ಸಾಯುತ್ತಿದೆ ಸಾಂಸ್ಕೃತಿಕ ಶ್ರೀಮಂತಿಕೆ
ಭಜನೆ ಪ್ರದರ್ಶನವೂ ಹೌದು, ಆತ್ಮದರ್ಶನದ ಕಲೆಯೂ ಹೌದು: ಸಾಣೇಹಳ್ಳಿ ಶ್ರೀ•62ಕ್ಕೂ ಹೆಚ್ಚು ತಂಡ ಭಾಗಿ
Team Udayavani, Apr 26, 2019, 1:06 PM IST
ದಾವಣಗೆರೆ: ರಾಜ್ಯಮಟ್ಟದ ಕನ್ನಡ ಭಜನಾ ಸ್ಪರ್ಧೆಯನ್ನು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಉದ್ಘಾಟಿಸಿದರು.
ದಾವಣಗೆರೆ: ಕಾಲ ಬದಲಾದಂತೆಲ್ಲಾ ಜನರಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆ ಸತ್ತು ಹೋಗುತ್ತಿದೆ ಎಂದು ಸಾಣೇಹಳ್ಳಿ ಶಾಖಾಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಕುವೆಂಪು ಕನ್ನಡ ಭವನದಲ್ಲಿ ಗುರುವಾರ ರಾಜ್ಯಮಟ್ಟದ ಕನ್ನಡ ಭಜನಾ ಸ್ಪರ್ಧೆ ಸಮಿತಿ ವತಿಯಿಂದ ಬೆಳ್ಳಿಹಬ್ಬದ ಅಂಗವಾಗಿ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕನ್ನಡ ಭಜನಾ ಸ್ಪರ್ಧೆಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಜನರ ಆಸಕ್ತಿ ಕ್ಷೇತ್ರ ಬದಲಾಗುತ್ತಿದೆ. ದೃಶ್ಯ ಮಾಧ್ಯಮವಾದ ಮೂರ್ಖರ ಪೆಟ್ಟಿಗೆ ಬಂದ ಮೇಲಂತೂ ಸಾಕಷ್ಟು ಭಜನಾ ತಂಡಗಳು ಮರೆಯಾಗುತ್ತಿವೆ. ನಿಜಾರ್ಥದಲ್ಲಿ ಭಜನೆ ಎಂದರೆ, ಭಗವಂತನ ಧ್ಯಾನ ಮಾಡುವ ಆತ್ಮಕಲೆಯಾದರೆ ಇನ್ನೊಂದರ್ಥದಲ್ಲಿ ಇದೀಗ ಕೆಲವರು ಇಸ್ಪೀಟ್ ಆಟ ಎಂಬಂತೆ ಕರೆಯುತ್ತಿದ್ದಾರೆ. ಈ ಬೆಳವಣಿಗೆ ನಿಜಕ್ಕೂ ದುರಂತ ಎಂದು ಕಳವಳ ವ್ಯಕ್ತಪಡಿಸಿದರು.
ಭಜನೆಗೆ ತನ್ನದೇ ಆದ ಮಹತ್ವವಿದೆ. ಭಜನೆಯು ಒಂದು ಪ್ರದರ್ಶನವೂ ಹೌದು, ಆತ್ಮದರ್ಶನದ ಕಲೆಯೂ ಹೌದು. ಹಿಂದೆಲ್ಲಾ ಹಳ್ಳಿಗಳಲ್ಲಿ ಕಲಾಸಕ್ತರು ಒಟ್ಟಾಗಿ ತಾಳ ಹಾಕುತ್ತಾ, ಹಾಡುತ್ತಾ ನಲಿಯುತ್ತಿದ್ದುದು ಕಂಡುಬರುತ್ತಿತ್ತು. ಇದೀಗ ಅದು ಮರೆಯಾಗುತ್ತಿದೆ. ಭಜನೆ ಆನಂದದ ಲೋಕಕ್ಕೆ ಕೊಂಡೊಯ್ಯುವ ಶಕ್ತಿ ಹೊಂದಿದೆ. ಅಂತಹ ಆತ್ಮದರ್ಶನದ ಭಜನಾ ಕಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು.
