ಬೆಳೆ ನಷ್ಟ: ಪರಿಹಾರಕ್ಕೆ ರೈತರ ಅಲೆದಾಟ
ತಾಲೂಕಾಡಳಿತಕ್ಕೆ ಈಗಾಗಲೇ ಅಗತ್ಯ ದಾಖಲೆ ಸಲ್ಲಿಕೆ•ಇನ್ನೂ ಈಡೇರಿಲ್ಲ ಅಧಿಕಾರಿಗಳ ಭರವಸೆ
Team Udayavani, Sep 14, 2019, 12:18 PM IST
ದೇವದುರ್ಗ: ಭತ್ತದ ಗದ್ದಗೆ ನುಗ್ಗಿದ ಕೃಷ್ಣಾ ನದಿ ಪ್ರವಾಹ ನೀರು
ನಾಗರಾಜ ತೇಲ್ಕರ್
ದೇವದುರ್ಗ: ಕಳೆದ ಆಗಸ್ಟ್‌ನಲ್ಲಿ ಕೃಷ್ಣಾ ನದಿ ಪ್ರವಾಹಕ್ಕೆ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಸಾವಿರಾರೂ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದೆ. ತಿಂಗಳು ಕಳೆದರೂ ಇಲ್ಲಿವರೆಗೆ ಸಂತ್ರಸ್ತ ರೈತರ ಖಾತೆ ಪರಿಹಾರ ಹಣ ಜಮೆಯಾಗಿಲ್ಲ. ಹೀಗಾಗಿ ನೂರಾರು ಜನ ರೈತರು ನಿತ್ಯ ತಾಲೂಕು ಕಚೇರಿಗೆ ಅಲೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳೆ ನಷ್ಟ ಅನುಭವಿಸಿದ ರೈತರು ಈಗಾಗಲೇ ಬ್ಯಾಂಕ್ ಪಾಸ್ ಬುಕ್, ಪಹಣಿ ಸೇರಿ ಇತರೆ ದಾಖಲಾತಿ ನೀಡಿದ್ದಾರೆ. ಆನ್‌ಲೈನ್ ಮೂಲಕ ಹಣ ಜಮಾ ಮಾಡುವ ಅಧಿಕಾರಿಗಳ ಭರವಸೆ ಇನ್ನೂ ಈಡೇರಿಲ್ಲ.
ಕೃಷ್ಣಾನದಿ ಪ್ರವಾಹಕ್ಕೆ ತೀರದ ಗ್ರಾಮಗಳಲ್ಲಿ ತೊಗರಿ ಬೆಳೆ ಹಾನಿಯಾಗಿದೆ. ದೊಂಡಂಬಳಿ ಗ್ರಾಪಂ ವ್ಯಾಪ್ತಿಯಲ್ಲಿ 825 ಹೆಕ್ಟೇರ್, ಕೊಪ್ಪರ 233 ಹೆಕ್ಟೇರ್, ಚಿಂಚೋಡಿ 316 ಹೆಕ್ಟೇರ್, ಕರಡಿಗುಡ್ಡ 299 ಹೆಕ್ಟೇರ್, ಜಾಲಹಳ್ಳಿ 48 ಹೆಕ್ಟೇರ್, ಅಮರಾಪುರ 27 ಹೆಕ್ಟೇರ್, ಶಾವಂತಗೇರಾ 200 ಹೆಕ್ಟೇರ್, ಗೂಗಲ್ 93 ಹೆಕ್ಟೇರ್, ಹೇಮನಾಳ 46 ಸೇರಿ ಇತರೆ ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಹಾನಿ ಉಂಟಾಗಿದೆ.
ಕೃಷ್ಣಾ ನದಿ ತೀರದಲ್ಲಿರುವ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹದಿಂದ ಜೋಳ ಬೆಳೆ ಹಾನಿಯಾಗಿದೆ. ಕೊಪ್ಪರ ಗ್ರಾಪಂ ವ್ಯಾಪ್ತಿಯಲ್ಲಿ 37 ಹೆಕ್ಟೇರ್, ದೊಂಡಂಬಳಿ 95, ಚಿಂಚೋಡಿ 62, ಕರಿಗುಡ್ಡ 63, ಜಾಲಹಳ್ಳಿ 29, ಅಮರಾಪುರ 26 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆ ಹಾನಿಯಾಗಿದೆ.
