ಎಲ್ಲರದ್ದೂ ಕಡತ ವಿಲೇವಾರಿ ವಿಳಂಬದ್ದೇ…. ದೂರು
Team Udayavani, Aug 6, 2019, 11:21 AM IST
ದಾವಣಗೆರೆ: ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ದಾವಣಗೆರೆ: ಕಡತ ವಿಲೇವಾರಿ ವಿಳಂಬ… ಆಗುತ್ತಿದೆ ಎಂಬ ವಿಚಾರವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಪಕ್ಷಾತೀತವಾಗಿ ಹರಿಹಾಯ್ದ ಘಟನೆ ಸೋಮವಾರ ಜಿಲ್ಲಾ ಪಂಚಾಯತ್ ಸಾಮಾನ್ಯಸಭೆಯಲ್ಲಿ ನಡೆಯಿತು.
ಒಂದು ಗಂಟೆಗೂ ಹೆಚ್ಚು ತಡವಾಗಿ ಸಭೆ ಪ್ರಾರಂಭವಾಗುತ್ತಿದ್ದಂತೆ ಹೊಸಕೆರೆ ಕ್ಷೇತ್ರದ ಪಕ್ಷೇತರ ಸದಸ್ಯ ತೇಜಸ್ವಿ ಪಟೇಲ್, ಈಚೆಗೆ ಕಡತ ವಿಲೇವಾರಿಯಲ್ಲಿ ಸಾಕಷ್ಟು ವಿಳಂಬ ಆಗುತ್ತಿದೆ ಎಂಬುದು ಯಾವ ಕಾರಣಕ್ಕೆ ಎಂಬುದೇ ತಿಳಿಯದಂತಾಗಿದೆ. ಕಡತ ವಿಲೇವಾರಿ ವಿಳಂಬದ ಪರಿಣಾಮ ವಿವಿಧ ಇಲಾಖೆಯಲ್ಲಿನ ಅನುದಾನ ಸರ್ಕಾರಕ್ಕೆ ವಾಪಸ್ ಆಗಿದೆ. ಒಂದೊಂದು ಕಡತ ವಿಲೇವಾರಿಗೆ ಸಮಯ ನಿಗದಿಪಡಿಸಿ ಸಕಾಲ… ಮಾದರಿಯಲ್ಲಿ ಜಿಲ್ಲಾ ಪಂಚಾಯತ್‌ಗೆ ಅನ್ವಯ ಆಗುವಂತೆ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ತೇಜಸ್ವಿ ಪಟೇಲ್ ಆಕ್ಷೇಪ, ಒತ್ತಾಯಕ್ಕೆ ಧ್ವನಿಗೂಡಿಸಿದ ಸಾಸ್ವೇಹಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಜೆ. ವೀರಶೇಖರಪ್ಪ, ಈಗಿರುವ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಧಿಕಾರ ವಹಿಸಿಕೊಂಡ ನಂತರವೇ ಕಡತ ವಿಲೇವಾರಿ ಸಾಕಷ್ಟು ವಿಳಂಬ ಆಗುತ್ತಿದೆ. ಏನೇನೋ ಷರಾ ಬರೆಯಲಾಗಿರುತ್ತದೆ. ಜಿಲ್ಲಾ ಪಂಚಾಯತ್ ಸದಸ್ಯರು ಕರೆ ಮಾಡಿದರೂ ಸ್ವೀಕರಿಸುವುದೇ ಇಲ್ಲ. ಜಿಲ್ಲಾ ಪಂಚಾಯತ್‌ನ ಮುಖ್ಯ ಸ್ಥಾನದಲ್ಲಿ ಇರುವವರು ಆ ಸ್ಥಾನಕ್ಕೆ ಘನತೆ, ಗೌರವ ಬರುವಂತೆ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ ಅವರು, ಒಂದು ಹಂತದಲ್ಲಿ ನೀವೇ ಸರಿ ಇದ್ದಿದ್ದರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿದ್ದರು. ನಿಸ್ಪೃಹತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ನಿಮಗೆ ಕೆಲಸ ಮಾಡಲಿಕ್ಕೆ ಆಗದೇ ಹೋದರೆ ಗೌರವಾನ್ವಿತವಾಗಿ ವರ್ಗಾವಣೆ ಮಾಡಿಸಿಕೊಳ್ಳಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಡತ ವಿಲೇವಾರಿ ವಿಳಂಬ ಆಗುತ್ತಿರುವುದು ಸತ್ಯ ಅಲ್ಲ. ಸದಸ್ಯರು ಸುಳ್ಳು ಆರೋಪ ಮಾಡಬಾರದು. ಕೆಲವರ ಆರೋಪದಿಂದ ಮನಸ್ಸಿಗೆ ನೋವಾಗುತ್ತಿದೆ. ಯಾವುದೇ ಕಚೇರಿಯಲ್ಲಿ ಕಡತಗಳ ದಾಖಲೆ ನಿರ್ವಹಣೆ ಸರಿಯಾಗಿ ಇಲ್ಲದ ಕಾರಣಕ್ಕೆ ಕೆಲವಾರು ಕಡತ ವಿಲೇವಾರಿಯಲ್ಲಿ ವಿಳಂಬ ಆಗಿರಬಹುದು. ಕೆಲ ಅಧಿಕಾರಿಗಳು ಕೆಲಸ ಮಾಡಲಿಕ್ಕೆ ಪ್ರಾಣಭಯ ಆಗುತ್ತದೆ ಎಂದು ಹೇಳಿದ್ದೂ ಇದೆ. 2-3 ತಿಂಗಳಲ್ಲಿ ಇ-ಆಫೀಸ್… ಪ್ರಾರಂಭಿಸಿದ ನಂತರ ಕಡತ ವಿಲೇವಾರಿ ವಿಳಂಬ ಆಗುವುದಿಲ್ಲ. ನಾವು ವರ್ಗಾವಣೆಗೆ ಸದಾ ಸಿದ್ಧವಾಗಿಯೇ ಕೆಲಸ ಮಾಡುತ್ತಾ ಇರುತ್ತೇವೆ. ನಮ್ಮ ಕೆಲಸವೇ ಅಂತದ್ದು, ಬೇಕಾದರೆ ತಮ್ಮ ವರ್ಗಾವಣೆಗೆ ಠರಾವು… ಪಾಸ್ ಮಾಡಬಹುದು. ನಿಮ್ಮ ಒಂದೇ ಒಂದು ಕಡತ ಬಾಕಿ ಇಲ್ಲ. ಯಾವ ಕಾರಣಕ್ಕೂ ಸುಳ್ಳು ಆರೋಪ ಮಾಡಬೇಡಿ. ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಎಚ್. ಬಸವರಾಜೇಂದ್ರ ಮನವಿ ಮಾಡಿದರು.
ವೀರಸಂಗಪ್ಪ ಮಾತನಾಡಲು ಮುಂದಾಗುತ್ತಿದ್ದಂತೆ. ಸಿಇಒ ಕುಳಿತುಕೊಳ್ಳುವಂತೆ ಸೂಚಿಸಿದ್ದರಿಂದ ಕುಪಿತ ಗೊಂಡ ಬಿಜೆಪಿ ಸದಸ್ಯ ಲೋಕೇಶ್ವರಪ್ಪ, ಅವರು(ವೀರಸಂಗಪ್ಪ) ಗೌರವಾನ್ವಿತ ಸದಸ್ಯರು. ಅವರು ಮಾತನಾಡುವಾಗ ಕುಳಿತುಕೊಳ್ಳಿ ಎಂದು ಹೇಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲದ ಚರ್ಚೆಯ ನಂತರ ಕಡತ ವಿಲೇವಾರಿ ವಿಳಂಬ…ದ ಚರ್ಚೆ ನಿಂತಿತು.
ಬಿಜೆಪಿ ಸದಸ್ಯೆ ಕೆ.ವಿ. ಶಾಂತಕುಮಾರಿ, ಕುಡಿಯುವ ನೀರಿನ ಸಮಸ್ಯೆ ವಿಚಾರ ಪ್ರಸ್ತಾಪಿಸಿದಾಗ ಮತ್ತೆ ಕಡತ ವಿಲೇವಾರಿ ವಿಳಂಬದ ವಿಚಾರ ಪ್ರಸ್ತಾಪಿಸಿದ ಅಧ್ಯಕ್ಷೆ ಶೈಲಜಾ ಬಸವರಾಜ್, ಚುನಾವಣಾ ಸಂದರ್ಭದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಸ್ಥಳಗಳಲ್ಲಿ ತುರ್ತಾಗಿ ಕೊರೆಸಿದ ಕೊಳವೆಬಾವಿಗಳ ಕಡತಕ್ಕೆ ಈವರೆಗೆ ಸಿಇಒ ಸಹಿ ಮಾಡದೇ ಇರುವ ಕಾರಣಕ್ಕೆ ಬಿಲ್ ಆಗಿಲ್ಲ. ಹಳೆಯ ಬಿಲ್ ಆಗದೆ, ಹೊಸದಾಗಿ ಬೋರ್ ಕೊರೆಯಲಿಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಯಾವ ಕಾರಣಕ್ಕೆ ಕಡತಕ್ಕೆ ಸಹಿ ಹಾಕಿಲ್ಲ ಎಂಬುದನ್ನು ಸಭೆಗೆ ತಿಳಿಸಬೇಕು ಎಂದರು.
