ಇಸ್ರೋಗೆ ಸರ್ಕಾರ ನೀಡೋ ಹಣ ವ್ಯರ್ಥ ಆಗೊಲ್ಲ
Team Udayavani, Mar 24, 2018, 3:33 PM IST
ದಾವಣಗೆರೆ: ಇಸ್ರೋ ಮೂಲಕ ಭಾರತ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುವುದು ವ್ಯರ್ಥ ಅಲ್ಲ, ಅದು ದೇಶದ ಉದ್ಧಾರಕ್ಕೆ ನೀಡಿದಂತೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕುಲಪತಿ, ಭಾರತೀಯ ಇಂಜಿನಿಯರ್‌ಗಳ ಅಕಾಡೆಮಿ ಅಧ್ಯಕ್ಷ ಪದ್ಮಭೂಷಣ ಡಾ| ಬಿ.ಎನ್. ಸುರೇಶ್ ಹೇಳಿದ್ದಾರೆ.
ಶುಕ್ರವಾರ, ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಭವನದಲ್ಲಿ ಸಾಧಕ ವಿದ್ಯಾರ್ಥಿಗಳ ಸನ್ಮಾನ, ಹೆಸರಾಂತ ವಿಜ್ಞಾನಿಗಳ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಸ್ರೋ ಮೂಲಕ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಕೇಂದ್ರ ಸರ್ಕಾರದ ಕ್ರಮವನ್ನು ಹಲವರು ಟೀಕಿಸುತ್ತಾರೆ. ಆದರೆ, ಸರ್ಕಾರ ಖರ್ಚು ಮಾಡುವ ಹಣ ವ್ಯರ್ಥವಾಗುವುದಿಲ್ಲ. ಇಸ್ರೋ ದೇಶದ ಉನ್ನತಿಗಾಗಿ ನಿರಂತರವಾಗಿ ದುಡಿಯುತ್ತಿದೆ ಎಂದರು.
ಇಂದು ನೀವು ನೋಡುವ ಟಿವಿ, ದೂರ ಸಂಪರ್ಕ, ಬಳಸುವ ಮೊಬೈಲ್ ಸೇರಿ ಅನೇಕ ಸಾಧನಗಳು ಲಭ್ಯವಾಗಿರುವುದು ಇದೇ ಇಸ್ರೋದ ಸಾಧನೆಯಿಂದ. ಬಾಹ್ಯಾಕಾಶದಲ್ಲಿ ಅತ್ಯುನ್ನತ ಸಾಧನೆಗೈದ ಜಗತ್ತಿನ 6 ದೇಶಗಳಲ್ಲಿ ಭಾರತ ಸಹ ಒಂದು. ದೇಶದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ, ಮಳೆ, ಕೃಷಿ ಸುಧಾರಣೆಗೆ ಸೂಕ್ತ ಮಾಹಿತಿ ನೀಡಲು ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ವಿಕ್ರಂ ಸಾರಾಭಾಯಿ, ಅಬ್ದುಲ್ ಕಲಾಂ ಸೇರಿದಂತೆ ಅನೇಕರು ಇಂದು ಇಸ್ರೋಗೆ ಅಪಾರ ಕೊಡುಗೆ ನೀಡಿದ್ದಾರೆ. ನಮ್ಮ ಸಂಸ್ಥೆ ಇಂದು ದೇಶದ ವಾಸಿಗಳ ಅನುಕೂಲಕ್ಕಾಗಿ 41 ಸ್ವಂತ ಉಪಗ್ರಹ ಹೊಂದಿದೆ. ಅಷ್ಟೇ ಅಲ್ಲ, 23 ಅನ್ಯ ದೇಶಗಳ ಸುಮಾರು 183 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಜಗತ್ತಿನಲ್ಲಿಯೇ ಹೆಸರುವಾಸಿಯಾಗಿರುವ ಅಮೇರಿಕಾದ 88 ಸಣ್ಣ ಸಣ್ಣ ಉಪಗ್ರಹಗಳನ್ನು ಇಸ್ರೋ ಕಕ್ಷೆಗೆ ಸೇರಿಸಿದೆ ಎಂದರೆ ನಮ್ಮ ಸಂಸ್ಥೆಯ ಸಾಧನೆ ಎಂತಹುದ್ದು ಎಂಬುದನ್ನು ಮನಗಾಣಬಹುದು ಎಂದು ಅವರು ತಿಳಿಸಿದರು.
ಇಸ್ರೋ ಇಂದು ಈ ಮಟ್ಟಕ್ಕೆ ಬೆಳೆಯುವ ಮುನ್ನ ಸಾಕಷ್ಟು ಏಳುಬೀಳು ಕಂಡಿದೆ. 1979ರಲ್ಲಿ ಮೊದಲ ಬಾರಿಗೆ ಸ್ವಂತ ಉಪಗ್ರಹ ಉಡ್ಡಯನ ವಾಹನ ಹೊಂದುವ ಯತ್ನ ವಿಫಲ ಆಯಿತು. ಅಂದಿನ ಇಸ್ರೋ ಮುಖ್ಯಸ್ಥರಾಗಿದ್ದ ಅಬ್ದುಲ್ ಕಲಾಂ ನಮ್ಮ ಯತ್ನ ವಿಫಲ ಆದ ಮರುಕ್ಷಣವೇ ಮುಂದಿನ ವರ್ಷ ನಾವು ಇದರಲ್ಲಿ ಯಶ ಕಾಣುತ್ತೇವೆ ಎಂದು ಘೋಷಿಸಿದರು. 1980ರಲ್ಲಿ ನಾವು ಮೊದಲ ಬಾರಿಗೆ ನಮ್ಮದೇ ರಾಕೆಟ್ ಬಳಸಿ, ಉಪಗ್ರಹ ಉಡ್ಡಯನ ಮಾಡಿದೆವು. ಅದಾಗಿ 37 ವರ್ಷ ಕಳೆದರೂ ಮತ್ತೂಂದು ದೇಶ ಇಂತಹ ಸಾಧನೆ ಮಾಡಲಾಗಿಲ್ಲ ಎಂದು ಅವರು ತಿಳಿಸಿದರು.
