ಅಕ್ರಮ ದಂಧೆಗೆ ದೇವದುರ್ಗ ಅಡ್ಡೆ
ಅಕ್ರಮ ಚಟುವಟಿಕೆಗಳಿಗಿಲ್ಲ ಕಡಿವಾಣ • ಅಧಿಕಾರಿಗಳ ಮಧ್ಯೆ ಸಮನ್ವಯ ಕೊರತೆ • ಬಡ ಕುಟುಂಬಗಳು ಬೀದಿಗೆ
Team Udayavani, May 26, 2019, 1:03 PM IST
ದೇವದುರ್ಗ: ಪೊಲೀಸ್ ಠಾಣೆ
ದೇವದುರ್ಗ: ದೇವದುರ್ಗ ಪಟ್ಟಣ ಸೇರಿ ತಾಲೂಕಿನಾದ್ಯಂತ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಅಕ್ರಮ ಮರಳು ಸಾಗಾಟ, ಜೂಜಾಟ, ಮಟ್ಕಾ, ಅಕ್ರಮ ಮದ್ಯ ಮಾರಾಟ, ಕೋಳಿ ಪಂದ್ಯ ಸೇರಿ ಇತರೆ ಅಕ್ರಮ ಚಟುವಟಿಕೆಗಳು ಜೋರಾಗಿ ನಡೆದಿವೆ. ಈಗಾಗಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ 54 ಪ್ರಕರಣಗಳು ದಾಖಲಾಗಿದ್ದೇ ಇದಕ್ಕೆ ಸಾಕ್ಷಿಯಾಗಿದೆ.
ಅಕ್ರಮ ಮರಳು: ಕೃಷ್ಣಾ ನದಿ ತೀರದಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ದಂಧೆ ಜೋರಾಗಿದೆ. ಹೇರುಂಡಿ, ಬಾಗೂರು, ನಿಲವಂಜಿ, ಬುಂಕಲದೊಡ್ಡಿ, ಕುರ್ಕಿಹಳ್ಳಿ, ಗೂಗಲ್ ಸೇರಿ ಇತರೆ ಗ್ರಾಮಗಳಿಂದ ಅಕ್ರಮ ಮರಳು ಸಾಗಿಸಲಾಗುತ್ತಿದೆ. ಅಧಿಕಾರಿಗಳು ಜಾಣ ಕುರುಡ ನೀತಿ ಅನುಸರಿಸುತ್ತಿದ್ದಾರೆ. ಅಕ್ರಮ ಮರಳು ದಂಧೆಯಿಂದಾಗಿ ನದಿ ತೀರದ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲದಂತಾಗಿದೆ.
ಜೂಜಾಟ: ಪಟ್ಟಣ ಸೇರಿ ತಾಲೂಕಿನಾದ್ಯಂತ ವ್ಯಾಪಕವಾಗಿ ಜೂಜಾಟ ನಡೆಯುತ್ತಿದೆ. ಅದರಲ್ಲೂ ಗುಡ್ಡಾಗಾಡು ಪ್ರದೇಶದಲ್ಲಿ ಜೂಜಾಟ ಮೀತಿ ಮೀರಿದೆ. ಇಂಥ ದಂಧೆಗೆ ಪೊಲೀಸ್ ಅಧಿಕಾರಿಗಳು ಕಡಿವಾಣ ಹಾಕಲು ಮುಂದಾದ ರೂ, ಸುಮಾರು ವರ್ಷಗಳಿಂದ ವರ್ಗಾವಣೆಯಾಗದೇ ಸ್ಥಳೀಯ ಠಾಣೆಯಲ್ಲಿ ಬೇರೋರಿದ ಕೆಲ ಪೊಲೀಸರು ಅವರ ದಾರಿ ತಪ್ಪಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಜೂಜಾಟಕ್ಕೆ ಬಲಿಯಾದವರ ಕುಟುಂಬಗಳು ಬೀದಿ ಪಾಲಾಗುತ್ತಿವೆ.
ಮಟ್ಕಾ: ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಮಟ್ಕಾ ದಂಧೆ ಮಿತಿ ಮೀರಿದೆ. ಯುವಕರು, ಕೂಲಿಕಾರರು ಇದರ ಕೂಪಕ್ಕೆ ಬೀಳುತ್ತಿದ್ದಾರೆ. ಮೊಬೈಲ್ ಮೂಲಕವೇ ಮಟ್ಕಾ ದಂಧೆ ನಡೆಸಲಾಗುತ್ತಿದೆ. ಮಟ್ಕಾ ಬರೆಸುವವರು ಬೀದಿ ಪಾಲಾತ್ತಿದ್ದಾರೆ.
