ಲಿಂಗಾಯತ ಜಾತಿಯಲ್ಲ: ಮುರುಘಾ ಶ್ರೀ
Team Udayavani, Jan 19, 2019, 5:52 AM IST
ದಾವಣಗೆರೆ: ಮೂಲಭೂತವಾದ, ಸಂಪ್ರದಾಯಕ್ಕೆ ವಿರುದ್ಧವಾಗಿ ಸೆಡ್ಡು ಹೊಡೆದು ನಿಂತ ಧರ್ಮ ಎಂದರೆ ಅದು ಬಸವ, ಲಿಂಗಾಯತ ಧರ್ಮ ಎಂದು ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಪ್ರತಿಪಾದಿಸಿದ್ದಾರೆ.
ಬಸವ ಚೇತನ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 62ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವದ ಮೊದಲ ದಿನ ಶುಕ್ರವಾರದ ಸಾಧಕರ ಸಮಾವೇಶದಲ್ಲಿ ಲಿಂಗಾಯತ ಧರ್ಮಕ್ಕೆ ಜಯದೇವ ಶ್ರೀಗಳವರ ಕೊಡುಗೆ… ವಿಷಯ ಕುರಿತು ಅಧ್ಯಕ್ಷೀಯ ನುಡಿಗಳಾಡಿದ ಅವರು, ಬಸವ ಧರ್ಮ ಎಂದರೆ ಮೂಲಭೂತವಾದ, ಜಾತಿವಾದ, ಹಿಂಸಾವಾದವೇ ಇಲ್ಲ. ಯಾವ ಕಾರಣಕ್ಕೂ ಮೂಲಭೂತ, ಜಾತಿ, ಹಿಂಸಾವಾದ ಇರಲೂಬಾರದು ಎಂದರು.
12ನೇ ಶತಮಾನದಲ್ಲಿ ಬಸವಣ್ಣನವರು ನೀಡಿದಂತಹ ವಚನ ಧರ್ಮ ಕಾಲಾನುಕ್ರಮೇಣ ಶರಣ, ಬಸವ ಧರ್ಮವಾಯಿತು. 21ನೇ ಶತಮಾನದಲ್ಲಿ ಶರಣ, ಬಸವಧರ್ಮವು ಲಿಂಗಾಯತ ಧರ್ಮದ ಸ್ವರೂಪ ಪಡೆದುಕೊಳ್ಳುತ್ತಿರುವುದು ಬಹು ಸಂತೋಷದ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.
ಅನೇಕರು ಈಗಲೂ ಲಿಂಗಾಯತ ಧರ್ಮವನ್ನು ಒಂದು ಜಾತಿಗೆ ಸೀಮಿತಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಲಿಂಗಾಯತ ಧರ್ಮ ಎನ್ನುವುದು ಜಾತಿಯೇ ಅಲ್ಲ. ಲಿಂಗಾಯತ ಬದುಕುವ ವಿಧಾನವೇ ಹೊರತು ಜಾತಿ ಅಲ್ಲ. ಅದು ಎಂದಿಗೂ ಜಾತಿಯ ಸಂಕೇತವೇ ಅಲ್ಲ. ಬಸವಣ್ಣನವರ ಮೌಲಿಕ ವಿಚಾರ ಒಪ್ಪಿ, ಅಪ್ಪಿಕೊಂಡವರು ಎಲ್ಲರೂ ಲಿಂಗಾಯತರೇ. ಲಿಂಗಾಯತ ಜಾತಿ ಅಲ್ಲ ತತ್ವ, ಸಿದ್ಧಾಂತ ಎನ್ನುವುದಕ್ಕೆ ಲಿಂಗಾಯೇತರರು ಲಿಂಗಾಯತವನ್ನ ಒಪ್ಪಿಕೊಂಡಿದ್ದಾರೆ. ಬಸವಾಯತದಲ್ಲಿ ಲಿಂಗಾಯತ ಇದೆ. ಲಿಂಗಾಯತದಲ್ಲಿ ಬಸವಾಯತ ಇದೆ ಎಂದು ತಿಳಿಸಿದರು.
