ಕಾಟಾಚಾರಕ್ಕೆ ಸಭೆಗೆ ಬರುವ ಅಧಿಕಾರಿಗಳು
Team Udayavani, Feb 7, 2017, 12:50 PM IST
ದಾವಣಗೆರೆ: ನಮ್ಮ ತಾಲೂಕಿನ ಅಧಿಕಾರಿಗಳಿಗೆ ತಾಪಂ ಸದಸ್ಯರೆಂದರೆ ಗೌರವ ಇಲ್ಲದಂತಾಗಿದೆ. ಸಭೆಗೆ ಕಾಟಾಚಾರಕ್ಕೆ ಹಾಜರಾಗುತ್ತಾರೆ ಎಂದು ತಾಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ, ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಈ ಬಗ್ಗೆ ಪ್ರಸ್ತಾಪಿಸಿದ ಅವರು, ಎಲ್ಲಾ ಇಲಾಖೆ ಅಧಿಕಾರಿಗಳು ತಾಪಂ ಸದಸ್ಯರನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ.
ಯಾವುದೇ ಕಾರ್ಯಕ್ರಮದ ಮಾಹಿತಿ ನೀಡುವುದಿಲ್ಲ. ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನವಾದಾಗ ಅಲ್ಲಿನ ಸದಸ್ಯರಿಗೆ ಮಾಹಿತಿಯೇ ಇರುವುದಿಲ್ಲ. ತೀರಾ ಅಸಡ್ಡೆಯಿಂದ ಅಧಿಕಾರಿಗಳು ವರ್ತಿಸುತ್ತಾರೆ ಎಂದರು. ಸಭೆಗೆ ಬರುವಾಗ ಯಾವ ಯೋಜನೆ, ಎಷ್ಟು ಅನುದಾನ ಎಂದಷ್ಟೇ ಹೇಳುತ್ತಾರೆ. ಕಾಮಗಾರಿ ಎಲ್ಲಿ ನಡೆಯುತ್ತಿದೆ? ಕಾಮಗಾರಿಯ ಪ್ರಗತಿ ಏನು? ಗುಣಮಟ್ಟ ಹೇಗಿದೆ? ಎಂಬ ಯಾವುದೇ ಮಾಹಿತಿ ಕೊಡುವುದಿಲ್ಲ.
ಇಂತಹ ಸಭೆಯಿಂದ ನಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಿಗೆ ಜನರಿಗಾಗಿ ಏನೂ ಮಾಡದ ಸ್ಥಿತಿ ನಿರ್ಮಾಣವಾಗುತ್ತದೆ. ಇತರೆ ತಾಲೂಕುಗಳಲ್ಲಿ ಇಂತಹ ಸ್ಥಿತಿ ಇಲ್ಲ. ನಾನು ಪತ್ರಿಕೆಗಳಲ್ಲಿ ಓದಿದಂತೆ ಅಕ್ಕಪಕ್ಕದ ತಾಲೂಕಿನ ಅಧಿಕಾರಿಗಳು ತಾಪಂ ಸದಸ್ಯರಿಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ. ಸರ್ಕಾರಿ ಕಾರ್ಯಕ್ರಮಗಳಿಗೆ ಎಲ್ಲರನ್ನೂ ಆಹ್ವಾನಿಸುತ್ತಾರೆ ಎಂದು ಅವರು ಹೇಳಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಎಲ್.ಎಸ್. ಪ್ರಭುದೇವ್, ಜನಪ್ರತಿನಿಧಿಗಳ ಕಡೆಗಣನೆ ಕುರಿತು ಪದೇ ಪದೇ ದೂರು ಕೇಳಿ ಬರುತ್ತಲೇ ಇವೆ. ಯಾವುದೇ ಕಾರ್ಯಕ್ರಮ ಆದಾಗಲೂ ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತನ್ನಿ. ಇನ್ನು ಮುಂದೆ ಜನಪ್ರತಿನಿಧಿಗಳನ್ನು ಆಹ್ವಾನಿಸದ ಅಧಿಕಾರಿಗೆ ನೋಟೀಸ್ ಜಾರಿ ಮಾಡಿ, ಮೇಲಾಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಹೇಳುವ ಮೂಲಕ ಚರ್ಚೆಗೆ ಅಂತ್ಯ ಹಾಡಿದರು.
ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಹಾಲಿ ಹಿಂಗಾರು ಹಂಗಾಮಿನಲ್ಲಿ ಶೇ.25ರಷ್ಟು ಮಾತ್ರ ಬಿತ್ತನೆ ಆಗಿದೆ. ಭದ್ರಾ ಜಲಾಶಯದಲ್ಲಿ ನೀರಿಲ್ಲದೇ ಇರುವುದರಿಂದ ಭತ್ತ ನಾಟಿ ಪ್ರಮಾಣ ಸಂಪೂರ್ಣ ನಿಂತಿದೆ. ಬೋರ್‌ವೆಲ್ ಇದ್ದವರು ಮಾತ್ರ ಭತ್ತ ನಾಟಿಮಾಡಿದ್ದಾರೆ. ಉಳಿದಂತೆ ದ್ವಿದಳ ಧಾನ್ಯ, ಗೋವಿನ ಜೋಳ ಇತರೆ ಬೆಳೆ ಬೆಳೆಯಲಾಗುತ್ತಿದೆ ಎಂದು ಇಲಾಖೆಯ ತಾಲೂಕು ಅಧಿಕಾರಿ ಉಮೇಶ್ ಸಭೆಗೆ ತಿಳಿಸಿದರು.
ಶಿಕ್ಷಣ ಇಲಾಖೆಯ ಚರ್ಚೆ ವೇಳೆ ಉಪಾಧ್ಯಕ್ಷ ಕೆ.ಜಿ. ಪರಮೇಶ್ವರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಕೆ. ಅಶೋಕ್, ಶಿಕ್ಷಕರ ಕಾರ್ಯವೈಖರಿ ಬಗ್ಗೆ ಹರಿಹಾಯ್ದರು. ಸರ್ಕಾರಿ ಶಾಲಾ ಶಿಕ್ಷಕರು ಸರಿಯಾಗಿ ಕೆಲಸಮಾಡುತ್ತಿಲ್ಲ. ಖಾಸಗಿ ಶಾಲಾ ಶಿಕ್ಷಕರು ಕಡಿಮೆ ಸಂಬಳ ಪಡೆದರೂ ಉತ್ತಮವಾಗಿ ಪಾಠ ಮಾಡುತ್ತಾರೆ. ಆದರೆ, ಅವರಿಗಿಂತ ಹೆಚ್ಚು ಸಂಬಳ ತೆಗೆದುಕೊಳ್ಳುವ ಸರ್ಕಾರಿ ಶಿಕ್ಷಕರು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ.
ಅಧಿಕಾರಿಗಳು ಅವರ ವಿರುದ್ಧ ಕ್ರಮ ವಹಿಸುವುದಿಲ್ಲವೇಕೆ? ಎಂದು ಪ್ರಶ್ನಿಸಿದರು. ಅನೇಕ ಸರ್ಕಾರಿ ಶಾಲೆಗಳಲ್ಲಿ ಎಸ್‌ಎಸ್ ಎಲ್‌ಸಿ ಪಾಸಾದವರು ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಶಿಕ್ಷಕರಿಂದ ಮಕ್ಕಳು ಏನು ಕಲಿಯಲು ಸಾಧ್ಯ. ಅನೇಕ ವಿದ್ಯಾರ್ಥಿಗಳು 8ನೇ ತರಗತಿ ಮುಗಿಸಿದರೂ ತಮ್ಮದೇ ಹೆಸರನ್ನು ಸರಿಯಾಗಿ ಬರೆಯಲು ಬರುವುದಿಲ್ಲ. ಮೊದಲೆಲ್ಲಾ ವಿಷಯ ನಿರೀಕ್ಷಕರು ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲಿಸುತ್ತಿದ್ದರು.
ಈಗ ಅದೆಲ್ಲಾ ಇಲ್ಲವಾಗಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಇಒ ಪ್ರಭುದೇವ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜಪ್ಪ, ಸಿದ್ಧಪ್ಪ, ಎಲ್ಲಾ ಕಡೆ ಅಂತಹ ಪರಿಸ್ಥಿತಿ ಇಲ್ಲ. ಅಲ್ಲದೆ, ಈಗ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಬದಲಾಗಿದೆ. ಮೊದಲಿನಂತಿಲ್ಲ. ಬಿಎ, ಬಿಇಡಿ ಮಾಡಿದ ನಂತರ ಟಿಇಟಿ ಪರೀಕ್ಷೆ ಪಾಸಾದವರು ಮಾತ್ರ ಶಾಲಾ ಶಿಕ್ಷಕರಾಗಿ ನೇಮಕಗೊಳ್ಳುತ್ತಾರೆ ಎಂದು ಸಭೆ ಗಮನಕ್ಕೆ ತಂದರು.
ಇದರಿಂದ ತೃಪ್ತರಾಗ ಪರಮೇಶ್ವರಪ್ಪ, ಈ ಹಿಂದೆ ನೇಮಕಗೊಂಡ ಶಿಕ್ಷಕರು ಮಾಡುವ ಪಾಠದ ಬಗ್ಗೆ ನಾನು ಹೇಳುತ್ತಿದ್ದೇನೆ. ಅಲ್ಲದೆ, ಈಗ ಬರುತ್ತಿರುವ ಹೊಸ ಶಿಕ್ಷಕರಲ್ಲಿ ಕಲಿಸುವ ಆಸಕ್ತಿ ಇಲ್ಲವಾಗಿದೆ ಎಂದು ಮತ್ತೆ ಜರಿದರು. ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.