ಕೆಲಸ ನಿರ್ವಹಣೆಯಲ್ಲಿ ಹೃದಯವಂತಿಕೆ ಇರಲಿ: ಜಿಲ್ಲಾಧಿಕಾರಿ ಶಿವಮೂರ್ತಿ
ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಕಾರ್ಯಪ್ರವೃತ್ತರಾಗೋಣ
Team Udayavani, Jul 7, 2019, 12:21 PM IST
ದಾವಣಗೆರೆ: ಅಧಿಕಾರಿಗಳು ಹೃದಯವಂತರಾಗಿ ಕಾರ್ಯ ನಿರ್ವಹಿಸಿದರೆ ಯಾವುದೇ ಕೆಲಸಗಳು ಸುಗಮವಾಗಿ ಸಾಗಲಿವೆ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಹೇಳಿದ್ದಾರೆ.
ಜಗಳೂರು ತಾಲೂಕು ಗ್ರಾಮಸಭೆ ನೋಡಲ್ ಅಧಿಕಾರಿಗಳು ಗ್ರಾಮ ಭೇಟಿ ಬಗ್ಗೆ ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಸೇವೆಗೆ ಬರುವ ಮುನ್ನ ಸರ್ಕಾರಿ ಕಚೇರಿಗಳಿಗೆ ಹೋಗಿದ್ದಾಗ ನಮಗಾಗಿದ್ದ ಅನುಭವ ಜ್ಞಾಪಿಸಿಕೊಂಡು ನಮ್ಮ ಬಳಿ ಬರುವವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಾವಿರುವ ನೆಲಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಬೇಕಿದೆ. ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದರು.
ಅಧಿಕಾರಿಗಳು ಗ್ರಾಮಗಳಿಗೆ ಹೋಗಿ ಸಮಸ್ಯೆಗಳ ಪಟ್ಟಿ ಮಾಡಿದ್ದೀರಿ. ಆದರೆ, ಅಷ್ಟಾದರೆ ಸಾಲದು. ತಕ್ಷಣ ಅವುಗಳ ಪರಿಹಾರಕ್ಕೆ ಯೋಜನೆ ರೂಪಿಸಿ, ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಪಂ ವ್ಯಾಪ್ತಿಯ ತಾರೆಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಮತ್ತು ಬಳಕೆ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆ. ಹೊಸದಾಗಿ ಬೋರ್‌ವೆಲ್ ಕೊರೆಯಿಸಬೇಕು. ಜಾನುವಾರುಗಳಿಗೆ ಮೇವಿನ ಕೊರತೆ ತೀವ್ರವಾಗಿದ್ದು, ಗೋಶಾಲೆ ತೆರೆಯಲು ಹಾಗೂ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಜಾಗ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ ಎಂದು ಸಭೆ ಗಮನಕ್ಕೆ ತಂದರು.
ಜಗಳೂರು ತಹಶೀಲ್ದಾರ್ ತಿಮ್ಮಣ್ಣ ಪ್ರತಿಕ್ರಿಯಿಸಿ, ಗ್ರಾಮದಲ್ಲಿ ಸ್ಮಶಾನಕ್ಕಾಗಿ ಸ್ಥಳ ಗುರುತಿಸಲಾಗಿದ್ದು, ಉಪ ವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಜಾಗ ಒದಗಿಸಲಾಗುವುದು ಎಂದರು.
ಆಗ, ಜಿಲ್ಲಾಧಿಕಾರಿಗಳು ಮಾತನಾಡಿ, ಎಲ್ಲಾ ರೈತರಿಗೂ ಬಣವೆಗಳಿರುವುದಿಲ್ಲ. ಬಣವೆಗಳಿರುವ ರೈತರು ಮೇವು ನೀಡುವುದು ಕಷ್ಟ. ಆದ್ದರಿಂದ ಜನರಿಗೆ ಗೋಶಾಲೆಗಳಿಗೆ ಹೋಗುವಂತೆ ತಿಳಿಸಬೇಕಲ್ಲದೆ, ಗೋಶಾಲೆಗಳಿಗೆ ಹೋಗಲು ದೂರವಿರುವ ಗ್ರಾಮಗಳಿಗೆ ಅನುಕೂಲವಾಗುವಂತೆ ಮೇವು ಬ್ಯಾಂಕ್ ಸ್ಥಾಪಿಸಿ, ಮೇವು ಖರೀದಿಸುವಂತೆ ಜನರಿಗೆ ಮಾಹಿತಿ ನೀಡಿ ಎಂದರು.
