಕು ಎಂದರು.
ನ್ಯಾಯಾಲಯಗಳಲ್ಲಿ ಮೂಲ ಸೌಕರ್ಯ ಹೆಚ್ಚಾದರೆ ತ್ವರಿತ ನ್ಯಾಯದಾನಕ್ಕೆ ಸಹಕಾರಿಯಾಗಲಿದೆ. ಆದ್ದರಿಂದ ಸರ್ಕಾರ ನ್ಯಾಯಾಲಯಗಳಲ್ಲಿನ ಮೂಲ ಸೌಕರ್ಯ ಹಾಗೂ ಮಾನವ ಸಂಪನ್ಮೂಲ ಹೆಚ್ಚಳ, ಆಧುನಿಕ ತಂತ್ರಜ್ಞಾನ ಬಳಕೆಗೆ ಅನುದಾನ ನೀಡಲಾಗುತ್ತಿದೆ. ಅದನ್ನು ಇನ್ನಷ್ಟು ತ್ವರಿತವಾಗಿ ಹಾಗೂ ಆದ್ಯತೆ ಮೇರೆಗೆ ನೀಡುವಂತಾಗಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಶ್ರೇಣಿ ಹಾಗೂ ವರ್ಗದ ಒಟ್ಟು 15 ನ್ಯಾಯಾಲಯಗಳಿದ್ದರೂ ಜಾಗದ ಕೊರತೆಯಿಂದ ಎರಡು ನ್ಯಾಯಾಲಯಗಳು ನಡೆಯುತ್ತಿರಲಿಲ್ಲ. ಈಗ ಜಿಲ್ಲೆಯಲ್ಲಿ ನಿರ್ಮಾಣಗೊಳ್ಳುವ ನ್ಯಾಯಾಲಯಗಳ ಸಂಕೀರ್ಣದಲ್ಲಿ ಎಲ್ಲ 15 ನ್ಯಾಯಾಲಯಗಳೂ ಕಾರ್ಯನಿರ್ವಹಿಸಲಿವೆ. ಅಂದಾಜು 25 ಕೋಟಿ ರೂ.ಗಳಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಆರ್. ದೇವದಾಸ್ ಮಾತನಾಡಿ, ನ್ಯಾಯಾಲಯಗಳ ಸಂಕೀರ್ಣ ಬೇಡಿಕೆ ಬಹು ವರ್ಷಗಳದ್ದಾಗಿದ್ದು ಈಗ ಕಾಲ ಕೂಡಿ ಬಂದಿದೆ. ಆದಷ್ಟು ಬೇಗ ಕಟ್ಟಡ ನಿರ್ಮಾಣಗೊಂಡು ನ್ಯಾಯಾಲಯ ಸಂಕೀರ್ಣದ ಉದ್ದೇಶ ಸಾಕಾರಗೊಳ್ಳಲಿ ಎಂದು ಆಶಿಸಿದರು.
ಉಚ್ಚ ನ್ಯಾಯಾಲಯದ ಇನ್ನೋರ್ವ ನ್ಯಾಯಮೂರ್ತಿ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಕೆ. ನಟರಾಜನ್ ಮಾತನಾಡಿ, ನ್ಯಾಯಾಲಯಗಳ ಸಂಕೀರ್ಣ ಮಂಜೂರಾತಿಗಾಗಿ ಬಹುದಿನಗಳಿಂದ ಪ್ರಯತ್ನ ಪಡಲಾಗಿತ್ತು. ಎಲ್ಲರ ನಿರಂತರ ಪ್ರಯತ್ನದ ಫಲವಾಗಿ ಇಂದು ನ್ಯಾಯಾಲಯ ಸಂಕೀರ್ಣಕ್ಕೆ ಅನುಮೋದನೆ ದೊರತಿದೆ ಎಂದರು.
ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಮಾತನಾಡಿ, ನ್ಯಾಯಾಲಯ ಸಂಕೀರ್ಣ ಬಹು ವರ್ಷಗಳ ಹಿಂದೆಯೇ ನಿರ್ಮಾಣವಾಗಬೇಕಿತ್ತು. ದಾವಣಗೆರೆ ಜಿಲ್ಲೆ ಘೋಷಣೆಯಾದ ಬಳಿಕ ಹಂತ ಹಂತವಾಗಿ ಜಿಲ್ಲಾಡಳಿತ ಭವನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸೇರಿದಂತೆ ಎಲ್ಲವನ್ನೂ ನಿರ್ಮಾಣ ಮಾಡಲಾಯಿತು. ಆದರೆ ನ್ಯಾಯಾಲಯ ಸಂಕೀರ್ಣವೊಂದು ಬಾಕಿ ಇತ್ತು. ಅದೂ ಸಹ ಈಗ ನಿರ್ಮಾಣ ಆಗುತ್ತಿರುವುದು ಸಂತಸದ ಸಂಗತಿ. ನ್ಯಾಯಾಲಯ ಸಂಕೀರ್ಣ ಕಟ್ಟಡ ಜಿಲ್ಲೆಗೆ ಕಿರೀಟ ಆಗುವ ರೀತಿಯಲ್ಲಿ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜ್, ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತ ಬಿ.ಟಿ. ಕಾಂತರಾಜ್ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಸ್ತುತ ರಾಜ್ಯದ ನ್ಯಾಯಾಲಯಗಳಲ್ಲಿನ ಮೂಲ ಸೌಕರ್ಯ ಹೆಚ್ಚಿಸುವ ಕಾರ್ಯ ನಡೆಯುತ್ತಿದೆ. ದಾಖಲೆಗಳ ಡಿಜಿಲೀಕರಣ, ಗಣಕೀಕರಣ, ನ್ಯಾಯಾಲಯಗಳ ಉನ್ನತೀಕರಣದ ಜತೆಗೆ ಅಂಗವಿಕಲರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ದಾವಣಗೆರೆ ಸೇರಿದಂತೆ ರಾಜ್ಯದ 24 ಕಡೆಗಳಲ್ಲಿ ಶಿಶು ಸ್ನೇಹಿ ನ್ಯಾಯಾಲಯಗಳಿದ್ದು ಅಲ್ಲಿ ಮಕ್ಕಳ ಮನಸ್ಸು ಆಕರ್ಷಿಸುವ ವಿನ್ಯಾಸ, ಗ್ರಂಥಾಲಯ, ವಿಶ್ರಾಂತಿಗೃಹ ಸೇರಿ ಇನ್ನಿತರ ಸೌಲಭ್ಯ ಕಲ್ಪಿಸಲಾಗಿದೆ. – ರಿತುರಾಜ್ ಅವಸ್ಥಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.