ಮಹಿಳೆಗಿದೆ ಉನ್ನತ ಸಮಾಜ ಕಟ್ಟುವ ಶಕ್ತಿ
Team Udayavani, Mar 9, 2019, 7:16 AM IST
ದಾವಣಗೆರೆ: ಮಹಿಳೆಯರು ಈಗ ಮಾತ್ರವಲ್ಲ, ಮುಂದಿನ ದಿನಗಳಿಗೂ ಅತ್ಯಗತ್ಯವಾದ ಉನ್ನತ ಸಮಾಜ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಮನವಿ ಮಾಡಿದ್ದಾರೆ.
ಶುಕ್ರವಾರ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸ್ತ್ರೀಶಕ್ತಿ ಸಮಾವೇಶ-2019ರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಉನ್ನತ ಸಮಾಜ ಕಟ್ಟುವಂತಹ ಅಪ್ರತಿಮ ಬುದ್ಧಿಮತ್ತೆ, ಚಾಣಾಕ್ಷತೆ, ಮುಂದಾಲೋಚನೆ, ಶಕ್ತಿ ಇದೆ. ತಾವು ಬೆಳೆಯುವ ಜೊತೆಗೆ ಮುಂದಿನ ದಿನಗಳಿಗೂ ಅಗತ್ಯವಾದ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಆಶಿಸಿದರು.
ಮಹಿಳೆ ಎಂದರೆ ಪ್ರಕೃತಿ. ಹಾಗಾಗಿಯೇ ಮಹಿಳೆಯನ್ನು ತಾಯಿ, ಭೂಮಿ, ಇಳೆ.. ಎನ್ನುವ ಮೂಲಕ ಗೌರವದಿಂದ ಕಾಣಲಾಗುತ್ತದೆ. ಮಹಿಳೆಯರು ಪುರುಷರಗಿಂತಲೂ ದೈಹಿಕವಾಗಿ ಶಕ್ತಿಶಾಲಿ ಅಲ್ಲದೇ ಇರಬಹುದು. ಜೈವಿಕ ಮತ್ತು ವೈಜ್ಞಾನಿಕವಾಗಿ ಎಲ್ಲರಗಿಂತಲೂ ಹೆಚ್ಚಿನ ಶಕ್ತಿಶಾಲಿಗಳು. ಪುರುಷರು ಸದಾ ಸ್ವಾರ್ಥಿಗಳಾದರೆ ತಮ್ಮ ಬಾಲ್ಯದಿಂದಲೇ ಹೋರಾಟವನ್ನು ನಡೆಸುವಂತಹ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ತ್ಯಾಗಿಯಾಗಿ ಸಾಗುತ್ತಾರೆ. ತಮ್ಮ ತ್ಯಾಗದ ಮೂಲಕ ಭಾವಕೋಶವನ್ನ ಜಗತ್ತಿನಾದ್ಯಂತ ಪಸರಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದು ಸದೃಢ ಸಮಾಜವನ್ನು ಕಟ್ಟುವ ಶಕ್ತಿ-ದಾಷ್ಟ್ರಾತೆ ಇರುವುದು ಮಹಿಳೆಯರಲ್ಲಿ. ಮಹಿಳೆ ವ್ಯಕ್ತಿಯಲ್ಲ. ದೈವಿಕವಾಗಿ ಆಕೆಯೊಂದು ಪ್ರಕೃತಿ. ತಾಯಿ, ಅಕ್ಕ-ತಂಗಿ, ಹೆಂಡತಿ, ದೇವಿ ಹೀಗೆ ಜೈವಿಕವಾಗಿ, ವೈಜ್ಞಾನಿಕವಾಗಿ ಅಷ್ಟೊಂದು ಅವತಾರಗಳಲ್ಲಿ ಕಾಣಲು ಹೆಣ್ಣಿಗೆ ಮಾತ್ರ ಸಾಧ್ಯ. ಪುರುಷ ಬಲ ಢಾಂಬಿಕವಾದದು. ಮಹಿಳೆಯರು ನಿಜಕ್ಕೂ ಕಲೆಗಾರ್ತಿಯರು. ಅವರಷ್ಟು ಹೊಂದಾಣಿಕೆಯ ಶಕ್ತಿ ಬೇರೆ ಯಾರಲ್ಲೂ ಇರುವುದಿಲ್ಲ.
