ಬುದ್ಧಿ-ಹೃದಯ ಸಂಗಮದ ವಿದ್ಯೆ ಅಗತ್ಯ
Team Udayavani, Jan 11, 2018, 2:17 PM IST
ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಬುದ್ಧಿ ಮತ್ತು ಹೃದಯ ಸಂಗಮದ ವಿದ್ಯೆಯ ಅಗತ್ಯತೆ ಇದೆ ಎಂದು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.
ಲಯನ್ಸ್ ಕ್ಲಬ್ ಶತಮಾನೋತ್ಸವ ಅಂಗವಾಗಿ ಬುಧವಾರ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿದ್ದ 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮತ್ತು ನಾಲ್ವರು ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಸಮುದಾಯದ ಬುದ್ಧಿ ಬೆಳೆಸುವ ಜೊತೆಗೆ ಮಾನವೀಯತೆ, ಗುರು-ಹಿರಿಯರ ಗೌರವಿಸುವದನ್ನು ತಿಳಿಸುವ ಹೃದಯವಂತಿಕೆ ಕಲಿಸುವ ವಿದ್ಯೆ ಬೇಕಿದೆ ಎಂದರು.
ಈಗ ಎಲ್ಲೆಡೆ ಕಂಡು ಬರುವ ಭ್ರಷ್ಟಾಚಾರಕ್ಕೆ ಹೆಚ್ಚು ಓದಿದವರೇ ಕಾರಣರಾಗುತ್ತಿದ್ದಾರೆ. ಕುಟುಂಬ ಸದಸ್ಯರನ್ನು ಕಡೆಗಾಣಿಸುವ, ತಂದೆ-ತಾಯಿಯನ್ನು
ವೃದ್ಧಾಶ್ರಮಕ್ಕೆ ದೂಡುವಂತಹವರು ಹೆಚ್ಚಾಗಿ ಓದಿದವರೇ. ಹಾಗಾಗಿ ವಾಸ್ತವತೆ, ಮಾನವೀಯತೆ, ನೈತಿಕತೆ ಬೆಳೆಸುವ ಶಿಕ್ಷಣ ಬೇಕಾಗಿದೆ ಎಂದು
ತಿಳಿಸಿದರು.
ಪ್ರತಿ ವರ್ಷ ರ್‍ಯಾಂಕ್ ಪಡೆಯುತ್ತಿದ್ದಂತಹ ವಿದ್ಯಾರ್ಥಿಗಳು ಯಾವುದೋ ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ, ಫೇಲಾದ ಕಾರಣಕ್ಕೆ ಆತ್ಮಹತ್ಯೆ
ಮಾಡಿಕೊಳ್ಳುತ್ತಾರೆ ಎಂದರೆ ಅಂತಹ ಶಿಕ್ಷಣದಿಂದ ಯಾವ ಪ್ರಯೋಜನ ಆಗದು. ಶಿಕ್ಷಣ ಎಂತಹದ್ದೇ ಸಂದರ್ಭವನ್ನೇ ಆಗಲಿ ಧೈರ್ಯದಿಂದ ಎದುರಿಸಿ,
ಜೀವನ ಸಾಗಿಸುವ ಶಕ್ತಿ ತುಂಬುವ ಮನೋಸ್ಥೈರ್ಯ ಬೆಳೆಸುವಂತಾಗಬೇಕು. ವಿದ್ಯಾರ್ಥಿ ಸಮುದಾಯ ಶೈಕ್ಷಣಿಕ, ನೈತಿಕತೆ ಮತ್ತು ಸಾಂಸ್ಕೃತಿಕತೆಯಿಂದ ಹಿಂದೆ ಉಳಿಯಬಾರದು. ಶಿಕ್ಷಣದಿಂದ ಪಡೆಯುವಂತಹ ಜವಾಬ್ದಾರಿಯನ್ನು ಅತೀ ಸಮರ್ಥವಾಗಿ ನಿಭಾಯಿಸಬೇಕು ಎಂದು ತಿಳಿಸಿದರು.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ… ಎಂದು ಬಸವಣ್ಣನವರು ಹೇಳುವಂತೆ ನಿಜವಾದ ಜ್ಞಾನ ಮಾನವರನ್ನು
ದುರ್ಬಲರನ್ನಾಗಿಸುವುದಕ್ಕಿಂತಲೂ ಜೀವನ ಸಂಕಷ್ಟವನ್ನು ಧೈರ್ಯದಿಂದ ಎದುರಿಸುವ ಶಕ್ತಿ ಕೊಡುವಂತಾಗಬೇಕು. ಶಿಕ್ಷಣ ಮನೋಬಲ ಬೆಳೆಸುವ,
ಆತ್ಮವಿಶ್ವಾಸ ಹೆಚ್ಚಿಸುವ, ಬದುಕುವ ಕಲೆಯನ್ನು ಕಲಿಸುವಂತಿರಬೇಕು. ಜೀವನ ಪರೀಕ್ಷೆಯಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆ ಆಗಬೇಕು. ಆದರೆ, ರ್‍ಯಾಂಕ್ ಪಡೆದಂತಹವರೇ ಜೀವನದ ಪರೀಕ್ಷೆಯಲ್ಲಿ ಫೇಲ್ ಆಗುತ್ತಿದ್ದಾರೆ. ನೈತಿಕ ನೆಲೆಗಟ್ಟು ಕುಸಿಯುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣ ನಮ್ಮಲ್ಲಿನ ನೈತಿಕ ಮಟ್ಟ ಹೆಚ್ಚಿಸುವಂತಾಗಬೇಕು ಎಂದು ಆಶಿಸಿದರು.
