ಜ್ಞಾನದ ಬೆನ್ನತ್ತಿದರೆ ಎಲ್ಲವೂ ಲಭ್ಯ
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಉದ್ಘಾಟನೆ ಹಣ-ಅಧಿಕಾರಕ್ಕಿಂತ ಜ್ಞಾನ ಮುಖ್ಯ: ಡಿಸಿ ಪ್ರತಿಪಾದನೆ
Team Udayavani, Nov 30, 2019, 11:23 AM IST
ದಾವಣಗೆರೆ: ಹಣ, ಅಧಿಕಾರಕ್ಕಿಂತ ಜ್ಞಾನ ಮುಖ್ಯ. ಜ್ಞಾನದ ಬೆನ್ನು ಹತ್ತಿದರೆ ಎಲ್ಲವನ್ನೂ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.
ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಶುಕ್ರವಾರ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಉದ್ಘಾಟಿಸಿ, ಮಾತನಾಡಿದ ಅವರು, ಜ್ಞಾನವೆಂದರೆ ಪರೀಕ್ಷೆಗಾಗಿ ಓದುವ ಅಭ್ಯಾಸವಲ್ಲ. ಬದುಕು ರೂಪಿಸುವ ಅನುಭವದ ಅರಿವು. ಈ ಜ್ಞಾನಕ್ಕೆ ಮಿಗಿಲಾದುದು ಯಾವುದೂ ಇಲ್ಲ. ಜ್ಞಾನ ಒಂದಿದ್ದರೆ ಜಗತ್ತಿನಲ್ಲಿ ಏನೆಲ್ಲವನ್ನೂ ಸಾಧನೆ ಮಾಡಬಹುದು. ಈ ಸಾಧನೆಗೆ ಛಲ, ಪರಿಶ್ರಮ, ನಿರ್ದಿಷ್ಟ ಗುರಿ ಮುಖ್ಯ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಪುಸ್ತಕದ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನವೂ ಅನಿವಾರ್ಯ. ಓದಿದ್ದನ್ನು ಅರ್ಥ ಮಾಡಿಕೊಂಡು ಬರೆಯುವ ಕೌಶಲ ರೂಢಿಸಿಕೊಳ್ಳಬೇಕು. ಯಾವುದೇ ವಿಚಾರವನ್ನು ಸರಳ, ಸ್ಪಷ್ಟವಾಗಿ ವಿವರಿಸುವ, ವಿಶ್ಲೇಷಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಬರವಣಿಗೆ ಕೌಶಲ ಕರಗತ ಮಾಡಿಕೊಂಡರೆ ಯಾವುದೇ ಪರೀಕ್ಷೆಯನ್ನೂ ಎದುರಿಸುವ ಆತ್ಮವಿಶ್ವಾಸ ಮೂಡುತ್ತದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಯೋಜನಾಬದ್ಧ ಅಧ್ಯಯನ ಅನಿವಾರ್ಯ. ನಿಗದಿತ ಕಾಲದಲ್ಲಿ ನಿರ್ಧಿಷ್ಟ ಸಾಧನೆಯ ಗುರಿ ಹೊಂದಬೇಕು. ಯಾವುದೇ ಅಡ್ಡಿ, ಆತಂಕ, ನಿಂದನೆ ಎದುರಾದರೂ ಹಮ್ಮು ಬಿಗುಮಾನ ಬಿಟ್ಟು ಗುರಿ ಸಾಧನೆಯತ್ತ ಗಮನ ಇರಬೇಕು. ಮೇಲಾಗಿ ಹಿರಿಯರ ಮಾರ್ಗದರ್ಶನವೂ ಅಗತ್ಯ. ಗೆಲ್ಲುವ ತುಡಿತದಿಂದ ಅಧ್ಯಯನ ಮಾಡಿದಾಗ ಯಶಸ್ಸಿನ ಗುರಿ ತಲುಪಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸಾಧನೆ, ಸಿದ್ಧಿಗೆ ಬಡತನ ಎಂದಿಗೂ ಅಡ್ಡಿ ಬರುವುದಿಲ್ಲ. ಯುಪಿಎಸ್‌ಸಿ, ಕೆಪಿಎಸ್‌ಸಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳು ದೃಷ್ಟಿಯಿಂದ ನಿಜವಾದ ಪರೀಕ್ಷೆಗಳು. ಅವುಗಳಲ್ಲಿ ಯಶಸ್ಸು ಪಡೆಯುವುದು ಕಷ್ಟ ಸಾಧ್ಯವಾದರೂ, ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಪರೀಕ್ಷೆಗಳು ಹಾಗೆ- ಹೀಗೆ ಎನ್ನುವ ಕಟ್ಟು ಕತೆಗಳನ್ನು ಬಿಟ್ಟು ಶ್ರದ್ಧೆಯಿಂದ ಅಭ್ಯಾಸ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಸಾಧಕರಿಂದ ಸ್ಫೂರ್ತಿ ಪಡೆಯಬೇಕು ಎಂದು ಸಲಹೆ ನೀಡಿದರು.
ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮನಸ್ಸು ಮತ್ತು ಹೃದಯವನ್ನು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಮೀಸಲಿಡಬೇಕು. ಹಲವು ಸ್ಪರ್ಧೆ ಎದುರಿಸುವ ಬದಲಾಗಿ ಒಂದೇ ಉದ್ದೇಶಿತ ಗುರಿಯೊಂದಿಗೆ ಕೆಲಸ ಮಾಡುವ ನಿರ್ಧಾರ ಕೈಗೊಳ್ಳಬೇಕು. ಸಾಧಿಸುವ ಕಿಚ್ಚು ಮನಸ್ಸಿನಲ್ಲಿದ್ದರೆ ಯಶಸ್ಸು ನಿಶ್ಚಿತ ಎಂದರು.
ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಎಸ್.ವಿ. ಹಲಸೆ ಮಾತನಾಡಿ, ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮಾರ್ಗದರ್ಶನ ಅಗತ್ಯ. ಅದಕ್ಕಾಗಿ ತರಬೇತಿ ಕೇಂದ್ರ ಆರಂಭಿಸಬೇಕು ಎಂಬ ಎರಡು ವರ್ಷಗಳ ಹಿಂದಿನ ಕನಸು ಇದೀಗ ನನಸಾಗಿದೆ. ಇಲ್ಲಿಯ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಿಶ್ವವಿದ್ಯಾನಿಲಯದ ಬೋಧಕ ಸಿಬ್ಬಂದಿ ಹಲವು ವಿಷಯಗಳಲ್ಲಿ ಪರಿಣತಿ ಪಡೆದಿದ್ದಾರೆ.ಅವರ ಮಾರ್ಗದರ್ಶನ, ತರಬೇತಿಯೂ ವಿದ್ಯಾರ್ಥಿಗಳ ಭವಿಷ್ಯರೂಪಿಸಲು ಮತ್ತು ಸ್ಪರ್ಧೆಎದುರಿಸಲು ಸಹಕಾರಿ ಆಗಲಿದೆ ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುಲಸಚಿವ ಪ್ರೊ.ಬಸವರಾಜ ಬಣಕಾರ, ಜಿಲ್ಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತರಬೇತಿ ಕೇಂದ್ರ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಯಶಸ್ಸು ಸಾಧಿಸಿದರೆ ಈ ಪ್ರಯತ್ನ ಸಾರ್ಥಕವಾಗಲಿದೆ ಎಂದರು.
ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್.ಅನಿತಾ, ಹಣಕಾಸು ಅಧಿಕಾರಿ ಪ್ರೊ.ಗೋಪಾಲ ಎಂ.ಅಡವಿರಾವ್, ಸಿಂಡಿಕೇಟ್ ಸದಸ್ಯರಾದ ಜಯಪ್ರಕಾಶ್ ಕೊಂಡಜ್ಜಿ, ಶಶಿಧರ್ ಬಿ.ಎನ್. ಪ್ರೊ.ಯು. ಎಸ್. ಮಹಾಬಲೇಶ್ವರ, ಡಾ| ಈಶ್ವರಪ್ಪ, ಡಾ| ರವಿ ಪಾಟೀಲ, ಡಾ| ಪ್ರಸನ್ನಕುಮಾರ್, ಡಾ| ಶಿವಕುಮಾರ ಕಣಸೋಗಿ, ಸಾಹಿತಿ ಪ್ರೊ.ರಾಘವೇಂದ್ರ ಪಾಟೀಲ ಉಪಸ್ಥಿತರಿದ್ದರು. ಡಾ| ಡಿ.ಜಿ. ಪ್ರಕಾಶ್ ಸ್ವಾಗತಿಸಿದರು. ಡಾ| ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಡಾ|ಅಶೋಕಕುಮಾರ ಪಾಳೇದ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.