ನೇರ ವೇತನ ಪಾವತಿ ಪೌರಕಾರ್ಮಿಕರು ಶೀಘ್ರ ಕಾಯಂ
ಪೌರಕಾರ್ಮಿಕರ ಸುರಕ್ಷತೆಗೆ ಮೊದಲ ಆದ್ಯತೆ, ಮಹಾನಗರ ಪಾಲಿಕೆ ಮಹಾಪೌರ ವೀರೇಶ್ ಭರವಸೆ
Team Udayavani, Sep 24, 2021, 3:32 PM IST
ದಾವಣಗೆರೆ: ಕೆಲವೇ ದಿನಗಳಲ್ಲಿ ನೇರ ವೇತನ ಪಾವತಿ ಪೌರಕಾರ್ಮಿಕರನ್ನು ಕಾಯಂ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಭರವಸೆ ನೀಡಿದರು. ನಗರದ ಕರ್ನಾಟಕ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಲಾಗುವುದು. ಪೌರಕಾರ್ಮಿಕರ ಸುರಕ್ಷತೆಗೆ ಉನ್ನತ ಗುಣಮಟ್ಟದ ಗಮ್ ಬೂಟ್, ಗ್ಲೌಸ್, ಮಾಸ್ಕ್, ಯೂನಿಫಾರಂ, ಬ್ಯಾಡ್ಜ್ ಸೇರಿದಂತೆ ಇನ್ನಿತರ ಪರಿಕರಗಳನ್ನು ನೀಡಲಾಗುವುದು. ಅಕ್ಟೋಬರ್ 2ರಿಂದ ಪ್ರತಿನಿತ್ಯ 25ರಿಂದ 30 ಪೌರಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುವುದು. ಎಲ್ಲ ಪೌರಕಾರ್ಮಿಕರಿಗೂ ವಿಮೆ ನೀಡಲಾಗುವುದು. ತಾಂತ್ರಿಕ ಕಾರಣ ಹಾಗೂ ಹಣದ ಕೊರತೆಯಿಂದ ಗೃಹಭಾಗ್ಯ ಯೋಜನೆಯ ಕಾಮಗಾರಿ ಸ್ಥಗಿತಗೊಂಡಿದೆ. ಡಿಸೆಂಬರ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಎಂಜಿನಿಯರ್ ಗಳಿಗೆ ತಾಕೀತು ಮಾಡಲಾಗಿದೆ. ಆದಷ್ಟು ಬೇಗ ಫಲಾನುಭವಿಗಳಿಗೆ ಮನೆ ಒದಗಿಸಲಾಗುವುದು ಎಂದರು.
ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಐಎಎಸ್, ಕೆಎಎಸ್ ಓದುವ ಮಕ್ಕಳಿಗೆ ಉಚಿತ ಸೌಲಭ್ಯ ನೀಡಲಾಗುತ್ತಿದ್ದು, ಪೌರಕಾರ್ಮಿಕರ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಡಾಕ್ಟರ್, ಎಂಜಿನಿಯರಿಂಗ್ ಸೇರಿದಂತೆ ಮೇಲ್ದರ್ಜೆ ಸ್ಥಾನಗಳನ್ನು ಅಲಂಕರಿಸುವ ಕನಸು ಕಾಣಬೇಕು. ಪೌರಕಾರ್ಮಿಕರಿಗೆ ಹಿಂದೆಂದಿಗಿಂತ ಹೆಚ್ಚಿನ ಸೌಲಭ್ಯಗಳು ಈಗ ದೊರಕುತ್ತಿದ್ದು, ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯಾವುದೇ ವೃತ್ತಿ ದೊಡ್ಡದು, ಸಣ್ಣದು ಎಂಬುದಿಲ್ಲ. ಎಲ್ಲ ವೃತ್ತಿಗಳು ಅದರದ್ದೇ ಆದ ಘನತೆ ಹೊಂದಿವೆ. ನಗರದ ಸೌಂದರ್ಯ ಹಾಗೂ ಸ್ವತ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಕೆಲಸ ಮಹತ್ವದ್ದು. ಇಂದು ಪೌರಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳು ತಲುಪುತ್ತಿದೆ ಎಂದರೆ ಅದಕ್ಕೆ
ಸಂಘಟನೆಗಳ ಪಾತ್ರ ಹಿರಿದು. ಆದ್ದರಿಂದ ಎಲ್ಲ ಪೌರಕಾರ್ಮಿಕರು ಸಂಘಟಿತರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ದೇಶದ ರಕ್ಷಣೆಗೆ ಸೈನಿಕರು ಹಗಲಿರುಳು ಸೇವೆ ಸಲ್ಲಿಸಿದ ರೀತಿಯಲ್ಲಿ ನಗರದಲ್ಲಿ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ. ಗೃಹಭಾಗ್ಯ ಯೋಜನೆಯಡಿ ಅನೇಕ ಫಲಾನುಭವಿಗಳ ಹೆಸರು ಬಿಟ್ಟುಹೋಗಿದ್ದು, ನಿಯಮಾನುಸಾರ ಸಲ್ಲಿಸಿದ ಅರ್ಜಿಗಳನ್ನು ಸರ್ಕಾರಕ್ಕೆ ತಲುಪಿಸುತ್ತೇವೆ. ಪೌರಕಾರ್ಮಿಕರ ನ್ಯಾಯಯುತ ಎಲ್ಲ ಬೇಡಿಕೆಗಳನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಅವುಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು.