ತಮ್ಮ ಬದುಕನ್ನ ಕಟ್ಟಿಕೊಳ್ಳುವ ಜೊತೆಗೆ ತನ್ನವರ ಬದುಕನ್ನ ಕಟ್ಟುವಂತಹ ಕಲೆ ಅವರಿಗೆ ಸಿದ್ಧಿಸಿದೆ. ಮದುವೆಯಾಗುವ ತನಕ ತವರು ಮನೆಯಲ್ಲಿ ಒಳ್ಳೆಯ ವಾತಾವರಣ ಉಂಟು ಮಾಡುವ ಮಹಿಳೆಯರು ಗಂಡನ ಮನೆಯಲ್ಲಿ ಕೆಲವೇ ದಿನಗಳಲ್ಲಿ ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಅಂತಹ ಹೊಂದಾಣಿಕೆ ಪುರುಷರಲ್ಲಿ ಸಾಧ್ಯವೇ ಇಲ್ಲ ಎಂದರು.
ಮಹಿಳೆಯರಿಗೆ ಅನೇಕಾನೇಕ ವರ್ಷಗಳ ಕಾಲ ಶೈಕ್ಷಣಿಕ ಜ್ಞಾನ ಮತ್ತು ಅವಕಾಶ ನೀಡದ ಏಕೈಕ ಕಾರಣಕ್ಕೆ ಮುಂಚೂಣಿಗೆ ಬರಲಿಲ್ಲ. ಶಿಕ್ಷಣದ ಜೊತೆಗೆ ಎಲ್ಲಾ ರೀತಿಯ ಅವಕಾಶ ದೊರೆಯಲಾರಂಭಿಸಿದ ನಂತರ ಈಗ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಬರೀ ಮುಂಚೂಣಿಯಲ್ಲಿರುವುದು ಮಾತ್ರವಲ್ಲ, ಹಲವಾರು ಸಾಧನೆ ಮಾಡುತ್ತಿದ್ದಾರೆ. ಸಮಾಜ ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಒದಗಿಸುವ ಮೂಲಕ ಬೆಳೆಸುವ ಅಗತ್ಯವೇ ಇಲ್ಲ. ಮೀಸಲಾತಿ ಇಲ್ಲದೆಯೂ ಮಹಿಳೆಯರು ಬೆಳೆಯುತ್ತಿರುವುದು ನಿಜಕ್ಕೂ ಹೊಸ ಬದಲಾವಣೆ ಎಂದು ಹರ್ಷ ವ್ಯಕ್ತಪಡಿಸಿದರು.
12ನೇ ಶತಮಾನದಲ್ಲಿ ಮಹಾನ್ ದಾರ್ಶನಿಕ ಬಸವಣ್ಣನವರು ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯಾಕ್ಕಾಗಿ ಶ್ರಮಿಸಿದರು. ಜಗತ್ತಿನ ಮೊಟ್ಟ ಮೊದಲ ಸಂಸತ್ ಎಂದೇ ಕರೆಯಲ್ಪಡುವ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಸೂಳೆ ಸಂಕವ್ವ, ತಾಳವ್ವ… ಮುಂತಾದವರಿಗೆ ಅವಕಾಶ ಮಾಡಿಕೊಟ್ಟರು. ಅವರು ವಚನಕಾರ್ತಿಯರಾಗಿ ಸಮಾಜಕ್ಕೆ ಸಾಹಿತ್ಯದ ಮೂಲಕ ಸೇವೆ ಸಲ್ಲಿಸಿದರು. ಅಂದು ಬಸವಣ್ಣನವರು ಕಂಡಂತಹ ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯದ ಕನಸು 800-900 ವರ್ಷಗಳ ನಂತರ ನನಸಾಗುತ್ತಿದೆ ಎಂದು ತಿಳಿಸಿದರು.