ಪಲ್ಲಾಗಟ್ಟೆ ಗ್ರಾಪಂ ಪಿಡಿಒ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ 250 ಜನರು ತಾರೆಹಳ್ಳಿ ಕೆರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಾಬ್ ಕಾರ್ಡ್ ಇಲ್ಲದಿರುವವರು ಕೆಲಸ ನೀಡುವಂತೆ ಮನವಿ ಮಾಡಿದ್ದಾರೆ ಎಂದಾಗ, ಜಿಪಂ ಸಿಇಒ ಎಚ್. ಬಸವರಾಜೇಂದ್ರ ಪ್ರತಿಕ್ರಿಯಿಸಿ, ಕೆಲಸ ಕೇಳಿಕೊಂಡು ಬರುವ ಎಲ್ಲರಿಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡಿ ಎಂದು ಪಿಡಿಒಗಳಿಗೆ ಸೂಚಿಸಿದರು.
ಸೂರಗೊಂಡನಹಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಕೆಎಸ್‌ಆರ್‌ಟಿಸಿಯಿಂದ ಬಸ್ ಬಿಡುವ ಸಾಧ್ಯತೆ ಬಗ್ಗೆ ಜಿಲ್ಲಾಧಿಕಾರಿ ಕೇಳಿದಾಗ, ಆ ಗ್ರಾಮಕ್ಕೆ ಖಾಸಗಿ ಬಸ್ ಮಾರ್ಗ ನೀಡಲಾಗಿದೆ. ನಮ್ಮ ನಿಗಮದ ಬಸ್‌ಗಳು ಪಲ್ಲಾಗಟ್ಟೆಯವರೆಗೆ ಹೋಗಿ ಬರುತ್ತಿವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಮಾಹಿತಿ ನೀಡಿದರು.
ಆರ್‌ಟಿಒ ಎನ್.ಜಿ ಬಣಕಾರ್ ಮಾತನಾಡಿ, ಪ್ರಸ್ತುತ ನಮ್ಮಲ್ಲಿ ಹೊಸ ಬಸ್ ಮಾರ್ಗಗಳಿಗೆ ಅನುಮತಿಯಿಲ್ಲ. ತಾತ್ಕಾಲಿಕವಾಗಿ ಹತ್ತಿರ ಇರುವ ಮಾರ್ಗಗಳಿಂದ ಬಸ್‌ಗಳನ್ನು ಅಲ್ಲಿಯವರೆಗೆ ಹೋಗುವಂತೆ ಮಾರ್ಗ ಬದಲಿಸಬೇಕು ಎಂದರು.
ಆಗ, ಜಿಪಂ ಸಿಇಒ ಮಾತನಾಡಿ, ಸಾರಿಗೆ ಅವಶ್ಯಕತೆ ಇರುವಲ್ಲಿ ಎಲೆಕ್ಟ್ರಾನಿಕ್ ವಾಹನ ಖರೀದಿಸಲು ನಿರುದ್ಯೋಗಿ ಯುವಕರಿಗೆ ನಿಗಮದಿಂದ ಪರವಾನಗಿ ನೀಡಿ. ಅವರು ಗ್ರಾಮದ ಜನರನ್ನು ಮುಖ್ಯ ರಸ್ತೆಗಳಿಗೆ ತಲುಪಿಸುತ್ತಾರೆ. ಇದರಿಂದಾಗಿ ಅವರಿಗೂ ಉದ್ಯೋಗ ದೊರೆತಂತಾಗುತ್ತದೆ ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಲಕ್ಷೀಕಾಂತ್ ಬೊಮ್ಮನಾರ್ ಮಾತನಾಡಿ, ಪಲ್ಲಾಗಟ್ಟೆ ಗ್ರಾಪಂ ವ್ಯಾಪ್ತಿ ಗ್ರಾಮವೊಂದರಲ್ಲಿ ಜನರು ಶುದ್ಧ ಕುಡಿಯುವ 20 ಲೀಟರ್‌ಗೆ ನೀರಿಗೆ 4 ರೂ. ಪಡೆಯಲಾಗುತ್ತಿದೆ. ಎಲ್ಲಾ ಗ್ರಾಮಗಳಲ್ಲಿ 2 ರೂ. ಪಡೆಯುತ್ತಿದ್ದಾರೆ ಎಂಬುದಾಗಿ ದೂರುತ್ತಿದ್ದಾರೆ. ಶಾಲೆಗಳಲ್ಲಿ ಕಟ್ಟಡಗಳು ಶಿಥಿಲಗೊಂಡಿವೆ. ಶಾಲೆ ಹಾಗೂ ಅಂಗನವಾಡಿಗಳಲ್ಲಿ ಶೌಚಲಯಗಳಿಲ್ಲ, ಟ್ಯಾಂಕರ್ ನೀರು ಪೂರೈಸಿದವರಿಗೆ ಹಣ ಪಾವತಿಯಾಗಿಲ್ಲ ಎಂದರು.