ಲಿಂಗಾಯತ ಧರ್ಮ ಸದಾ ಪ್ರಯೋಗಶೀಲತೆಗೆ ಒಳಗಾಗುವ ಮೂಲಕ ಜೀವಂತಿಕೆಯನ್ನು ಪಡೆದುಕೊಳ್ಳುತ್ತಿದೆ. ಲಿಂಗಾಯತ ಧರ್ಮ ಹೊಸ ಪ್ರಯೋಗಕ್ಕೆ ತೆರೆದುಕೊಳ್ಳುವಂತೆ ಹೊಸ ವಿಚಾರ ಮಂಡನೆಗೆ ಅವಕಾಶ ಮಾಡಿಕೊಡುತ್ತಿದೆ. ಇಂತಹ ಸ್ವಾತಂತ್ರ್ಯ ಬೇರೆ ಯಾವ ಧರ್ಮದಲ್ಲೂ ಕಾಣಲಿಕ್ಕೆ ಸಾಧ್ಯವೇ ಇಲ್ಲ. ಬಸವಣ್ಣ ಮತ್ತು ಅಲ್ಲಮರು ಅಂತಹ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಸ್ಮರಿಸಿದರು.
ಬಸವಾದಿ ಶರಣರು ಎಂದಿಗೂ ಕಾಲದ ವಿಭಜನೆ ಮಾಡಿದವರೇ ಅಲ್ಲ. ಕಾಲ ಇರುವುದೇ ಕಾರ್ಯ ಮಾಡಲಿಕ್ಕೆ ಎಂದು ಭಾವಿಸಿದ್ದರು. ಅಪ್ರಿಯ, ಅಶುಭ… ಎನ್ನುವುದನ್ನ ಶುಭ ಎಂದೇ ಭಾವಿಸಿ, ಕೆಲಸ ಮಾಡುತ್ತಿದ್ದರು. ಲಿಂಗಾಯತ ಧರ್ಮದ ಪ್ರಯೋಗಶೀಲತೆಗೆ ಅನುಗುಣವಾಗಿಯೇ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಅಲಕ್ಷಿತ, ಅಸ್ಪೃಶ್ಯರಿಗೆ ಅವಕಾಶ ನೀಡಿದಂತಹ ದಿಟ್ಟ ಗುರುಗಳಾಗಿದ್ದಾರೆ. ಅಸ್ಪೃಶ್ಯತೆಯ ನಿವಾರಣೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರೊಂದಿಗೆ ಚರ್ಚಿಸಿದವರು. ಜಯದೇವಶ್ರೀಗಳ ದೂರದೃಷ್ಟಿ ಸಾಕಾರಗೊಂಡಿದ್ದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ಒಂದಾಗಿರುತ್ತಿದ್ದವು ಎಂದು ತಿಳಿಸಿದರು.
ಲಿಂಗಾಯತ ಧರ್ಮ ಪ್ರಯೋಗಶೀಲತೆಯ ಧರ್ಮ ಎನ್ನುವುದಕ್ಕೆ ಮಾಚಿದೇವರು ಸೂರ್ಯಗ್ರಹಣ ದಿನದಂದೇ ಪಟ್ಟಾಧಿಕಾರ ಮಾಡಿದ್ದಾರೆ. ಪರಿವರ್ತನೆ ಮತ್ತು ಪ್ರಯೋಗಶೀಲತೆ ಬಸವ ಧರ್ಮದ ಮೂಲ ಅಂಶಗಳು. ಅಂತಹ ಪ್ರಯೋಗಶೀಲತೆ ಮತ್ತು ಪರಿವರ್ತನೆಯ ಪ್ರತೀಕವಾಗಿರುವ ಬಸವಾದಿ ಶರಣರ ವಚನಗಳನ್ನು ಕೆಲವರು ಪ್ರವಚನದ ಸರಕು ಎಂದುಕೊಂಡಿದ್ದಾರೆ. ವಚನಗಳು ಪ್ರವಚನದ ಸರಕು ಅಲ್ಲವೇ ಅಲ್ಲ. ಒಂದು ಸಾವಿರದಷ್ಟು ಪ್ರವಚನ ಒಂದು ಪ್ರಯೋಗಕ್ಕೆ ಸಮ ಎಂದು ತಿಳಿಸಿದರು.
