ಹೆಸರಿಗಷ್ಟೇ ನವೀನ; ಸೌಲಭ್ಯವಿಹೀನ!
Team Udayavani, Feb 22, 2019, 7:11 AM IST
ದಾವಣಗೆರೆ: ದೇಶದಲ್ಲೇ ಅತಿ ದೊಡ್ಡದು ಎಂಬ ಹೆಗ್ಗಳಿಕೆಯ ದಾವಣಗೆರೆಯ ನವೀನ ಮಾದರಿಯ ಜಾನುವಾರು ಮಾರುಕಟ್ಟೆಯಲ್ಲಿ ಸೌಲಭ್ಯದ ಕೊರತೆಯಿಂದಾಗಿ ಮಾರುಕಟ್ಟೆಯ ಮೂಲ ಉದ್ದೇಶವೇ ಸಾಫಲ್ಯಗೊಂಡಿಲ್ಲ!.
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕನಸಿನ ಯೋಜನೆ ನವೀನ ಮಾದರಿಯ ಜಾನುವಾರು ಮಾರುಕಟ್ಟೆಯು ದೇಶದಲ್ಲೇ ದೊಡ್ಡದು ಎಂಬ ಖ್ಯಾತಿಗೆ ಪಾತ್ರವಾಗಿದೆ. ಅಂತಹ ದೊಡ್ಡದಾದ ಜಾನುವಾರು ಮಾರುಕಟ್ಟೆಯಲ್ಲಿ ಈವರೆಗೆ ವಿದ್ಯುತ್ ಸೌಲಭ್ಯ, ಮಾರುಕಟ್ಟೆ ಪಕ್ಕದಲ್ಲೇ ಪಶು ಆಸ್ಪತ್ರೆ, ಜಾನುವಾರುಗಳಿಗೆ ಅಗತ್ಯವಾದ ಮೇವಿನ ಸೌಲಭ್ಯ, ತಂಗುವಂತಹ ರೈತರು, ವ್ಯಾಪಾರಸ್ಥರು, ದಲ್ಲಾಳಿಗಳು, ದವಣಿಕಾರರಿಗೆ ಕ್ಯಾಂಟೀನ್ ಮತ್ತು ಸುರಕ್ಷತಾ ವ್ಯವಸ್ಥೆಯೇ ಇಲ್ಲ. ಹಾಗಾಗಿ 10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಜಾನುವಾರು ಮಾರುಕಟ್ಟೆಯ ಮೂಲ ಉದ್ದೇಶವೇ ಸರಿಯಾಗಿ ಈಡೇರುತ್ತಿಲ್ಲ.
ಕೃಷಿ ಮಾರುಕಟ್ಟೆ ಸಚಿವರಾಗಿದ್ದ ಎಸ್. ಎಸ್. ಮಲ್ಲಿಕಾರ್ಜುನ್ ಜಪಾನ್ ಪ್ರವಾಸದಲ್ಲಿ ದನದ ಸಂತೆ… ಜಾಗ ನೋಡಿ ಆಕರ್ಷಿತರಾಗಿ ದಾವಣಗೆರೆಯಲ್ಲೂ ಅದೇ ರೀತಿಯ ಮಾರುಕಟ್ಟೆ ನಿರ್ಮಾಣಕ್ಕೆ ನಿಶ್ಚಯಿಸಿದ್ದರು. ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಾಗದಲ್ಲಿ ಕೊನೆಯಲ್ಲಿರುವ ದನದ ಸಂತೆಯ ಜಾಗದಲ್ಲಿ ಜಪಾನ್ ಮಾದರಿಯಲ್ಲಿ 150 + 400 ಅಡಿ ಸುತ್ತಳತೆಯ ಜಾಗದಲ್ಲಿ 10 ಕೋಟಿ ವೆಚ್ಚದಲ್ಲಿ ನವೀನ ಮಾದರಿ ಜಾನುವಾರು ಮಾರುಕಟ್ಟೆಯೂ ಸಿದ್ಧಗೊಂಡಿದೆ.
