ಇವತ್ತು ಹೊಳೆಗಿಳೀತಿನಿ.. ಮರಳು ಕೊಡಿಸ್ತೀನಿ..
Team Udayavani, Nov 12, 2018, 4:53 PM IST
ದಾವಣಗೆರೆ: ಹೊನ್ನಾಳಿ ತಾಲೂಕಿನಲ್ಲಿ ಆಶ್ರಯ ಮನೆ, ಶೌಚಾಲಯ, ದೇವಸ್ಥಾನಕ್ಕೆ ಬೇಕಾದ ಮರಳು ಕೊಡಿಸಲು ಸೋಮವಾರ (ನ.12) ಖುದ್ದು ನಾನೇ ಹೊಳೆಗೆ ಇಳಿಯುತ್ತೇನೆ. ತಾಲೂಕಿನ ಜನರಿಗೆ ಕಡಿಮೆ ದರದಲ್ಲಿ ಮತ್ತು ಮುಕ್ತವಾಗಿ ಮರಳು ದೊರೆಯುವ ತನಕ ಹೊಳೆಯಲ್ಲೇ ಇರುತ್ತೇನೆ. ಅಂದು ಯಾರು ಏನು ಮಾಡುತ್ತಾರೋ ನೋಡುತ್ತೇನೆ… ಎಂದು ಹೊನ್ನಾಳಿ ಶಾಸಕ ಎಂ.ಪಿ.
ರೇಣುಕಾಚಾರ್ಯ ಮತ್ತೂಮ್ಮೆ ಕ್ರಾಂತಿ ನಡೆಸುವುದಾಗಿ ಗುಡುಗಿದ್ದಾರೆ.
ತಾಲೂಕಿನ ಜನರಿಗೆ ಮನೆ, ಶೌಚಾಲಯ ಕಟ್ಟಿಕೊಳ್ಳಲಿಕ್ಕೆ ಮರಳು ಸಿಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ನಾನು ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಮರಳು ಕೊಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಮರಳು ಕೊಡಿಸುವುದು ನನ್ನ ಕರ್ತವ್ಯ ಸಹ ಹೌದು. ನಾನು ಸಚಿವನಾಗಿ ಕೆಲಸ ಮಾಡಿದ್ದೇನೆ. ಕಾನೂನು ಓದದೇ ಇದ್ದರೂ ಕಾನೂನು ಗೊತ್ತಿದೆ . ನನ್ನ ತಾಲೂಕಿನ ಜನತೆಗಾಗಿ ಅನಿವಾರ್ಯವಾಗಿಯೇ ಕಾನೂನು ಉಲ್ಲಂಘನೆ ಮಾಡುತ್ತೇನೆ. ಅಕ್ರಮ ಮರಳುಗಾರಿಕೆ ಮಾಡುವರಿಗಾಗಿ ಅಲ್ಲವೇ ಅಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾನು ಶಾಸಕನಾಗಿ ಆಯ್ಕೆಯಾದ 6 ತಿಂಗಳ ತನಕ ತೀರಾ ಬೇಕಾದವರಿಗೆ ಮರಳು ಕೊಡಿಸುವಂತೆ ಅಧಿಕಾರಿಗಳಿಗೆ
ತಿಳಿಸಿದ್ದೇನೆ. ನಾನೇ ಹೊನ್ನಾಳಿಯಲ್ಲಿ 5 ಸಭೆ ನಡೆಸಿದ್ದೇನೆ. ನಾನು ಸಭೆ ನಡೆಸಿದ ನಂತರ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಜಿಲ್ಲಾ ಕೇಂದ್ರ ಮತ್ತು ಹೊನ್ನಾಳಿ ತಾಲೂಕಿನಲ್ಲಿ ಅಧಿಕಾರಿಗಳು ಎಷ್ಟು ಸಭೆ ನಡೆಸಿದ್ದಾರೆ.
ಸರ್ಕಾರಿ ಕೆಲಸಗಳಿಗೆ ಎಷ್ಟು ಮರಳು ಕೊಡಿಸಿದ್ದಾರೆ ಎಂಬುದರ ದಾಖಲೆ ತೋರಿಸಲಿ. ನಾನು ಎಷ್ಟು ಸಭೆ ನಡೆಸಿದ್ದೇನೆ ಎಂದು ದಾಖಲೆ ತೋರಿಸುತ್ತೇನೆ ಎಂದು ಸವಾಲು ಹಾಕಿದರು.