ಕೆಲವರು ಬಸವಾದಿ ಶರಣರ ಎಲ್ಲಾ ವಿಚಾರ ಹೇಳುತ್ತಾರೆ. ಆದರೆ, ಬುದ್ಧಿಪೂರ್ವಕವಾಗಿ ಸಮಾನತೆಯ ಬಗ್ಗೆ ಹೇಳುವುದೇ ಇಲ್ಲ. ಸಮಾನತೆಯ ಬಗ್ಗೆ ಹೇಳಿದರೆ ಎಲ್ಲಾ ಜಾತಿಯವರನ್ನು ಒಳಗೆ ಬಿಟ್ಟು ಕೊಳ್ಳಬೇಕಾಗುತ್ತದೆ ಎನ್ನುವ ಕಾರಣಕ್ಕೆ ಸಮಾನತೆ ಬಗ್ಗೆ ಹೇಳುವುದೇ ಇಲ್ಲ. ಚಿತ್ರದುರ್ಗದ ಬೃಹನ್ಮಠ 18 ಕುಲದವರನ್ನೂ ಹತ್ತಿರಕ್ಕೆ ಬಿಟ್ಟುಕೊಂಡಿರುವ ಮಠ. ಬಸವಧರ್ಮದ ಮೂಲ ಜೀವ ಕಾರುಣ್ಯದ ಜೊತೆಗೆ ಸಾಗುತ್ತಿದೆ. ಬಸವ ಪ್ರಣೀತ ಧರ್ಮ ಕಟ್ಟಿಕೊಂಡು ಮುಂದೆ ಸಾಗಬೇಕು ಎಂದು ಆಶಿಸಿದರು.
ಇಳಕಲ್‌ನ ಶ್ರೀ ಗುರುಮಹಾಂತ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಡಿ. ಬಸವರಾಜ್, ಡಾ| ಸಿ.ಆರ್. ನಸೀರ್ ಅಹಮ್ಮದ್ ಇತರರು ಇದ್ದರು. ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಅವರಿಗೆ ಜಯದೇವಶ್ರೀ, ಖ್ಯಾತ ಸಾಹಿತಿ ಡಾ| ಕುಂ. ವೀರಭದ್ರಪ್ಪ ಅವರಿಗೆ ಶೂನ್ಯಪೀಠ ಚನ್ನಬಸವ, ಧಾರವಾಡದ ಹಿರಿಯ ಸಾಹಿತಿ ಡಾ| ಸಿ.ಆರ್. ಯರವಿನತೆಲಿಮಠಗೆ ಶೂನ್ಯಪೀಠ ಅಲ್ಲಮ ಹಾಗೂ ತುಮಕೂರು ಜಿಲ್ಲೆಯ ಸಮಾಜ ಸೇವಕಿ ಭವ್ಯಾರಾಣಿಗೆ ಶೂನ್ಯಪೀಠ ಅಕ್ಕನಾಗಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಿಮಿಕ್ರಿ ಗೋಪಿ, ಕಲರ್ಸ್ ಕನ್ನಡ ಕೋಗಿಲೆ ಪ್ರಶಸ್ತಿ ಪುರಸ್ಕೃತ ಕರಿಬಸವ, ಕನ್ನಡ ಸರಿಗಮಪ ಪ್ರಶಸ್ತಿ ವಿಜೇತ ಜ್ಞಾನೇಶ್… ಸಾಂಸ್ಕೃತಿಕ ಸಂಭ್ರಮ ನಡೆಸಿಕೊಟ್ಟರು.ಗೃಹ ಸಚಿವ ಎಂ.ಬಿ. ಪಾಟೀಲ್, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಗೈರಾಗಿದ್ದರು.
ಧರ್ಮ ಮಾನ್ಯತೆಗೆ ಹೋರಾಡೋಣ
ದಾವಣಗೆರೆ: ಸದಾ ಮನುಷ್ಯ ಪರವಾಗಿರುವ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಲು ಸರ್ಕಾರಗಳು ಮೀನಾಮೇಷ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ| ಕುಂ. ವೀರಭದ್ರಪ್ಪ ದೂರಿದ್ದಾರೆ.
ಬಸವ ಚೇತನ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 62ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವದ ಮೊದಲ ದಿನ ಶುಕ್ರವಾರದ ಸಾಧಕರ ಸಮಾವೇಶದಲ್ಲಿ ಶೂನ್ಯಪೀಠ ಚನ್ನಬಸವ ಪ್ರಶಸ್ತಿ… ಸ್ವೀಕರಿಸಿ ಮಾತನಾಡಿದ ಅವರು, ಮನುಷ್ಯಪರವಾಗಿರುವ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಅಸ್ತಿತ್ವ, ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಡಾ| ಶಿವಮೂರ್ತಿ ಮರುಘಾಶರಣರ ನೇತೃತ್ವದಲ್ಲಿ ಹೋರಾಟ ಮಾಡೋಣ ಎಂದರು.
