ಕಂದಾಯ ದಾಖಲೆ ನಾಳೆ ಮನೆ ಬಾಗಿಲಿಗೆ
ಒಟ್ಟು 7,10,420 ದಾಖಲೆ ತಲುಪಿಸಲು ವ್ಯವಸ್ಥೆ
Team Udayavani, Mar 11, 2022, 4:00 PM IST
ದಾವಣಗೆರೆ: ರೈತರು, ಸಾರ್ವಜನಿಕರ ಮನೆ ಬಾಗಿಲಿಗೆ ಪಹಣಿ, ಅಟ್ಲಾಸ್, ಇತರೆ ಕಂದಾಯ ದಾಖಲೆ ಮತ್ತು ಆದಾಯ, ಜಾತಿ ಪ್ರಮಾಣ ಪತ್ರಗಳನ್ನು ತಲುಪಿಸುವ “ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಗೆ ಮಾ. 12 ರಂದು ಜಿಲ್ಲಾದ್ಯಂತ ಏಕ ಕಾಲಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಾ. 12 ರ ಶನಿವಾರ ದಾವಣಗೆರೆ ಸಮೀಪದ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸ್ಥಳೀಯ ಶಾಸಕರು ಉದ್ಘಾಟನೆ ಮಾಡುವರು. ಆಯಾ ವಿಧಾನಸಭಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ 1,35,562 ಕುಟುಂಬ ಗುರುತಿಸಲಾಗಿದೆ. 2,93,479 ಪಹಣಿ, 3,23,431 ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 93,510 ಅಟ್ಲಾಸ್ ಸೇರಿದಂತೆ ಒಟ್ಟು 7,10,420 ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಂದಾಯ ದಾಖಲಾತಿಗಳನ್ನು ಸರ್ಕಾರ ನೀಡಿರುವ ಲಕೋಟೆಯಲ್ಲಿಟ್ಟು ಸಂಬಂಧಿತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಂದೊಮ್ಮೆ ಮಾ. 12 ರಂದು ದಾಖಲೆಗಳನ್ನು ಪಡೆದುಕೊಳ್ಳಲಾಗದೇ ಹೋದಲ್ಲಿ ಮಾ. 21 ರಿಂದ 26 ರ ವರೆಗೆ ನಾಡಕಚೇರಿಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಮನೆ ಬಾಗಿಲಿಗೆ ತಲುಪಿಸುವ ದಾಖಲೆಗಳಲ್ಲಿ ಏನಾದರೂ ಲೋಪದೋಷಗಳಿದ್ದರೆ ಸರಿಪಡಿಸಲು ಅವಕಾಶ ಇದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಆಶೋಕ್ ರವರ ಮಹತ್ವಾಕಾಂಕ್ಷೆಯ ವಿನೂತನ ಕಾರ್ಯಕ್ರಮ ಇದಾಗಿದೆ. ಕಂದಾಯ ಕಾಯ್ದೆಯಲ್ಲಿ ಇರುವಂತೆಯೇ ಸಂಬಂಧಿತರಿಗೆ ಉಚಿತವಾಗಿ ದಾಖಲೆಗಳನ್ನು ಮನೆ ಬಾಗಿಲಿಗೆ ಒದಗಿಸಲಾಗುತ್ತದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಲೂಕು ಕಚೇರಿ ಒಳಗೊಂಡಂತೆ ಇತರೆ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ದಾಖಲೆ ಪಡೆಯಲು ಅನುಕೂಲ ಆಗುವಂತೆ ಜಿಲ್ಲಾಡಳಿತ 201 ಗ್ರಾಮ ಒನ್ ಕೇಂದ್ರ ಪ್ರಾರಂಭಿಸಿದೆ. ಪಹಣಿ , ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇತರೆ ದಾಖಲೆಗಳನ್ನು ಪಡೆಯಬಹುದು. ಸರ್ಕಾರ ಎಲ್ಲ ವ್ಯವಸ್ಥೆ ಕೈಗೊಂಡರೂ ಮತ್ತೆ ದಲ್ಲಾಳಿ, ಮಧ್ಯವರ್ತಿಗಳ ಬಳಿಗೆ ಹೋಗುತ್ತೇವೆ ಎಂದರೆ ಏನೂ ಮಾಡಲಾಗದು. ಜನ ಬದಲಾಗಬೇಕು. ದಾವಣಗೆರೆ ಜಿಲ್ಲೆಯಲ್ಲಿ ಪೈಲಟ್ ಯೋಜನೆಯಡಿ ಗ್ರಾಮ ಒನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಸುಶ್ರುತ್ ಡಿ. ಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿದ್ದರು.