ಇಡೀ ಜಗತ್ತು ಕೊರೊನಾ ಸಂಕಷ್ಟದಲ್ಲಿ ಮುಳುಗಿದಾಗ ಪೌರಕಾರ್ಮಿಕರು ನಗರ, ಪಟ್ಟಣಗಳಲ್ಲಿ ರೋಗ ರುಜಿನಗಳು ಹರಡದಂತೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ, ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಮುಂದಾಗಿದ್ದರು. ನಗರದಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಪೌರಕಾರ್ಮಿಕರ ಸೇವೆ ಅನನ್ಯ. ಎಲ್ಲೆಡೆ ಕೊರೊನಾ ವ್ಯಾಪಕವಾಗಿ ಹರಡಿದ ಸಂದರ್ಭದಲ್ಲಿ ಹಾಗೂ ಇದರ ನಿಯಂತ್ರಣಕ್ಕಾಗಿ ಘೋಷಿಸಲಾದ ಕಂಟೈನ್ಮೆಂಟ್ ಏರಿಯಾಗಳಲ್ಲಿ ಪೌರಕಾರ್ಮಿಕರು ಜೀವದ ಹಂಗು ತೊರೆದು ಮುಕ್ತವಾಗಿ ಕಾರ್ಯ ನಿರ್ವಹಿಸಿದ್ದರು. ಕೋವಿಡ್ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಎಲ್ಲ ಪೌರಕಾರ್ಮಿಕರ ಹಿತಕ್ಕಾಗಿ ಜಿಲ್ಲಾಡಳಿತ ಯಾವಾಗಲೂ ಅವರ ಪರವಾಗಿರುತ್ತದೆ ಎಂದು ಆತ್ಮಸ್ಥೈರ್ಯ ತುಂಬಿದರು.
ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ. ಗೋಣೆಪ್ಪ ಮಾತನಾಡಿ, ಪೌರಕಾರ್ಮಿಕರಿಗೆ ಸರ್ಕಾರದಿಂದ ಎಷ್ಟೇ ಸವಲತ್ತು ಒದಗಿಸಿದರೂ ಸಾಲದು. 60 ವರ್ಷದ ನಂತರ ನಿವೃತ್ತಿ ಹೊಂದಿದ ಪೌರಕಾರ್ಮಿಕರ ಕೆಲಸವನ್ನು ಅವರ ಕುಟುಂಬದ ಸದಸ್ಯರಿಗೇ ನೀಡಬೇಕು ಎಂದರು. ಪಾಲಿಕೆ ಸದಸ್ಯ ಎ. ನಾಗರಾಜ್ ಮಾತನಾಡಿ, ನಗರದಲ್ಲಿ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇದ್ದು, ಹೆಚ್ಚುವರಿಯಾಗಿ 228 ಪೌರಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ದೊಡ್ಡ ದೊಡ್ಡ ವಾರ್ಡ್‌ಗಳಲ್ಲಿ ಸ್ವತ್ಛತೆಯಾಗುತ್ತಿದೆಯೇ ವಿನಃ ಸಣ್ಣ ವಾರ್ಡ್‌ಗಳಲ್ಲಿ ಸಮರ್ಪಕವಾಗಿ ಸ್ವತ್ಛತೆಯಾಗುತ್ತಿಲ್ಲ ಎಂದು ಹೇಳಿದರು.
