ಅನಾಥೆಗೆ ಆಸರೆ….ಕವಿತಾಬಾಯಿ ಕೈ ಹಿಡಿದ ರಾಮಕೃಷ್ಣ
Team Udayavani, Aug 30, 2018, 1:13 PM IST
ದಾವಣಗೆರೆ: ಯಾವ ಕ್ಷಣದಲ್ಲಾದರೂ ಮಳೆ ಸುರಿಯಬಹುದೆನ್ನುವ ಕಾರ್ಮೋಡದ ವಾತಾವರಣ…, ವರನ ಕಡೆಯವರು ಇನ್ನೂ ಬರಲಿಲ್ಲ ಎಂಬ ಧಾವಂತ…, ಮುಹೂರ್ತದ ವೇಳೆಗೆ ಬಂದೇ ಬರುವ ವಿಶ್ವಾಸದೊಂದಿಗೆ ಧಾರೆ ಎರೆದುಕೊಡಲು ಸಿದ್ಧತೆ…, ಸಮಯಕ್ಕೆ ಸರಿಯಾಗಿ ವರನ ಕಡೆಯವರು ಬರುತ್ತಿದ್ದಂತೆ, ಲಗುಬಗೆಯಲ್ಲೆ ಮುಹೂರ್ತಕ್ಕೆ ಅಣಿ…, ಮದುವೆ ಆಗುತ್ತಿದ್ದಂತೆ ಸಂಭ್ರಮದ ಕ್ಷಣ… ಇದು, ನಗರದ ಹೊರ ವಲಯದ ಶ್ರೀರಾಮ ನಗರದಲ್ಲಿರುವ ಮಹಿಳಾ ನಿಲಯದಲ್ಲಿ ಕಂಡು ಬಂದ ವಾತಾವರಣ. ಹಲವಾರು ಆದರ್ಶ ವಿವಾಹಕ್ಕೆ ಮುನ್ನುಡಿ ಬರೆದಿರುವ ರಾಜ್ಯ ಮಹಿಳಾ ನಿಲಯ ಬುಧವಾರ ಬೆಳಗ್ಗೆ 30ನೇ ಆದರ್ಶ ವಿವಾಹಕ್ಕೆ ಸಾಕ್ಷಿಯಾಯಿತು.
ಮೂಲತಃ ವಿಜಯಪುರದ, ಕಳೆದ ಮೂರು ವರ್ಷಗಳಿಂದ ಮಹಿಳಾ ನಿಲಯದಲ್ಲಿರುವ ಕವಿತಾಬಾಯಿ ಮತ್ತು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹಾರ್ಸಿಯ ರಾಮಕೃಷ್ಣ ಹೆಗಡೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕ್ಷಣಕ್ಕೆ ಗಣ್ಯರು ಸಾಕ್ಷಿಯಾದರು.
ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡಿರುವ ಕವಿತಾಬಾಯಿ ಕೌಟಂಬಿಕ ಕಾರಣಕ್ಕೆ ಮನೆ ಬಿಟ್ಟು ಬಂದು ಮಹಿಳಾ ನಿಲಯದಲ್ಲಿ ಇದ್ದರು. ಯಾರೂ ಆಕೆಯ ಮುಂದಿನ ಜೀವನದ ಜವಾಬ್ದಾರಿಗೆ ಮುಂದೆ ಬರದೇ ಇರುವ ಕಾರಣಕ್ಕೆ ಮಹಿಳಾ ನಿಲಯದ ಅಧಿಕಾರಿಗಳೇ ಕವಿತಾಬಾಯಿಯ ವಿವಾಹವನ್ನು ರಾಮಕೃಷ್ಣ ಹೆಗಡೆ ಅವರೊಂದಿಗೆ ನೆರವೇರಿಸುವ ಮೂಲಕ ಹೊಸ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.
ರಾಮಕೃಷ್ಣ ಹೆಗಡೆಯವರ ಮಾವ ಗೋಪಾಲ ಗಣಪತಿ ಹೆಗಡೆ 8 ವರ್ಷದ ಹಿಂದೆ ಇದೇ ಮಹಿಳಾ ನಿಲಯದಲ್ಲೇ ಅನಿತಾ ಎಂಬುವರನ್ನು ಮದುವೆಯಾಗಿದ್ದರು. ಈಗ ಅವರೇ ತಮ್ಮ ಅಳಿಯನ ಮದುವೆಗೆ ಕಾರಣರಾಗಿದ್ದಾರೆ. ವಿವಾಹದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಕೃಷ್ಣ ಹೆಗಡೆ, ಅನಾಥೆಗೆ ಬಾಳು ಕೊಡಬೇಕು ಎಂಬ ಅಪೇಕ್ಷೆ ಇತ್ತು.