ಹೊನ್ನಾಳಿ ತಾಲೂಕಿನ ಜನರಿಗೆ ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಮರಳು ಕೊಡಿಸುವಂತೆ ಅಧಿಕಾರಿಗಳಿಗೆ ಕಾಲಾವಕಾಶ ನೀಡಿದ್ದೆ. ಅದರೊಳಗೆ ಮರಳು ಕೊಡಿಸುವ ಕೆಲಸ ಮಾಡಿಲ್ಲ. ಹಾಗಾಗಿ ನ.12ರ ಸೋಮವಾರ 11 ಗಂಟೆಗೆ ಪ್ರವಾಸಿ ಮಂದಿರದಿಂದ ನೇರವಾಗಿ ಹೊಳೆಗೆ ಹೋಗುತ್ತೇನೆ. ಸಾಮೂಹಿಕವಾಗಿ ಮರಳು ಕೊಡಿಸುವ ಕೆಲಸ ಮಾಡುತ್ತೇನೆ.
ನಾನು ಯಾರಿಗೂ ಫೋನ್ ಮಾಡಿ ಕರೆಯುವುದಿಲ್ಲ. ಯಾರಿಗೆ ಮರಳು ಬೇಕೋ ಅವರು ಬರಬೇಕು. ಆಶ್ರಯ ಮನೆ, ಶೌಚಾಲಯ, ದೇವಸ್ಥಾನ ಕಟ್ಟುತ್ತಿರುವ ಬಗ್ಗೆ ದಾಖಲೆ ತಂದು ತೋರಿಸಬೇಕು. ಯಾರ್ಯಾರಿಗೋ ಮರಳು ಕೊಡಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮನೆ, ಶೌಚಾಲಯ ಕಟ್ಟಿಕೊಳ್ಳಲು ಒಂದಿಷ್ಟು ಮರಳು ತೆಗೆದುಕೊಂಡು ಹೋಗುವ ಗಾಡಿ, ಬೈಕ್ ಹಿಡಿದು, ಕೇಸ್ ಹಾಕಲಾಗುತ್ತದೆ. ಟನ್‌ಗಟ್ಟಲೆ ಸಾಗಿಸುವರನ್ನು ಹಿಡಿಯುವುದೇ ಇಲ್ಲ. ಇದು ಕಾನೂನು ಪಾಲನೆಯೇ? ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳೇ ಜಿಲ್ಲೆಗೆ ಸುಪ್ರೀಂ ಅಲ್ಲ. ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ.
ಜನರು ನನ್ನನ್ನು ಹಿಡಿದು ಕೇಳುತ್ತಾರೆಯೇ ಹೊರತು ಅಧಿಕಾರಿಗಳನ್ನಲ್ಲ. ನನಗೂ ಸರ್ಕಾರ ಸಂಬಳ ಕೊಡುತ್ತದೆ. ನನಗೂ ಜವಾಬ್ದಾರಿ ಇದೆ. ಅಧಿಕಾರ ಶಾಶ್ವತ ಅಲ್ಲ ಎಂಬುದು ನನಗೂ ಚೆನ್ನಾಗಿ ಗೊತ್ತಿದೆ ಎಂದು ತಿಳಿಸಿದರು.
