ವಿಕಲಚೇತನ ಮಕ್ಕಳಿಗೆ ಸಿಕ್ಕದ ಸೌಲಭ್ಯ
ಅಧಿಕಾರಿಗಳ ಕಾರ್ಯವೈಖರಿಗೆ ಆಯುಕ್ತರು ಕೆಂಡಾಮಂಡಲ•3 ತಿಂಗಳ ನಂತರ ಮತ್ತೆ ಪ್ರಗತಿ ಪರಿಶೀಲನೆ
Team Udayavani, Jun 15, 2019, 10:11 AM IST
ದಾವಣಗೆರೆ: ಸಿ.ಜೆ. ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ವಿ.ಎಸ್. ಬಸವರಾಜು ಮಾತನಾಡಿದರು.
ದಾವಣಗೆರೆ: ಸಮನ್ವಯ ಹಾಗೂ ಸಹಕಾರದ ಕೊರತೆಯಿಂದಾಗಿ ಜಿಲ್ಲೆಯ ವಿಕಲಚೇತರಿಗೆ ಸರ್ಕಾರದ ನೆರವು, ಸೌಲಭ್ಯ ಸರಿಯಾಗಿ ದೊರಕುತ್ತಿಲ್ಲ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ವಿ.ಎಸ್. ಬಸವರಾಜು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ, ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ಹಾಗೂ ಶಿಕ್ಷಣ ಇಲಾಖೆ, ಸಿಆರ್‌ಸಿ ಕೇಂದ್ರ, ವಿಕಲಚೇತನರ ಮತ್ತು ಹಿರಿಯರ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ವಿಕಲಚೇತನರನ್ನು ಹುಟ್ಟಿದಾಗಿನಿಂದಲೇ ಗುರುತಿಸಲು ಸರ್ಕಾರ ಹಲವಾರು ಸಂಸ್ಥೆಗಳನ್ನು ರೂಪಿಸಿದ್ದರೂ ಸಹ ಸಮನ್ವಯ ಹಾಗೂ ಸಹಕಾರದ ಕೊರತೆಯಿಂದಾಗಿ ಅವರಿಗೆ ನೆರವು, ಸೌಲಭ್ಯ ಪೂರ್ಣ ಪ್ರಮಾಣದಲ್ಲಿ ದೊರೆಯುತ್ತಿಲ್ಲ ಎಂದರು.
ಆರು ವರ್ಷದೊಳಗಿನ ಮಕ್ಕಳು ಅಂಗವೈಕಲ್ಯಕ್ಕೆ ತುತ್ತಾಗಿರುವ ಬಗ್ಗೆ ಅಥವಾ ಅವರಿಗೆ ನೆರವು ನೀಡಿದ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳ ಬಳಿ ಅಂಕಿ ಅಂಶ, ವರದಿ ಇಲ್ಲ. ನೀವು ಕೆಲಸ ಮಾಡಿರುವುದಾದರೂ ಏನು ಹೇಳಿ ಎಂದು ಪ್ರಶ್ನಿಸಿದ ಅವರು, ಆರು ವರ್ಷದೊಳಗಿನ ಎಷ್ಟು ಮಕ್ಕಳಲ್ಲಿ ಅಂಗವೈಕಲ್ಯ ಗುರುತಿಸಿದ್ದೀರಿ? ಎಷ್ಟು ಮಂದಿ ಪೋಷಕರಿಗೆ ಮಕ್ಕಳ ಅಂಗವೈಕಲ್ಯ ಎದುರಿಸುವ ಬಗ್ಗೆ ಆತ್ಮವಿಶ್ವಾಸ ತುಂಬುವ ತರಬೇತಿ ನೀಡಿದ್ದೀರಿ? ಶಸ್ತ್ರಚಿಕಿತ್ಸೆ ನಂತರ ಎಷ್ಟು ಮಕ್ಕಳ ಬಗ್ಗೆ ಮರು ಪರಿಶೀಲನೆ ನಡೆಸಿದ್ದೀರಿ ಎಂದು ಕೇಳಿದ್ದಕ್ಕೆ ನಿರೀಕ್ಷಿತ ಉತ್ತರ ವೈದ್ಯರು ಹಾಗೂ ಅಧಿಕಾರಿಗಳಿಂದ ದೊರೆಯದೇ ಇದ್ದುದರಿಂದ ಬೇಸರ ವ್ಯಕ್ತಪಡಿಸಿದರು.
