ಹದ ಮಳೆ ಬಿದ್ದೆಡೆ ಮಾತ್ರ ಬಿತ್ತನೆ
Team Udayavani, Jun 14, 2017, 1:27 PM IST
ದಾವಣಗೆರೆ: ಈವರೆಗೂ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನಲ್ಲಾಗಲಿ ಎಲ್ಲಾ ಕಡೆ ಹದ ಮಳೆಯಾಗದದಿದ್ದರಿಂದ ನಿರೀಕ್ಷಿತ ಪ್ರಮಾಣದ ಬಿತ್ತನೆಗೆ ಹಿನ್ನಡೆ ಆಗಿದೆ. ಈ ಬಾರಿಯ ಮುಂಗಾರು ಎಲ್ಲಾ ಕಡೆ ಉತ್ತಮವಾಗಿರಲಿದೆ ಎಂಬ ಹವಾಮಾನ ಇಲಾಖೆ ವರದಿ ಕಳೆದ ಎರಡು ವರ್ಷದಲ್ಲಿ ಭೀಕರ ಬರಕ್ಕೆ ತುತ್ತಾಗಿರುವ ದಾವಣಗೆರೆ ಜಿಲ್ಲೆಯ ರೈತರಲ್ಲಿ ಆಶಾದಾಯಕ ವಾತಾವರಣ ಮೂಡಿಸಿದ್ದರೂ ವಾಸ್ತವದಲ್ಲಿ ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆಯಾದ ಕಾರಣಕ್ಕೆ ಚದುರಿದಂತೆ ಬಿತ್ತನೆ ಆಗಿದೆ ಮತ್ತು ಆಗುತ್ತಿದೆ.
ದಾವಣಗೆರೆ ತಾಲೂಕಿನ ಹೆಬ್ಟಾಳು, ಕೊಡಗನೂರು ಭಾಗದಲ್ಲಿ ಒಂದಷ್ಟು ಗಟ್ಟಿ ಮಳೆಯಾಗಿದೆ. ಹಾಗಾಗಿ ಅಲ್ಲಿ ಬಿತ್ತನೆ ನಡೆಯುತ್ತಿದೆ. ಅದೇ ಪಕ್ಕದ ಆನಗೋಡು, ಕಂದನಕೋವಿ ಭಾಗದಲ್ಲಿ ಹದ ಮಳೆಯಾಗದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಮಂದಗತಿಯಲ್ಲಿದೆ. ಆದರೆ, ಕೆಲವು ಪ್ರದೇಶದಲ್ಲಿ ಈವರೆಗೆ ಬಿತ್ತನೆಯೇ ಪ್ರಾರಂಭವಾಗಿಲ್ಲ.
ಜಗಳೂರು ತಾಲೂಕಿನ ಕಸಬಾ ಮತ್ತು ಹೊಸಕೆರೆ ಹೋಬಳಿ ಭಾಗದಲ್ಲಿ ಗಟ್ಟಿ ಮಳೆಯಾದ ಹಿನ್ನೆಲೆಯಲ್ಲಿ ಬಿತ್ತನೆ ನಡೆಯುತ್ತಿದೆ. ಬಿಳಿಚೋಡು ಹೋಬಳಿಯಲ್ಲಿ ಮಳೆಯ ಕೊರತೆ ಹಿನ್ನೆಲೆಯಲ್ಲಿ ಬಿತ್ತನೆಯ ಆರಂಭಕ್ಕೆ ರೈತರು ಕಾಯುವಂತಾಗಿದೆ. ಅರೆ ಮಲೆನಾಡು ಹೊನ್ನಾಳಿ ತಾಲೂಕಿನ ನ್ಯಾಮತಿ ಹೋಬಳಿಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದರೆ ಇತರೆ ಹೋಬಳಿಯಲ್ಲಿ ನ್ಯಾಮತಿ ಹೋಬಳಿಯ ವಾತಾವರಣ ಕಂಡು ಬರುತ್ತಿಲ್ಲ.