ಒಂದು ದೇಶದ ಅಭಿವೃದ್ಧಿಯಾಗಬೇಕಾದರೆ ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ ಅನಿವಾರ್ಯ. ಇಡೀ ಜಗತ್ತಿನ ದೊಡ್ಡಣ್ಣ ಎನ್ನಿಸಿಕೊಂಡಿರುವ ಅಮೇರಿಕಾ ಇದಕ್ಕೆ ಉತ್ತಮ ಉದಾಹರಣೆ. ಅಮೇರಿಕಾ ಇಂದು ಯಾವುದೇ ಜಾಗಕ್ಕೆ ಹೋಗದೆ ತನ್ನ ವಿರೋಧಿ ದೇಶದ ಮೇಲೆ ಯುದ್ಧ ಸಾರುವ ತಾಕತ್ತು ಹೊಂದಿದೆ. ಈ ತಾಕತ್ತು ಅದಕ್ಕೆ ಸಿಕ್ಕಿರುವುದು ಇದೇ ತಂತ್ರಜ್ಞಾನದಿಂದ. ಇನ್ನು 20 ವರ್ಷಗಳಲ್ಲಿ ನಮ್ಮ ದೇಶ ಸಹ ತಂತ್ರಜ್ಞಾನದಲ್ಲಿ ಬಹು ದೊಡ್ಡ ಎತ್ತರಕ್ಕೆ ತಲುಪಲಿದೆ ಎಂದು ಅವರು ಹೇಳಿದರು.
ನಮ್ಮ ದೇಶದ ಇಂದು ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ಮಾಧ್ಯಮದವರು ಏನೇ ಟೀಕೆ ಮಾಡಿದರೂ ದೇಶದ ಆರ್ಥಿಕ ಸ್ಥಿತಿ ನಿರಂತರವಾಗಿ ಸುಧಾರಣೆ ಕಾಣುತ್ತಿದೆ. ಕೆಲವೇ ವರ್ಷಗಳಲ್ಲಿ ನಾವು ಅಭಿವೃದ್ಧಿಯ ದಾಪುಗಾಲು ಇಡಲಿದ್ದೇವೆ. ಯುವ ಪೀಳಿಗೆ ಇದನ್ನು ಅರ್ಥಮಾಡಿಕೊಂಡು ಮುಂದುವರಿಯಬೇಕು. ಇಸ್ರೋ ಸೇರಿದಂತೆ ಎಲ್ಲಾ ವಲಯದಲ್ಲಿ ಈವರೆಗೆ ನಾವು ಮಾಡಿರುವ ಸಾಧನೆ ಸ್ವಲ್ಪ ಮಾತ್ರ. ಈಗ ಮಾಡಿದ್ದಕ್ಕಿಂತ 10 ಪಟ್ಟು ಸಾಧನೆಯನ್ನು ಯುವ ಪೀಳಿಗೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ಕಾಲೇಜು ಅಧ್ಯಕ್ಷ ಎ.ಸಿ. ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಪ್ರೊ| ಬಿ.ಇ. ರಂಗಸ್ವಾಮಿ, ಇಸ್ರೋ ವಿಜ್ಞಾನಿ ಡಿ.ಎನ್. ಪ್ರಸಾದ್, ಡಾ| ಎಂ.ಎಸ್. ನಾಗರಾಜ್, ಪ್ರಾಂಶುಪಾಲ ಸುಬ್ರಮಣ್ಯ ಸ್ವಾಮಿ ಇತರರು ವೇದಿಕೆಯಲ್ಲಿದ್ದರು.
ಇಸ್ರೋಗೆ ಸೇರಿದ್ರೆ ಶಿಕ್ಷಣ ಜತೆ ವೇತನ
ಇಸ್ರೋಗೆ ಬೇಕಾದ ವಿಜ್ಞಾನಿಗಳ ಶೋಧಕ್ಕಾಗಿ ಸ್ವಂತ ಶಿಕ್ಷಣ ಸಂಸ್ಥೆ ಆರಂಭಿಸಿದೆ. ಐಐಎಸ್‌ಎಸ್‌ಟಿಯ ಮೂಲಕ ದ್ವಿತೀಯ
ಪಿಯುಸಿ ನಂತರದ ಶಿಕ್ಷಣ ನೀಡಲು ನಮ್ಮ ಸಂಸ್ಥೆ ಮುಂದಾಗಿದೆ. ವರ್ಷಕ್ಕೆ 140 ವಿದ್ಯಾರ್ಥಿಗಳನ್ನು ನಾವು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಊಟ, ವಸತಿ ಜೊತೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವ
ಜೊತೆಗೆ ಪ್ರತೀ ಸೆಮಿಸ್ಟರ್ ನಂತರ ಕಲಿಕಾ ವೇತನ ಸಹ ನೀಡಲಾಗುವುದು. ಸದ್ಯ ನಮ್ಮ ಸಂಸ್ಥೆ ಪ್ರವೇಶಕ್ಕೆ ದೇಶಾದ್ಯಂತ ಸುಮಾರು 4 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ.
ಡಾ| ಬಿ.ಎನ್. ಸುರೇಶ್, ಇಇಎಸ್‌ಎಸ್‌ಟಿ ಕುಲಪತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.