ನವೀನ ಮಾದರಿಯ ಜಾನುವಾರು ಮಾರುಕಟ್ಟೆಯಲ್ಲಿ ರಾಸಿನ ಮುಖ ಇಂತದ್ದೇ ದಿಕ್ಕಿಗೆ ಇರಬೇಕು ಎಂದೇ ವಾಸ್ತು ಪ್ರಕಾರ ನಿರ್ಮಾಣ ಮಾಡಲಾಗಿದೆ. ಸಂತೆಗೆ ಬರುವ ರಾಸುಗಳು ಮಾರಾಟ ಆಗದೇ ಇದ್ದರೆ ಮಾರುಕಟ್ಟೆಯಲ್ಲೇ ಜಾನುವಾರುಗಳ ಜೊತೆಗೇ ಇರುವ ವ್ಯವಸ್ಥೆಯೂ ಮಾಡಲಾಗಿದೆ.
ಆದರೆ, ದೇಶದಲ್ಲೇ ದೊಡ್ಡದಾದ ನವೀನ ಮಾದರಿಯ ಜಾನುವಾರು ಮಾರುಕಟ್ಟಗೆ ಶಾಶ್ವತವಾದ ವಿದ್ಯುತ್ ಸಂಪರ್ಕ ಈಗಲೂ ಇಲ್ಲ. ತಾತ್ಕಾಲಿಕವಾಗಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಈಗ ವಿದ್ಯುತ್ ಲೈನ್ ಕಾಮಗಾರಿ ಮುಗಿಯುವ ಹಂತದಲ್ಲಿದೆ. ವಿದ್ಯುತ್ ಲೈನ್ ಕಾಮಗಾರಿ, ವಿದ್ಯುತ್ ಪರಿವರ್ತಕ ಅಳವಡಿಕೆ ಇನ್ನೂ ಆಗಬೇಕಿದೆ.
ಶನಿವಾರ ಮತ್ತು ಭಾನುವಾರ ನಡೆಯುವಂತಹ ದನದ ಸಂತೆಗೆ ರೈತರು ತರುವಂತಹ ರಾಸುಗಳು ಮಾರಾಟವಾಗದೇ ಇದ್ದಲ್ಲಿ ಮಾರುಕಟ್ಟೆಯಲ್ಲಿ ಇರುವ ವ್ಯವಸ್ಥೆಯೇನೋ ಇದೆ. ಆದರೆ, ಜಾನುವಾರುಗಳಿಗೆ ಅತೀ ಮುಖ್ಯವಾಗಿ ಬೇಕಾದ ಮೇವನ್ನು ಸಂಬಂಧಿತ ರೈತರೇ ತಂದುಕೊಳ್ಳಬೇಕು. ರಾಸುಗಳ ಜೊತೆಗೆ ತಂದಂತಹ ಮೇವು ಖಾಲಿಯಾದರೆ ಸ್ವಂತ ಖರ್ಚಿನಲ್ಲಿ ಖರೀದಿ ಮಾಡಬೇಕು. ಒಂದೊಮ್ಮೆ ದುಡ್ಡು ಇಲ್ಲದೇ ಹೋದರೆ ರಾಸುಗಳಿಗೆ ಉಪವಾಸವೇ ಗತಿ!.