ಇದೇ ವೇಳೆ ಪೌರಕಾರ್ಮಿಕರ ಮಕ್ಕಳ ಸಾಧನೆಯನ್ನು ಪ್ರೋತ್ಸಾಹಿಸಿ ಸನ್ಮಾನಿಸಲಾಯಿತು. ವಯೋನಿವೃತ್ತಿ ಹೊಂದುತ್ತಿರುವ ಜಿ.ಬಿ. ಲಕ್ಕಳ್ಳಿ ಹಾಲವಕ್ಕ ಅವರನ್ನು ಗೌರವಿಸಲಾಯಿತು. ಉಪ ಮೇಯರ್ ಎಚ್.ಆರ್. ಶಿಲ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಶ್ರೀನಿವಾಸ್, ಉಮಾ ಪ್ರಕಾಶ್, ಗೀತಾ ದಿಳ್ಯಪ್ಪ, ಎನ್. ನೀಲಗಿರಿಯಪ್ಪ, ಗೋವಿಂದರಾಜ್, ಎಲ್.ಎಂ. ಹನುಮಂತಪ್ಪ, ಆಯುಕ್ತ ವಿಶ್ವನಾಥ ಮುದಜ್ಜಿ, ಉಪ ಆಯುಕ್ತ ನಳೀನ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪೌರಕಾರ್ಮಿಕ ಬಡಾವಣೆ ನಿರ್ಮಾಣ
ಹರಿಹರ: ನಗರದಲ್ಲಿ ಪೌರಕಾರ್ಮಿಕರ ಬಡಾವಣೆ ನಿರ್ಮಿಸುವ ನಿಟ್ಟಿನಲ್ಲಿ ಆದಷ್ಟು ಬೇಗ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತೆ ಎಸ್. ಲಕ್ಷ್ಮೀ ಹೇಳಿದರು. ಇಲ್ಲಿನ ನಗರಸಭೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಗರಸಭೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗಾಗಿ ಪ್ರತ್ಯೇಕ ಬಡಾವಣೆ ನಿರ್ಮಿಸಲು ತಾಂತ್ರಿಕ ಅಡಚಣೆಗಳಿಂದ ವಿಳಂಬವಾಗುತ್ತಿದೆ. ಆದ್ದರಿಂದ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿ ಬಡಾವಣೆ ನಿರ್ಮಾಣ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪೌರಕಾರ್ಮಿಕರ ಬಹು ವರ್ಷಗಳ ಬೇಡಿಕೆಯಾಗಿದ್ದ ವೇತನ ನೇರ ಪಾವತಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಸಫಾಯಿ ಕರ್ಮಚಾರಿ ಆಯೋಗ ಪೌರಕಾರ್ಮಿಕರಿಗಾಗಿ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರು ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆಂದು ಶ್ಲಾಘಿಸಿದರು. ನಗರಸಭಾ ಸದಸ್ಯ ದಾದಾ ಖಲಾಂದರ್ ಮಾತನಾಡಿ, ಪೌರಕಾರ್ಮಿಕರು ಮಾಡುವ ಕಾಯಕ ಶ್ರೇಷ್ಠವಾದುದು. ಆದ್ದರಿಂದ ಅವರನ್ನು ಕೀಳಾಗಿ ಕಾಣದೆ ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದರು.
ನಗರಸಭೆ ಅಧ್ಯಕ್ಷೆ ಡಿ. ರತ್ನ, ಉಪಾಧ್ಯಕ್ಷ ಬಾಬುಲಾಲ್, ಸದಸ್ಯರಾದ ಪಿ.ಎನ್. ವಿರೂಪಾಕ್ಷ, ಅಟೋ ಹನುಮಂತಪ್ಪ, ನಾಗರತ್ನ, ಎಇಇ ಎಸ್. ಎಸ್. ಬಿರಾದಾರ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಸದಾಶಿವ ಮತ್ತಿತರರು ಇದ್ದರು.
ಪೌರಕಾರ್ಮಿಕರ ಸೇವೆ ಗೌರವಿಸಿ ಜಗಳೂರು: ಪಟ್ಟಣವನ್ನು ಸ್ವತ್ಛವಾಗಿಡುವ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರನ್ನು ಪ್ರತಿಯೊಬ್ಬರೂ ಮಾನವೀಯತೆಯಿಂದ ಕಾಣಬೇಕು ಎಂದು ನಗರ ಯೋಜನಾ ಕೋಶದ ಯೋಜನಾ ಧಿಕಾರಿ ನಜ್ಮಾ ಹೇಳಿದರು. ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾರೂ ಸ್ಪರ್ಶಿಸದ ತ್ಯಾಜ್ಯ ವಸ್ತುಗಳನ್ನು ತಾಳ್ಮೆಯಿಂದ ಸ್ವತ್ಛಗೊಳಿಸುವ ಶಕ್ತಿ ಪೌರಕಾರ್ಮಿಕರಲ್ಲಿದೆ. ನಗರದಲ್ಲಿರುವ ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ನಮಗೋಸ್ಕರ ಅವರು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕೆಂದರು.