ತುರ್ತು ಸಂದರ್ಭದಲ್ಲಿ ಕೊರೆಯಲಾದ ಕೊಳವೆಬಾವಿಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಿಕೊಡಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇಗೆ ಸೂಚಿಸಿದ್ದೇನೆ. 621 ಕೊಳವೆಬಾವಿ ಬಿಲ್ಗಳ ಕಡತಕ್ಕೆ ಸಹಿ ಮಾಡಿದ್ದೇನೆ. ಈಗಲೇ ಕಡತ ತಂದಲ್ಲಿ ಸಹಿ ಮಾಡುತ್ತೇನೆ ಎಂದು ಸಿಇಒ ಎಚ್. ಬಸವರಾಜೇಂದ್ರ ತಿಳಿಸಿದರು.
ಮೇ. 15 ರಂದೇ ಕ್ರಿಯಾಯೋಜನೆ ಜೊತೆಯಾಗಿಯೇ ಕಡತ ಸಲ್ಲಿಸಿರುವುದಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ಎಚ್.ಎನ್. ರಾಜು ಮಾಹಿತಿ ನೀಡುತ್ತಿದ್ದಂತೆ ಉಪಾಧ್ಯಕ್ಷ ಸುರೇಂದ್ರನಾಯ್ಕ, ಕೆ.ಎಚ್. ಓಬಳೇಶಪ್ಪ ಎಲ್ಲರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಥಮ ಆದ್ಯತೆಯಲ್ಲಿ ಚುನಾವಣಾ ಸಂದರ್ಭದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಸ್ಥಳಗಳಲ್ಲಿ ತುರ್ತಾಗಿ ಕೊರೆಸಿದ ಕೊಳವೆಬಾವಿಗಳ ಬಿಲ್ ಪಾವತಿಗೆ ಸಿಇಒ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸಂಬಂಧಿತ ಕಡತಗಳಿಗೆ ಸಹಿ ಮಾಡಬೇಕು. ಅಷ್ಟಕ್ಕೂ ಕೊಳವೆಬಾವಿ ಕೊರೆಸಿಯೇ ಇಲ್ಲ ಎಂಬ ಅನುಮಾನ ಇದ್ದರೆ ಸ್ಥಳ ಪರಿಶೀಲನೆ ಮಾಡಿಯೇ ಸಹಿ ಮಾಡಿ… ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಸೂಚಿಸಿದರು. ಅಂತಿಮವಾಗಿ ಕಡತಕ್ಕೆ ಸಹಿ ಮಾಡುವುದಾಗಿ ಸಿಇಒ ಎಚ್. ಬಸವರಾಜೇಂದ್ರ ತಿಳಿಸಿದರು.
ಹಾಸ್ಟೆಲ್ಗಳ ಬೋಗಸ್ ಬಿಲ್ ವ್ಯವಹಾರ: ಕಳೆದ 5 ವರ್ಷದಿಂದ ಕೆಲವಾರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅನುದಾನಿತ ಶಿಕ್ಷಣ ಮತ್ತು ಖಾಸಗಿ ಸಂಸ್ಥೆ(ಹಾಸ್ಟೆಲ್) ಬೋಗಸ್ ಬಿಲ್ ಪಡೆಯುತ್ತಿವೆ ಎಂಬ ವಿಚಾರವನ್ನು ಆನಗೋಡು ಕ್ಷೇತ್ರದ ಕಾಂಗ್ರೆಸ್ ಸದಸ್ಯ ಕೆ.ಎಸ್. ಬಸವರಾಜ್ ಸೋಮವಾರ ಜಿಪಂ ಸಾಮಾನ್ಯ ಸಭೆಯಲ್ಲಿ ಬೆಳಕಿಗೆ ತಂದರು.
ದಾವಣಗೆರೆ ನಗರದಲ್ಲಿ 6 ಅನುದಾನಿತ ಹಾಸ್ಟೆಲ್ಗಳಿವೆ. ಅವುಗಳಲ್ಲಿ ಕೆಲವು ಬಹಳ ಚೆನ್ನಾಗಿ ನಡೆಯುತ್ತಿವೆ. ಕೆಲವು ಹಾಸ್ಟೆಲ್ಗಳಲ್ಲಿ ಬರೀ ಟ್ರಂಕ್ ವ್ಯವಹಾರ…. ಮಾತ್ರ ನಡೆಯುತ್ತಿದೆ. ಆ ಹಾಸ್ಟೆಲ್ಗಳ ದಾಖಲೆಯಲ್ಲಿ 100 ವಿದ್ಯಾರ್ಥಿಗಳು ಇರುತ್ತಾರೆ. ಆದರೆ, ಆ ಹಾಸ್ಟೆಲ್ಗಳಲ್ಲಿ ಅಷ್ಟು ಸಂಖ್ಯೆಯ ವಿದ್ಯಾರ್ಥಿಗಳೇ ಇರುವುದಿಲ್ಲ. ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಸಿಯೂಟ ಯೋಜನೆಯಡಿ ಎಲ್ಲಾ ವಿದ್ಯಾರ್ಥಿಗಳ ಹೆಸರಲ್ಲಿ ಅಕ್ಕಿ ಎಲ್ಲಾ ಅಗತ್ಯ ವಸ್ತು ಪಡೆದುಕೊಳ್ಳಲಾಗುತ್ತಿದೆ ಎಂದು ದೂರಿದರು.
