63 ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ
ಟ್ಯಾಂಕರ್-ಖಾಸಗಿ ಬೋರ್‌ವೆಲ್ ಗಳಿಂದ ಗ್ರಾಮಗಳಿಗೆ ನೀರು ಪೂರೈಕೆ
Team Udayavani, May 17, 2019, 10:31 AM IST
ದಾವಣಗೆರೆ: ಜಗಳೂರು ತಾಲೂಕಿನ ಹನುಮಂತಾಪುರ ಗ್ರಾಮದಲ್ಲಿ ಟ್ಯಾಂಕರ್ ನೀರು ತುಂಬಿಸಿಕೊಳ್ಳುತ್ತಿರುವ ಗ್ರಾಮಸ್ಥರು.(ಸಂಗ್ರಹ ಚಿತ್ರ).
ದಾವಣಗೆರೆ: ಜೀವನದಿ ತುಂಗಭದ್ರೆಯ ಒಡಲಲ್ಲಿ ಇರುವ ದಾವಣಗೆರೆ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.
ಜಿಲ್ಲೆಯಲ್ಲಿರುವ 1,136 ಜನವಸತಿ ಪ್ರದೇಶದಲ್ಲಿ ಜಿಲ್ಲಾ ಕೇಂದ್ರ ದಾವಣಗೆರೆ, ಹೊನ್ನಾಳಿ, ಹರಿಹರ ಸುತ್ತಮುತ್ತ ಪ್ರದೇಶಕ್ಕೆ ತುಂಗಭದ್ರೆ, ಚನ್ನಗಿರಿ, ಸಂತೆಬೆನ್ನೂರು, ಜಗಳೂರು ಇತರೆ ಪ್ರದೇಶಕ್ಕೆ ಸೂಳೆಕೆರೆ (ಶಾಂತಿಸಾಗರ) ನೀರಿನ ಮೂಲ ಆಸರೆ.
ಸತತ ಮೂರ್‍ನಾಲ್ಕು ವರ್ಷಗಳಿಂದ ಮಳೆಯ ಕೊರತೆ ಪರಿಣಾಮವಾಗಿ ಜಿಲ್ಲೆಯ ಮೂರು ತಾಲೂಕಿನಲ್ಲಿ ಸದ್ಯ ನೀರಿನ ಸಮಸ್ಯೆ ತೀವ್ರವಾಗಿದ್ದು, 63 ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಇದೆ. ಮಳೆಗಾಲದಲ್ಲೇ ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದರಿಂದ ಆಗಲೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು. ಈಗ ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ.
ದಾವಣಗೆರೆ, ಜಗಳೂರು ಹಾಗೂ ನ್ಯಾಮತಿ ತಾಲೂಕಿನ ಹಲವು ಗ್ರಾಮಗಳಿಗೆ ಪ್ರತಿದಿನ ಟ್ಯಾಂಕರ್ ನೀರೇ ಆಧಾರವಾಗಿದೆ. ದಾವಣಗೆರೆ ನಗರ ಸೇರಿದಂತೆ ಭದ್ರಾ ನಾಲೆಗೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಬಾಧಿಸುತ್ತಿಲ್ಲ. ಬೇಸಿಗೆ ಹಂಗಾಮಿನ ಭತ್ತಕ್ಕೆ ಭದ್ರಾ ನಾಲೆಯಲ್ಲಿ ನೀರು ಹರಿಸಿರುವುದರಿಂದ ಸದ್ಯ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ.
ಆದರೆ, ಭದ್ರಾ ನಾಲೆಯಿಂದ ದೂರ ಇರುವಂತಹ ಹಾಗೂ ಹೆಚ್ಚಾಗಿ ಮಳೆಯನ್ನೇ ಅವಲಂಬಿಸಿರುವ ಕಡೆಗಳಲ್ಲಿ ನೀರಿಗೆ ಪರದಾಡಬೇಕಿದೆ. ಅದರಲ್ಲೂ ಇತ್ತೀಚಿನ ವರ್ಷದಲ್ಲಿ ಎಡೆಬಿಡದೆ ಕಾಡುತ್ತಿರುವ ಮಳೆಯ ಕೊರತೆ ಸಮಸ್ಯೆ ಉಲ್ಬಣಗೊಳ್ಳಲು ಮೂಲ ಕಾರಣ.
