ಬಡತನವೂ ಮಾನವ ಹಕ್ಕು ಉಲ್ಲಂಘನೆ
ಬೇರೊಬ್ಬರ ಹಕ್ಕಿಗೆ ಚ್ಯುತಿ ಉಂಟುಮಾಡದೇ ಬದುಕುವುದೇ ಮಾನವ ಹಕ್ಕು
Team Udayavani, Dec 11, 2019, 11:19 AM IST
ದಾವಣಗೆರೆ: ಬಡತನವೂ ಒಂದು ಸ್ಪಷ್ಟ ಮಾನವ ಹಕ್ಕು ಉಲ್ಲಂಘನೆಯಾಗಿದ್ದು, ಒಂದು ರಾಜ್ಯ ಪ್ರಜೆಗಳಿಗೆ ಬಡತನದಿಂದ ಮುಕ್ತಿ ಕೊಡಿಸಲು ಶ್ರಮಿಸಬೇಕು. ಹಾಗಾದಾಗ ಮಾತ್ರ ಕಲ್ಯಾಣ ರಾಜ್ಯವಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ವೈ.ಬಸಾಪುರ ಹೇಳಿದ್ದಾರೆ.
ಮಂಗಳವಾರ, ನಗರದ ಆರ್.ಎಲ್.ಕಾನೂನು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ, ಮಾತನಾಡಿದ ಅವರು, ಬೇರೆಯವರನ್ನು ಕಂಡು ಹೊಟ್ಟೆಕಿಚ್ಚು ಪಡುವುದೂ ಸಹ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ. ಸಂವಿಧಾನ ಹಲವಾರು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಕಲ್ಪಿಸಿದೆ. ಅಂತೆಯೇ ಮಾನವ ಹಕ್ಕುಗಳನ್ನು ಒದಗಿಸುವುದು, ಗೌರವಿಸುವುದು ಅಷ್ಟೇ ಪ್ರಮುಖ ಎಂದರು.
ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಬೇರೊಬ್ಬರ ಹಕ್ಕಿಗೆ ಚ್ಯುತಿ ಉಂಟುಮಾಡದೇ ಗೌರವದಿಂದ ಬದುಕುವುದೇ ಮಾನವ ಹಕ್ಕು. ಬೇರೊಬ್ಬರ ವೈಯಕ್ತಿಕ ಘನತೆಗೆ ಧಕ್ಕೆ ಮಾಡಿದರೆ ಅದು ಮಾನವ ಹಕ್ಕಿನ ಸ್ಪಷ್ಪ ಉಲ್ಲಂಘನೆ. 2ನೇ ವಿಶ್ವ ಮಹಾಯುದ್ದದಲ್ಲಿ ಆದ ಅಧಿಕ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಸೆಟೆದು ನಿಂತು ತಮ್ಮ ಹಕ್ಕುಗಳಿಗೆ ಹೋರಾಡಿ 1948ರ ಡಿಸೆಂಬರ್ 10ರಂದು ಘೋಷಿಸಲಾದ ಮ್ಯಾಗ್ನಕಾರ್ಟ್ ಈ ಮಾನವ ಹಕ್ಕುಗಳ ದಿನ. ಎಲ್ಲಾ ಸದಸ್ಯ ರಾಷ್ಟ್ರಗಳು ಒಮ್ಮತದಿಂದ ಒಪ್ಪಿ, ಸಹಿ ಹಾಕಿದ ದಿನ ಎಂದರು.
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಜೆ.ಎಸ್.ಸದಾನಂದ ಮಾತನಾಡಿ, ಮಾನವ ಹಕ್ಕುಗಳಿಗೆ ಸುದಿಧೀರ್ಘವಾದ ಇತಿಹಾಸವಿದೆ. ಕ್ರಿಸ್ತಪೂರ್ವದಿಂದಲೂ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸಲಾಗಿದೆ. ಆಳುವವರ ಮತ್ತು ಆಳಿಸಿಕೊಳ್ಳುವವರ ನಡುವಿನ ಸಂಘರ್ಷದಿಂದ ಮಾನವ ಹಕ್ಕುಗಳು ಹುಟ್ಟಿಕೊಂಡಿವೆ ಎಂದು ಹೇಳಿದರು.