ಸಿರಿಗೆರೆಯಲ್ಲಿ ಈಚೆಗೆ ಭಜನೆ, ವೀರಗಾಸೆ, ಸೋಬಾನೆ ಸ್ಪರ್ಧೆ ಆಯೋಜಿಸಬೇಕಿತ್ತು. ಆದರೆ, ಒಂದು ತಂಡವೂ ಹೆಸರು ನೋಂದಾಯಿಸಲಿಲ್ಲ. ಪ್ರತಿ ವರ್ಷ 40ಕ್ಕೂ ಅಧಿಕ ವೀರಗಾಸೆ ತಂಡ ಬರುತ್ತಿದ್ದವು. ಅವು ಕೂಡ ಮುಂದೆ ಬರಲಿಲ್ಲ. ಭಜನಾ ಸ್ಪರ್ಧೆಗೆ ನೀರಸ ಪ್ರತಿಕ್ರಿಯೆ ಉಂಟಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಯಾವ ಆದರ್ಶವೂ ಸುಮ್ಮನೆ ಬರುವುದಿಲ್ಲ. ಅದು ಉತ್ತಮ ನಡವಳಿಕೆ, ಗೌರವದಿಂದ ದೊರೆಯುತ್ತದೆ. ಈ ಎಲ್ಲಾ ಆದರ್ಶದ ಸದ್ಭಾವನೆಗಳನ್ನು ಬಿತ್ತುವ ಶಕ್ತಿ ಭಜನೆಗಿದೆ. ಮನುಷ್ಯ ಧರ್ಮದ ಬದುಕು ಸಾಗಿಸಲು ಮೊದಲು ಹೃದಯವನ್ನು ಹೂವಾಗಿಸಿಕೊಳ್ಳಬೇಕು. ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಶತ್ರುಗಳನ್ನು ಮಿತ್ರರಂತೆ ಪ್ರೀತಿಯಿಂದ ಕಾಣುವಂತಹ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಯರಗುಂಟೆ ಶ್ರೀ ಪರಮೇಶ್ವರ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ತಾಯಿ ಎದೆಹಾಲು ಎಷ್ಟು ಶ್ರೇಷ್ಠವೋ, ಅಷ್ಟೇ ಶ್ರೇಷ್ಠ ಸಂಗೀತವಾಗಿದೆ. ಸಂಗೀತದಿಂದ ಆಯಸ್ಸು ಹೆಚ್ಚಾಗುವ ಜೊತೆಗೆ ಎಲ್ಲಾ ಕಾಯಿಲೆಗಳನ್ನು ಗುಣಪಡಿಸುವಂತಹ ಚೈತನ್ಯ ಶಕ್ತಿ ಇದೆ. ಜನರು ಏಕಾಗ್ರತೆ, ಧ್ಯಾನ, ಭಜನೆಯಿಂದ ಪರಿವರ್ತನೆ ಹೊಂದಿರುವ ಸಾಕಷ್ಟು ನಿದರ್ಶನಗಳಿವೆ. ಅಂತಹ ಶಕ್ತಿ ಭಜನಾ ಕಲೆಗಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿದ್ಯಾನಗರದ ಶ್ರೀ ಆಂಜನೇಯ ದೇವಸ್ಥಾನದಿಂದ ಕುವೆಂಪು ಕನ್ನಡಭವನದವರೆಗೆ ಮೆರವಣಿಗೆ ನಡೆಯಿತು. ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.
ಹೆಬ್ಟಾಳು ವಿರಕ್ತಮಠದ ಶ್ರೀಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಾವಿವಿ ಕುಲಪತಿ ಪ್ರೊ| ಎಸ್.ವಿ. ಹಲಸೆ , ಸಮಿತಿ ಅಧ್ಯಕ್ಷ ಸದಾನಂದಪ್ಪ ಕುಕ್ಕವಾಡ, ಕೆ. ಕೆಂಚನಗೌಡ, ಕೆ. ನಾಗಪ್ಪ, ಮಂಜಪ್ಪ ಸಿ. ಸಿರಿಗೆರೆ, ಎ. ಕೊಟ್ರಪ್ಪ ಕಿತ್ತೂರು, ವೇದಮೂರ್ತಿ ಇತರರು ಉಪಸ್ಥಿತರಿದ್ದರು. ಜಿ.ಆರ್. ಷಣ್ಮುಖಪ್ಪ ಸ್ವಾಗತಿಸಿದರು. ಸಾಲಿಗ್ರಾಮ ಗಣೇಶ್ ಶೆಣೈ ನಿರೂಪಿಸಿದರು. ಶ್ರೀ ವೀರೇಶ್ವರ ಪುಣ್ಯಾಶ್ರಮದ ಅಂಧ ವಿದ್ಯಾರ್ಥಿಗಳು ವಚನ ಗಾಯನ ನಡೆಸಿಕೊಟ್ಟರು.
ವೇದಿಕೆಯಲ್ಲಿ ಮೊಳಗಿದ ಭಜನಾ ಗೀತೆಗಳು….
ಗುಡಿಯ ನೋಡಿರಣ್ಣ , ದೇಹದ ಗುಡಿಯ ನೋಡಿರಣ್ಣ……ಕಾಗದ ಬಂದಿದೆ ಕಮಲನಾದದಲಿ……ಅತ್ತಿ ಮನೆಯ ಸೊಸೆ ಎಂದಾರಾ ಗಟ್ಟಿ ಇರುವಾಕಿ, ಹೆಚ್ಚು ಕಡಿಮೆ ಏನಾದ್ರು ಅಂದರಾ ಕೋಣ್ಯಾಗ ಮಲಗಾಕಿ ಎಂಬ ಭಜನಾ ಗೀತೆಗಳನ್ನು ರಾಮಗಿರಿ ಸ್ವರ್ಣಗೌರಿ ತಂಡದ ಕಲಾವತಿ ಸಂಗಡಿಗರು ಸುಮಧುರವಾಗಿ ನಡೆಸಿಕೊಟ್ಟರು. ಇದಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 62ಕ್ಕೂ ಹೆಚ್ಚು ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.