ಹರಪನಹಳ್ಳಿ ತಾಲೂಕಿನ ಚಿಗಟೇರಿ ಹೋಬಳಿಯಲ್ಲಿ ಮಳೆಯಿಂದಾಗಿ ಬಿತ್ತನೆ ಕಾರ್ಯ ಭರದಿಂದ ಸಾಗುತ್ತಿದ್ದರೆ. ಇತರೆ ಹೋಬಳಿಯಲ್ಲಿ ಅಂತಹ ವಾತಾವರಣ ಇಲ್ಲ. ಚನ್ನಗಿರಿ ತಾಲೂಕಿನಲ್ಲಿ ಮಾತ್ರವೇ ಎಲ್ಲಾ ಎಲ್ಲಾ ಕಡೆ ಒಂದಷ್ಟು ಗಟ್ಟಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಸಮಾನವಾಗಿ ನಡೆಯುತ್ತಿದೆ.
ಮಳೆಯ ಕೊರತೆ: ದಾವಣಗೆರೆ ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆಯ ಪ್ರಮಾಣ 666.2 ಮಿಲಿ ಮೀಟರ್. ಜನವರಿ 1 ರಿಂದ ಜೂ.13ರ ವರೆಗೆ ಆಗಬೇಕಾಗಿದ್ದ ಮಳೆಯ ಪ್ರಮಾಣ 160.3 ಮಿಲಿ ಮೀಟರ್. ಈವರೆಗೆ 110.7 ಮಿಲಿ ಮೀಟರ್ ಮಳೆಯಾಗಿದೆ. ಅಲ್ಲಿಗೆ 50 ಮಿಲಿ ಮೀಟರ್ ಮಳೆ ಕಡಿಮೆ ಆಗಿದೆ.
ಜನವರಿಯಲ್ಲಿ 0.9 ಮಿಲಿ ಮೀಟರ್ ಗೆ 0.1 ಮಿಲಿ ಮೀಟರ್, ಫೆಬ್ರವರಿಯಲ್ಲಿ 1 ಮಿಲಿ ಮೀಟರ್ಗೆ 0.1 ಮಿಲಿ ಮೀಟರ್, ಮಾರ್ಚ್ನಲ್ಲಿ 4.5 ಮಿಲಿ ಮೀಟರ್ಗೆ 4.9 ಮಿಲಿ ಮೀಟರ್, ಏಪ್ರಿಲ್ನಲ್ಲಿ 36 ಮಿಲಿ ಮೀಟರ್ಗೆ 14.3 ಮಿಲಿ ಮೀಟರ್, ಮೇನಲ್ಲಿ 116.7 ಮಿಲಿ ಮೀಟರ್ಗೆ 54.7 ಮಿಲಿ ಮೀಟರ್, ಜೂನ್ನಲ್ಲಿ ಈವರೆಗೆ 33.6 ಮಿಲಿ ಮೀಟರ್ಗೆ 36.6 ಮಿಲಿ ಮೀಟರ್ ಮಳೆಯಾಗಿದೆ.
ತಾಲೂಕುವಾರು ಸಹ ಮಳೆಯ ಕೊರತೆ ಆಗಿದೆ. ದಾವಣಗೆರೆಯಲ್ಲಿ -35, ಹರಪನಹಳ್ಳಿಯಲ್ಲಿ -50, ಹರಿಹರದಲ್ಲಿ -36, ಹೊನ್ನಾಳಿಯಲ್ಲಿ -4 ಹಾಗೂ ಜಗಳೂರಿನಲ್ಲಿ -8 ಮಿಲಿ ಮೀಟರ್ ಮಳೆ ಕೊರತೆ ಆಗಿದೆ.