ಭಾರತದಲ್ಲಿ ವೇದಗಳ ಕಾಲದಿಂದಲೂ ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯಿಂದ ಮೂಲಕ ಮಾನವ ಹಕ್ಕುಗಳನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಆದರೆ, ಇಂದು ಮಾನವ ಹಕ್ಕುಗಳ ಉಲ್ಲಂಘನೆ ವಿವಿಧ ರೀತಿಯಲ್ಲಿ ಆಗುತ್ತಿದೆ. ಸಮಯಕ್ಕೆ ಸರಿಯಾಗಿ ನ್ಯಾಯ ಸಿಗದಿದ್ದರೂ ಸಹ, ಮಾನವ ಹಕ್ಕುಗಳ ಉಲ್ಲಂಘನೆ ಆದಂತೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯೂ ಸಹ ಮಾನವ ಹಕ್ಕುಗಳ ಉಲ್ಲಂಘನೆಗೆ ಪ್ರಮುಖ ಕಾರಣವಾಗಿದೆ.
ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತಿರುವುದು ದುರಂತದ ಸಂಗತಿ ಎಂದು ತಿಳಿಸಿದರು.
ವಕೀಲರಾದ ದಾದಾಪೀರ್ ಮಾತನಾಡಿ, ಮಾನವ ಹಕ್ಕುಗಳು ಅನೇಕ ಉದ್ದೇಶಗಳನ್ನು ಹೊಂದಿದೆ. ಮನುಷ್ಯ ಪ್ರಪಂಚದಲ್ಲಿ ಮುಕ್ತವಾಗಿ ಜೀವಿಸುವ ಮತ್ತು ಭೇದ-ಭಾವವಿಲ್ಲದೇ ಬದುಕುವ ಹಕ್ಕು ಹೊಂದಿದ್ದಾರೆ. ಯಾರ ಗುಲಾಮಗಿರಿಯಲ್ಲೂ ಇರದೇ, ಸ್ವತಂತ್ರರಾಗಿ ಜೀವಿಸಬೇಕು. ಹಿಂಸೆ ಮತ್ತು ಅಮಾನವೀಯವಾಗಿ ಬೇರೊಬ್ಬರಿಂದ ಶಿಕ್ಷೆಗೆ ಒಳಗಾಗದಂತೆ ಜೀವಿಸುವ ಹಕ್ಕುಗಳು ಸೇರಿದಂತೆ ವಿವಿಧ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.
ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಬಿ.ಎಂ ಹನುಮಂತಪ್ಪ ಮಾತನಾಡಿ, ಪ್ರಸ್ತುತ ನಮ್ಮಲ್ಲಿ ಬಡವರಿಗೆ, ಶ್ರೀಮಂತರಿಗೆ ಎಂಬ ಪ್ರತ್ಯೇಕ ಹಕ್ಕುಗಳಿವೆ ಎಂಬಂತೆ ಕಾಣುತ್ತದೆ. ಮಾನವ ಹಕ್ಕುಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ಸಿಗುತ್ತಿಲ್ಲ. ಇದು ಬದಲಾಗಬೇಕು ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣಕುಮಾರ್ ಮಾತನಾಡಿ, ಮನುಷ್ಯ ಮನುಷ್ಯನನ್ನು ಗೌರವಿಸಬೇಕು. ಮಾನವ ದೇವರಾಗುವುದು ಸುಲಭ. ಆದರೆ ಮನುಷ್ಯ ಮನುಷ್ಯನಾಗುವುದು ಕಷ್ಟವಾಗಿದೆ ಈ ಮನಸ್ಥಿತಿ ಬದಲಾಗಬೇಕು. ಎಲ್ಲರೂ ಮಾನವ ಹಕ್ಕುಗಳನ್ನು ಗೌರವಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಸೋಮಶೇಖರಪ್ಪ ಮಾತನಾಡಿ, ನಮಗೆ ಹಕ್ಕುಗಳು ಇರುವಂತೆ ಬಾಧ್ಯತೆಗಳೂ ಇವೆ. ಇವುಗಳನ್ನು ನಾವು ಮೊದಲು ತಿಳಿಯಬೇಕು. ಮನುಷ್ಯನಾಗಿ ಬದುಕಿದಾಗ ಮಾತ್ರ ಮಾನವ ಹಕ್ಕುಗಳು ಸರಿಯಾಗುತ್ತವೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು.ಎನ್.ಬಡಿಗೇರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್, ವಕೀಲ ಆಂಜನೇಯ ಗುರೂಜಿ, ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.