ರಾಮಚಂದ್ರಪ್ಪರದು ಪ್ರಜಾಸತ್ತಾತ್ಮಕ ವ್ಯಕ್ತಿತ್ವ
ಹೊಸ ಹೋರಾಟ ಕಟ್ಟಿದ ಅಪ್ಪಟ ಎಡಪಂಥೀಯ ನಾಯಕ
Team Udayavani, May 30, 2022, 1:06 PM IST
ದಾವಣಗೆರೆ: ಹಿರಿಯ ಕಾರ್ಮಿಕ ಮುಖಂಡ ಎಚ್. ಕೆ. ರಾಮಚಂದ್ರಪ್ಪ ಸದಾ ಜನರ ಮಧ್ಯದಲ್ಲಿದ್ದು ಆತ್ಮವಿಶ್ವಾಸದಿಂದ ಹೊಸ ಹೋರಾಟ ಕಟ್ಟಿದಂತಹ ಅಪ್ಪಟ ಎಡಪಂಥೀಯರಾಗಿದ್ದರೇ ಹೊರತು ಎಂದೆಂದಿಗೂ ಜಡಪಂಥೀಯರಾಗಿರಲಿಲ್ಲ ಎಂದು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ನಗರದ ಶ್ರೀ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಪಾಪು ಗುರು ಸಂಪಾದಕತ್ವದ “ಬೆವರ ನೆಲದ ಕೆಂಪು ಕಾಂಡದ ಹೂ’ ಸಂಸ್ಕರಣ ಗ್ರಂಥವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಎಚ್.ಕೆ. ರಾಮಚಂದ್ರಪ್ಪ ತಮ್ಮ ಕೊನೆಯ ಉಸಿರಿನವರೆಗೆ ಅಪ್ಪಟ ಎಡಪಂಥೀಯ, ನೈಜ ಕಮ್ಯುನಿಸ್ಟ್ ಆಗಿದ್ದರು. ಎಂದಿಗೂ ಜಡಪಂಥೀಯ ಆಗಿರಲೇ ಇಲ್ಲ ಎಂದು ಪ್ರತಿಪಾದಿಸಿದರು. ರಾಮಚಂದ್ರಪ್ಪ ತಾವು ನಂಬಿದ್ದ ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ಬದ್ಧತೆ ಹೊಂದಿದ್ದರು. ಕಾಲದ ಬದಲಾವಣೆಗೆ ಅನುಗುಣವಾಗಿ ಸಿದ್ಧಾಂತಗಳನ್ನು ದಾವಣಗೆರೆಯಂತಹ ಹೋರಾಟದ ನೆಲೆಯಲ್ಲಿ ಪ್ರಾಯೋಗಿಕವಾಗಿ ಮರು ವಿಮರ್ಶೆಗೊಳಪಡಿಸಿದರು. ಅವರು ಜೀವಂತವಾದ್ದಾಗ ಮಾತ್ರವಲ್ಲ, ಎಂದೆಂದಿಗೂ ಎಡಪಂಥೀಯ ವಾದದ ಒಂದು ಆದರ್ಶದ ಪ್ರತೀಕವಾಗಿಯೇ ಇರುವಂತಹವರು ಎಂದರು.
