![Beer](https://www.udayavani.com/wp-content/uploads/2025/02/Beer-415x232.jpg)
![Beer](https://www.udayavani.com/wp-content/uploads/2025/02/Beer-415x232.jpg)
Team Udayavani, Mar 20, 2022, 10:41 AM IST
ದಾವಣಗೆರೆ: ತಹಶೀಲ್ದಾರ್ ಕಚೇರಿಗಳಲ್ಲಿ ಹೆಚ್ಚಾಗಿರುವ ಮಧ್ಯವರ್ತಿಗಳ ಹಾವಳಿ ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ದಾವಣಗೆರೆ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಲವು ಸರ್ಕಾರಿ ಕಚೇರಿಗಳಲ್ಲಿ ಯೋಜನೆಗಳ ಸವಲತ್ತು ದೊರಕಿಸುವ ಸಲುವಾಗಿ ಮಧ್ಯವರ್ತಿಗಳು, ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಪ್ರಮುಖವಾಗಿ ತಹಶೀಲ್ದಾರರ ಕಚೇರಿಗಳಲ್ಲಿ ವೃದ್ಧಾಪ್ಯ, ವಿಧವಾವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ದೊರಕಿಸಲು ಮಧ್ಯವರ್ತಿಗಳ ಹಾವಳಿ ತುಂಬಾ ಇದೆ. ಮಧ್ಯವರ್ತಿಗಳ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮ ಮಧ್ಯವರ್ತಿಗಳು, ದಲ್ಲಾಳಿಗಳ ಹಾವಳಿ ಇಲ್ಲವಾಗಿಸಿ ಅರ್ಹ ಫಲಾನುಭವಿಗಳ ಮನೆಗೆ ನೇರವಾಗಿ ಸೌಲಭ್ಯ ಮಂಜೂರಾತಿ ತಲುಪಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿವೆ. ದಾವಣಗೆರೆ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಶೌಚಾಲಯ ಇದೆ. ಶೌಚಾಲಯ ಕಟ್ಟಿಸಲು ಇನ್ನೂ ಕೆಲವರು ಇಲ್ಲಸಲ್ಲದ ನೆಪಗಳನ್ನು ಹೇಳಿದರೆ, ಕಟ್ಟಿಸಿಕೊಂಡಿರುವ ಶೌಚಾಲಯಗಳನ್ನು ಕೆಲವರು ಬಳಕೆ ಮಾಡದೆ ಕಟ್ಟಿಗೆ ಮುಂತಾದ ಸಾಮಗ್ರಿ ತುಂಬಿಡುವ ಕೊಠಡಿಯನ್ನಾಗಿಸಿದ್ದಾರೆ. ಹೀಗಾಗಿ ಕೋಡಿಹಳ್ಳಿ ಮತ್ತು ಕಕ್ಕರಗೊಳ್ಳ ಗ್ರಾಮಗಳನ್ನು ದತ್ತು ಪಡೆದು ಎರಡೂ ಗ್ರಾಮಗಳನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿಸಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ವೃದ್ಧಾಪ್ಯ, ವಿಧವಾ ವೇತನ, ಮನಸ್ವಿನಿ ಸೇರಿದಂತೆ ವಿವಿಧ ಯೋಜನೆಗಳಡಿ ಒಟ್ಟು 134 ಫಲಾನುಭವಿಗಳಿಗೆ ಸೌಲಭ್ಯಗಳನ್ನು ಮಂಜೂರು ಮಾಡಲಾಗಿದೆ. ಎರಡೂ ಗ್ರಾಮಗಳಲ್ಲಿ ಮತ್ತೂಮ್ಮೆ ಸರ್ವೇ ಮಾಡಿಸಿ ಸಾಮಾಜಿಕ ಭದ್ರತೆ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುವ ಫಲಾನುಭವಿಗಳನ್ನು ಗುರುತಿಸಿ ಅವರಿಗೂ ಸವಲತ್ತು ಮಂಜೂರು ಮಾಡಲಾಗುವುದು. ಕೋಡಿಹಳ್ಳಿ ಗ್ರಾಮಕ್ಕೆ ಸೋಮವಾರದಿಂದಲೇ ಬಸ್ ಸಂಚಾರ ಪ್ರಾರಂಭಿಸಲಾಗುವುದು. ಗ್ರಾಮಸ್ಥರು ಆದಷ್ಟು ಬಸ್ ಸೌಲಭ್ಯವನ್ನೇ ಬಳಸುವಂತೆ ಮನವಿ ಮಾಡಿದರು.
ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳ ತಂಡವು ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಮನೆಬಾಗಿಲಲ್ಲಿಯೇ ಪರಿಹಾರ ದೊರಕಿಸಿಕೊಡುವ ಒಂದು ವಿನೂತನ ಕಾರ್ಯಕ್ರಮ ಗ್ರಾಮ ವಾಸ್ತವ್ಯವಾಗಿದೆ. ದಾವಣಗೆರೆ ತಾಲೂಕಿನಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾದ ಗ್ರಾಮ ಮತ್ತು ಮೂಲಭೂತ ಸೌಲಭ್ಯ ವಂಚಿತ ಗ್ರಾಮ ಕೋಡಿಹಳ್ಳಿ ಆಗಿದೆ. ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯದ ಮೂಲಕ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಚನ್ನಪ್ಪ ,ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ರತ್ನಮ್ಮ ರವೀಂದ್ರನಾಥ್, ಕಕ್ಕರಗೊಳ್ಳ ಗ್ರಾ.ಪಂ. ಅಧ್ಯಕ್ಷ ಗುತ್ತೆಪ್ಪ, ಉಪಾಧ್ಯಕ್ಷೆ ಆಶಾ, ಪ್ರಭಾರಿ ಅಪರ ಜಿಲ್ಲಾಧಿಕಾರಿ ಜಿ. ನಜ್ಮಾ ಇತರರು ಇದ್ದರು. ಮಹಾಂತೇಶ ಬೀಳಗಿ ನೇತೃತ್ವದ ಅಧಿಕಾರಿಗಳ ತಂಡಕ್ಕೆ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಿದರು. ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ
Davanagere: ಪಕ್ಷದಿಂದ ಯತ್ನಾಳ್ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?
Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ
Davanagere: ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್
Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ
You seem to have an Ad Blocker on.
To continue reading, please turn it off or whitelist Udayavani.