ಹತ್ತಿ ನೀರಾವರಿ 350 ಹೆಕ್ಟೇರ್ ಪ್ರದೇಶದಲ್ಲಿ ಮತ್ತು ಒಣಭೂಮಿಯಲ್ಲಿ 1.837 ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಭತ್ತ 3.743 ಹೆಕ್ಟೇರ್ ಪ್ರದೇಶದಲ್ಲಿ ಪ್ರವಾಹಕ್ಕೆ ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಬೆಳೆ ಹಾನಿ ಅನುಭವಿಸಿದ ರೈತರು ತಾಲೂಕು ಆಡಳಿತಕ್ಕೆ ಈಗಾಗಲೇ ಪಹಣಿ, ಬ್ಯಾಂಕ್ ಪಾಸ್ ಬುಕ್ ಸೇರಿ ಇತರೆ ದಾಖಲಾತಿ ನೀಡಿದ್ದಾರೆ. ಆಗಸ್ಟ್ ತಿಂಗಳು ಕಳೆದು ಸೆಪ್ಟೆಂಬರ್ ತಿಂಗಳು ಅರ್ಧ ಮುಗಿಯುತ್ತ ಬಂದಿದೆ. ಆದರೆ ಇಲ್ಲಿವರೆಗೆ ನೊಂದ ರೈತರಿಗೆ ಬೆಳೆ ಹಾನಿ ಪರಿಹಾರ ನೀಡದೇ ಮೀನಮೇಷ ಎಣಿಸಲಾಗುತ್ತಿದೆ. ಹಾಗಾಗಿ ನೂರಾರು ಜನ ರೈತರು ನಿತ್ಯ ತಾಲೂಕ ಕಚೇರಿಗೆ ಅಲೆಯುವಂತಾಗಿದೆ.
ಕೃಷ್ಣಾ ನದಿ ಪ್ರವಾಹದಿಂದ ಹೊಲಕ್ಕೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ನೊಂದ ನೂರಾರು ರೈತರು ಬೆಳೆ ಪರಿಹಾರಕ್ಕೆ ತಾಲೂಕು ಆಡಳಿತಕ್ಕೆ ಈಗಾಗಲೇ ವಿವಿಧ ದಾಖಲಾತಿ ನೀಡಿದ್ದಾರೆ. ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ತಾಲೂಕು ಆಡಳಿತ ಅಧಿಕಾರಿಗಳ ಹುಸಿ ಭರವಸೆಗೆ ಬಹುತೇಕರು ಬೇಸತ್ತು ಹೋಗಿದ್ದಾರೆ ಎನ್ನಲಾಗುತ್ತಿದೆ. ಭರವಸೆಯಲ್ಲೇ ಅಧಿಕಾರಿಗಳು ಕಾಲಹರಣ ಮಾಡುತ್ತಿರುವ ಹಿನ್ನೆಲೆಯಲ್ಲಿ ನೊಂದವರು ಬೇಸತ್ತಿದ್ದಾರೆ ಎಂದು ರೈತರಾದ ಅಮರಪ್ಪ, ರವೀಂದ್ರ ಆರೋಪಿಸಿದರು. ಕೃಷ್ಣಾನದಿ ಪ್ರವಾಹಕ್ಕೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ತಾಲೂಕು ಆಡಳಿತ ಇಂದೋ ನಾಳೆ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಭರವಸೆಯಲ್ಲೇ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಎರಡು ತಿಂಗಳು ಕಳೆಯುತ್ತಿದೆ. ಇಲ್ಲಿವರೆಗೆ ಯಾರೊಬ್ಬ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ನೊಂದ ರೈತರ ಖಾತೆಗೆ ಕೂಡಲೇ ಹಣ ಜಮ ಮಾಡಬೇಕು ಎಂದು ಕೆಆರ್‌ಎಸ್ ತಾಲೂಕು ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದರು.
ಪ್ರವಾಹದಿಂದ ಹಾನಿ ಅನುಭವಿಸಿದ ರೈತರ ಪಹಣಿ ಪತ್ರ, ಬ್ಯಾಂಕ್ ಪಾಸ್ ಬುಕ್ ಸೇರಿ ಇತರೆ ದಾಖಲೆ ಪಡೆಯಲಾಗಿದೆ. ಡಾಟಾ ಎಂಟ್ರಿ ಮಾಡಲಾಗುತ್ತಿದೆ. ನೇರವಾಗಿ ರೈತರ ಖಾತೆಗೆ ಪರಿಹಾರದ ಹಣ ಜಮಾ ಮಾಡಲಾಗುತ್ತದೆ.
•ಮಂಜುನಾಥ,
ತಹಶೀಲ್ದಾರ ದೇವದುರ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.