ವರ್ಷಕ್ಕೆ ಸುಮಾರು 12 ಸಾವಿರ ಶಿಶುಗಳು ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸುತ್ತಿದ್ದಾರೆ. ಇವರಲ್ಲಿ ಕನಿಷ್ಠ 120 ಮಕ್ಕಳಿಗಾದರೂ ಕಿವಿ ಸಮಸ್ಯೆ ಇರುತ್ತದೆ. ಇವರನ್ನು ಆರು ವರ್ಷದವರೆಗೆ ಗುರುತಿಸಿ, ನೆರವಾಗುವುದು ಕಷ್ಟದ ಕೆಲಸವೇನೂ ಅಲ್ಲ. ಮೂರು ವರ್ಷ ನಿರಂತರವಾಗಿ ಈ ಬಗ್ಗೆ ಕೆಲಸ ಮಾಡಿದರೆ ಪರಿಸ್ಥಿತಿ ಸಂಪೂರ್ಣ ಬದಲಾಗುತ್ತದೆ. ಜೊತೆಗೆ ಮಕ್ಕಳಲ್ಲಿ ಕಿವುಡತನ ಬಾಲ್ಯದಲ್ಲೇ ಕಂಡುಬಂದಾಗ ಪೋಷಕರು ಗುರುತಿಸಿದರೆ ಶಿಕ್ಷಣ ನೀಡಲು ನೆರವಾಗುತ್ತದೆ ಎಂದರು.
ವಿಕಲಚೇತನ ಮಕ್ಕಳ ಪೋಷಕರು ತಮ್ಮ ಬಳಿ ಬಂದಾಗ ವೈದ್ಯರು ಕನಿಷ್ಠ ಹತ್ತು ನಿಮಿಷ ಆಪ್ತ ಸಮಾಲೋಚನೆ ನಡೆಸಿದರೆ ಅವರಿಗೆ ತುಂಬಾ ಸಹಾಯಕವಾಗುತ್ತದೆ. ಮಕ್ಕಳಲ್ಲಿ ಅಂಗವೈಕಲ್ಯ ಕಂಡು ಬಂದಾಗ ಅದನ್ನು ನಿರ್ವಹಣೆ ಮಾಡುವ ಬಗ್ಗೆ ಬಡ ತಂದೆ -ತಾಯಿಗಳಿಗೆ ತಿಳಿವಳಿಕೆ ಬರುತ್ತದೆ. ಶ್ರವಣಮಾಂದ್ಯ ಮಕ್ಕಳ ಜೊತೆ ಸಂವಾದ ನಡೆಸುವ ಬಗ್ಗೆ ಅಮ್ಮನಿಗೆ ಕಲಿಸಿಕೊಟ್ಟರೆ ಮಗುವಿನ ಜೀವನವೇ ಬದಲಾಗುತ್ತದೆ. ವಿಕಲಚೇತನರಿಗೆ ಚಿಕಿತ್ಸೆ, ಹಣಕಾಸಿನ ನೆರವು ಒದಗಿಸುವುದು ಮಾತ್ರ ಸರ್ಕಾರದ ಉದ್ದೇಶವಲ್ಲ. ವಿಕಲಚೇತನರು ಸ್ವತಂತ್ರವಾಗಿ ಬದುಕುವಂತೆ ಮಾಡುವುದೇ ಸರ್ಕಾರದ ಮೂಲ ಉದ್ದೇಶ ಎಂದು ಆಯುಕ್ತರು ವೈದ್ಯಾಧಿಕಾರಿಗಳಿಗೆ ಮನವರಿಕೆ ಮಾಡಿದರು.
ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಕ್ಲಿನಿಕಲ್ ಸೈಕಾಲಜಿಸ್ಟ್ ವಿಜಯಕುಮಾರ್ ಮಾತನಾಡಿ, 1,658 ಜನರಿಗೆ ಜೀವನ ಕೌಶಲ್ಯ ಶಿಕ್ಷಣ ಕೊಡಿಸಲಾಗಿದೆ ಎಂದಿದ್ದಕ್ಕೆ, ಆಯುಕ್ತರು, ಚಿಕಿತ್ಸೆ ಪಡೆದವರಲ್ಲಿ ಎಷ್ಟು ಜನ ಸ್ವತಂತ್ರವಾಗಿ ಬದುಕುತ್ತಿದ್ದಾರೆ? ಇವರಲ್ಲಿ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ? ಎಂದು ಕೇಳಿದಾಗ ವಿಜಯಕುಮಾರ್ ಬಳಿ ಉತ್ತರ ಇರಲಿಲ್ಲ.