ಆಗ, ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತದಿಂದ ಕುಡಿಯುವ ನೀರಿಗೆ ಜೂನ್‌ವರೆಗೂ ಹಣ ಬಿಡುಗಡೆ ಮಾಡಲಾಗಿದೆ. ನೀವು ಹಣ ಇಟ್ಟುಕೊಂಡು ಏನು ಮಾಡುತ್ತಿದ್ದೀರಾ ಎಂದು ತಹಶೀಲ್ದಾರ್ ಹಾಗೂ ತಾಪಂ ಇಒ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಇನ್ನು 15 ದಿನಗಳಲ್ಲಿ ಗ್ರಾಪಂಗಳಿಗೆ ಹಣ ತಲುಪಬೇಕು. ಹಣ ಬರದಿದ್ದರೆ ಪಿಡಿಒಗಳು ಜಿಲ್ಲಾಡಳಿತಕ್ಕೆ ಪತ್ರ ಬರೆಯಿರಿ ಎಂದು ತಿಳಿಸಿದರು.
ತಾಪಂ ಇಒ ಜಾನಕಿರಾಮ್ ಮಾತನಾಡಿ, ಜಿಪಿಎಸ್ ಹಾಗೂ ಗ್ರಾಪಂಗಳಿಂದ ಅಪ್ಲೋಡ್ ಮಾಡುವಲ್ಲಿ ತೊಂದರೆಗಳಾಗಿದ್ದರಿಂದ ಹಣ ನೀಡುವುದು ವಿಳಂಬವಾಗಿದೆ ಎಂದರು.
ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪಮಾತನಾಡಿ, ತಾಲೂಕಿನಲ್ಲಿ 31 ಶಾಲೆಗಳಿಗೆ ಶೌಚಾಲಯ ಕಟ್ಟಲು ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಆದಷ್ಟು ಬೇಗ ಶೌಚಾಲಯ ನಿರ್ಮಿಸುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ಎಲ್ಲಾ ಗ್ರಾಮಗಳ ಶಾಲೆ ಅಂಗನವಾಡಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಶಾಲೆಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರು ಪೂರೈಸುವಂತೆ ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಶೋಕ್ ಕುಮಾರ್ ಮಾತನಾಡಿ, ಬಿಸ್ತುವಳ್ಳಿ ಗೊಲ್ಲರಹಟ್ಟಿಯಲ್ಲಿ 18 ರೈತ ಕುಟುಂಬಗಳು ಗುಡಿಸಲಿನಲ್ಲಿ ವಾಸಿಸುತ್ತಿವೆ. ಭೇಟಿ ನೀಡಿದ ಎಲ್ಲಾ ಗ್ರಾಮಗಳಲ್ಲಿ ಚರಂಡಿ ಸ್ವಚ್ಛಗೊಳಿಸಿಲ್ಲ ಎಂದು ಸಭೆ ಗಮನಕ್ಕೆ ತಂದರು.
ಜಗಳೂರು ತಾಲೂಕಿನಾದ್ಯಂತ ಕುಡಿಯುವ ನೀರು, ಆಸ್ಪತ್ರೆ, ಶಾಲೆ ಕಟ್ಟಡ, ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಚರಂಡಿ ಸ್ವಚ್ಛತೆ ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿ ಒಂದೇ ರೀತಿಯಾದ ಸಮಸ್ಯೆಗಳಿವೆ. ಈ ಕುರಿತು ತಾಲೂಕು ಆಡಳಿತ ಕ್ರಮ ಕೈಗೊಂಡು ಹದಿನೈದು ದಿನಗಳಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಪಂ ಕಾರ್ಯದರ್ಶಿ ಭೀಮಾ ನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಎಚ್ ವಿಜಯಕುಮಾರ್, ಡಿಎಚ್ಒ ಡಾ| ತ್ರಿಪುಲಾಂಭ, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಗಳೂರು ತಾಲೂಕು ಪಿಡಿಒಗಳು ಸಭೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.