ಅದರಂತೆ ಮದುವೆ ಆಗಿರುವುದು ಖುಷಿ ಆಗಿದೆ. ಕವಿತಾಬಾಯಿ ಈವರೆಗೆ ಸಾಕಷ್ಟು ಕಷ್ಟ- ಸಮಸ್ಯೆ ಅನುಭವಿಸಿದ್ದಾರೆ. ಚೆನ್ನಾಗಿ ನೋಡಿಕೊಳ್ಳುವ ಮೂಲಕ ಕಷ್ಟ-ಸಮಸ್ಯೆ ಪರಿಹರಿಸುತ್ತೇನೆ ಎಂದರು.
ಕವಿತಾಬಾಯಿ ಮಾತನಾಡಿ, ನಾನು ಮೂಲತಃ ವಿಜಯಪುರದವಳು. ಮೂರು ವರ್ಷದಿಂದ ಮಹಿಳಾ ನಿಲಯದಲ್ಲಿ ಇದ್ದೇನೆ. ಮಹಿಳಾ ನಿಲಯದ ಅಧಿಕಾರಿಗಳು ಸಾಕಷ್ಟು ಚೆನ್ನಾಗಿ ನೋಡಿಕೊಂಡಿದ್ದಾರೆ. ನಾನು ಬಹಳ ಕಷ್ಟ
ಅನುಭವಿಸಿದ್ದೇನೆ. ಇನ್ನು ಮುಂದೆ ಆ ಎಲ್ಲ ಕಷ್ಟ ಮರೆತು, ಚೆನ್ನಾಗಿ ಹೊಸ ಜೀವನ ನಡೆಸುತ್ತೇನೆ ಎನ್ನುತ್ತಲೇ ಗದ್ಗದಿತರಾದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ತಮಗೆ ತಂದೆ-ತಾಯಿ ಯಾರೂ ಇಲ್ಲ. ನಾವು ಅನಾಥರು ಅಂದುಕೊಂಡವರಿಗೆ ಹೊಸ ಬಾಳನ್ನು ಕೊಡುವುದು ಬಹಳ ಸಂತೋಷದ ವಿಚಾರ. ಮಹಿಳಾ ನಿಲಯದಲ್ಲಿ ಈವರೆಗೆ ಇದೇ ರೀತಿ 30 ಮದುವೆಗಳು ನಡೆದಿವೆ. ಅವರೆಲ್ಲರೂ ಚೆನ್ನಾಗಿ ಇದ್ದಾರೆ. ಇನ್ನೂ ನಾಲ್ವರ ಮದುವೆ ನಡೆಯಲಿದೆ ಎಂದು ತಿಳಿಸಿದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್, ಅಶ್ವತಿ, ಮಹಿಳಾ ನಿಲಯದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವ ಮುನ್ನ ವರನ ಬಗ್ಗೆ ಕೂಲಂಕುಷವಾಗಿ ತಿಳಿದು, ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಿದ ನಂತರವೇ
ಮದುವೆ ಮಾಡಿಕೊಡಲಾಗುವುದು. ಈವರೆಗೆ ಮದುವೆಯಾದ ಎಲ್ಲರೂ ಚೆನ್ನಾಗಿರುವುದು ಸಂತೋಷದ ವಿಚಾರ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್. ಜಯಶೀಲ, ಉಪಾಧ್ಯಕ್ಷೆ ಟಿ. ರಶ್ಮಿ ರಾಜಪ್ಪ, ಸದಸ್ಯ ಡಿ. ಸಿದ್ದಪ್ಪ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಿ.ಎಸ್. ಷಡಕ್ಷರಪ್ಪ, ಮುಖ್ಯ ಯೋಜನಾಧಿಕಾರಿ ಪಿ. ಬಸವನಗೌಡ, ಸಹಾಯಕ ಯೋಜನಾಧಿಕಾರಿ ಶಶಿಧರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯ್ ಕುಮಾರ್, ಮಹಿಳಾ ನಿಲಯದ ಅಧೀಕ್ಷಕಿ ಪ್ರಪುಲ್ಲಾ ಡಿ. ರಾವ್, ಶ್ರುತಿ ಇತರರು ಈ ಆದರ್ಶ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ನವ ವಧುವಿಗೆ ಉತ್ತರ ಕನ್ನಡದಲ್ಲಿ ಆಗುವ ಮಳೆಯ ಪರಿಚಯ ಮಾಡಿಕೊಡುವಂತೆ ಏನೋ ಮದುವೆ, ಆರತಕ್ಷತೆ ಮುಗಿಯುವ ವೇಳೆಗೆ ಧಾರಾಕಾರ ಮಳೆ ಸುರಿಯಿತು. ಉತ್ತರ ಕನ್ನಡದವರು ಕಾಲಿಟ್ಟ ಪ್ರಭಾವ… ಎಂಬ ಹಾಸ್ಯದ ಮಾತು ಕೇಳಿ ಬಂದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.