ಜಿಲ್ಲಾ ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ಕೇಂದ್ರದ ಡಾ| ಎಚ್. ನಾಗರಾಜ್ ಮಾತನಾಡಿ, ತಿಂಗಳಿಗೆ 25-30 ಮಕ್ಕಳಿಗೆ ಮಾನಸಿಕ ಅಸ್ವಸ್ಥತೆಯ ಪ್ರಮಾಣಪತ್ರ ನೀಡಲಾಗುತ್ತಿದೆ ಎಂದು ಹೇಳಿದಾಗ, ಕೇವಲ ಪ್ರಮಾಣ ಪತ್ರ ನೀಡುವುದಷ್ಟೇ ಅಲ್ಲ, ಪೋಷಕರಿಗೆ ವಿಕಲಚೇತನ ಮಕ್ಕಳ ಆರೈಕೆ ತರಬೇತಿ ಕೊಡಿ. ಕಾರ್ಯಗಾರಗಳನ್ನು ಮಾಡಿ. ಆಗ ಮಾನಸಿಕ ಸಮಸ್ಯೆಯಿಂದ ಹೊರ ಬಂದು ಸ್ವ ವಿವೇಚನಾಶೀಲರಾಗಿ ಜೀವನ ನಡೆಸಲು ಅನುಕೂಲ ಆಗುತ್ತದೆ ಎಂದರು.
ಆರ್‌ಬಿಎಸ್‌ಕೆ (ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ)ದಡಿ ಜಿಲ್ಲೆಯಲ್ಲಿ 50 ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಅಂಕಿ ಅಂಶಗಳ ಕೊರತೆ ಇದೆ. 47 ಸಾವಿರ ಮಕ್ಕಳ ತಪಾಸಣೆ ಮಾಡಿದರೂ ಕೇವಲ 4-5 ಅಂಗವೈಕಲ್ಯತೆ ಇರುವವರು ದೊರೆತಿದ್ದಾರೆ ಎಂಬ ವರದಿ ನೀಡಲಾಗಿದೆ ಎಂದು ಆಯುಕ್ತರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೇ ಜಿಲ್ಲಾಮಟ್ಟದ ವೈದ್ಯರು, ಅಧಿಕಾರಿಗಳಾಗಿ ನಿವೆಲ್ಲಾ ಸರಿಯಾಗಿ ಕರ್ತವ್ಯ ನಿರ್ವಹಿಸಿ ಎಂದು ಆಯುಕ್ತರು ಸೂಚನೆ ನೀಡಿದರು.
ಕೊನೆಗೆ ಡಿ.ಎಚ್.ಓ. ತ್ರಿಪುಲಾಂಬ ಮಾತನಾಡಿ, ಸಂಬಂಧಪಟ್ಟ ಎಲ್ಲ ಇಲಾಖೆಗಳ ಜಿಲ್ಲಾ ಅಧಿಕಾರಿಗಳ ಜೊತೆಗೂಡಿ ನಾಳೆಯೇ ಸಭೆ ನಡೆಸುತ್ತೇವೆ. ವಾರದಲ್ಲಿ ಕ್ರಿಯಾ ಯೋಜನೆ ರೂಪಿಸಿ ಕಳಿಸುತ್ತೇವೆ ಎಂದಿದ್ದಕ್ಕೆ, ಕ್ರಿಯಾ ಯೋಜನೆಯನ್ನು ರೂಪಿಸಿ ಕಳಿಸಿ. ಅದರಲ್ಲಿ ಆಗಿರುವ ಪ್ರಗತಿಯ ಬಗ್ಗೆ ಮೂರು ತಿಂಗಳ ನಂತರ ಪರಿಶೀಲನೆ ನಡೆಸುತ್ತೇನೆ ಎಂದು ಬಸವರಾಜ್ ತಿಳಿಸಿದರು.
ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಸಿಆರ್‌ಸಿ ಕೇಂದ್ರದ ನಿರ್ದೇಶಕ ಥಾಮಸ್ ಸಿಲ್ವನ್, ವಿಕಲಚೇತನಾಧಿಕಾರಿ ಜಿ.ಎಸ್. ಶಶಿಧರ್, ಜಿಲ್ಲಾಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ವಿಶ್ವನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವೈದ್ಯರು ಸಭೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
MUST WATCH
ಹೊಸ ಸೇರ್ಪಡೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.