ರಾಜಕಾರಣಿಗೆ ಸರ್ವಮಂಗಳಮ್ಮನಂಥ ಸತಿ ಸಿಗಲಿ: ಶಿಮುಶ
Team Udayavani, Nov 23, 2019, 5:08 PM IST
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಮತ್ತು ಅವರ ಪತ್ನಿ ಸರ್ವಮಂಗಳಮ್ಮನವರ ಜೀವ ಬೇರೆಯಾದರೂ ಭಾವಗಳು ಮಾತ್ರ ಒಂದೇ ಎನ್ನುವಂತೆ ಬದುಕಿದ್ದರು ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಬಣ್ಣಿಸಿದ್ದಾರೆ.
ಗುರುವಾರ, ಚನ್ನಗಿರಿ ತಾಲೂಕಿನ ಕಾರಿಗನೂರಿನ ಪಟೇಲ್ ಹಾಲಪ್ಪ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀಮತಿ ಸರ್ವಮಂಗಳಮ್ಮ ಜೆ.ಎಚ್.ಪಟೇಲರ ಶಿವಗಣಾರಾಧನೆ ಮತ್ತು ಸರ್ವ ಶರಣರ ಸಮ್ಮೇಳನದ ಸಾನ್ನಿಧ್ಯ ವಹಿಸಿ, ಅವರು ಮಾತನಾಡಿದರು.
ಜೆ.ಎಚ್.ಪಟೇಲ್ ಮತ್ತು ಅವರ ಕುಟುಂಬವನ್ನು ನಾವು ಹತ್ತಿರದಿಂದ ನೋಡಿದ್ದೇವೆ. ಪಟೇಲರ ಬಗ್ಗೆ ಅಪಾರ ಕಾಳಜಿ ವಹಿಸುತಿದ್ದ ಸರ್ವಮಂಗಳಮ್ಮ ತಮ್ಮ ಮನೆತನದ ಸಂಸ್ಕಾರ, ಸಂಸ್ಕೃತಿ ಕಾಪಾಡಿದವರು ಎಂದರು.
ಚುನಾವಣೆಯಲ್ಲಿ ಸೋತು ಹತಾಶರಾಗಿದ್ದ ಜೆ.ಎಚ್.ಪಟೇಲರನ್ನು ಅವರ ಪತ್ನಿ ಸರ್ವಮಂಗಳಮ್ಮ ಮುರುಘಾ ಮಠಕ್ಕೆ ಕರೆತಂದಿದ್ದರು. ಆ ಸಂದರ್ಭದಲ್ಲಿ ನಾವು ಮುಂದಿನ ಚುನಾವಣೆಯಲ್ಲಿ ನೀವು ಗೆಲ್ಲುತ್ತೀರಿ ಎಂದೇಳಿದ್ದೆವು. ನಾವು ನುಡಿದಂತೆ ಪಟೇಲರು ಗೆದ್ದು ಈ ನಾಡಿನ ಮುಖ್ಯಮಂತ್ರಿಯಾದರು ಎಂದು ಸ್ಮರಿಸಿದರು.
ಯಾವುದೇ ರಾಜಕಾರಣಿಗಳಿಗೆ ಸರ್ವಮಂಗಳಮ್ಮ ಅವರಂಥಹ ಧರ್ಮಪತ್ನಿ ಸಿಗಬೇಕು. ಅಂತಹ ಉದಾತ್ತ ಗುಣಗಳನ್ನು ಹೊಂದಿದ್ದ ಅವರನ್ನು ಸರ್ವಾರ್ಥ ಸಾಧಕಿ ಎಂದರೆ ತಪ್ಪಾಗಲಾರದು. ಪಟೇಲರು ನಿಧನರಾದಾಗ ತಾಳಿ, ಬಳೆ, ಕುಂಕಮ ತೆಗೆಯದೇ ಪಟೇಲರ ನೆನಪು ತಮ್ಮ ಜೀವಿತದ ಕಡೆ ಘಳಿಗೆಯವರಿಗೆ ಇರುವಂತೆ ನೋಡಿಕೊಂಡ ಶ್ರೇಷ್ಠ ಮಹಿಳೆ ಅವರಾಗಿದ್ದರು ಎಂದು ವರ್ಣಿಸಿದರು.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಜೆ.ಎಚ್.ಪಟೇಲರು ರಾಜಕೀಯಕ್ಕೆ ಬರಲು ಸರ್ವಮಂಗಳಮ್ಮನವರು ಸ್ಫೂ ರ್ತಿಯಾಗಿದ್ದರು. ಹಾಗಾಗಿಯೇ ಅವರು ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯವಾಯಿತು ಎಂದರು.
ಹರಿಹರ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಪಟೇಲರ ಪುತ್ರ ಮಹಿಮಾ ಪಟೇಲ್ ಮತ್ತು ನಾನು ಬೇರೆ ಬೇರೆ ಎನ್ನುವುದಕ್ಕಿಂತ ಇಬ್ಬರೂ ಒಂದಾಗಿ ಹೋದರೆ ಹಿರಿಯರ ಆತ್ಮಕ್ಕೆ ಶಾಂತಿ ದೊರೆಯಲಿದೆ. ಮಹಿಮಾ ಪಟೇಲ್ ಮತ್ತೆ ಜಿಲ್ಲೆಯ ರಾಜಕಾರಣದಲ್ಲಿ ಮುಂಚೂಣಿಗೆ ಬರಬೇಕಾದ ಅಗತ್ಯವಿದೆ. ನಾವಿಬ್ಬರು ಜೋಡೆತ್ತಿನ ರೀತಿ ರಾಜಕಾರಣದಲ್ಲಿ ಮುಂದುವರಿಯಬೇಕಿದೆ ಎಂದು ಆಶಿಸಿದರು.
ಚನ್ನಗಿರಿ ಕ್ಯಾಥೋಲಿಕ್ ಚರ್ಚ್‌ನ ಫಾದರ್ ಸಂತೋಷ್, ಮಂಗಳೂರಿನ ಮೌಲಾನ ಉಮ್ಮರುಲ್ ಫಾರೂಕ್ ಸಖಾಫಿ, ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ, ಚಿತ್ರದುರ್ಗ ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಯರಗುಂಟೆಯ ಶ್ರೀ ಪರಮೇಶ್ವರ ಸ್ವಾಮೀಜಿ, ಹಗರಿಬೊಮ್ಮನಹಳ್ಳಿ ಮಠದ ಶ್ರೀ ಮಹಾಂತ ಸ್ವಾಮೀಜಿ, ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಬೆಂಗಳೂರು ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಚಂದ್ರಕಾಂತ್ ಬೆಲ್ಲದ್, ಯಜಮಾನ್ ಮೋತಿ ವೀರಣ್ಣ, ಡಿ.ಜಿ.ಶಾಂತನಗೌಡ, ಕೆ.ಶಿವಮೂರ್ತಿ ನಾಯ್ಕ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ, ಡಾ| ವೈ.ರಾಮಪ್ಪ, ಎನ್ .ಜಿ.ಪುಟ್ಟಸ್ವಾಮಿ, ಜಿಪಂ ಸದಸ್ಯರಾದ ಕೆ.ಎಸ್. ಬಸವಂತಪ್ಪ , ಎನ್.ಲೋಕೇಶ್ವರಪ್ಪ, ಇತರರು ಭಾಗವಹಿಸಿದ್ದರು. ಮಾಜಿ ಶಾಸಕ ಮಹಿಮಾ ಪಟೇಲ್ ಸ್ವಾಗತಿಸಿದರು. ತೇಜಸ್ವಿ ವಿ. ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.