ಕೋಳಿ ಪಂದ್ಯ: ಗುಡ್ಡಗಾಡು ಪ್ರದೇಶ ಸೇರಿ ತಾಂಡಾ, ದೊಡ್ಡಿಯಲ್ಲಿ ಕೋಳಿ ಪಂದ್ಯ ಅವ್ಯಾಹತವಾಗಿದೆ. ಬುಧವಾರ, ರವಿವಾರ ಕೋಳಿ ಪಂದ್ಯ ಮಿತಿ ಮೀರಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಇಂತಹ ಕಡೆ ಪೊಲೀಸರು ದಾಳಿ ನಡೆಸಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ದಾಳಿ ನಡೆಸದಿರುವುದು, ಒಂದೇ ಪ್ರಕರಣ ದಾಖಲಾಗದಿರುವುದು ಅನುಮಾನಕ್ಕೆಡೆ ಮಾಡಿದೆ. ಕೋಳಿ ಪಂದ್ಯದಿಂದಾಗಿ ತಾಂಡಾ, ದೊಡ್ಡಿಗಳಲ್ಲಿ ಆಗಾಗ ಗುಂಪು ಗಲಾಟೆಗಳು ನಡೆಯುತ್ತವೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ಅಕ್ರಮ ಮದ್ಯ ಮಾರಾಟ: ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದೆ. ಹಳ್ಳಿಗಳಲ್ಲಿ ನೀರು, ಹಾಲು ಸಿಗದಿದ್ದರೂ ಮದ್ಯ ಮಾತ್ರ ಸರಬರಾಜು ಆಗುತ್ತಿದೆ. ಸಣ್ಣಪುಟ್ಟ ಅಂಗಡಿ, ಹೋಟೆಲ್ಗಳಲ್ಲೂ ಮದ್ಯ ಮಾರಲಾಗುತ್ತಿದೆ. ಅದರ ಜತೆಗೆ ತಾಂಡಾಗಳಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿ ಕೂಡ ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿ ಕಚೇರಿ ಮಾನ್ವಿಯಲ್ಲಿದ್ದು, ದೇವದುರ್ಗ ತಾಲೂಕಿಗೆ ಅಧಿಕಾರಿಗಳು ಬರುವುದೇ ಅಪರೂಪ ಎನ್ನುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಅಕ್ರಮ ಪ್ರಕರಣಗಳು: ತಾಲೂಕಿನಾದ್ಯಂತ ಅಕ್ರಮ ಚಟುವಟಿಕೆಗಳ ವಿವಿಧ ಪ್ರಕರಣಗಳು ದಾಖಲಾಗಿವೆ. 2018-19ನೇ ಸಾಲಿನಲ್ಲಿ 19 ಮಟ್ಕಾ ಪ್ರಕರಣ, 25ಕ್ಕೂ ಹೆಚ್ಚು ಅಕ್ರಮ ಮರಳು ಸಾಗಾಟ, 2018ರಲ್ಲಿ ನಕಲಿ ನೋಟಿನ ಪ್ರಕರಣ, 10ರಿಂದ 12 ಜೂಜಾಟ ಪ್ರಕರಣ ಮತ್ತು ರಾಯಲ್ಟಿ ಅಕ್ರಮದಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿವೆ. ಬಹುತೇಕ ಪ್ರಕರಣಗಳಲ್ಲಿ ಭಾಗಿಯಾದವರನ್ನು ಬಿಡಿಸಲು ಸ್ಥಳೀಯ ಜನಪ್ರತಿನಿಧಿಗಳೇ ಒತ್ತಡ ತರುತ್ತಿದ್ದಾರೆ. ಹೀಗಾಗಿ ಅಕ್ರಮ ದಂಧೆಗಳಿಗೆ ಕಡಿವಾಣ ಇಲ್ಲದಾಗಿದೆ. ಇನ್ನು ಅಕ್ರಮ ದಂಧೆ ಜೋರಾಗಿ ನಡೆದಿದ್ದರೂ ಇದಕ್ಕೆ ಕಡಿವಾಣ ಹಾಕಬೇಕಾದ ವಿವಿಧ ಇಲಾಖೆ ಅಧಿಕಾರಿಗಳಲ್ಲಿ ಸಮನ್ವಯತೆ ಕೊರತೆ ಇದೆ ಎಂದು ದಲಿತ ಮುಖಂಡ ಶಿವರಾಜ ದೂರಿದ್ದಾರೆ. ಕೂಡಲೇ ಇಂತಹ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
ನಿರಂತರ ಮಟ್ಕಾ ದಂಧೆಯಿಂದ ವಾರ್ಡ್‌ನಲ್ಲಿ ಮಹಿಳೆಯರು ಯುವಕರು ಸಾಲ ಶೂಲ ಮಾಡಿದ್ದಾರೆ. ರಾತ್ರಿಯಾದರೆ ಹೊರಗಡೆ ಹೊಗಲಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ಪೊಲೀಸರೇ ಮಟ್ಕಾ ದಂಧೆ ಬೆಂಬಲಕ್ಕೆ ನಿಂತಿದ್ದಾರೆ.
••ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿ
ಲೋಕಸಭಾ ಚುನಾವಣೆ ನಂತರ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ತಂಡ ರಚನೆ ಮಾಡುತ್ತೇನೆ. ನಾನು ಬಂದ ಮೇಲೆ ಕೆಲ ಪ್ರಕರಣಗಳನ್ನು ದಾಖಲು ಮಾಡಿದ್ದೇನೆ.
••ಅಗ್ನಿ, ಪಿಎಸ್‌ಐ ದೇವದುರ್ಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.