ಇಂದಿನ ವಾತಾವರಣದಲ್ಲಿ ಸೈದ್ಧಾಂತಿಕ ಬದ್ಧತೆಯವರ ಕೊರತೆ ಕಾಡುತ್ತಿರುವ ಮಧ್ಯದಲ್ಲಿ ಎಚ್. ಕೆ. ರಾಮಚಂದ್ರಪ್ಪ ಅವರಂತಹರು ಸ್ಫೂರ್ತಿಯಾಗಿ ಇರಬೇಕಿತ್ತು. ಎಚ್.ಕೆ. ರಾಮಚಂದ್ರಪ್ಪ ಅವರು ಎಂದೆಂದಿಗೂ ಪಕ್ಷಾಂತರಿ ಮತ್ತು ಪಥಾಂತರಿ ಆಗಲಿಲ್ಲ. ಆ ಕಡೆ, ಈ ಕಡೆ ಕದಲದ ಪ್ರಜಾಸತ್ತಾತ್ಮಕ ವ್ಯಕ್ತಿತ್ವ ಅವರದ್ದಾಗಿತ್ತು. ಅವರು ಆರ್ಥಿಕ ಸರ್ವಾಧಿಕಾರಿತನದ ವಿರುದ್ಧ ಹೋರಾಟ ಮಾಡಿದವರು. ಅಂತಹವರಿಗೂ ಸಾವು ಎಂಬ ಬಹುದೊಡ್ಡ ಸರ್ವಾಧಿಕಾರಿಯ ವಿರುದ್ಧ ಸೆಣಸಾಗಲಿಲ್ಲ. ಸಾವು ಯಾರನ್ನೂ ಬಿಡುವುದೇ ಇಲ್ಲ ಎಂಬ ಸತ್ಯ ಅರಿತುಕೊಂಡರೆ ಕುರ್ಚಿಯ ಪಾವಿತ್ರ್ಯವಾದರೂ ಉಳಿಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಎಚ್.ಕೆ. ರಾಮಚಂದ್ರಪ್ಪ ಕಟ್ಟಾ ಕಮ್ಯುನಿಸ್ಟ್ ಆಗಿದ್ದರೂ ಅನೇಕ ದೇವಸ್ಥಾನಗಳ ಅಧ್ಯಕ್ಷರಾಗಿದ್ದರು. ಒಬ್ಬ ನೈಜ ಕಮ್ಯುನಿಸ್ಟ್ ತಾನು ನಂಬಿದ್ದ ಸಿದ್ಧಾಂತವನ್ನು ಇತರರು ನಂಬಬೇಕು ಮತ್ತು ಪಾಲಿಸಬೇಕು ಎಂದು ಬಯಸುವುದೇ ಇಲ್ಲ. ಜನರ ನಂಬಿಕೆಗೆ ಬೆಲೆ ಕೊಡುವಂತಹವರು. ಎಡ ಸಿದ್ಧಾಂತದ ಆಶಯ ಬಿಟ್ಟುಕೊಡದೆ ಸಮಕಾಲೀನ ಸಂದರ್ಭಕ್ಕೆ ಅನುಗುಣವಾಗಿ ಅನುಸಂಧಾನ ಮಾಡಿದಂತಹ ಕಮ್ಯುನಿಸ್ಟ್ ಮಾದರಿಯ ಆದರ್ಶದ ಪ್ರತೀಕವಾಗಿದ್ದವರು ರಾಮಚಂದ್ರಪ್ಪ ಎಂದು ತಿಳಿಸಿದರು.
ಯಾರಿಗೇ ಆದರೂ ಪದತ್ಯಾಗ ಮತ್ತು ಪ್ರಾಣತ್ಯಾಗ ಮಾಡಿದಾಗ ಮಾತ್ರ ಹೊಗಳುವುದು ನಮ್ಮ ಭಾರತೀಯರ ಜಾಯಮಾನದಂತಾಗಿದೆ. ಬದುಕಿರುವಾಗಲೇ ವಿಮರ್ಶಾತ್ಮಕ ಗೌರವ ಕೊಡುವುದು ನಿಜಕ್ಕೂ ಬಹು ದೊಡ್ಡ ಸೇವೆ. ಸಮಾಜಕ್ಕೆ ದುಡಿದವರ ಹೊಗಳಿಕೆ, ಗೌರವಿಸುವ ಕೆಲಸ ಜೀವಂತವಾಗಿರುವಾಗಲೇ ಆಗಬೇಕು ಎಂದರು.
