ವಯಸ್ಸು ಮೀರಿದ ಪೊಲೀಸ್ ಆಕಾಂಕ್ಷಿಗಳ ಕನಸು ಭಗ್ನ !
Team Udayavani, Sep 14, 2022, 6:45 AM IST
ದಾವಣಗೆರೆ: ಪೊಲೀಸ್ ಆಗುವ ಕನಸು ಹೊತ್ತು ಹಗಲಿರುಳು ಅಧ್ಯಯನ ಮಾಡಿದ ಹಾಗೂ ಇದಕ್ಕಾಗಿ ಸಾವಿರಾರು ರೂ. ವ್ಯಯಿಸಿ ಪರೀಕ್ಷಾ ತರಬೇತಿ ಪಡೆದ ಲಕ್ಷಾಂತರ ಆಕಾಂಕ್ಷಿಗಳು ಈಗ ಪೊಲೀಸ್ ನೇಮಕಾತಿ ಪರೀಕ್ಷೆ ಬರೆಯಲಾಗದ ಸಂಕಷ್ಟಕ್ಕೆ ಸಿಲುಕಿದ್ದಾರೆ!
ಹೌದು, ಕೋವಿಡ್-19 ಸೃಷ್ಟಿಸಿದ ನೂರಾರು ಅವಾಂತರಗಳಲ್ಲಿ ಇದು ಕೂಡ ಒಂದಾಗಿದೆ. ಕೋವಿಡ್ ಕಾರಣ ದಿಂದಾಗಿ ರಾಜ್ಯ ಸರಕಾರ, ಕಳೆದೆರಡು ವರ್ಷ ಪೊಲೀಸ್ ನೇಮಕಾತಿ ಮಾಡಿಕೊಂಡಿಲ್ಲ. ಪ್ರಸ್ತುತ (12-9-2022) ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್/ಡಿಎಆರ್) ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಕಳೆದೆರಡು ವರ್ಷಗಳಿಂದ ಪೊಲೀಸ್ ನೇಮಕಾತಿ ಪರೀಕ್ಷೆಗಾಗಿ ಸಿದ್ಧವಾಗಿರುವ ಅಂದಾಜು ಒಂದು ಲಕ್ಷ ಆಕಾಂಕ್ಷಿಗಳು ವಯೋಮಿತಿ ಮೀರುವ ಕಾರಣಕ್ಕಾಗಿ ಪರೀಕ್ಷೆ ಬರೆಯಲಾರದ ಪರಿಸ್ಥಿತಿ ಎದುರಾಗಿದೆ.
ಕಳೆದೆರಡು ವರ್ಷದಿಂದ ನೇಮಕಾತಿ ನಡೆಯದೇ ಇರುವುದರಿಂದ ಪ್ರಸಕ್ತ ವರ್ಷದಲ್ಲಿ ಗರಿಷ್ಠ ವಯೋಮಿತಿ ಯನ್ನು ಮೂರು ವರ್ಷ ಸಡಿಲಿಸಬೇಕು ಎಂದು ಆಕಾಂಕ್ಷಿಗಳು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಶಾಸಕರುಗಳಲ್ಲಿ ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದರು. ಆದರೂ, ಈಗ ವಯೋಮಿತಿ ಏರಿಕೆ ಮಾಡದೆ ಅಧಿಸೂಚನೆ ಹೊರಡಿಸಿರುವುದು ವಯೋಮಿತಿ ಮೀರಿದ ಆಕಾಂಕ್ಷಿಗಳ ಆಸೆಗೆ ತಣ್ಣೀರು ಎರಚಿದೆ.
ಅನ್ಯ ರಾಜ್ಯಗಳಲ್ಲಿ ಹೆಚ್ಚಳ
ಕೋವಿಡ್ ಕಾರಣದಿಂದ ನೇಮಕಾತಿ ನಡೆಯದ ದೇಶದ ವಿವಿಧ ರಾಜ್ಯಗಳಲ್ಲಿ ಪೊಲೀಸ್ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಮೂರ್‍ನಾಲ್ಕು ವರ್ಷ ಹೆಚ್ಚಿಸಿ ಅಂದರೆ ಗರಿಷ್ಠ ವಯೋಮಿತಿ 30-35 ವರ್ಷಕ್ಕೆ ಹೆಚ್ಚಿಸಿಕೊಂಡಿವೆ. ಗುಜರಾತ್ (ಕನಿಷ್ಠ-ಗರಿಷ್ಠ) 21-30 ವರ್ಷ, ಕೇರಳದಲ್ಲಿ 20-36 ವರ್ಷ, ಆಂಧ್ರದಲ್ಲಿ 21-30 ವರ್ಷ, ತಮಿಳುನಾಡಿನಲ್ಲಿ 20-28 ವರ್ಷ ಇದೆ. ಸಾಮಾನ್ಯ ವರ್ಗಕ್ಕೆ ವಯೋಮಿತಿ ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ನಾಲ್ಕೈದು ವರ್ಷ ವಯೋಮಿತಿ ಏರಿಕೆ ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ ಕೋವಿಡ್ ಕಾರಣದಿಂದ ನಡೆಯದ ನೇಮಕಾತಿ ವರ್ಷಗಳನ್ನು ಪರಿಗಣಿಸದೆ ಈ ಹಿಂದಿನಂತೆ 18-27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಗರಿಷ್ಠ 27 ವರ್ಷ, ಸಾಮಾನ್ಯ ಅಭ್ಯರ್ಥಿಗಳಿಗೆ 25 ವರ್ಷ, ಅರಣ್ಯ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಪ್ರದೇಶದ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಗೊಳಿಸಲಾಗಿದೆ. ಇದರಿಂದ ಕಳೆದೆರಡು ವರ್ಷಗಳಿಂದ ಪರೀಕ್ಷೆಗೆ ಸಿದ್ಧಗೊಂಡ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವೇ ಇಲ್ಲದಂತಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.