ಅಬು ಪರ್ವತದ ರಾಜಯೋಗಿನಿ ಬ್ರಹ್ಮಕುಮಾರಿ ರವಿಕಲಾ ಮಾತನಾಡಿ, ಶಿಕ್ಷಣ ಸಭ್ಯತೆ, ಶಿಸ್ತು, ವಿಶ್ವ ಭಾತೃತ್ವ, ಕ್ರಿಯಾಶೀಲತೆ, ಜಾಗೃತಿ, ಸಹನೆ, ಸಮಗ್ರತೆ, ಆಶಾವಾದತನ ಬೆಳೆಸುವಂತಾಗಬೇಕು. ಸಾಕ್ಷರತೆ ಕೇವಲ ಅಕ್ಷರಾಭ್ಯಾಸ, ಮೌಲ್ಯಗಳಿಗೆ ಸೀಮಿತವಾಗದೆ ನಮ್ಮ, ಕುಟುಂಬ, ದೇಶ, ಸಮಾಜದ ಉದ್ಧಾರಕ್ಕೆ ಸಹಾಯವಾಗಬೇಕು ಎಂದರು.
ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕ ಅಥಣಿ ಎಸ್. ವೀರಣ್ಣ ಮಾತನಾಡಿ, ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ದೊರೆತ 50 ಪೈಸೆ ವಿದ್ಯಾರ್ಥಿ
ವೇತನ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ಈಗ ಹಿಂದಿನಂತೆ ಕಷ್ಟ ಇಲ್ಲ. ಇರುವಂತಹ ಸಾಕಷ್ಟು ಸೌಲಭ್ಯ ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯದ ಬದುಕನ್ನು ನಿರ್ಮಾಣ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಇ.ಎಂ.ಮಂಜುನಾಥ್ ಅಧ್ಯಕ್ಷತೆ, ದಾವಣಗೆರೆ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಲೀಲಾಜೀ ಸಾನ್ನಿಧ್ಯ ವಹಿಸಿದ್ದರು. ಹೋಟೆಲ್ ಉದ್ಯಮಿಗಳಾದ ಅಣಬೇರು ರಾಜಣ್ಣ, ಮೋತಿ ಪರಮೇಶ್ವರರಾವ್, ಪತ್ರಕರ್ತ ಎಂ.ಎಸ್. ವಿಕಾಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಎಚ್. ಎಸ್. ಮಂಜುನಾಥ್ ಕುರ್ಕಿ, ತಾಲೂಕು ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ಲಯನ್ಸ್ ರಾಜ್ಯಪಾಲ ಜಿ. ನಾಗನೂರು, ಲಯನೆಸ್ ಅಧ್ಯಕ್ಷೆ ಭಾಗ್ಯಶ್ರೀ ಮಂಜುನಾಥ್, ಡಿಡಿಪಿಐ ಕೆ. ಕೋದಂಡರಾಮ, ಇತರರು ಇದ್ದರು.
ಅಜ್ಜಂಪುರಶೆಟ್ರಾ ಮೃತ್ಯುಂಜಯ ಸ್ವಾಗತಿಸಿದರು. ಸುರಭಿ ಶಿವಮೂರ್ತಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.