ಜೀವನ ಅರ್ಥೈಸಿಕೊಳ್ಳಲು ರಂಗಭೂಮಿ ಉತ್ತಮ ವೇದಿಕೆ
Team Udayavani, Feb 8, 2017, 12:32 PM IST
ದಾವಣಗೆರೆ: ಸಾಹಿತ್ಯ ಪರಿಚಯದ ಜೊತೆಗೆ ಜೀವನದ ವಿಧಿ ವಿಧಾನ ಅರ್ಥ ಮಾಡಿಕೊಳ್ಳಲು ರಂಗಭೂಮಿ ಅತ್ಯುತ್ತಮ ಅವಕಾಶದ ವೇದಿಕೆ ಎಂದು ಹಿರಿಯ ರಂಗ ಸಂಘಟಕ ಪ್ರೊ| ಎಸ್. ಹಾಲಪ್ಪ ಪ್ರತಿಪಾದಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಶಿವಮೊಗ್ಗ ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಪದ್ಮಶ್ರೀ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಕಾಲೇಜು ರಂಗೋತ್ಸವ (ಕಾಲೇಜು ನಾಟಕಗಳ ಮತ್ತು ಜಾನಪದ ನೃತ್ಯಗಳ ಜಿಲ್ಲಾ ಮಟ್ಟದ ಸ್ಪರ್ಧೆ)ಉದ್ಘಾಟಿಸಿ ಅವರು ಮಾತನಾಡಿದರು.
ಅಭಿನಯ, ಸಂಗೀತ, ಹಾಡುಗಾರಿಕೆ, ವೇಷಭೂಷಣ, ರಂಗ ಸಜ್ಜಿಕೆ… ಹೀಗೆ ಎಲ್ಲ ಆಯಾಮಗಳನ್ನೊಳಗೊಂಡಿರುವ ರಂಗಭೂಮಿ ಸಾಹಿತ್ಯದ ಪರಿಚಯ ಜೊತೆಗೆ ಜೀವನ ಅರ್ಥ ಮಾಡಿಕೊಡುವಂತಹ ಪ್ರಮುಖ ವೇದಿಕೆ ಎಂದರು. ಹಿಂದೆ ಯಾವುದೇ ಶಾಲಾ, ಕಾಲೇಜುಗಳ ಸಮಾರಂಭಗಳು ನಾಟಕ ಇಲ್ಲದೆ ಇರುತ್ತಿರಲಿಲ್ಲ. ಆದರೆ, ಈಗ ಅಂಥಹ ವಾತಾವರಣ ಇಲ್ಲ. ಅಧ್ವಾನದ ಸ್ಥಿತಿ ಇದೆ.
ವಿದ್ಯಾರ್ಥಿಗಳು ಮಾತ್ರವಲ್ಲ ಶಿಕ್ಷಕ, ಉಪನ್ಯಾಸಕರ ವಲಯದಲ್ಲಿ ನಾಟಕಗಳ ಬಗ್ಗೆ ಆಸಕ್ತಿ ತೀವ್ರ ಪ್ರಮಾಣದಲ್ಲಿ ಕಡಿಮೆ ಆಗುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ಪಠ್ಯದಷ್ಟೇ ಮತ್ತು ಪಠ್ಯೇತರ ಚಟುವಟಿಕೆಗೆ ಸಮಾನ ಆದ್ಯತೆ, ಪ್ರಾಮುಖ್ಯತೆ ನೀಡಬೇಕು. ಈ ರೀತಿಯ ರಂಗೋತ್ಸವದ ಮೂಲಕ ಕಣ್ಮರೆಯಾಗುತ್ತಿರುವ ನಾಟಕದ ಅಭಿರುಚಿಯನ್ನು ಪುನರುತ್ಥಾನ ಮಾಡಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ನಿರಂತರವಾಗಿ ನಾಟಕ ಪ್ರರ್ದಶನ ನಡೆಯುತ್ತಿದ್ದ ಪರಿಣಾಮವಾಗಿ ಪ್ರಣಯರಾಜ ಎಂದೇ ಖ್ಯಾತಿಯ ಚಿತ್ರನಟ ಶ್ರೀನಾಥ್, ಸಿ.ಆರ್. ಸಿಂಹ, ಲಕ್ಷ್ಮಿ ಚಂದ್ರಶೇಖರ್ ಅವರಂಥಹ ಕಲಾವಿದರು ಬೆಳಕಿಗೆ ಬರುವಂತಾಯಿತು. ದಾವಣಗೆರೆಯ ಮೋತಿ ವೀರಪ್ಪ ಕಾಲೇಜಿನಲ್ಲೂ ಪ್ರತಿ ವರ್ಷ ನಾಟಕ ಸ್ಪರ್ಧೆ ನಡೆಯುತ್ತಿತ್ತು. ತೀರ್ಪುಗಾರರ ತೀರ್ಪನ್ನೇ ಪ್ರಶ್ನಿಸುವಂತಹ ಕಲಾವಿದರು ಇದ್ದರು.