ನಾವು ಬರುವುದೇ ಆಕಳು, ದನ, ಕರು ಮಾರಾಟಕ್ಕಾಗಿ. ಹೆಂಗೋ ಮಾರಾಟ ಆದರೆ ಏನೂ ಆಗೊಲ್ಲ. ಆಗದೇ ಹೋದರೆ ಇಲ್ಲೇ ಉಳಿದುಕೊಳ್ಳಬೇಕು. ದುಡ್ಡು ಇದ್ದರೆ ಮೇವಿಗೆ ವ್ಯವಸ್ಥೆ ಆಗುತ್ತದೆ. ಇಲ್ಲದೇ ಹೋದರೆ ಏನು ಮಾಡಬೇಕು. ಮೂಕಪ್ರಾಣಿಗಳನ್ನು ಉಪವಾಸ ಕಟ್ಟಿ ಹಾಕಬೇಕಾ…. ಎಂದು ಪ್ರಶ್ನಿಸುವ ಜಗಳೂರು ತಾಲೂಕಿನ ಮುಗ್ಗಿದರಾಗಿಹಳ್ಳಿಯ ಕೆಂಚಪ್ಪ, ಸರ್ಕಾರದವರು ಮೇವಿನ ವ್ಯವಸ್ಥೆ ಮಾಡಿದರೆ ಒಳ್ಳೆಯದು ಎನ್ನುತ್ತಾರೆ.
ಇಲ್ಲಿ ಕಟ್ಟಿ ಹಾಕಿಕೊಂಡಿರುವ ದನ-ಕರು-ಆಕಳುಗಳಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ ಆಸ್ಪತ್ರೆಗೆ ಬಹಳ ದೂರ ಹೋಗಬೇಕು. ಇಲ್ಲೇ ಪಕ್ಕದಲ್ಲೇ(ಮಾರುಕಟ್ಟೆ) ಆಸ್ಪತ್ರೆ ಮಾಡಿದರೆ ಅನುಕೂಲ ಆಗುತ್ತದೆ. ಬಹಳ ದೂರ ದನ-ಕರ- ಹಿಡಿದುಕೊಂಡು ಹೋಗೋದು ತಪ್ಪುತ್ತದೆ. ಇಲ್ಲೇ ಆಸ್ಪತ್ರೆ ಮಾಡುತ್ತೇವೆ ಅಂತಿದ್ರೂ ಈವರೆಗೆ ಮಾಡಿಲ್ಲ. ಇಲ್ಲೇ ಪಕ್ಕದಲ್ಲೇ ಆಸ್ಪತ್ರೆ ಮಾಡಿದರೆ ಬಹಳ ಒಳ್ಳೆಯದು ಎನ್ನುತ್ತಾರೆ.
ರಾತ್ರಿ ಹೊತ್ತಿನಲ್ಲಿ ಕಾಣದ ಊರಾಗೆ ದನ-ಕರ ಕಟ್ಟಿಕೊಂಡು ಇರೋದು ಬಹಳ ಕಷ್ಟ. ಊರ ಹೊರಗೆ ಮಾರ್ಕೆಟ್ ಇದೆ. ಏನಾದರೂ ಹೆಚ್ಚು ಕಮ್ಮಿ ಆದರೆ ಯಾರು ಗತಿ. ಇಲ್ಲಿ ಸೆಕ್ಯುರಿಟಿನೇ ಇಲ್ಲ. ಅವಾಗ-ಈವಾಗ ಪೊಲೀಸ್ನೋರು ಬೀಟ್ ಬರೋದ್ ಬಿಟ್ರೆ ಬೇರೆ ಏನೂ ರಕ್ಷಣೆಯೇ ಇಲ್ಲ. ಈವರೆಗೆ
ಯಾವುದೇ ಅಚಾತುರ್ಯ ಆಗಿಲ್ಲ. ಒಂದು ವೇಳೆ ಏನಾದರೂ ಆದರೆ ಯಾರು ಹೊಣೆ. ಹಾಗಾಗಿ ಇಲ್ಲಿ ಎಪಿಎಂಸಿಯಿಂದಲೇ ಸೆಕ್ಯುರಿಟಿ ವ್ಯವಸ್ಥೆ ಆಗಬೇಕು. ಬಂದಂತಹ ರೈತರಿಗೆ ಅನುಕೂಲ ಆಗುವಂತೆ ಹತ್ತಿರದಲ್ಲೇ ಕ್ಯಾಂಟೀನ್, ಆಸ್ಪತ್ರೆ ಮಾಡುವುದು ಅತೀ ಮುಖ್ಯ ಎನ್ನುತ್ತಾರೆ ದಾವಣಗೆರೆಯ ಶೆಟ್ಟರ ಮಂಜಣ್ಣ.
