ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಜಿಪಂ ಅಧ್ಯಕ್ಷರ ಸೂಚನೆ
Team Udayavani, Mar 17, 2021, 8:11 PM IST
ದಾವಣಗೆರೆ: ಈ ಬಾರಿ ಎಸ್ಸೆಸ್ಸೆಲ್ಸಿ ಓದುತ್ತಿರುವ ಎಲ್ಲ ಮಕ್ಕಳು ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವಂತೆ ಕ್ರಮ ವಹಿಸಿ, ಶೇಕಡಾ ನೂರರಷ್ಟು ನೋಂದಣಿ ಆಗುವಂತೆ ನೋಡಿಕೊಳ್ಳಬೇಕು ಎಂದು ಜಿಪಂ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಮಂಗಳವಾರ ಜಿಪಂ ಸಭಾಭವನದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿ ಬರುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದ್ದು ಜೂ. 21ರಿಂದ ಜುಲೈ 5ವರೆಗೆ ಪರೀಕ್ಷೆ ನಡೆಯಲಿದೆ. ಕೊರೊನಾ ಕಾರಣದಿಂದಾಗಿ ಈ ಬಾರಿ ಜನವರಿಯಿಂದ ತರಗತಿಗಳು ಶುರುವಾಗಿವೆ. ಹೀಗಾಗಿ ಶೇ. 30ರಷ್ಟು ಪಠ್ಯ ಕಡಿತಗೊಳಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ವಿಶೇಷ ತರಗತಿ ವ್ಯವಸ್ಥೆ ಮಾಡಲಾಗಿದೆ. ಮಾದರಿ ಪ್ರಶ್ನೆಪತ್ರಿಕೆ, ಕಿರು ಪರೀಕ್ಷೆ ಮಾಡಲಾಗುತ್ತಿದೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲು ಹಾಜರಾತಿ ಕಡ್ಡಾಯ ಮಾಡಿಲ್ಲ. ಈ ವರ್ಷ 23,700 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದು ಇದರಲ್ಲಿ 21,800 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಶೇ. 85ರಷ್ಟು ನೋಂದಣಿ ಆಗಿದೆ ಎಂದು ಮಾಹಿತಿ ನೀಡಿದರು.
ಜಿಪಂ ಅಧ್ಯಕ್ಷೆ ಶಾಂತಕುಮಾರಿ ಮಾತನಾಡಿ, ಶಾಲೆ ಆರಂಭಕ್ಕೂ ಮುನ್ನ ನಡೆಸಿದ ಆನ್‌ಲೈನ್ ತರಗತಿಗಳು ಮಕ್ಕಳ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ, ಮಕ್ಕಳು ಪಾಠಗಳನ್ನು ಗ್ರಹಿಸಿಕೊಂಡಿದ್ದಾರೆಯೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ, ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳ ಮಕ್ಕಳು ಆನ್‌ಲೈನ್ ಪಾಠದ ಮೂಲಕ ಹೆಚ್ಚು ಗ್ರಹಿಸಿಕೊಂಡು ಪರೀಕ್ಷೆಗೆ ತಯಾರಾಗಿದ್ದಾರೆ ಎಂದರು.
ಸಾಧನೆಗೈದರೆ ಸನ್ಮಾನ: ಜಿಪಂ ಸಿಇಒ ಡಾ| ವಿಜಯಮಹಾಂತೇಶ್ ದಾನಮ್ಮನವರ್ ಮಾತನಾಡಿ, ಹಾಜರಾತಿ ಕಡ್ಡಾಯ ಇಲ್ಲದೇ ಇರುವುದರಿಂದ ಈ ಬಾರಿ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವಂತೆ ಮನವೊಲಿಸಬೇಕು. ಒಮ್ಮೆ ಅನುತ್ತೀರ್ಣರಾದರೂ ಮತ್ತೂಮ್ಮೆ ಪರೀಕ್ಷೆ ಬರೆಯಲು ಇರುವ ಅವಕಾಶದ ಬಗ್ಗೆ ಪಾಲಕರಿಗೆ ತಿಳಿಸಬೇಕು. ಜತೆಗೆ ಈ ವರ್ಷ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ರಾಜ್ಯದಲ್ಲಿ 10ನೇ ಸ್ಥಾನದೊಳಗೆ ಬಂದರೆ ಸ್ವತಃ ಸನ್ಮಾನ ಮಾಡುವುದಾಗಿ ಘೋಷಿಸಿದರು.
ಕಿಪ್ರಾ ಶಾಲೆ ತೆರೆದರೆ ನೋಟಿಸ್: ಕೊರೊನಾ ಕಾರಣದಿಂದ ಶಾಲೆಯಲ್ಲಿ ಸ್ವತ್ಛತೆ, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವುದೇ ವಿದ್ಯಾರ್ಥಿಯಲ್ಲಿ ಜ್ವರ, ಕೆಮ್ಮಿನ ಲಕ್ಷಣಗಳು ಕಂಡು ಬಂದರೆ ಅವರನ್ನು ಉಳಿದ ವಿದ್ಯಾರ್ಥಿಗಳಿಂದ ಪ್ರತ್ಯೇಕವಾಗಿರಿಸಿ ಪರೀಕ್ಷೆಗೊಳಪಡಿಸಬೇಕು ಎಂದು ಜಿಪಂ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ ಸೂಚಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಒಂದರಿಂದ ಐದನೇ ತರಗತಿ ಪ್ರಾರಂಭಿಸದಂತೆ ಸರ್ಕಾರ ಆದೇಶ ಮಾಡಿದೆ. ಯಾರಾದರೂ ಆದೇಶ ಮೀರಿ ತರಗತಿ ನಡೆಸುವುದು ಕಂಡು ಬಂದರೆ ಆ ಸಂಸ್ಥೆಗಳಿಗೆ ನೋಟಿಸ್ ನೀಡಿ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಮೂರು ನ್ಯಾಯಬೆಲೆ ಅಂಗಡಿ ರದ್ದು: ಜಿಲ್ಲೆಯಲ್ಲಿ ಅನರ್ಹ ಪಡಿತರ ಕಾರ್ಡ್ ಪತ್ತೆ ಕಾರ್ಯ ಮುಂದುವರಿದಿದೆ. ಈವರೆಗೆ 4912ಅನರ್ಹ ಕಾಡ್ ìಗಳನ್ನು ಪತ್ತೆ ಮಾಡಿ ರದ್ದು ಮಾಡಲಾಗಿದೆ. ಪಡಿತರ ವಿತರಣೆಯಲ್ಲಿ ಲೋಪವೆಸಗಿದ ಎಂಟು ನ್ಯಾಯಬೆಲೆ ಅಂಗಡಿಗಳ ಪರವಾನಗಿ ಅಮಾನತುಗೊಳಿಸಲಾಗಿದೆ. ಮೂರು ನ್ಯಾಯಬೆಲೆ ಅಂಗಡಿಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ವೀರಶೇಖರಪ್ಪ, ಫಕ್ಕೀರಪ್ಪ, ಲೋಕೇಶ್ವರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.