ನೋವಿಗೆ ಸ್ಪಂದಿಸುವ ವೇದಿಕೆ:
ಮಾ. 17 ರಿಂದ ಪುನಃ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಸ್ಪಂದನಾ ಸಭೆ ಪ್ರಾರಂಭಿಸಲಾಗುವುದು. ಕೊರೊನಾ ಕಾರಣಕ್ಕೆ ತಾತ್ಕಾಲಿಕ ಕಾರಣಕ್ಕೆ ಸ್ಥಗಿತಗೊಳಿಸಲಾಗಿತ್ತು. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಆಗಿವೆ. ಹಾಗಾಗಿ ಮತ್ತೆ ಜನಸ್ಪಂದನಾ ಸಭೆ ಪ್ರಾರಂಭಿಸಲಾಗುತ್ತಿದೆ. ಪ್ರತಿ 15 ದಿನಕೊಮ್ಮೆ ನಡೆಯುವ ಜನಸ್ಪಂದನಾ ಸಭೆ ಜನರ ನೋವಿಗೆ ಸ್ಪಂದಿಸುವ ಸಭೆ ಆಗಬೇಕು ಎಂಬುದು ಜಿಲ್ಲಾಡಳಿತದ ಉದ್ದೇಶ ಎಂದು ತಿಳಿಸಿದರು.
ಇಬ್ಬರು ಬರಲಿದ್ದಾರೆ:
ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ದಾವಣಗೆರೆ ಜಿಲ್ಲೆಯ 11 ಜನರಲ್ಲಿ ಈವರೆಗೆ 9 ವಿದ್ಯಾರ್ಥಿಗಳು ಸುರಕ್ಷಿತವಾಗಿ ವಾಪಾಸ್ಸಾಗಿದ್ದಾರೆ. ಉಳಿದಿರುವ ಇಬ್ಬರು ಗುರುವಾರ ಸಂಜೆ, ಶುಕ್ರವಾರ ಬೆಳಗ್ಗೆ ವಾಪಾಸ್ಸಾಗುವರು. ಉಕ್ರೇನ್ -ರಷ್ಯಾ ನಡುವಿನ ಯುದ್ಧದ ಸಂಬಂಧ ಖಾದ್ಯ ತೈಲ ಬೆಲೆ ಹೆಚ್ಚಳವಾಗಿದೆ. ಹಾಗಾಗಿ ಕೆಲವರು ಗೋದಾಮುಗಳಲ್ಲಿ ಖಾದ್ಯ ತೈಲ ದಾಸ್ತಾನು ಮಾಡಿಕೊಂಡಿದ್ದಾರೆ ಎಂಬ ಸಾರ್ವಜನಿಕರ ದೂರಿನ ಅನ್ವಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರ ನೇತೃತ್ವದ ತಂಡಕ್ಕೆ ಎಲ್ಲ ಗೋದಾಮು, ಅಂಗಡಿಗಳಲ್ಲಿ ಕಟ್ಟುನಿಟ್ಟಿನ ಪರಿಶೀಲನೆಗೆ ಸೂಚನೆ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಾಣಿಬಲಿ ನಿಷೇಧ:
ದಾವಣಗೆರೆ ನಗರ ದೇವತೆ ಶ್ರೀದುರ್ಗಾಂಬಿಕಾ ದೇವಿ ಜಾತ್ರೆ ಮಾ. 