ತಮಿಳುನಾಡು, ಆಂಧ್ರ ಎಲ್ಲಾ ಕಡೆ ಓಡಾಡಿದೀನಿ. ದಾವಣಗೆರೆಯಲ್ಲಿ ಇರುವಂತಹ ಮಾರ್ಕೆಟ್ ಎಲ್ಲಿಯೂ ಇಲ್ಲ. ಇರುವಂತಹ ಕೆಲವಾರು ಸಮಸ್ಯೆ ಬಗೆಹರಿಸಿದರೆ ದಾವಣಗೆರೆಯ ದನದ ಮಾರ್ಕೆಟ್ ಮತ್ತೆ ಒಳ್ಳೆಯ ಹೆಸರು ಪಡೆಯುತ್ತೆ. ಸಂಬಂಧಿತರು ಈ ಬಗ್ಗೆ ಗಮನ ಹರಿಸಬೇಕು ಎನ್ನುತ್ತಾರೆ ಅವರು
ಸದ್ಬಳಕೆ ಆಗಬೇಕು
10 ಕೋಟಿ ವೆಚ್ಚದಲ್ಲಿ ನವೀನ ಮಾದರಿಯ ಜಾನುವಾರು ಮಾರುಕಟ್ಟೆ ನಿರ್ಮಾಣ ಮಾಡಿರುವುದು ಸ್ವಾಗತಾರ್ಹ. ಅದು ಸದ್ಬಳಕೆಯಾದಾಗ ಮಾತ್ರವೇ 10 ಕೋಟಿ ಖರ್ಚು ಮಾಡಿದ್ದೂ ಸಾರ್ಥಕ. ಹಿಂದೆ ಹಾಸನ ಜಿಲ್ಲೆಯ ಗಂಡಸಿ… ದನದ ಮಾರ್ಕೆಟ್ ಬಿಟ್ಟರೆ ದಾವಣಗೆರೆ ಮಾರ್ಕೆಟ್ ಭಾರೀ ಫೇಮಸ್. ಬಹಳ ದೂರದ ಕಡೆಯಿಂದ ದಾವಣಗೆರೆಯ ದನದ ಮಾರ್ಕೆಟ್‌ಗೆ ರೈತರು, ದನ-ಕರು ಕೊಂಡುಕೊಳ್ಳುವರು ಬರುತ್ತಿದ್ದರು. ಈಗ ದಾವಣಗೆರೆ ಮಾರ್ಕೆಟ್‌ಗೆ ಹಿಂದಿನಷ್ಟು ದನ-ಕರು, ರೈತರು, ಕೊಳ್ಳುವವರು ಬರುತ್ತಲೇ ಇಲ್ಲ. ಯಾವ ಕಾರಣಕ್ಕೆ ಬರುತ್ತಿಲ್ಲ ಎಂಬುದನ್ನ ಸಂಬಂಧಿತರು ಪತ್ತೆ ಹಚ್ಚಿ, ಅ ಸಮಸ್ಯೆ ಬಗೆಹರಿಸಿ, ಮತ್ತೆ ಮಾರ್ಕೆಟ್ ಅಭಿವೃದ್ಧಿಪಡಿಸಬೇಕು. ಆಗ ಆಧುನಿಕ ಮಾದರಿಯ ಜಾನುವಾರು ಮಾರುಕಟ್ಟೆ ಮಾಡಿದ್ದು ಸಾರ್ಥಕ ಮತ್ತು ಸದ್ಬಳಕೆಯೂ ಆಗುತ್ತದೆ ಎನ್ನುತ್ತಾರೆ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಬಿ.ಎಂ. ಸತೀಶ್.
ರಾ. ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.