ಹಿರಿಯ ಪತ್ರಕರ್ತ ರಂಜಾನ್ ದರ್ಗಾ ತಮ್ಮ ಲಿಖೀತ ಭಾಷಣದಲ್ಲಿ, ಎಚ್.ಕೆ. ರಾಮಚಂದ್ರಪ್ಪ ಅವರು ದಾವಣಗೆರೆಯನ್ನ ಕೆಂಪುನಗರಿ ಮಾತ್ರವಲ್ಲ, ಹಸಿರು ನಗರವನ್ನಾಗಿಸಿದವರು. ಕೊನೆಯ ಉಸಿರು ಇರುವ ತನಕ ನಗುಮೊಗದಿಂದಲೇ ಹೋರಾಟ ಕಟ್ಟಿ ಬೆಳೆಸಿದವರು ಎಂದು ಸ್ಮರಿಸಿದರು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಎಚ್.ಕೆ. ರಾಮಚಂದ್ರಪ್ಪ ಅವರ ಕಮ್ಯುನಿಸ್ಟ್ ಸಿದ್ಧಾಂತದ ಬದ್ಧತೆ ಅತ್ಯಂತ ಪ್ರಖರವಾಗಿತ್ತು. ದಾವಣಗೆರೆಯಲ್ಲಿ ನಡೆದ ಘಟನೆಯಲ್ಲಿ ಕೊಲೆಗೀಡಾದ ಶೇಖರಪ್ಪ ಅವರ ಹೆಸರನ್ನು ತಮ್ಮ ಮಗನಿಗೆ ಇಟ್ಟಿರುವುದು ಸಿದ್ಧಾಂತದ ಪ್ರತೀಕ. ಪಂಪಾಪತಿಯವರು ಮೂರು ಬಾರಿ ಶಾಸಕರಾಗುವಲ್ಲಿ ರಾಮಚಂದ್ರಪ್ಪ ಅವರ ಪರಿಶ್ರಮವೂ ಇತ್ತು ಎಂದರು.
ಹಿರಿಯ ಪತ್ರಕರ್ತ ಆರ್.ಜಿ. ಹಳ್ಳಿ ನಾಗರಾಜ್, ಸಂಪಾದಕ ಪಾಪುಗುರು, ರಾಮಚಂದ್ರಪ್ಪ ಅವರ ಪುತ್ರರಾದ ಎಚ್.ಆರ್. ರವೀಂದ್ರನಾಥ್, ಎಚ್. ಆರ್. ಶೇಖರಪ್ಪ, ಟಿ. ಆಂಜನೇಯ, ಸನಾವುಲ್ಲಾ ನವಿಲೇಹಾಳ್ ಇತರರು ಇದ್ದರು. ಶಿಕ್ಷಕ ಸಿರಿಗೆರೆ ನಾಗರಾಜ್ ನಿರೂಪಿಸಿದರು.
ವಿಷ ಕಕ್ಕುವ ನಾಗರ ನಾಲಿಗೆಯವರೇ ಜಾಸ್ತಿ!
ಒಬ್ಬ ಎಡಪಂಥೀಯ ನಾಯಕರಿಗೆ ಇರಬೇಕಾದ ಕೇಳಿಸಿಕೊಳ್ಳುವಿಕೆಯ ಗುಣ ರಾಮಚಂದ್ರಪ್ಪ ಅವರಲ್ಲಿತ್ತು. ತಮ್ಮ ಪ್ರಕಾರ ಕೇಳಿಸಿಕೊಳ್ಳುವುದೇ ನಿಜವಾದ ಪ್ರಜಾತಂತ್ರ ವ್ಯವಸ್ಥೆ. ಆದರೆ ಈಗ ಕೇಳಿಸಿಕೊಳ್ಳಬೇಕಾದ ಕಿವಿಗಳು ಕಿವುಡಾಗಿದ್ದು, ನಾಲಿಗೆಯ ಉದ್ದ ಹೆಚ್ಚಾಗಿವೆ. ವಿಷ ಕಕ್ಕುವಂತಹ ನಾಗರದ ನಾಲಿಗೆಗಳೇ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ ಎಂದು ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.