ನಾಟಕ ಏನನ್ನೂ ಕೊಡದೇ ಇದ್ದರೂ ಜೀವನದ ಬಗ್ಗೆ ತಿಳಿ ಹೇಳುತ್ತದೆ. ವಿದ್ಯಾರ್ಥಿ ವಲಯದಲ್ಲೂ ನಾಟಕದ ಗತವೈಭವ ಮರುಕಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಮಹಾನಗರಪಾಲಿಕೆ ಮಾಜಿ ಸದಸ್ಯ ಬಾ.ಮ. ಬಸವರಾಜಯ್ಯ ಮಾತನಾಡಿ, ಸಾರ್ವಜನಿಕ ವಲಯದ ಜತೆಗೆ ವಿದ್ಯಾರ್ಥಿ ಸಮುದಾಯದಲ್ಲೂ ನಾಟಕದ ಬಗೆಗಿನ ಅಭಿರುಚಿ ಕಡಿಮೆ ಆಗುತ್ತಿದೆ. ರಂಗಭೂಮಿ ಮೂಲಕ ಸುಸಂಸ್ಕೃತ ಬದುಕು ಕಟ್ಟಿಕೊಳ್ಳಲು ಅವಕಾಶ ಇವೆ.
ದಾವಣಗೆರೆಯಲ್ಲಿ ಹಲವು ವರ್ಷಗಳ ಹಿಂದೆ ಪ್ರತಿಮಾಸಭಾ, ಅಭಿಯಂತರಂಗ ಇತರೆ ಸಂಘಟನೆಗಳು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದವು. ಮೈಸೂರಿನ ರಂಗಾಯಣಕ್ಕೆ ಚಾಲನೆ ದೊರೆತಿದ್ದೇ ದಾವಣಗೆರೆಯಲ್ಲಿ. ಮಂಡ್ಯ ರಮೇಶ್, ರಂಗಾಯಣ ರಘು ಇತರರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದು ಇದೇ ದಾವಣಗೆರೆಯಲ್ಲಿ ಎಂದು ಸ್ಮರಿಸಿದರು.
ರಂಗ ಸಂಘಟಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ಹವ್ಯಾಸಿ ರಂಗಭೂಮಿಗೆ ಇರುವಂತೆ ವೃತ್ತಿ ರಂಗಭೂಮಿಗೂ ಪ್ರತ್ಯೇಕ ರಂಗಾಯಣ, ನಟನೆ, ರಂಗಸಜ್ಜಿಕೆಯಂಥಹ ವಿಷಯಗಳ ಬಗ್ಗೆ ತರಬೇತಿ ನೀಡುವ ನಾಟಕ ಶಾಲೆಯನ್ನು ಸರ್ಕಾರ ಪ್ರಾರಂಭಿಸಬೇಕು. ಖಾಲಿ ಇರುವಂತಹ ಶಿವಮೊಗ್ಗ, ಕಲಬುರುಗಿ ರಂಗಾಯಣಕ್ಕೆ ಆದಷ್ಟು ಬೇಗ ನಿರ್ದೇಶಕರನ್ನ ನೇಮಿಸಬೇಕು ಎಂದು ಒತ್ತಾಯಿಸಿದರು.
ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಜೇಬು ಪ್ರಧಾನಕ್ಕಿಂತಲೂ ಹೃದಯ ಪ್ರಧಾನವಾಗುವಂತಹ ಜನಸಾಮಾನ್ಯರಿಗೆ ಅತಿ ಸರಳ, ಸುಲಭವಾಗಿ ಅರ್ಥವಾಗುವಂತಹ ನಾಟಕಗಳು ಹೆಚ್ಚಾಗಬೇಕು. ವಿದ್ಯಾರ್ಥಿ ಸಮುದಾಯ ರಂಗಭೂಮಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಕೆ.ಬಿ.ಆರ್ ಡ್ರಾಮಾ ಕಂಪನಿಯ ಮಾಲಿಕ ಚಿಂದೋಡಿ ಚಂದ್ರಧರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಇದ್ದರು. ನಾವು-ನೀವು ಸಂಸ್ಥೆ ನಿರ್ದೇಶಕ ಎಸ್.ಎಸ್. ಸಿದ್ದರಾಜು ಪ್ರಾಸ್ತಾವಿಕ ಮಾತುಗಳಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.