ಇಡೀ ಜಿಲ್ಲೆಗೆ ಜಲಧಾರಾ ನೀರು
ಮುಂದಿನ ವರ್ಷ ಯೋಜನೆ ಜಾರಿ•ಜಿಲ್ಲೆಯಲ್ಲಿ ಸಾವಿರ ಚೆಕ್ ಡ್ಯಾಂ ನಿರ್ಮಿಸಲು ಸೂಚನೆ
Team Udayavani, Jun 22, 2019, 10:02 AM IST
ದಾವಣಗೆರೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣ ಭೆೈರೇಗೌಡ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ದಾವಣಗೆರೆ: ಮುಂದಿನ ವರ್ಷ ಜಲಧಾರಾ ಯೋಜನೆಯಡಿ ಇಡೀ ದಾವಣಗೆರೆ ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಸಮಗ್ರ ಬಹು ಗ್ರಾಮ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣ ಭೆೈರೇಗೌಡ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಬರ ಪರಿಹಾರ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದಿನ ಬಹು ಗ್ರಾಮ ಯೋಜನೆಗಳಲ್ಲಿನ ನ್ಯೂನತೆ, ವಿನ್ಯಾಸದಲ್ಲಿನ ಲೋಪದೋಷ ಸರಿಪಡಿಸಿ, ನೀರಿನ ಮೂಲ ಸಂಪನ್ಮೂಲ ಆಧಾರದಲ್ಲಿ ಹೊಸ ಯೋಜನೆ ಸೇರಿಸಿಕೊಂಡು ಇಡೀ ಜಿಲ್ಲೆಗೆ ನೀರು ಒದಗಿಸುವ ಸಮಗ್ರ ಬಹುಗ್ರಾಮ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಈ ವರ್ಷ ರಾಯಚೂರು, ಬಾಗಲಕೋಟೆ, ಮಂಡ್ಯ, ರಾಮನಗರ ಒಳಗೊಂಡಂತೆ ಐದು ಜಿಲ್ಲೆಯಲ್ಲಿ ಸಮಗ್ರ ಬಹು ಗ್ರಾಮ ಯೋಜನೆ ಅನುಷ್ಠಾನಗೊಳಿಸಲಾಗುವುದು. ಮುಂದಿನ ವರ್ಷ ದಾವಣಗೆರೆ ಜಿಲ್ಲೆಯೂ ಸೇರಿದಂತೆ ಎಂಟು ಜಿಲ್ಲೆಯಲ್ಲಿ ಸಮಗ್ರ ಬಹು ಗ್ರಾಮ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
1 ಸಾವಿರ ಚೆಕ್ ಡ್ಯಾಂ: ರಾಜ್ಯ ಸರ್ಕಾರ ಜಲ ಸಂರಕ್ಷಣೆಗೆ ಅತಿ ಹೆಚ್ಚಿನ ಒತ್ತು ನೀಡುತ್ತಿದೆ. ಹಾಗಾಗಿ 2019ನ್ನು ಜಲವರ್ಷ ಎಂದು ಘೋಷಣೆ ಮಾಡಲಾಗಿದೆ. ಜಲಾಮೃತ ಯೋಜನೆಯಡಿ ನೀರಿನ ಮಹತ್ವ, ಮಿತ ಬಳಕೆ, ಜಲ ಸಂರಕ್ಷಣೆಗೆ ಒತ್ತು ನೀಡಲಾಗುವುದು. ಜಲಾಮೃತ ಯೋಜನೆಯಡಿ ದಾವಣಗೆರೆ ಜಿಲ್ಲೆಯ 195 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5 ರಂತೆ ಡಿಸೆಂಬರ್ ಅಂತ್ಯಕ್ಕೆ ಕನಿಷ್ಟ 1 ಸಾವಿರ ಚೆಕ್ ಡ್ಯಾಂ ನಿರ್ಮಾಣ ಮಾಡಲೇಬೇಕು ಎಂದು ಸಚಿವ ಕೃಷ್ಣ ಭೆೈರೇಗೌಡ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಸಾಕಷ್ಟು ಹಳ್ಳಗಳಿವೆ. ಉದ್ಯೋಗ ಖಾತರಿ ಯೋಜನೆಯಡಿ 18-20 ಕಿಲೋ ಮೀಟರ್ ದೂರ ಹರಿಯುವ ಹಳ್ಳಗಳಲ್ಲಿ ಅರ್ಧ ಕಿಲೋಮೀಟರ್‌ಗೊಂದರಂತೆ ಚೆಕ್ ಡ್ಯಾಂ ಕಟ್ಟುವುದರಿಂದ ಅಂತರ್ಜಲ ಹೆಚ್ಚಾಗುತ್ತದೆ. ನೀರಿನ ಸಮಸ್ಯೆಗೆ ಪರಿಹಾರ ದೊರೆತಂತಾಗುತ್ತದೆ. ದಾವಣಗೆರೆ ಜಿಲ್ಲೆಯಲ್ಲಿ ಕೇವಲ 256 ಚೆಕ್ ಡ್ಯಾಂ ನಿರ್ಮಾಣದ ಗುರಿ ಹೊಂದಿರುವುದರಿಂದ ಯಾವುದೇ ಪ್ರಯೋಜನವೇ ಇಲ್ಲ. ಡಿಸೆಂಬರ್ ಒಳಗೆ 1 ಸಾವಿರ ಚೆಕ್ ಡ್ಯಾಂ ನಿರ್ಮಾಣ ಮಾಡಲೇಬೇಕು ಎಂದು ಸೂಚಿಸಿದ ಅವರು, ಅರಣ್ಯ ವ್ಯಾಪ್ತಿ ಪ್ರದೇಶಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ, ಕುಡಿಯುವ ನೀರು ಪೂರೈಕೆಗೆ ಅನುಮತಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಎಸ್.ವಿ. ರಾಮಚಂದ್ರ, ಎಸ್. ರಾಮಪ್ಪ, ಕೆ. ಅಬ್ದುಲ್ ಜಬ್ಟಾರ್, ಕೆ. ಮಾಡಾಳ್ ವಿರುಪಾಕ್ಷಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್, ಉಪಾಧ್ಯಕ್ಷ ಸುರೇಂದ್ರನಾಯ್ಕ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್. ಮಹೇಶ್ ಇತರರು ಇದ್ದರು.