ಎಇಇ ಪ್ರಸನ್ನಕುಮಾರ್ ಮಾತನಾಡಿ, ಕೊರೊನಾ ಸೋಂಕಿನ ಸಂದರ್ಭದಲ್ಲಿ ವೈಯಕ್ತಿಕ ಆರೋಗ್ಯವನ್ನೂ ಲೆಕ್ಕಿಸದೆ ವಾರ್ಡ್ ಗಳಲ್ಲಿ ಸ್ವತ್ಛತಾ ಕಾರ್ಯದಲ್ಲಿ ತೊಡಗಿದ್ದರು. ಪೌರಕಾರ್ಮಿಕರು ನಗರವನ್ನು ಸ್ವತ್ಛ ಹಾಗೂ ಸುಂದರವನ್ನಾಗಿಸುವ ಶಿಲ್ಪಿಗಳು. ಅವರಿಗೆ ಮೂಲ ಸೌಕರ್ಯ,ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಪಪಂ ಮುಖ್ಯಾಧಿಕಾರಿ ಲೋಕಾ ನಾಯ್ಕ ಮಾತನಾಡಿ, ಪೌರಕಾರ್ಮಿಕರು ಪ್ರತಿನಿತ್ಯ ಬೆಳಿಗ್ಗೆ ಸ್ವಯಂಪ್ರೇರಿತವಾಗಿ ಸ್ವತ್ಛತೆಯ ಕಾಯಕದಲ್ಲಿ ತೊಡಗಿ ಸಾರ್ವಜನಿಕರ ಆರೋಗ್ಯ ಕಾಪಾಡುತ್ತಿದ್ದಾರೆ. ಸಾರ್ವಜನಿಕರು ವಾಡ್ ìಗಳಲ್ಲಿ ಸೌಜನ್ಯದಿಂದ ವರ್ತಿಸಿ ಅವರಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಪೌರಸೇವಾ ನೌಕರರ ಸಂಘದ ರಾಜ್ಯಾಧ್ಯಕ್ಷ ಪ್ರಸಾದ್ ಮಾತನಾಡಿ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ 2012ರಲ್ಲಿ ಪೌರಕಾರ್ಮಿಕರ ದಿನಾಚರಣೆ ಆಚರಿಸಲು ಆದೇಶಿಸಿದ್ದರು. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿಶೇಷ ಭತ್ಯೆಯನ್ನು 3 ಸಾವಿರದಿಂದ 7 ಸಾವಿರ ರೂ.ಗೆ ಹೆಚ್ಚಿಸಿರುವುದು ಅಭಿನಂದನಾರ್ಹಎಂದರು.
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತಾ ಶಿವಣ್ಣ, ಪೌರಸೇವಾ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಕೆ. ಬಸವರಾಜ್, ಕಂದಾಯ ನಿರೀಕ್ಷಕ ಸಂತೋಷ್‌ಕುಮಾರ್, ಆರೋಗ್ಯ ನಿರೀಕ್ಷಕ ಖೀಫಾಯತ್, ಪಪಂ ಸದಸ್ಯರಾದ ನವೀನ್ ಕುಮಾರ್, ದೇವರಾಜ್, ರೇವಣ್ಣ, ಪಾಪಲಿಂಗಪ್ಪ, ಮಂಜಮ್ಮ ಮತ್ತಿತರರು ಭಾಗವಹಿಸಿದ್ದರು.
ಹೊನ್ನಾಳಿ: ಪೌರಕಾರ್ಮಿಕರಿಗಾಗಿ ವಿವಿಧ ಕಾರ್ಯಕ್ರಮ ಆಯೋಜನೆ
ಹೊನ್ನಾಳಿ: ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಗುರುವಾರ ಪೌರ ನೌಕರರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪೌರ ನೌಕರರ ಜಾಥಾ ಪುರಸಭೆ ಆವರಣದಲ್ಲಿ ಆರಂಭಗೊಂಡು ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ನಡೆಯಿತು. ನಂತರ ಪೌರಕಾರ್ಮಿಕರಿಗೆ ಸನ್ಮಾನ, ಆರೋಗ್ಯ ತಪಾಸಣೆ, ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪುರಸಭೆ ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ, ಸದಸ್ಯರಾದ ಕೆ.ವಿ. ಶ್ರೀಧರ, ರಂಗಪ್ಪ, ಬಾಬು ಒಬಳದಾರ್, ಧರ್ಮಪ್ಪ, ಎಂ.ಸುರೇಶ್, ಮೈಲಪ್ಪ, ರಾಜೇಂದ್ರ, ರಾಜಪ್ಪ, ಇತರ ಸದಸ್ಯರು, ಪುರಸಭೆ ಮುಖ್ಯಾಧಿ ಕಾರಿ ಪಂಪಾಪತಿ ನಾಯ್ಕ, ಮುಖಂಡರಾದ ಮಂಜು ಇಂಚರ, ಸತೀಶ್, ಕತ್ತಿಗೆ ನಾಗರಾಜ್, ಪೌರನೌಕರರ ಸಂಘದ ಅಧ್ಯಕ್ಷ ಅಂಕಣ್ಣ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.