1,373 ಹೆಕ್ಟೇರ್ನಲ್ಲಿ ಬಿತ್ತನೆ: ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ದಾವಣಗೆರೆ ತಾಲೂಕಿನಲ್ಲಿ 64 ಸಾವಿರ ಹೆಕ್ಟೇರ್, ಹರಪನಹಳ್ಳಿಯಲ್ಲಿ 80 ಸಾವಿರ ಹೆಕ್ಟೇರ್, ಜಗಳೂರಿನಲ್ಲಿ 54 ಸಾವಿರ ಹೆಕ್ಟೇರ್, ಹರಿಹರದಲ್ಲಿ 32 ಸಾವಿರ ಹೆಕ್ಟೇರ್, ಹೊನ್ನಾಳಿ ಮತ್ತು ಚನ್ನಗಿರಿಯಲ್ಲಿ ತಲಾ 5 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಇದೆ.
ಜಿಲ್ಲೆಯಲ್ಲಿ ಈವರೆಗೆ 18,000 ಹೆಕ್ಟೇರ್ ಶೇಂಗಾ ಬಿತ್ತನೆ ಗುರಿಯಲ್ಲಿ 600 ಹೆಕ್ಟೇರ್, 30 ಸಾವಿರ ಹೆಕ್ಟೇರ್ ಹತ್ತಿ ಗುರಿಯಲ್ಲಿ 500 ಹೆಕ್ಟೇರ್, 1,58 ಲಕ್ಷ ಹೆಕ್ಟೇರ್ ಮೆಕ್ಕೆಜೋಳದ ಗುರಿಯಲ್ಲಿ 130 ಹೆಕ್ಟೇರ್ ನಲ್ಲಿ ಬಿತ್ತನೆಯಾಗಿದೆ. ಇನ್ನುಳಿದ ಪ್ರದೇಶದಲ್ಲಿ ಜೋಳ, ಅಕ್ಕಡಿ ಬೆಳೆ ಬಿತ್ತನೆ ಮಾಡಲಾಗಿದೆ.
ಕಳೆದ ಸಾಲಿನ ಮುಂಗಾರು ಹಂಗಾಮಿನಲ್ಲಿ ಹರಪನಹಳ್ಳಿಯಲ್ಲಿ 81,595 ಹೆಕ್ಟೇರ್, ಜಗಳೂರಿನಲ್ಲಿ 51,820 ಹೆಕ್ಟೇರ್, ದಾವಣಗೆರೆಯಲ್ಲಿ 63,561 ಹೆಕ್ಟೇರ್, ಹರಿಹರದಲ್ಲಿ 28,740 ಹೆಕ್ಟೇರ್, ಹೊನ್ನಾಳಿಯಲ್ಲಿ 49,405 ಹೆಕ್ಟೇರ್, ಚನ್ನಗಿರಿಯಲ್ಲಿ 53,379 ಹೆಕ್ಟೇರ್ ಸೇರಿ ಒಟ್ಟು 3,28,500 ಹೆಕ್ಟೇರ್ನಲ್ಲಿ ಬಿತ್ತನೆ ಆಗಿತ್ತು.
ಮೆಕ್ಕೆಜೋಳ ಬಿತ್ತನೆಗೆ ಜು. 15ರ ವರೆಗೆ ಕಾಲಾವಕಾಶ ಇರುವ ಹಿನ್ನೆಲೆಯಲ್ಲಿ ಕಳೆದ ಬಾರಿಯ 1,95,245 ಹೆಕ್ಟೇರ್ ಗುರಿ ದಾಟುವ ನಿರೀಕ್ಷೆ ಇದೆ. ನಿರೀಕ್ಷೆಯೇನೋ ಇದೆ. ಆದರೆ, ಆ ತೆರನಾಗಿ ಮಳೆ ಆಗಬೇಕಿದೆ. ಈವರೆಗೆ ಗಟ್ಟಿ, ಹದವಾದ ಮಳೆಯಾಗದೆ ಚದುರಿದಂತೆ ಆಗುತ್ತಿರುವುದು ಮುಂಗಾರು ಹಂಗಾಮಿನ ಪ್ರಾರಂಭದಲ್ಲಿಯೇ ರೈತರಲ್ಲಿ ಚಿಂತೆಗೆ ಕಾರಣವಾಗುತ್ತಿದೆ.
* ರಾ.ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.