ಇಂದಿನ ಆಧುನಿಕ, ವೈಜ್ಞಾನಿಕ ಯುಗದಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಕೆಲವಾರು ಸಾಮಾಜಿಕ ಅನಿಷ್ಟಗಳ ಸುಳಿಯಲ್ಲಿ ಇರುವುದು ಕಂಡು ಬರುತ್ತದೆ. ಹಿಂದಿನಂತೆ ಅನ್ಯಾಯದ ವಿರುದ್ಧ ಸುಮ್ಮನಿರದೆ ಧ್ವನಿ ಎತ್ತಿ ಹೋರಾಟ ಮಾಡುತ್ತಿರುವುದು ಹೆಮ್ಮೆಯ ವಿಷಯ. ಮಹಿಳೆಯರು ತಮ್ಮಲ್ಲಿನ ಕೀಳರಿಮೆಯ ಬಿಟ್ಟು ಅನುಭವ, ಚಾಣಾಕ್ಷತೆ, ಮುಂದಾಲೋಚನೆಯಿಂದ ಸಮಾಜದಲ್ಲಿ ಒಳ್ಳೆಯ ಹೆಜ್ಜೆ ಗುರುತು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ತಿಳಿಸಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಿ.ಎನ್. ಶೈಲಜಾ ಬಸವರಾಜ್ ಮಾತನಾಡಿ, ಇಂದು ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರು ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಮಹಿಳೆಯರು ಪ್ರೀತಿ ಮತ್ತು ಗೌರವದಿಂದ ಸಾಗಿದಾಗ ಯಾವುದೇ ರೀತಿಯ ಸಮಸ್ಯೆಗಳಲ್ಲಿ ಸಿಲುಕುವುದೇ ಇಲ್ಲ. ಪುರುಷರ ಬೆಂಬಲದಿಂದ ಕೌಟಂಬಿಕ ಜೀವನದಂತೆಯೇ ಆಡಳಿತ ಕ್ಷೇತ್ರದಲ್ಲೂ ಮುನ್ನಡೆಯಬೇಕು. ಅತ್ಯುನ್ನತ ಭಾರತೀಯ ಸಂಸ್ಕೃತಿಯನ್ನ ವಿಶ್ವ ಸಂಸ್ಕೃತಿಯನ್ನಾಗಿ ಬೆಳೆಸಬೇಕು. ಮಹಿಳೆಯರ ದಿನಾಚರಣೆ ಕೇವಲ ಮಹಿಳೆಯರಿಗೆ ಸೀಮಿತವಾಗದೆ ಕುಟುಂಬದ, ಸಮಾಜದ ಎಲ್ಲ ಪುರುಷರೂ ಸೇರಿ ಮಹಿಳೆಯರ ದಿನವನ್ನು ಆಚರಿಸುವಂತಾಗಬೇಕು ಎಂದು ಆಶಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು, ಹಿರಿಯ ಕಾರ್ಮಿಕ ಮುಖಂಡ ಎಚ್. ಕೆ. ರಾಮಚಂದ್ರಪ್ಪ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಜಿ. ಮಂಗಳಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ತ್ರಿಪುಲಾಂಭ, ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ಎಚ್.ಡಿ. ನೀಲಾಂಬಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯ್‌ಕುಮಾರ್ ಇತರರು ಇದ್ದರು. ಶೃತಿ ನಿರೂಪಿಸಿದರು ಪರಿಚಯಿಸಿಕೊಂಡ ಡಿಸಿ ನಾನು ಜಿ.ಎನ್. ಶಿವಮೂರ್ತಿ. ಈಚೆಗೆ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಅದರಲ್ಲೂ ಮಹಿಳಾ ದಿನಾಚರಣೆಯಲ್ಲಿ ಮಾತನಾಡುತ್ತಿರುವುದು ಒಂದು ಸುಸಂದರ್ಭ ಎಂದು ತಮ್ಮನ್ನು ಪರಿಚಯಿಸಿಕೊಂಡ ಜಿಲ್ಲಾಧಿಕಾರಿಗಳು, ಶುಕ್ರವಾರ ಬೆಳಗ್ಗೆ ದೂರವಾಣಿಯಲ್ಲಿ ತಮ್ಮ ಪತ್ನಿಯೊಂದಿಗೆ ಮಹಿಳಾ ದಿನಾಚರಣೆ ಕುರಿತಂತೆ ನಡೆದ ಸಂಭಾಷಣೆಯ ವಿವರ ಹಂಚಿಕೊಳ್ಳುವ ಜೊತೆಗೆ ಎಲ್ಲರಿಗೂ ಮಹಿಳಾ ದಿನದ ಶುಭ ಕೋರಿದರು.
ಸನ್ಮಾನಿತರು ಉತ್ತಮ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರಾದ ದಾವಣಗೆರೆಯ ವಿಜಯನಗರದ ಆರ್.ಎಸ್. ಲೀಲಾವತಿ, ಹರಿಹರದ ಯಲವಟ್ಟಿ-ಸಿ ಅಂಗನವಾಡಿ ಕೇಂದ್ರದ ಕವಿತಾ, ಜಗಳೂರಿನ ಐನಳ್ಳಿ ಅಂಗನವಾಡಿ ಕೇಂದ್ರದ ಲಲಿತಮ್ಮ, ಹರಪನಹಳ್ಳಿಯ ನೀಲಗುಂದ ಅಂಗನವಾಡಿ ಕೇಂದ್ರದ ಸುಮ, ಹೊನ್ನಾಳಿಯ ಮಾದನಬಾವಿ-1 ನೇ ಅಂಗನವಾಡಿ ಕೇಂದ್ರದ ಸಾಕಮ್ಮ, ಚನ್ನಗಿರಿ 2ನೇ ಅಂಗನವಾಡಿ ಕೇಂದ್ರದ ಸಿ. ಭಾರತಿ, ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆಗೈದ ಜಗಳೂರು ತಾಲೂಕಿನ ಪಲ್ಲಾಗಟ್ಟೆಯ ಶೃತಿ ಸ್ತ್ರೀಶಕ್ತಿ ಒಕ್ಕೂಟದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.