ಏನಾದರೂ ಹಾಸ್ಟೆಲ್ಗಳಿಗೆ ಭೇಟಿ ನೀಡಿದರೆ ಬರೀ ಟ್ರಂಕ್ ಮಾತ್ರವೇ ಇರುತ್ತವೆ. ವಿದ್ಯಾರ್ಥಿಗಳು ಎಲ್ಲಿ ಎಂದು ಕೇಳಿದರೆ ಏನಾದರೂ ಒಂದು ಕಾರಣ ಹೇಳುತ್ತಾರೆ. ಈಗ ಪ್ರತಿ ವಿದ್ಯಾರ್ಥಿಗೆ ಮಾಸಿಕ 1,100 ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ತಿಂಗಳಿಗೆ 11 ಲಕ್ಷ ಬಿಡುಗಡೆ ಆಗುತ್ತಿದೆ. ಅಷ್ಟೊಂದು ಹಣ ಬೋಗಸ್ ಬಿಲ್ ಮೂಲಕ ಪಡೆದುಕೊಳ್ಳಲಾಗುತ್ತಿದೆ. 5 ವರ್ಷದಿಂದ ಬಿಡುಗಡೆ ಆಗಿರುವುದು, ವಿದ್ಯಾರ್ಥಿಗಳ ನಿಖರ ಮಾಹಿತಿ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ನನ್ನ ಆರೋಪ ನಿಜ. ಬೇಕಾದರೆ ಈ ಕ್ಷಣವೇ ಆ ಹಾಸ್ಟೆಲ್ಗಳಿಗೆ ಭೇಟಿ ನೀಡಿ, ಪರಿಶೀಲಿಸಿ. ಆದರೆ, ಭೇಟಿಗೆ ಹೋಗುವ ಮುನ್ನ ಯಾವುದೇ ಅಧಿಕಾರಿಗಳಿಗೂ ಮಾಹಿತಿ ನೀಡಬೇಡಿ. ನೀವು ಹೇಳಿ ಹಾಸ್ಟೆಲ್ಗೆ ಹೋಗುವ ಹೊತ್ತಿಗೆ ಟ್ರಂಕ್ ಲೆಕ್ಕಾಚಾರ… ಸರಿ ಮಾಡಲಾಗಿರುತ್ತದೆ. ತಂಡಗಳ ರಚಿಸಿ, ಪರಿಶೀಲನೆ ನಡೆಸಿ, ಸರ್ಕಾರದ ಹಣ ಉಳಿಸಿ ಎಂದು ಒತ್ತಾಯಿಸಿದರು.
ಸದಸ್ಯರು ಹೇಳುತ್ತಿರುವುದು ನಿಜ. ಅದು ನನ್ನ ಅನುಭವಕ್ಕೂ ಬಂದಿದೆ. ತಂಡಗಳಲ್ಲಿ ಸಂಬಂಧಿತ ಹಾಸ್ಟೆಲ್ಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಚ್. ಬಸವರಾಜೇಂದ್ರ ತಿಳಿಸಿದರು.
ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡ, ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಂತೆ ಶಾಸಕ ಎಸ್.ಎ. ರವೀಂದ್ರನಾಥ್ ಸೂಚಿಸಿದರು. ದಾವಣಗೆರೆಯಲ್ಲಿನ ಹಾಸ್ಟೆಲ್ಗಳಿಗೆ ದೂಡಾದಿಂದ ನಿವೇಶನ ದೊರೆತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಾನಂದ್ ಕಂಬಾರ್ ತಿಳಿಸಿದರು.
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್ಗಳ ವಿದ್ಯಾರ್ಥಿಗಳು ಎಲ್ಲಿ ಇರುತ್ತಾರೋ ಅಲ್ಲಿಗೆ ತಿಂಡಿ, ಊಟ ಸರಬರಾಜುಗೆ ವ್ಯವಸ್ಥೆ ಮಾಡಬೇಕು ಎಂದು ಎಚ್. ಬಸವರಾಜೇಂದ್ರ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಾನಂದ್ ಕಂಬಾರ್‌ಗೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.