ದಾವಣಗೆರೆ ತಾಲೂಕಿನ ಹೆಬ್ಟಾಳು, ಹೆಬ್ಟಾಳು ಹೊಸ ಬಡಾವಣೆ, ಕಾಟಿಹಳ್ಳಿ, ಹುಣಸೇಕಟ್ಟೆ ಸೇರಿದಂತೆ 15, ಜಗಳೂರು ತಾಲೂಕಿನ ಹನುಮಂತಾಪುರ, ಕಸವನಹಳ್ಳಿ, ಉದ್ದಘಟ್ಟ, ಮುಚ್ಚನೂರು, ಸಿದ್ದಮ್ಮನಹಳ್ಳಿ, ಹಿರೇಮಲ್ಲನಹೊಳೆ, ದೇವಿಗೆರೆ, ಇತರೆ ಗ್ರಾಮ ಸೇರಿದಂತೆ 58 ಗ್ರಾಮಗಳಿಗೆ ಒಟ್ಟು 96 ಟ್ಯಾಂಕರ್‌ಗಳಿಂದ 376 ಟ್ರಿಪ್ ನೀರು ಪೂರೈಸಲಾಗುತ್ತಿದೆ. ನ್ಯಾಮತಿ ತಾಲೂಕಿನ ಮುದ್ದೇನಹಳ್ಳಿ, ಸುರಹೊನ್ನೆ, ಚಟ್ನಹಳ್ಳಿ, ಆರುಂಡಿ, ಸೊಗಿಲು ಗ್ರಾಮಗಳಿಗೂ ಟ್ಯಾಂಕರ್ ನೀರೇ ಗತಿ.
ಜಗಳೂರು ತಾಲೂಕಿನ ಪಲ್ಲಾಗಟ್ಟೆ, ಅಣಬೂರು, ಚಿಕ್ಕ ಉಜ್ಜಿನಿ, ಅಸಗೋಡು, ಹೊಸಕೆರೆ ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ಮೂಲಕ ನೀರು ನೀಡಲಾಗುತ್ತಿದೆ. ದಾವಣಗೆರೆ, ಹೊನ್ನಾಳಿ ಹಾಗೂ ಜಗಳೂರು ತಾಲೂಕಿನ ಒಟ್ಟು 38 ಗ್ರಾಮಗಳಿಗೆ ಒಟ್ಟು 55 ಖಾಸಗಿ ಬೋರ್‌ವೆಲ್ಗಳಿಂದ ನೀರು ಪೂರೈಸಲಾಗುತ್ತಿದೆ.
ರಾಜ್ಯದ ತೀರಾ ಹಿಂದುಳಿದ, ಬರ ಪೀಡಿತ ತಾಲೂಕು ಎಂಬ ಶಾಶ್ವತ ಹಣೆಪಟ್ಟಿ ಹೊಂದಿರುವ ಜಗಳೂರು ತಾಲೂಕಿನಲ್ಲಿ ಬೇಸಿಗೆ ಮಾತ್ರವಲ್ಲ, ಎಲ್ಲಾ ಕಾಲದಲ್ಲೂ ಕುಡಿಯುವ ನೀರಿನ ಸಮಸ್ಯೆ ಮಾಮೂಲು. ಸುಮಾರು 80 ಗ್ರಾಮಗಳಲ್ಲಿ ಫ್ಲೋರೈಡ್‌ಯುಕ್ತ ನೀರಿದೆ.
ಹರಿಹರ ತಾಲೂಕಿನ ಕೆಲವಡೆ ನೀರಿದ್ದರೂ ಅದರ ನಿರ್ವಹಣೆ ಸಮರ್ಪಕವಾಗಿರದ ಕಾರಣ ಸಮಸ್ಯೆ ಇದೆ. ಪೈಪ್‌ಲೈನ್ ಸಮಸ್ಯೆಯಿಂದಾಗಿ ಜನರಿಗೆ ದೂರದಿಂದ ನೀರು ಹೊತ್ತು ತರುವಂತಾಗಿದೆ.
ಸರ್ಕಾರ ಸಮ್ಮತಿಸಿದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಶೀಘ್ರವಾಗಿ ಕಾರ್ಯಗತಗೊಂಡಿದ್ದರೆ ನೀರಿನ ಸಮಸ್ಯೆ ಹೆಚ್ಚು ಬಿಗಡಾಯಿಸುತ್ತಿರಲಿಲ್ಲ. ದಾವಣಗೆರೆ ಹಾಗೂ ಜಗಳೂರಿನ ಕೆರೆಗಳಿಗೆ ತುಂಗಾಭದ್ರ ನದಿಯಿಂದ ನೀರು ತುಂಬಿಸುವ 22 ಕೆರೆಗಳ ಏತ ನೀರಾವರಿ ಯೋಜನೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಇನ್ನೂ ಕೆರೆಗಳಿಗೆ ನೀರು ಹರಿಯದಾಗಿದೆ.
ಜಿಲ್ಲಾ ಕೇಂದ್ರ ದಾವಣಗೆರೆಗೆ ಟಿವಿ ಸ್ಟೇಷನ್ ಮತ್ತು ಕುಂದುವಾಡ ಕೆರೆ ಮೂಲ ಸಂಪನ್ಮೂಲ. ಭದ್ರಾ ನಾಲೆಯ ನೀರು ಸಂಗ್ರಹಿಸಿಟ್ಟುಕೊಳ್ಳುವುದರಿಂದ ಬೇಸಿಗೆಯಲ್ಲಿ ಸಮಸ್ಯೆ ಇಲ್ಲ. ನಗರದ ಹಳೇ ಭಾಗದಲ್ಲಿ ಮಾತ್ರ ನೀರಿನ ಸಮಸ್ಯೆ ಇದೆ.
ಎನ್.ಆರ್. ನಟರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.