13 ರಿಂದ ಪ್ರಾರಂಭವಾಗಲಿದೆ. ಯಾವುದೇ ಕಾರಣಕ್ಕೂ ಪ್ರಾಣಿಬಲಿ ನೀಡಬಾರದು ಎಂದು ದೇವಸ್ಥಾನ ಸಮಿತಿಗೆ ತಿಳಿಸಲಾಗಿದೆ. ಸಮಿತಿ ಸಮ್ಮತಿ ಸೂಚಿಸಿದೆ. ಸಂಪ್ರದಾಯದಂತೆ ಸಿರಿಂಜ್ ಮೂಲಕ ರಕ್ತಪಡೆದು ದೇವಿಯ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವಂತೆ ತಿಳಿಸಲಾಗಿದೆ. ಸಂಪೂರ್ಣವಾಗಿ ಪ್ರಾಣಿಬಲಿ ನಿಷೇಧ ಮಾಡಲಾಗಿದೆ. ಆದಾಗ್ಯೂ ಏನಾದರೂ ನಡೆದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಬೇವಿನುಡುಗೆ, ಉರುಳು ಸೇವೆ, ದೀಡ್ ನಮಸ್ಕಾರ ಇತರೆ ಆಚರಣೆಗಳನ್ನು ಮಾನವ ಘನತೆಗೆ ಧಕ್ಕೆ ಆಗದಂತೆ ನಡೆಸಬೇಕು. ಪ್ರಾಣಿಬಲಿ ಒಳಗೊಂಡಂತೆ ಆಚರಣೆಗಳ ಬಗ್ಗೆ ನಿಗಾವಹಿಸಲು ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಲಾಗಿದೆ. ನಾವು ಒಳಗೊಂಡಂತೆ ಜಿಲ್ಲಾ ರಕ್ಷಣಾ ಧಿಕಾರಿಗಳು ದಿನದ 24 ಗಂಟೆ ನಿಗಾ ವಹಿಸುತ್ತೇವೆ ಎಂದು ತಿಳಿಸಿದರು.
ಪಿಎಂ ಸ್ವನಿಧಿ ಯೋಜನೆ:
ಪ್ರಧಾನ ಮಂತ್ರಿ ಯವರ ಮಹತ್ವಾಕಾಂಕ್ಷೆಯ ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಬಡ್ಡಿ ಸಹಿತ ಸಾಲ ಸೌಲಭ್ಯ ಇದಾಗಿದೆ. ಜಿಲ್ಲೆಯಲ್ಲಿ 7289 ಬೀದಿಬದಿ ವ್ಯಾಪಾರಸ್ಥರು ಅರ್ಜಿ ಸಲ್ಲಿಸಿದ್ದಾರೆ. 5289 ಜನರಿಗೆ ಸಾಲ ತಲುಪಿಸಲಾಗಿದೆ. ಇನ್ನೂ ಹೆಚ್ಚಿನ ವ್ಯಾಪಾರಿಗಳು ಅರ್ಜಿ ಸಲ್ಲಿಸಿ, ಸಾಲ ಪಡೆಯಲು ಅನುಕೂಲ ಆಗುವಂತೆ ನಗರಸಭೆ ಮತ್ತು ಮಹಾನಗರ ಪಾಲಿಕೆ ವಾರ್ಡ್‌ಗಳಲ್ಲಿ ವಿಶೇಷ ಅಭಿಯಾನ ನಡೆಸಲಾಗುತ್ತದೆ. ಸಾಲ ಪಡೆದವರು ನಿಗದಿತ ಅವಧಿಯಲ್ಲಿ ಮರು ಪಾವತಿ ಮಾಡಿದಲ್ಲಿ ಇಪ್ಪತ್ತು ಸಾವಿರ ಸಾಲ ಸಿಗಲಿದೆ. ಸಾಲ ಪಾವತಿಸಲು ವಿಫಲವಾದಲ್ಲಿ ಯಾವುದೇ ಸಾಲ ಮಾತ್ರವಲ್ಲ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನರ್ಹರಾಗುವರು. ಹಾಗಾಗಿ ಸಾಲ ಪಾವತಿಸುವ ಮೂಲಕ ಅನುಕೂಲ ಪಡೆಯಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.