ಸರ್ಕಾರದ ಮರಳು ನೀತೀಯೇ ಸರಿ ಇಲ್ಲ. ಹಾಗಾಗಿ ಜನರಿಗೆ ತೊಂದರೆ ಆಗುತ್ತಿದೆ. ಸರ್ಕಾರದ ಕೆಲಸಕ್ಕೂ ಎಂ-ಸ್ಯಾಂಡ್ ಬಳಕೆ ಮಾಡಲಾಗುತ್ತದೆ. ಸರ್ಕಾರಿ ಕೆಲಸಗಳಿಗೆ ಎಷ್ಟು ಮರಳು ಕೊಟ್ಟಿದ್ದಾರೆ ಎಂಬುದಕ್ಕೆ ಅಧಿಕಾರಿಗಳು ದಾಖಲೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಗೋವಿನಕೋವಿ, ಹರಳಹಳ್ಳಿ ಪಾಯಿಂಟ್ ಗಳಲ್ಲಿ ಕಡಿಮೆ ದರಕ್ಕೆ ಮರಳು ಒದಗಿಸಲು ಅವಕಾಶ ಇದೆ. ಆದರೆ, ಅಧಿಕಾರಿಗಳು ಆ ಕೆಲಸ ಮಾಡುತ್ತಿಲ್ಲ. ಹರಳಿಹಳ್ಳಿ ಪಾಯಿಂಟ್‌ನ್ನು 2.84 ಕೋಟಿಗೆ ಗುತ್ತಿಗೆ ಕೊಟ್ಟಿದ್ದಾರೆ. ಗುತ್ತಿಗೆ ಕೊಡಲು ಯಾರು ಹೇಳಿದ್ದಾರೋ ಗೊತ್ತಿಲ್ಲ. ಅಧಿಕಾರಿಗಳೇ ದರ ನಿಗದಿಪಡಿಸಿದ್ದಾರೆ. ಕೂಡಲೇ ಆ ಗುತ್ತಿಗೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದ ಅವರು ಸೋಮವಾರ ಹೊಳೆಗೆ ಇಳಿದು, ಮರಳು ಕೊಡಿಸುವ ಕೆಲಸ ಮಾಡಿಯೇ ತೀರುವುದಾಗಿ ಪುನರುಚ್ಚರಿಸಿದರು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್, ರಾಜನಹಳ್ಳಿ ಶಿವಕುಮಾರ್, ಕೂಲಂಬಿ ಬಸವರಾಜ್, ಅಣಬೇರು ಶಿವಪ್ರಕಾಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಏನು ದೇವರ ಮಗನಾ…?
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ಶ್ರೀನಿವಾಸ್ ನನ್ನನ್ನು ಮೇಲಿಂದ ಇಳಿದು ಬಂದವರಾ ಎಂದು ಪ್ರಶ್ನಿಸಿದ್ದಾರೆ. ಅವರು ಹೇಳಿದಂತೆ ನಾನೇನು ಮೇಲಿಂದ ಇಳಿದು ಬಂದಿಲ್ಲ. ನಾನು ನನ್ನ ತಾಯಿಯ ಮಗ. ಹೊನ್ನಾಳಿ ಜನರ ಸೇವೆ ಮಾಡುವುದಕ್ಕೆ ನನ್ನ ತಾಯಿ ನನಗೆ ಜನ್ಮ ಕೊಟ್ಟಿದ್ದಾರೆ. ನನ್ನನ್ನು ಮೇಲಿಂದ ಇಳಿದು ಬಂದವರಾ ಎಂದು ಕೇಳಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ಶ್ರೀನಿವಾಸ್ ಯಾರ ಮಗ, ಏನಾದರೂ ದೇವರ ಮಗಾನಾ….? ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಖಾರವಾಗಿ ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಎಂದರೆ ಬರೀ ಜಯಂತಿಗೆ ಬಂದು, ಮಜಾ ಮಾಡಿ ಹೋಗುವುದಲ್ಲ. ಜಿಲ್ಲೆಯಲ್ಲಿ ಬರ ಇದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಒಂದು ಬಾರಿಯಾದರೂ ಜಿಲ್ಲೆಯ ಶಾಸಕರೊಂದಿಗೆ ಸಭೆ ಮಾಡಿದ್ದಾರಾ… ಒಂದೂ ಮಾಡಿಲ್ಲ. ಸಣ್ಣ ಕೈಗಾರಿಕಾ ಖಾತೆಯ ಬಗ್ಗೆಯೇ ಅವರಿಗೆ ಗೊತ್ತಿಲ್ಲ. ಇನ್ನು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಇನ್ನೇನು ಗೊತ್ತಿರುತ್ತದೆ. ಅವರ ಸರ್ಕಾರ ಎಷ್ಟು ದಿನ ಇರುತ್ತದೋ, ಅವರು ಎಷ್ಟು ದಿನ ಸಚಿವರಾಗಿ ಇರುತ್ತಾರೋ ಗೊತ್ತಿಲ್ಲ. ಸರ್ಕಾರ ಮತ್ತು ಅವರು ತಾತ್ಕಾಲಿಕ ಅಷ್ಟೆ ಎಂದು ಹರಿಹಾಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.