ಸಮಾಜದಲ್ಲಿನ ಎಲ್ಲ ರೀತಿಯ ಅನಿಷ್ಟಗಳನ್ನ ಹೋಗಲಾಡಿಸುವ ಧರ್ಮ ಏನಾದರೂ ಇದ್ದರೆ ಅದು ಬಸವ ಪ್ರಣೀತ ಲಿಂಗಾಯತ ಧರ್ಮ. ಬಸವ ಪ್ರಣೀತ ವಿರಕ್ತಮಠಗಳು ಸಮಾಜಕ್ಕೆ ಅತ್ಯಮೂಲ್ಯ ಕಾಣಿಕೆ ನೀಡಿವೆ. ಹಿಂದೆ ಮತ್ತು ಈಗಿನ ಅನೇಕ ಸಮಸ್ಯೆಗಳಿಗೆ ಏಕೈಕ ಪರಿಹಾರ ಎಂದರೆ ಬಸವಣ್ಣನವರು. ಅಂತಹ ಬಸವಣ್ಣನವರು ಇಲ್ಲದ ಸಮಾಜವನ್ನ ಊಹಿಸಿಕೊಳ್ಳಲಿಕ್ಕೂ ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಬಸವಣ್ಣನವರು 12ನೇ ಶತಮಾನದಲ್ಲಿ ಉತ್ಪಾದಕ(ಶ್ರಮಿಕ) ಸಮಾಜಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆದೊಯ್ದವರು. ಶೇ. 98ರಷ್ಟಿರುವ ಉತ್ಪಾದಕ ಸಮಾಜದವರು ಒಂದಾದಾಗ ಏನನ್ನೂ ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು.
ನನ್ನ ಪ್ರಕಾರ ಜ್ಯೋತಿಷ್ಯಿಗಳು ದೊಡ್ಡ ಭಯೋತ್ಪಾದಕರು. ವಾಸ್ತುಶಾಸ್ತ್ರದವರು ದೊಡ್ಡ ವಿದ್ರೋಹಿಗಳು. ವೈದಿಕ ಧರ್ಮ ಯಾವಾಗಲೂ ಅಪಾಯಕಾರಿ. ಯಾರು ಏಕದೇವೋಪಾಸನೆ ಮಾಡುವರೋ ಅಂತವರು ಲಿಂಬೆಹಣ್ಣು, ಮೆಣಸಿನಕಾಯಿಗೆ ಹೆದರುವರಲ್ಲ. ನಾನು ಬಸವಣ್ಣನವರ ಏಕದೇವೋಪಾಸನೆ ಮಾಡುತ್ತೇನೆ. ಅತ್ಯಂತ ಕೆಟ್ಟ ಗಳಿಗೆಯಲ್ಲಿ ಮದುವೆಯಾಗಿದ್ದೇನೆ. ಚಂದ್ರಗ್ರಹಣ, ಸೂರ್ಯಗ್ರಹಣ ಕಾಲದಲ್ಲಿ ತುಂಬು ಗರ್ಭಿಣಿಯಾಗಿದ್ದ ನನ್ನ ಹೆಂಡತಿಯನ್ನು ಊರೆಲ್ಲ ಸುತ್ತಾಡಿಸಿದ್ದೇನೆ. ಆದರೂ, ನಾನು ಸುಖವಾಗಿರಲು ಕಾರಣ ಏಕದೇವೋಪಾಸನೆ ಮತ್ತು ಮೂಢನಂಬಿಕೆಗೆ ಸೊಪ್ಪು ಹಾಕದೇ ಇರುವುದು ಎಂದ ಅವರು, ಶೂನ್ಯಪೀಠ ಚನ್ನಬಸವ ಪ್ರಶಸ್ತಿ… ಕೇಂದ್ರ ಸಾಹಿತ್ಯ ಆಕಾಡೆಮಿ, ನೃಪತುಂಗ ಪ್ರಶಸ್ತಿಗಿಂತಲೂ ಹೆಚ್ಚಿನ ಸಂತೋಷ ನೀಡಿದೆ ಎಂದರು.
ಚಿತ್ರದುರ್ಗದ ಮುರುಘಾ ಶರಣರು ಪ್ರಖರ ವಿಚಾರವಾದಿ ಮತ್ತು ವೈಚಾರಿಕಾ ತವನಿಧಿಗಳು. ಸಮಾಜದಲ್ಲಿ ಅಪ್ರಸ್ತುತವಾಗಿರುವ ಸ್ಮಶಾನಗಳಿಗೆ ತಾರಾಮೌಲ್ಯ ನೀಡಿದವರು. ವಿಧವೆಯರಿಗೆ ಮದುವೆ ಮಾಡಿಸಿದವರು. ಪ್ರತಿ ತಿಂಗಳು 5 ನೇ ತಾರೀಕು ಸಾಮೂಹಿಕ ವಿವಾಹ ನಡೆಸುತ್ತಿರುವವರು. ಇನ್ನು ಅಪರಾಧ ಮಾಡಿದ ಕಾರಣಕ್ಕೆ ಜೈಲಿನಲ್ಲಿದ್ದ ಮಾಜಿ ಮುಖ್ಯಮಂತ್ರಿ ಕಡೆಗೆ ಹೋಗಿ ದರ್ಶನ, ಆಶೀರ್ವಾದ ಭಾಗ್ಯ ನೀಡಿದ ಸ್ವಾಮಿಗಳೂ ಇದ್ದಾರೆ ಎಂದರು.
ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಎಚ್.ಎನ್. ನಾಗಮೋಹನ್‌ದಾಸ್ ಮಾತನಾಡಿ, ಧರ್ಮವನ್ನ ರಾಜಕಾರಣಗೊಳಿಸುವುದೇ ಕೋಮುವಾದ. ಎಂದೆಂದಿಗೂ ಧರ್ಮವನ್ನು ರಾಜಕಾರಣದೊಂದಿಗೆ ಬೆರಸಲೇಬಾರದು. ಆದರೆ, ಈಗ ರಾಜಕಾರಣದಲ್ಲಿ ಧರ್ಮ ಸೇರಿಕೊಂಡಿದೆ. ಕೆಲವಾರು ಸ್ವಾಮೀಜಿಗಳು ರಾಜಕಾರಣಿ ಗಳಾಗಿದ್ದಾರೆ. ಮುಖ್ಯಮಂತ್ರಿಗಳೂ ಆಗಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ ಎಂದು ಹೇಳಿದರು.
ಬಸವಾದಿ ಶರಣರ ಅಂತಿಮ ಗುರಿ ಸಮ ಸಮಾಜದ ನಿರ್ಮಾಣ ಮಾಡುವುದು. ಈಗಲೂ ಅದು ಸಾಧ್ಯವಾಗಿಲ್ಲ. ಮೂಲಭೂತವಾದ, ಭಯೋತ್ಪಾದನೆ, ಭ್ರಷ್ಟಾಚಾರ, ಅಪರಾಧೀಕರಣ, ಸಾಂಸ್ಕೃತಿಕ ದಿವಾಳಿತನ ಕಂಡು ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕೆಲವರು ಇದಕ್ಕೆಲ್ಲ ಸಂವಿಧಾನ ಕಾರಣ ಎನ್ನುತ್ತಾರೆ. ಅದು ತಪ್ಪು. ಸಂವಿಧಾನದಲ್ಲಿ ಯಾವುದೇ ದೋಷ ಇಲ್ಲ. ಸಂವಿಧಾನವನ್ನು ಅನುಷ್ಠಾನ ದೋಷವೇ ಇದಕ್ಕೆ ಕಾರಣ. ನಮ್ಮ ಸರ್ಕಾರಗಳು ಸಹ ಜನರಿಗೆ ಸಂವಿಧಾನದ ಬಗ್ಗೆ ತಿಳಿಸುವ ಕೆಲಸ ಮಾಡಲಿಲ್ಲ ಎಂದು ತಿಳಿಸಿದರು.
ಇಲ್ಲಿಯವರನ್ನೇ ಬಳಸಿಕೊಳ್ಳಲಿ…
ಮಾಜಿ ಸಿಎಂ ಒಬ್ಬರು ಕೇರಳ ಜ್ಯೋತಿಷಿಗಳಿಂದ ಭವಿಷ್ಯ ಕೇಳುತ್ತಾರೆ. ಮಾಟ, ಮಂತ್ರ ಮಾಡಿಸುತ್ತಾರೆ. ಕೇರಳದವರಿಗಿಂತಲೂ ನಮ್ಮ ರಾಜ್ಯದವರನ್ನೇ ಬಳಸಿಕೊಂಡರೆ ಅವರಿಗಾದರೂ ಜೀವನಕ್ಕೆ ಹಾದಿಯಾಗುತ್ತದೆ. ಹಾಗಾಗಿ ಮಾಜಿ ಮುಖ್ಯಮಂತ್ರಿಗಳು ಇಲ್ಲಿನ ಅಪ್ರತಿಮ ಮೂಢನಂಬಿಕೆ ವಾರಸುದಾರರನ್ನೇ ಬಳಸಿಕೊಳ್ಳಬೇಕು ಎಂದು ಡಾ| ಕುಂ. ವೀರಭದ್ರಪ್ಪ ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.